Mysore
21
broken clouds

Social Media

ಬುಧವಾರ, 14 ಜನವರಿ 2026
Light
Dark

ಪಾಳು ಬಿದ ೨೭ ಕೋಟಿ ರೂ. ವೆಚ್ಚದ ೫೭೬ ಮನೆಗಳು!

ಹೇಮಂತ್‌ಕುಮಾರ್

ಸ್ಥಳಾಂತರಕ್ಕೆ ಒಪ್ಪದ ತಮಿಳು ಕಾಲೋನಿ ನಿವಾಸಿಗಳು; ಈಡೇರದ ಉದ್ದೇಶ 

ಮಂಡ್ಯ: ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಮಿಮ್ಸ್) ಆಸ್ಪತ್ರೆಯ ಜಾಗದಲ್ಲಿರುವ ತಮಿಳು ಕಾಲೋನಿಯ ನಿವಾಸಿಗಳಿಗಾಗಿ ನಗರದ ಹೊರ ವಲಯದಲ್ಲಿರುವ ಚಿಕ್ಕಮಂಡ್ಯ (ಕೆರೆಯಂಗಳ) ಸಮೀಪ ೨೭ ಕೋಟಿ ರೂ. ವೆಚ್ಚದಲ್ಲಿ ೫೭೬ ಮನೆಗಳನ್ನು ನಿರ್ಮಿಸಲಾಗಿದ್ದು, ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಎರಡು-ಮೂರು ವರ್ಷಗಳಾದರೂ ಉದ್ದೇಶಿತ ಯೋಜನೆಯು ನನೆಗುದಿಗೆ ಬಿದ್ದಿದೆ.

ಪರಿಣಾಮ ನೂತನ ಮನೆಗಳ ಕಿಟಕಿ, ಬಾಗಿಲುಗಳಿಗೆ ಗೆದ್ದಿಲು ಹತ್ತಿ, ಬೆಲೆಬಾಳುವ ವಸ್ತುಗಳು ಹಾಳಾಗುತ್ತಿವೆ. ಕಿಟಕಿ ಗಾಜುಗಳು ಒಡೆದು ಪಾಳು ಬಿದ್ದಂತಾಗಿದೆ. ಪುಂಡ- ಪೋಕರಿಗಳ ಅಡ್ಡೆ, ಸರೀಸೃಪಗಳ ಆವಾಸಸ್ಥಳವಾಗಿಯೂ ಪರಿವರ್ತನೆಯಾಗಿವೆ. ಸಂಸದರಾಗಿದ್ದ ಸುಮಲತಾ ಅಂಬರೀಶ್ ಅವರು ಎರಡು ವರ್ಷಗಳ ಹಿಂದೆಯೇ ಈ ನೂತನ ಮನೆಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದರು. ಆದರೆ, ಅಂದಿನಿಂದ ಇಂದಿನವರೆಗೂ ಮನೆಗಳು ನಿಗದಿತ ಉದ್ದೇಶಕ್ಕೆ ಬಳಕೆಯಾಗಿಲ್ಲ.

ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ನೂತನವಾಗಿ ನಿರ್ಮಿಸಿರುವ ಮನೆಗಳಿಗೆ ತೆರಳಲು ಒಪ್ಪದೇ ಹಿಂದೇಟು ಹಾಕುತ್ತಿರುವ ತಮಿಳು ಕಾಲೋನಿ ನಿವಾಸಿಗಳು, ತಾವಿರುವ ಜಾಗದಲ್ಲೇ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ತಮಿಳು ಕಾಲೋನಿಯಲ್ಲಿ ಶಾಸಕ ಪಿ.ರವಿಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಸಭೆ ನಡೆಸಿ, ನಿವಾಸಿಗಳಿಗೆ ನೋಟಿಸ್ ನೀಡಿ ಮನವೊಲಿಸಲು ಯತ್ನಿಸಿದ ಪ್ರಯತ್ನವೂ ಫಲಿಸಿಲ್ಲ.

ದುಷ್ಕರ್ಮಿಗಳು ಕಿಟಕಿಗಳನ್ನೇ ಬಿಚ್ಚಿ ಕೊಂಡು ಹೋಗಿದ್ದು, ಗಾಜುಗಳು ಒಡೆದಿವೆ. ಇದರಿಂದ ಮಳೆಯ ಸಮಯದಲ್ಲಿ ನೀರು ಮನೆಗಳ ಒಳಗೆ ನುಗ್ಗುತ್ತಿದೆ. ಮನೆಗಳಲ್ಲಿ ದೂಳು ಆವರಿಸಿದ್ದು, ರಕ್ಷಣೆ ಮತ್ತು ನಿರ್ವಹಣೆ ಇಲ್ಲದೇ ಬಹುತೇಕ ಮನೆಗಳು ಹಾಳಾದ ಸ್ಥಿತಿಯಲ್ಲಿವೆ. ವಿದ್ಯುತ್ ವೈರ್‌ಗಳು, ಸ್ವಿಚ್‌ಬೋರ್ಡ್‌ಗಳು, ಕಬ್ಬಿಣ ಹಾಗೂ ಬೆಲೆ ಬಾಳುವ ವಸ್ತುಗಳು ಕಳ್ಳರ ಪಾಲಾಗುತ್ತಿರುವುದನ್ನು ತಪ್ಪಿಸಲು ಇತ್ತೀಚೆಗೆ ಸೆಕ್ಯೂರಿಟಿಗಳನ್ನು ನೇಮಿಸಲಾಗಿದೆ.

ನಿವಾಸಿಗಳ ತೆರವಿಗೆ ಆದೇಶ: ತಮಿಳು ಕಾಲೋನಿ ನಿವಾಸಿಗಳು ವಾಸಿಸುತ್ತಿರುವ ೫.೨೫ ಎಕರೆ ಜಾಗ ಮಿಮ್ಸ್ ಆಸ್ಪತ್ರೆಗೆ ಸೇರಿದ್ದಾಗಿದೆ. ಈಜಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ೨೦೧೦ರಲ್ಲಿ ಕನ್ನಡ ಪರ ಹೋರಾಟಗಾರ ಜಿ.ಟಿ.ರವೀಂದ್ರ ಕುಮಾರ್ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಆಸ್ಪತ್ರೆ ಜಾಗದಿಂದ ನಿವಾಸಿಗಳನ್ನು ತೆರವು ಗೊಳಿಸುವಂತೆ ಕೋರಿದ್ದರು. ಅದರಂತೆ, ಈ ಜಾಗವನ್ನು ಆಸ್ಪತ್ರೆಗೆ ದೊರಕಿಸಿಕೊಟ್ಟು, ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ೨೦೧೫ರಲ್ಲಿ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ತಮಿಳು ಕಾಲೋನಿಯ ನಿವಾಸಿಗಳನ್ನು ಆಸ್ಪತ್ರೆ ಜಾಗದಿಂದ ತೆರವುಗೊಳಿಸಲು ಶಾಸಕರು, ಜಿಲ್ಲಾಡಳಿತ ಮತ್ತು ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಮಾಡಿದ ಕಸರತ್ತೆಲ್ಲವೂ ವ್ಯರ್ಥವಾಗಿದೆ. ಇತ್ತೀಚೆಗೆ ಈ ಮನೆಗಳನ್ನು ಸ್ವಂತ ಸೂರಿಲ್ಲದವರಿಗೆ ನೀಡಲಾಗುತ್ತಿದೆ ಎಂಬ ಗಾಳಿ ಸುದ್ದಿ ನಂಬಿದ ಮುಸ್ಲಿಂ ಬಡಾವಣೆ ನಿವಾಸಿಗಳು ತಂಡೋಪತಂಡವಾಗಿ ಬಂದು ಅವರವರೇ ಸಿಕ್ಕ ಸಿಕ್ಕ ಮನೆಗಳಿಗೆ ತೂರಿಕೊಂಡು ಇದು ನಮ್ಮ ಮನೆ ಎಂದು ಜಾಂಡಾ ಹೂಡಿದ್ದರು. ಕೊನೆಗೆ ಕೊಳಚೆ ನಿರ್ಮೂಲನಾ ಮಂಡಳಿ, ಜಿಲ್ಲಾಡಳಿತ, ಪೊಲೀಸರು ಮಧ್ಯ ಪ್ರವೇಶಿಸಿ ಎಲ್ಲರಿಗೂ ತಿಳಿವಳಿಕೆ ಹೇಳಿ ಅಲ್ಲಿಂದ ತೆರವುಗೊಳಿಸಿದ್ದರು. ಇದೀಗ ಅಲ್ಲಿ ಸೆಕ್ಯೂರಿಟಿಯವರು ಖಾಲಿ ಮನೆಗಳನ್ನು ಕಾಯುತ್ತಿದ್ದಾರೆ.

” ಮಂಡ್ಯ ಜಿಲ್ಲಾಡಳಿತ, ಶಾಸಕರ ಸಹಯೋಗದೊಂದಿಗೆ ಸಾಕಷ್ಟು ಪ್ರಯತ್ನಿಸಿದರೂ ತಮಿಳು ಕಾಲೋನಿ ನಿವಾಸಿಗಳು ಸರ್ವೇ ಕಾರ್ಯಕ್ಕೂ ಅವಕಾಶ ನೀಡುತ್ತಿಲ್ಲ. ನಿವಾಸಿಗಳು ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳಿಗೆ ಹೋದರೆ, ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮೂಲಸೌಲಭ್ಯ ಕಲ್ಪಿಸಲು ಸಿದ್ಧರಿದ್ದೇವೆ.”

-ನಾಗೇಂದ್ರ, ಸಹಾಯಕ ಇಂಜಿನಿಯರ್, ಕೊಳಚೆ ನಿರ್ಮೂಲನಾ ಮಂಡಳಿ

” ಮಂಡ್ಯ ನಗರದಲ್ಲಿಯೇ ಸಾವಿರಾರು ಜನರು ನಿವೇಶನ ಮತ್ತು ವಸತಿ ವಂಚಿತರಿದ್ದಾರೆ. ಅವರೆಲ್ಲರೂ ಕೂಲಿ ಕೆಲಸ ಮಾಡಿಕೊಂಡು ದುಬಾರಿ ಬಾಡಿಗೆ ಮನೆಗಳಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಅಂತಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಿದರೆ ಕೋಟ್ಯಂತರ ರೂ. ಸದ್ಬಳಕೆಯಾಗುತ್ತದೆ. ತಮಿಳು ಕಾಲೋನಿ ನಿವಾಸಿಗಳಿಗೆ ೫ ಎಕರೆ ಜಾಗದಲ್ಲಿ ಪ್ರತ್ಯೇಕ ನಿವೇಶನ ಹಂಚಿಕೆ ಮಾಡಿಕೊಡಲಿ.”

– ಸಿದ್ದರಾಜು, ರಾಜ್ಯ ಕಾರ್ಯದರ್ಶಿ, ಭೂಮಿ, ವಸತಿ ಮತ್ತು ಹಕ್ಕು ವಂಚಿತರ ಹೋರಾಟ ಸಮಿತಿ, ಮಂಡ್ಯ

” ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ತಮಿಳು ಕಾಲೋನಿ ನಿವಾಸಿಗಳಿಗೆ ಮೂಲಸೌಲಭ್ಯ ಇರುವ ಮನೆಗಳನ್ನು ನಿರ್ಮಿಸಲಾಗಿದೆ. ಈ ಸಂಬಂಧ ಸಾಕಷ್ಟು ಬಾರಿ ಸಭೆ ನಡೆಸಿ ನಿವಾಸಿಗಳ ಮನವೊಲಿಸುವ ಪ್ರಯತ್ನ ನಡೆದಿದೆ. ಆದರೂ ಅವರು ನೂತನ ಮನೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲಾಗುವುದು.”

-ಡಾ.ಕುಮಾರ, ಜಿಲ್ಲಾಧಿಕಾರಿ

Tags:
error: Content is protected !!