Mysore
24
clear sky

Social Media

ಸೋಮವಾರ, 19 ಜನವರಿ 2026
Light
Dark

ಶೀಘ್ರ ಆಡಳಿತಾಧಿಕಾರಿಗಳ ತೆಕ್ಕೆಗೆ ಜಿಲ್ಲೆಯ 260 ಗ್ರಾಪಂಗಳು

ಕೆ.ಬಿ.ರಮೇಶನಾಯಕ

ಮೈಸೂರು ನಗರಪಾಲಿಕೆಯಿಂದ ಗ್ರಾಪಂ ಆಡಳಿತದವರೆಗೆ ಇಲ್ಲದ ಜನಪ್ರತಿನಿಧಿಗಳು

ಮೇ ತಿಂಗಳಿಗೆ ಐದು ವರ್ಷಗಳ ಕಾಲ ಆಡಳಿತಾಧಿಕಾರಿಗಳನ್ನು ಕಾಣುವ ಜಿಪಂ, ತಾಪಂ

ಮೈಸೂರು: ಅಧಿಕಾರ ವೀಕೇಂದ್ರೀಕರಣದ ಆಶಯಗಳೊಂದಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದರೂ ಸಕಾಲಕ್ಕೆ ಚುನಾವಣೆ ನಡೆಸದ ಕಾರಣ ಆಡಳಿತಾಧಿಕಾರಿಗಳನ್ನು ಕಾಣುವಂತಾಗಿದ್ದು, ಶೀಘ್ರದಲ್ಲೇ ಜಿಲ್ಲೆಯ ೨೬೦ ಗ್ರಾಮ ಪಂಚಾಯಿತಿಗಳು ಆಡಳಿತಾಧಿಕಾರಿಗಳ ಕೈ ಸೇರಲಿವೆ.

ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ದಿನದಿಂದ ಐದು ವರ್ಷಗಳು ಮುಗಿಯುವ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕೆಂದು ರಾಜ್ಯಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ. ಗ್ರಾಪಂಗಳಿಗೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳನ್ನು ನೇಮಕ ಮಾಡಲು ಅಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗಿದ್ದು, ಅವಧಿ ಮುಗಿಯುವ ದಿನಾಂಕದಿಂದಲೇ ಗ್ರಾಪಂಗಳ ಅಧಿಕಾರ ವಹಿಸಿಕೊಳ್ಳಲು ಬೇಕಾದ ಸಿದ್ಧತೆಗೆ ಆದೇಶ ಹೊರಬೀಳಲಿದೆ. ಇದರಿಂದಾಗಿ ಚುನಾವಣೆ ನಡೆಯುವುದು ಅನುಮಾನವಾಗಿರುವ ಜತೆಗೆ, ಮುಂದಿನ ಆಯವ್ಯಯವನ್ನು ಅಧಿಕಾರಿಗಳೇ ಮಂಡಿಸುವಂತಾಗಿದೆ. ಮೈಸೂರು ಜಿಲ್ಲೆಯ ೨೬೦ ಗ್ರಾಪಂ ಸೇರಿ ರಾಜ್ಯಾದ್ಯಂತ ಎರಡು ಹಂತಗಳಲ್ಲಿ ಚುನಾವಣೆ ನಡೆದು ೨೦೨೦ರ ಡಿಸೆಂಬರ್ ೩೦ರಂದು -ಲಿತಾಂಶ ಪ್ರಕಟವಾಗಿತ್ತು. ನಂತರ ಮೀಸಲಾತಿ ಪ್ರಕಟಿಸಿದ ಮೇಲೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತ್ತು.

ಹಾಗಾಗಿ, ಫಲಿತಾಂಶ ಹೊರ ಬಂದು ಹದಿನೈದು ದಿನ ಕಳೆದರೂ ಅಧ್ಯಕ್ಷರ ಆಯ್ಕೆಯ ದಿನದಿಂದ ಲೆಕ್ಕಕ್ಕೆ ಬರುವ ಕಾರಣಕ್ಕಾಗಿ ಜನವರಿ ಮೂರನೇ ವಾರದಿಂದ ಫೆಬ್ರವರಿ ಎರಡನೇ ವಾರದೊಳಗೆ ಎಲ್ಲಾ ಪಂಚಾಯಿತಿಗಳ ಅಧಿಕಾರ ಮುಗಿಯಲಿದೆ. ಹಾಗಾಗಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ,ರೇಷ್ಮೆ, ಸಣ್ಣ ನೀರಾವರಿ,ಪಶು ಸಂಗೋಪನೆ, ಜವಳಿ ಮೊದಲಾದ ಇಲಾಖೆಗಳ ಸಹಾಯಕ ನಿರ್ದೇಶಕರು, ಲೋಕೋಪಯೋಗಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ನೇಮಿಸುವುದಕ್ಕೆ ಆಯಾಯ ಇಲಾಖೆಗಳ ಮುಖ್ಯಸ್ಥರಿಂದ ಪಟ್ಟಿ ಪಡೆಯಲು ಜಿಲ್ಲಾಡಳಿತ ಮುಂದಾಗಿದ್ದು, ಈ ಪಟ್ಟಿ ಕೈ ಸೇರುತ್ತಿದ್ದಂತೆ ಆಯಾಯ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ಅಥವಾ ಎರಡೆರಡು ಪಂಚಾಯಿತಿಗಳನ್ನು ವಹಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಐದು ವರ್ಷ ಅವಧಿ ಪೂರೈಕೆಯತ್ತ ನಡೆ: ಜಿಲ್ಲಾ ಪಂಚಾಯಿತಿ,ತಾಲ್ಲೂಕು ಪಂಚಾಯಿತಿ ಜನಪ್ರತಿನಿಧಿಗಳ ಅಡಳಿತಾವಧಿ ಮುಗಿದು ಆಡಳಿತಾಧಿಕಾರಿಗಳ ನೇಮಕಕ್ಕೆ ಮೇ ೨೦ಕ್ಕೆ ಐದು ವರ್ಷ ಮುಗಿಯಲಿದ್ದು, ಕರ್ನಾಟಕದ ಇತಿಹಾಸದಲ್ಲೇ ಇದು ದಾಖಲೆಯಾಗಲಿದೆ. ಜಿಪಂ, ತಾಪಂ ಅವಧಿ ಮುಗಿದ ಒಂದು ವರ್ಷದೊಳಗೆ ಚುನಾವಣೆ ನಡೆಸಲಾಗುತ್ತಿತ್ತು. ಆದರೆ, ಈಗ ಐದು ವರ್ಷಗಳ ಅವಧಿ ಮುಗಿಯುವುದಕ್ಕೆ ಇನ್ನೂ ನಾಲ್ಕು ತಿಂಗಳು ಬಾಕಿ ಇದ್ದರೂ ಚುನಾವಣೆ ನಡೆಸುವ ಮುನ್ಸೂಚನೆ ಕಾಣಿಸುತ್ತಿಲ್ಲ. ಇದರಿಂದಾಗಿ ಸ್ಥಳೀಯವಾಗಿ ಅಧಿಕಾರ ಸಿಗದೆ ಇರುವ ಮುಖಂಡರು ನಿರಾಶರಾಗಿದ್ದಾರೆ. ಜಿಪಂ ಹಂತದಲ್ಲಿ ಪ್ರಭಾವಿಯಾಗಿದ್ದ ರಾಕೇಶ್ ಪಾಪಣ್ಣ, ಬೀರಿಹುಂಡಿ ಬಸವಣ್ಣ, ಮಾದೇಗೌಡ, ಕೂರ್ಗಳ್ಳಿ ಮಹದೇವು, ವೆಂಕಟಸ್ವಾಮಿ, ಎಂ.ಪಿ.ನಾಗರಾಜು, ಮಂಗಳಾ ಸೋಮಶೇಖರ್, ಎಂ.ಗುರುಸ್ವಾಮಿ ಮತ್ತಿತರರು ಶಾಸಕ ಸ್ಥಾನದ ಮೇಲೆ ಕಣ್ಣಿಟ್ಟು ಟಿಕೆಟ್ ಬಯಸಿದರೂ ದೊರೆಯದೆ ಈಗ ಮೌನವಾಗಿದ್ದಾರೆ.

ನಗರಪಾಲಿಕೆಯದ್ದೂ ಅದೇ ಕಥೆ: ನಗರಪಾಲಿಕೆ ಸದಸ್ಯರ ಅವಽ ಮುಗಿದು ಎರಡು ವರ್ಷ ಕಳೆದರೂ ಚುನಾವಣೆ ನಡೆಸಲು ಸರ್ಕಾರ ಮುಂದಾಗಲಿಲ್ಲ. ಈಗ ಬೃಹತ್ ಮಹಾನಗರಪಾಲಿಕೆಯನ್ನಾಗಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿರುವ ಪರಿಣಾಮ ಸದ್ಯಕ್ಕೆ ಚುನಾವಣೆ ನಡೆಯುವುದು ಅಸಾಧ್ಯವಾಗಿದೆ. ಬಿಎಂಸಿಸಿಯು ಅಧಿಕೃತವಾಗಿ ರಚನೆಯಾದ ಮೇಲೆ ನಗರ ವ್ಯಾಪ್ತಿಯ ನಾಲ್ಕು ದಿಕ್ಕುಗಳಲ್ಲಿಯೂ ಗಡಿ ಗುರುತು, ೨೦೨೧ರ ಜನಸಂಖ್ಯೆಆಧಾರದ ಮೇಲೆ ವಾರ್ಡುಗಳ ರಚನೆ, ಮೀಸಲಾತಿ ನಿಗದಿ ಸೇರಿದಂತೆ ಹತ್ತಾರು ಪ್ರಕ್ರಿಯೆಗಳು ನಡೆಯಬೇಕಿರುವುದರಿಂದ ಎರಡು ವರ್ಷಗಳ ಸಮಯ ಬೇಕಾಗಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಮೈಸೂರು ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದು ಮೂರು ವರ್ಷಗಳಾಗಿದೆ. ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆಸುವಂತೆ ಶಾಸಕ ಜಿ.ಡಿ.ಹರೀಶ್‌ಗೌಡರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅನಿವಾರ್ಯವಾಗಿ ಚುನಾವಣೆ ನಡೆಸಿದ್ದನ್ನುಹೊರತು ಪಡಿಸಿದರೆ ಉಳಿದ ಸ್ಥಳೀಯ ಆಡಳಿತಗಳು ಚುನಾವಣೆ ಕಾಣದೆ ಆಡಳಿತಾಧಿಕಾರಿಗಳ ಪಾಲಾಗಿವೆ

Tags:
error: Content is protected !!