ನವೀನ್ ಡಿಸೋಜ
ಹಗ್ಗಜಗ್ಗಾಟ, ವಾಲಿಬಾಲ್, ಥ್ರೋಬಾಲ್ ಸೇರಿದಂತೆ ಮೇಳೈಸಲಿವೆ ವಿವಿಧ ಕ್ರೀಡೆಗಳು; ಮಳೆ, ಚಳಿಯ ನಡುವೆಯೂ ಸ್ಪರ್ಧೆಗೆ ಕ್ರೀಡಾಪಟುಗಳು ಅಣಿ
ಮಡಿಕೇರಿ: ಕ್ರೀಡಾ ತವರು ಎನಿಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಮಾತ್ರವಲ್ಲದೆ ಮಳೆಗಾಲದಲ್ಲಿಯೂ ನಾನಾ ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಕೆಸರುಗದ್ದೆಯಲ್ಲಿ ನಡೆಯುವ ಕ್ರೀಡಾಕೂಟ ಹೆಚ್ಚು ಮಹತ್ವ ಪಡೆದುಕೊಂಡಿದೆ. ಆ.೨೩ರ ಶನಿವಾರ ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ ೩೩ನೇ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾ ಕೂಟ ನಡೆಯಲಿದ್ದು, ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದಾರೆ.
ಬೇಸಿಗೆ ಸಮಯದಲ್ಲಿ ಹಾಕಿ, ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್ ಹೀಗೆ ಒಂದಲ್ಲಾ ಒಂದು ಕ್ರೀಡಾಕೂಟ ನಡೆಯುವ ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ, ಕೆಸರು ಗದ್ದೆ ಕ್ರೀಡಾ ಕೂಟದ ಸಂಭ್ರಮ ಗರಿಗೆದರುತ್ತದೆ. ಈ ಕ್ರೀಡಾಕೂಟಗಳು ದೇಸಿ ಸೊಗಡನ್ನು ಅನಾವರಣಗೊಳಿಸುತ್ತವೆ. ಇಲ್ಲಿನ ಕ್ರೀಡಾ ಪ್ರೇಮಿಗಳು ಮಳೆ, ಚಳಿಗೆ ಮೈಯೊಡ್ಡಿ ಆಟವಾಡುವುದಕ್ಕಾ ಗಿಯೇ ಕೆಲವು ಸಂಘ-ಸಂಸ್ಥೆಗಳು ತಂಡಗಳನ್ನು ರಚಿಸಿಕೊಂಡು ಆಯೋಜಕರ ಸಹಯೋಗ ಪಡೆದು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿವೆ.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಮತ್ತು ಅಯ್ಯಂಗೇರಿ ಶ್ರೀ ಕೃಷ್ಣ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲಾ ಯುವ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹ ಯೋಗದಲ್ಲಿ ಇಂದು ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ.
ಭಾಗಮಂಡಲ ಗ್ರಾಮದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ವಿವಿಧ ಕ್ರೀಡೆಗಳು ನಡೆಯಲಿದ್ದು, ಬೆಳಿಗ್ಗೆ ೯ ಗಂಟೆಗೆ ಪತ್ರಕರ್ತರು ಮತ್ತು ಆಯೋಜಕರ ನಡುವೆ ವಾಲಿಬಾಲ್ ಪ್ರದರ್ಶನ ಪಂದ್ಯ ನಡೆಯುವ ಮೂಲಕ ಕ್ರೀಡಾಕೂಟಗಳು ಆರಂಭಗೊಳ್ಳಲಿವೆ.
ಪುರುಷರು ಹಾಗೂ ಮಹಿಳೆಯರ (೭ ಮಂದಿಯ ತಂಡ) ವಿಭಾಗಕ್ಕೆ ಹಗ್ಗಜಗ್ಗಾಟ, ಪುರುಷರಿಗೆ ವಾಲಿಬಾಲ್ (೪ ಮಂದಿಯ ತಂಡ) ಮತ್ತು ಮಹಿಳೆಯರಿಗೆ ಥ್ರೋಬಾಲ್ (೬ ಮಂದಿಯ ತಂಡ) ಪಂದ್ಯಾವಳಿಗಳು ನಡೆಯಲಿವೆ. ಮಧ್ಯಾಹ್ನ ೧ ಗಂಟೆಯಿಂದ ಕೆಸರು ಗದ್ದೆ ಓಟ ನಡೆಯಲಿದ್ದು, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರಿಗೆ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜು ಯುವಕ, ಯುವತಿಯರಿಗೆ ಹಾಗೂ ಆಯೋಜಕರಿಗೆ ಓಟದ ಸ್ಪರ್ಧೆ, ಸಾರ್ವಜನಿಕರಿಗಾಗಿ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಓಟದ ಸ್ಪರ್ಧೆ ನಡೆಯಲಿದೆ.
ಸಾರ್ವಜನಿಕ ವಿಭಾಗದ ಹಗ್ಗಜಗ್ಗಾಟಕ್ಕೆ ಸ್ಪರ್ಧಿಸುವ ಪುರುಷರಿಗೆ ೧,೫೦೦ ರೂ., ಮಹಿಳೆಯರಿಗೆ ೧,೦೦೦ ರೂ., ಸಾರ್ವಜನಿಕರ ವಾಲಿಬಾಲ್ ಹಾಗೂ ಥ್ರೋಬಾಲ್‌ಗೆ ತಲಾ ೧,೦೦೦ ರೂ.ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಕ್ರೀಡಾಕೂಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಂಸನಾ ಪತ್ರ ನೀಡಲಾಗುತ್ತದೆ.
ಸಂಜೆ ಸಮಾರೋಪ ಸಮಾರಂಭ: ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಹೊದ್ದೂರು ಗ್ರಾ.ಪಂ. ಅಧ್ಯಕ್ಷೆ ಎಚ್.ಎ.ಹಂಸ, ಜಿ.ಪಂ. ಆಡಳಿತಾಧಿಕಾರಿ ಎನ್.ವಿ.ಪ್ರಸಾದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಕುಮಾರ್, ಇತರರು ಪಾಲ್ಗೊಳ್ಳಲಿದ್ದಾರೆ.
ಹಲವು ಗಣ್ಯರ ಉಪಸ್ಥಿತಿ: ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕ ಡಾ.ಮಂಥರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷ ಕಾಳನ ರವಿ, ಅಯ್ಯಂಗೇರಿ ಗ್ರಾ.ಪಂ. ಅಧ್ಯಕ್ಷೆ ಎಚ್.ಜಿ ಪುಷ್ಪ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ದಾಸ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ಆನಂದ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್‌ಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ.
” ಪ್ರತಿವರ್ಷದಂತೆ ಈ ಬಾರಿಯೂ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊಡಗು ಜಿಲ್ಲಾ ಯುವ ಒಕ್ಕೂಟ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ೩೩ನೇ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ಬೆಳಿಗ್ಗೆ ೯ ಗಂಟೆಗೆ ಕ್ರೀಡಾಕೂಟ ಉದ್ಘಾಟನೆಗೊಳ್ಳಲಿದ್ದು, ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು.”
-ಪಿ.ಪಿ.ಸುಕುಮಾರ್, ಯುವ ಒಕ್ಕೂಟದ ಅಧ್ಯಕ್ಷ





