Mysore
29
clear sky

Social Media

ಸೋಮವಾರ, 19 ಜನವರಿ 2026
Light
Dark

ಸುತ್ತೂರು ಜಾತ್ರೆಯಲ್ಲಿ 257 ಜೋಡಿ ರಾಸುಗಳು!

ಎಸ್‌ .ಎಸ್.ಭಟ್‌ 

ಸುತ್ತೂರು ಜಾತ್ರೋತ್ಸವದಲ್ಲಿ ಜನರನ್ನು ಆಕರ್ಷಿಸುತ್ತಿವೆ ಲಕ್ಷಾಂತರ ರೂ. ಮೌಲ್ಯದ ವಿವಿಧ ತಳಿಗಳ ರಾಸುಗಳು

ನಂಜನಗೂಡು: ಸುತ್ತೂರು ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆ ದನಗಳ ಜಾತ್ರೆಗೆ ಈ ಬಾರಿ ರಾಸುಗಳು ದಾಂಗುಡಿ ಇಟ್ಟ ಪರಿಣಾಮ ೫೫ನೇ ದನಗಳ ಜಾತ್ರೆ ಈವರೆಗಿನ ತನ್ನ ದಾಖಲೆಯನ್ನು ಹಿಂದಿಕ್ಕಿದಂತಾಗಿದೆ.

ಮೂರು ದಿನಗಳ ಕಾಲ ನಡೆಯುವ ದನಗಳ ಜಾತ್ರೆಗೆ ಈ ಬಾರಿ ೨೫೭ ಜೋಡಿ ರಾಸುಗಳು ಆಗಮಿಸಿವೆ. ಹಳೇ ಮೈಸೂರು ಪ್ರಾಂತ್ಯದ ರಾಸುಗಳಿಗೆ ಮೀಸಲಾಗಿದ್ದ ಸುತ್ತೂರು ಜಾತ್ರೋತ್ಸವದ ದನಗಳ ಜಾತ್ರೆಗೆ ಈ ಬಾರಿ ಉತ್ತರ ಕರ್ನಾಟಕದ ರಾಸುಗಳು ಕೂಡ ಆಗಮಿಸಿದ್ದು ವಿಶೇಷವಾಗಿತ್ತು.

ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಮೊಳೆಹಲ್ಲು ಹಾಗೂ ಬಾಯಿ ಗೂಡಿದ ಹಲ್ಲುಗಳೆಂಬ ಆರು ವಿಭಾಗಗಳಲ್ಲಿ ಹಳ್ಳಿಕಾರ್, ಪುಂಗನೂರು, ಸ್ವರ್ಣ ಕಪಿಲಾ, ರುದ್ರಂ, ಮಲೆನಾಡು ಗಿಡ್ಡ ಸೇರಿದಂತೆ ವಿವಿಧ ತಳಿಗಳ ರಾಸುಗಳು ಸ್ಪರ್ಧೆಗಿಳಿದು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹು ಮಾನಕ್ಕಾಗಿ ಪೈಪೋಟಿ ನಡೆಸಿದವು. ಈವರೆಗೆ ಮೂರೂ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು ಈ ಸಾಲಿನಿಂದ ಅದನ್ನು ಆರೂ ವಿಭಾಗ ಗಳಿಗೆ ಏರಿಸಿದ್ದರಿಂದ ಈ ಸಾಲಿನಿಂದ ಪ್ರತಿ ವಿಭಾಗಕ್ಕೂ ಮೂರು ಬಹುಮಾನಗಳಂತೆ ಒಟ್ಟೂ ೧೮ ಬಹುಮಾನ ವಿತರಿಸಲಾಗುತ್ತದೆ.

ಈ ಬಾರಿ ದೇಸಿ ಹಸುಗಳು, ಬೀಜದ ಹೋರಿಗಳು ಸಾಕಷ್ಟು ಇವೆ. ಪ್ರತಿ ವಿಭಾಗದ ಪ್ರಥಮ ಬಹುಮಾನಕ್ಕೆ ೧೦ ಸಾವಿರ ರೂ. ನಗದು, ದ್ವಿತೀಯ ಬಹುಮಾನವಾಗಿ ೭,೫೦೦ ರೂ., ತೃತೀಯ ಬಹುಮಾನವಾಗಿ ೫,೦೦೦ ರೂ.ಗಳೊಂದಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ.

ಪ್ರತಿದಿನ ಸಹಸ್ರಾರು ಜನರ ಆರೋಗ್ಯ ತಪಾಸಣೆ: 

ಸುತ್ತೂರು: ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರೋತ್ಸವದ ನೆನಪಿಗಾಗಿ ಆಯೋಜನೆಗೊಂಡಿರುವ ಜಾತ್ರೋತ್ಸವದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪ್ರತಿ ದಿನ ೨,೦೦೦ಕ್ಕೂ ಹೆಚ್ಚು ಜನರು ಆಗಮಿಸಿ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡಿದ್ದಾರೆ. ಜೆಎಸ್‌ಎಸ್ ಆಸ್ಪತ್ರೆಯ ೮೦ಕ್ಕೂ ಹೆಚ್ಚು ವೈದ್ಯರು ಹಾಗೂ ೧೦೦ಕ್ಕೂ ಹೆಚ್ಚು ಸಿಬ್ಬಂದಿ ಹೆಸರು ನೋಂದಾಯಿಸಿಕೊಂಡವರ ಆರೋಗ್ಯವನ್ನು ಪ್ರಾಥಮಿಕ ಹಂತದಲ್ಲಿ ಪರೀಕ್ಷಿಸಿ ಅವರಿಗೆ ಉಚಿತವಾಗಿ ಔಷಧಿ ಹಾಗೂ ಮಾತ್ರೆ ನೀಡಿ ಹೆಚ್ಚುವರಿ ಚಿಕಿತ್ಸೆ ಬೇಕಾದಲ್ಲಿ ಅವರನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ಆಗಮಿಸುವಂತೆ ಸಲಹೆ ನೀಡಿ ಚೀಟಿ ಕೊಟ್ಟು ಕಳಿಸುತ್ತಿದ್ದಾರೆ. ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಈ ಬಾರಿ ಉಚಿತ ವಾಗಿ ಕಿಡ್ನಿ ತಪಾಸಣೆಯನ್ನೂ ನಡೆಸಲಾಗುತ್ತಿದ್ದು, ದಿನಕ್ಕೆ ನೂರಕ್ಕೂ ಹೆಚ್ಚು ಜನರು ಈ ವಿಭಾಗಕ್ಕೆ ಆಗಮಿಸಿ ತಮ್ಮ ಕಿಡ್ನಿಗಳನ್ನು ಪರೀಕ್ಷಿಸಿಕೊಂಡು ವೈದ್ಯರ ಸಲಹೆ ಪಡೆಯುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲೇ ರಕ್ತ, ಮೂತ್ರದ ಪರೀಕ್ಷೆ ನಡೆಸಿ ಅವರುಗಳ ಕಿಡ್ನಿಯ ಗುಣಮಟ್ಟವನ್ನು ನಿರ್ಧರಿಸಿ ಅವರಿಗೆ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ

” ಐದು ಎಕರೆ ಪ್ರದೇಶದಲ್ಲಿ ದನಗಳ ಜಾತ್ರೆ ಏರ್ಪಡಿಸಿದ್ದು ಮುಂದಿನ ಜಾತ್ರೆಯಲ್ಲಿ ಸ್ಥಳವನ್ನು ಇನ್ನಷ್ಟು ವಿಸ್ತಾರ ಮಾಡಬೇಕಾಗುತ್ತದೆ.”

– ನಂಜಪ್ಪ, ಹದಿನಾರು, ದನಗಳ ಜಾತ್ರೆಯ ಸಂಚಾಲಕ

” ಈ ಸಾಲಿನ ಜಾತ್ರೆಯಲ್ಲಿ ೪-೫ ಲಕ್ಷ ರೂ.ಗಳಿಂದ ಹಿಡಿದು ಸುಮಾರು ೧೮ ಲಕ್ಷ ರೂ. ಬೆಲೆ ಬಾಳುವ ರಾಸುಗಳು ಪಾಲ್ಗೊಂಡಿವೆ.”

-ಉಮಾ ಮಹೇಶ್ವರ, ಜಾತ್ರಾ ಸಮಿತಿ ಸದಸ್ಯ

” ನಮ್ಮ ಸಂತೋಷಕ್ಕಾಗಿಯೇ ಹಸುಗಳನ್ನು ಸಾಕಿ ಸಲುಹಿ ಜಾತ್ರೆಗಳಲ್ಲಿ ತಂದು ಪ್ರದರ್ಶನ ಮಾಡುತ್ತಿದ್ದೇವೆ.”

-ರಾಹುಲ್, ರೈತ, ಬನ್ನೂರು

Tags:
error: Content is protected !!