Mysore
19
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಮಹಿಳಾ ಸಾಂತ್ವನ ಕೇಂದ್ರದಲ್ಲಿ 5,411 ಪ್ರಕರಣ ಇತ್ಯರ್ಥ

2002ರಲ್ಲಿ ಆರಂಭವಾದ ಸಾಂತ್ವನ ಕೇಂದ್ರದಲ್ಲಿ ನೊಂದವರಿಗೆ ನೆರವು ; ಯೋಜನೆ  ಸದುಪಯೋಗಪಡಿಸಿಕೊಳ್ಳಲು ಮನವಿ

ನವೀನ್ ಡಿಸೋಜ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಮೂಲಕ ೫೪೧೯ ಪ್ರಕರಣಗಳ ಪೈಕಿ ೫೪೧೧ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ನೊಂದ ಮಹಿಳೆಯರಿಗೆ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ನೆರವು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಸಾಂತ್ವನ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕೊಡಗು ಜಿಲ್ಲೆಯ ಸಾಂತ್ವನ ಕೇಂದ್ರದಲ್ಲಿ ನೊಂದವರಿಗೆ ನೆರವು ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೦೨ರ ನ. ೪ರಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಪ್ರಾರಂಭಗೊಂಡಿತು. ಅಂದಿನಿಂದ ಕೊಡಗು ಜಿಲ್ಲೆಯಾದ್ಯಂತ ಸಮಾಜದಲ್ಲಿ ನೊಂದ ಮಹಿಳೆಯರು ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ದಾಖಲಿಸಿಕೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ನೆರವು ಕಲ್ಪಿಸಲಾಗುತ್ತಿದೆ.

ಕೊಡಗು ಜಿಲ್ಲೆಯ ಸಾಂತ್ವನ ಕೇಂದ್ರದಲ್ಲಿ ಇಲ್ಲಿಯವರೆಗೆ ವಿವಿಧ ಸ್ವರೂಪದ ೫,೪೧೯ಪ್ರಕರ ಣಗಳು ದಾಖಲಾಗಿವೆ. ಅವುಗಳ ಪೈಕಿ ೫,೪೧೧ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ೨೦೨೪-೨೫ನೇ ಆರ್ಥಿಕ ಸಾಲಿನಲ್ಲಿ ೩೦೧ ಪ್ರಕರಣ ಗಳು ದಾಖಲಾಗಿದ್ದು, ೨೯೩ ಪ್ರಕರಣಗಳು ಇತ್ಯರ್ಥಗೊಂಡಿವೆ. ಹಿಂದಿನ ಸಾಲಿನ ಉಳಿಕೆ ಪ್ರಕರಣಗಳು ಸೇರಿ ೮ ಪ್ರಕರಣಗಳು ಇತ್ಯರ್ಥಗೊಳ್ಳುವ ಹಂತದಲ್ಲಿವೆ. ಈವರೆಗೆ ವಿವಿಧ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ೧೨,೦೦,೫೦೦ ರೂ. ಗಳ ನೆರವನ್ನು ಸಾಂತ್ವನ ಕೇಂದ್ರ ಹಾಗೂ ನ್ಯಾಯಾಲಯದ ಮೂಲಕ ಫಲಾನುಭವಿಗಳಿಗೆ ೨೦೨೪-೨೫ನೇ ಸಾಲಿನಲ್ಲಿ ಕೊಡಿಸಿಕೊಡಲಾಗಿದೆ.

ಮಹಿಳಾ ಸಾಂತ್ವನ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೇಂದ್ರ ಸರ್ಕಾರದ ‘ಸಖಿ ಒನ್ ಸ್ಟಾಪ್’ ಕೇಂದ್ರ ಆರಂಭವಾದ ಸಂದರ್ಭ ಸಾಂತ್ವನ ಕೇಂದ್ರಗಳನ್ನು ಸ್ಥಗಿತ ಗೊಳಿಸಲು ಸರ್ಕಾರ ನಿರ್ಧರಿಸಿತ್ತು. ಬಳಿಕ ಎರಡೂ ಯೋಜನೆಗಳ ಕಾರ್ಯವೈಖರಿ ಬೇರೆಯೇ ಇರುವುದನ್ನು ಮನಗಂಡು ಸಾಂತ್ವನ ಯೋಜನೆಯನ್ನು ಮುಂದುವರಿಸಲಾಗಿತ್ತು. ಅದರಂತೆ ಸಾಂತ್ವನ ಕೇಂದ್ರಗಳು ಈಗ ಕಾರ್ಯನಿರ್ವಹಿಸುತ್ತಿವೆ.

ಯಾವುದೇ ಪ್ರಕರಣಗಳು ಬಂದರೂ ಮೊದಲ ಹಂತವಾಗಿ ಕೌನ್ಸಿಲಿಂಗ್ ಮೂಲಕ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇವೆ. ಪತಿ, ಪತ್ನಿ, ಅತ್ತೆ, ಮಾವ ಅಥವಾ ಯಾರೇ ಇದ್ದರೂ ಅವರ ಸಂಸಾರವನ್ನು ಸರಿ ಮಾಡಲು ಪ್ರಯತ್ನಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ಕಳೆದ ಹಲವು ವರ್ಷಗಳಿಂದ ಹಲವು ಸಂಸಾರಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ನೊಂದ ಮಹಿಳೆಯರು ಇದ್ದಲ್ಲಿ ಸಾಂತ್ವನ ಕೇಂದ್ರದ ಪ್ರಯೋಜನ ಪಡೆದುಕೊಳ್ಳಬಹುದು. -ಚಂದ್ರಮ್ಮ, ಕೌನ್ಸಿಲರ್, ಸಾಂತ್ವನ ಕೇಂದ್ರ, ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ನೊಂದ ಮಹಿಳೆಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತ ಪ್ರಕರಣಗಳನ್ನು ದಾಖಲಿಸಿಕೊಂಡು ಸೂಕ್ತ ಸಲಹೆ, ಸೂಚನೆಗಳ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಕೆಲಸ ಮಾಡಲಾಗುತ್ತಿದೆ. ೨೦೨೪-೨೫ನೇ ಆರ್ಥಿಕ ಸಾಲಿನ ೩೦೧ ಪ್ರಕರಣಗಳ ಪೈಕಿ ೨೯೩ ಪ್ರಕರಣಗಳನ್ನು ಇತ್ಯರ್ಥಗೊಳಿ ಸಲಾಗಿದೆ. ಮಹಿಳಾ ಸಹಾಯವಾಣಿಯ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೯೮೮೦೯೮೫೯೩೯ನ್ನು ಸಂಪರ್ಕಿಸಬಹುದು. -ಪ್ರಕಾಶ್ ಕೆ. ಎಸ್. , ಸಾಂತ್ವನ ಕೇಂದ್ರದ ಮುಖ್ಯಸ್ಥರು.

ಪತಿಯ ಕಿರುಕುಳ ಪ್ರಕರಣಗಳೇ ಹೆಚ್ಚು
ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಬಂದ ಪ್ರಕರಣಗಳಲ್ಲಿ ಪತಿಯಿಂದ ಕಿರುಕುಳಕ್ಕೊಳಗಾದ ಪ್ರಕರಣಗಳೇ ಹೆಚ್ಚು ದಾಖಲಾಗಿವೆ. ಇದರೊಂದಿಗೆ ಆಸ್ತಿ ಕಲಹ, ಅತ್ತೆಯಿಂದ ಕಿರುಕುಳ, ವಿವಾಹ ವಿಚ್ಛೇದನದಂತಹ ಪ್ರಕರಣಗಳೂ ದಾಖಲಾಗುತ್ತಿವೆ. ಪ್ರಕರಣ ದಾಖಲಾದ ಸಂದರ್ಭದಲ್ಲಿ ಮೊದಲ ಹಂತವಾಗಿ ಸಮಾಲೋಚಕರಿಂದ ಸಲಹೆ ಸೂಚನೆಗಳನ್ನು ನೀಡಿ ಪ್ರಕರಣ ಇತ್ಯರ್ಥಗೊಳಿಸುವುದು ಸಾಂತ್ವನ ಕೇಂದ್ರದ ಉದ್ದೇಶವಾಗಿದ್ದು, ಅದರಂತೆ ೫೪೧೧ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇಲ್ಲಿ ಇತ್ಯರ್ಥಗೊಳಿಸಲು ಸಾಧ್ಯವಾಗದ ಪ್ರಕರಣಗಳನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ರವಾನಿಸಲಾಗುತ್ತದೆ.

Tags:
error: Content is protected !!