ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ; ಒಟ್ಟು 450 ಹಾಸಿಗೆಗಳ ಬೃಹತ್ ಆರೋಗ್ಯ ಕೇಂದ್ರವಾಗಿ ಮಾರ್ಪಡಲಿರುವ ಆಸ್ಪತ್ರೆ
ನವೀನ್ ಡಿಸೋಜ
ಮಡಿಕೇರಿ: ಅನುದಾನ ಕೊರತೆಯಿಂದ ಸ್ಥಗಿತಗೊಂಡಿದ್ದ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ 78.10 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ಒಂದು ವರ್ಷದಲ್ಲಿ ಸಾರ್ವಜನಿಕರ ಸೇವೆಗೆ ದೊರಕುವ ಸಾಧ್ಯತೆ ಇದೆ.
ಅಧಿಕ ಸಂಖ್ಯೆಯಲ್ಲಿ ರೋಗಿಗಳ ಶುಶೂಷೆ ದೃಷ್ಟಿಕೋನದಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 2020ರಲ್ಲಿ 100 ಕೋಟಿ ರೂ. ಅನುದಾನ ದೊರೆತಿತ್ತು. ಹಂಚಿಕೆಯಾದ ಹಣವನ್ನು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮತ್ತು ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎರಡು ಹೊಸ ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸಲು ಗೊತ್ತುಪಡಿಸಲಾಗಿತ್ತು. ಅದರಂತೆ 150 ಹಾಸಿಗೆಗಳ ಸಾಮರ್ಥ್ಯವುಳ್ಳ ಕಾರ್ಯವು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದು ವರ್ಷದ ಹಿಂದೆಯೇ ಪೂರ್ಣಗೊಂಡು ಕಾರ್ಯಾರಂಭ ಮಾಡಿತು. ಆದರೆ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 300 ಹಾಸಿಗೆಗಳ ಸಾಮರ್ಥ್ಯದ ಕಟ್ಟಡವನ್ನು ಪೂರ್ಣಗೊಳಿಸಲು ಹಣಕಾಸಿನ ಕೊರತೆ ಅಡ್ಡಿಯಾಯಿತು.
ಬಳಿಕ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರವು 78.10 ಕೋಟಿ ರೂ.ಗಳಿಗೆ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ನೀಡಿದೆ. ಹೀಗಾಗಿ ಸದ್ಯದಲ್ಲಿಯೇ 300 ಹಾಸಿಗೆಗಳ ವ್ಯವಸ್ಥೆ ಕಾಮಗಾರಿ ಮುಂದುವರಿಯಲಿದೆ. ಇನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಂಡು ರೋಗಿಗಳ ಆರೈಕೆಗೆ ಸಜ್ಜಾಗಲಿದೆ. ಆ ಮೂಲಕ ಮಡಿಕೇರಿಯ ಕೊಡಗು ಜಿಲ್ಲಾ ಆಸ್ಪತ್ರೆಯು ಒಟ್ಟು 450 ಹಾಸಿಗೆಗಳ ಬೃಹತ್ ಅರೋಗ್ಯ ಕೇಂದ್ರವಾಗಿ ಮಾರ್ಪಡಲಿದೆ.
ಆಸ್ಪತ್ರೆ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದರೂ, ಹಲವಾರು ಪೂರಕ ಕೆಲಸಗಳು ಬಾಕಿ ಉಳಿದಿವೆ. ನಾವು ಹೊರರೋಗಿ ವಿಭಾಗವನ್ನು ಖಾಲಿ ಬಿಡುವ ಬದಲು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ. ಎರಡನೇ ಹಂತದಲ್ಲಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಹಣವು ಅನುಕೂಲವಾಗುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಂಜುಂಡಯ್ಯ ತಿಳಿಸಿದ್ದಾರೆ.
ಎಲ್ಲ ವಿಭಾಗಗಳಿಗೂ ಆಪರೇಷನ್ ಥಿಯೇಟರ್‌ಗಳು, ಸುರಕ್ಷತಾ ಉಪಕರಣಗಳ ಅಳವಡಿಕೆಗೆ ಸೂಕ್ತ ಉಪಕರಣಗಳ ಖರೀದಿಯಾಗಬೇಕಿದೆ. ಹಳೆಯ ಮತ್ತು ಹೊಸ ಆಸ್ಪತ್ರೆ ಕಟ್ಟಡಗಳ ನಡುವಿನ ಪರಸ್ಪರ ಸಂಪರ್ಕ ಮತ್ತು ಪ್ರಯೋಗಾಲಯ ಮೂಲಸೌಕರ್ಯಗಳನ್ನು ಕಲ್ಪಿಸಲು ಮಂಜೂರು ಮಾಡಿದ ಹಣವನ್ನು ಬಳಸಿಕೊಂಡು ಪೂರ್ಣಗೊಳಿಸಲಾಗುವುದು ಎಂದು ಅವರು ವಿವರಿಸಿದರು.
ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯ ಯೋಜನಾ ಮೇಲ್ವಿಚಾರಣೆಯೊಂದಿಗೆ, ಒಂದುವರ್ಷದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರು ಬದ್ಧರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನೂತನ ಕಟ್ಟಡಗಳಲ್ಲಿ ಏನೇನಿರಲಿವೆ?
ಅತ್ಯಾಧುನಿಕ ಶಸ್ತ್ರ ಚಿಕಿತ್ಸೆ ಕೊಠಡಿಗಳು, ತೀವ್ರ ನಿಗಾ ಘಟಕ, ವಿವಿಧ ವಿಭಾಗಗಳ ಐಸಿಯು ವಾರ್ಡ್‌ಗಳು, ಸುಸಜ್ಜಿತ ವಾರ್ಡ್‌ಗಳು, ಸಿಎಸ್ ಎಸ್ಟಿ ಘಟಕ, ಮರಣೋತ್ತರ ಪರೀಕ್ಷೆ ಘಟಕ, ಕೇಂದ್ರ ಉಗ್ರಾಣ, ಔಷಧಿ ಘಟಕ, ಅತ್ಯಾಧುನಿಕ ಪ್ರಯೋಗಾಲಯಗಳು, ಜೆರಿಯಾಟ್ರಿಕ್ಸ್ ವಾರ್ಡ್, ಸ್ತ್ರೀ ಮತ್ತು ಪ್ರಸೂತಿ ರೋಗ ವಿಭಾಗ, ಮಕ್ಕಳ ವಿಭಾಗ, ವೈದ್ಯಕೀಯ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ಕೀಲು ಮತ್ತು ಮೂಳೆ ವಿಭಾಗ, ನ್ಯಾಯ ವೈದ್ಯ ಶಾಸ್ತ್ರ ವಿಭಾಗ, ಅರಿವಳಿಕೆ ವಿಭಾಗ, ಮನೋಶಾಸ್ತ್ರವಿಭಾಗ, ಇಎಸ್ಟಿ, ನೇತ್ರಾ ಚಿಕಿತ್ಸಾ ವಿಭಾಗಗಳ ಉನ್ನತೀಕರಿಸಿದ ವಿಭಾಗಗಳು ಬರಲಿವೆ. ದೊಡ್ಡದಾದ ಬೋಧನಾ ಕೊಠಡಿ, ಲಿಫ್ಟ್, ವೈದ್ಯರ ಕೊಠಡಿ, ಲಾಂಡಿ, ಪಾರ್ಕಿಂಗ್ ಜಾಗ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆ ಇರಲಿದೆ.
150 ಹಾಸಿಗೆಗಳ ಸಾಮರ್ಥ್ಯವುಳ್ಳ ನೂತನ ಕಟ್ಟಡ ಈಗಾಗಲೇ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. 300 ಹಾಸಿಗೆಗಳ ಸಾಮರ್ಥ್ಯದ ಕಟ್ಟಡ ಕಾಮಗಾರಿಗೆ ಅನುದಾನದ ಕೊರತೆ ಉಂಟಾಗಿತ್ತು. ಸರ್ಕಾರದಿಂದ ಅನುದಾನ ಬಿಡುಗಡೆಯಾದಲ್ಲಿ ಉಳಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಶೀಘ್ರದಲ್ಲೇ ಹೊರರೋಗಿ ವಿಭಾಗವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ.
-ಡಾ.ನಂಜುಂಡಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ



