Mysore
22
haze

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಚಾಮರಾಜನಗರದಲ್ಲಿ ಪ್ರತ್ಯೇಕ ಪ್ರಕರಣ: ಇಬ್ಬರು ಮಕ್ಕಳು ಸಾವು

ಆಯತಪ್ಪಿ ಕಬಿನಿ ನಾಲೆಗೆ ಬಿದ್ದ ಬಾಲಕ

ಚಾಮರಾಜನಗರ: ತಾಲ್ಲೂಕಿನ ಬಸವಟ್ಟಿ ಗ್ರಾಮದಲ್ಲಿ ಬಾಲಕನೊಬ್ಬ ಕಬಿನಿ ನಾಲೆಗೆ ಆಯತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಗ್ರಾಮದ ಮಹದೇವಮ್ಮ ಎಂಬವರ ಪುತ್ರ ವೈ. ಸಿ. ರೊಹೀತ್ (೧೩) ಮೃತಪಟ್ಟ ಬಾಲಕ. ಸಂತೇಮರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದ ಈತ ಬುಧವಾರ ಸಂಜೆ ಕಬಿನಿ ನಾಲೆಯ ಬದಿಯ ರಸ್ತೆಯಲ್ಲಿ ಬರುವಾಗ ಆಯತಪ್ಪಿ ಕಾಲು ಜಾರಿ ನಾಲೆಗೆ ಬಿದ್ದಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿದ್ದಾರೆ. ಗುರುವಾರ ಮಧ್ಯಾಹ್ನ ಬಾಲಕನ ಶವ ಬಸವಟ್ಟಿ ಬಳಿಯ ಕಬಿನಿ ನಾಲೆಯಲ್ಲಿ ಪತ್ತೆಯಾಗಿದೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ತಾಜುದ್ದೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶವವನ್ನು ನಾಲೆಯಿಂದ ಹೊರ ತೆಗೆಸಿ ಸಿಮ್ಸ್ ಬೋಧನಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಸಂಜೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಈ ಸಂಬಂಧ ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಹನ ಹರಿದು ಮಗು ಸಾವು

ಚಾಮರಾಜನಗರ: ತಾಲ್ಲೂಕಿನ ಕಮರವಾಡಿ ಗ್ರಾಮದಲ್ಲಿ ಖಾಸಗಿ ಶಾಲಾ ವಾಹನ ಹರಿದು ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿದೆ. ಗ್ರಾಮದ ನವೀನ್ ಎಂಬವರ ಪುತ್ರ ಆರ್ಯ ಶೆಟ್ಟಿ ಮೃತಪಟ್ಟ ಮಗು. ನವೀನ್ ಅವರ ಮಗಳನ್ನು ಸಂತೇಮರಹಳ್ಳಿಯ ಖಾಸಗಿ ಶಾಲೆಗೆ ಕರೆದೊಯ್ಯಲು ಅವರ ಮನೆ ಮುಂದೆ ಶಾಲಾ ವಾಹನ ಬಂದಿದೆ. ಚಾಲಕ ರಸ್ತೆ ಬದಿ ಮಗು ನಿಂತಿರುವುದನ್ನು ಗಮನಿಸದೆ ವಾಹನ ಚಲಾಯಿಸಿದ್ದರಿಂದ ಮಗುವಿನ ಮೇಲೆ ವಾಹನ ಹರಿದಿದೆ. ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Tags:
error: Content is protected !!