Mysore
35
scattered clouds

Social Media

ಶನಿವಾರ, 25 ಏಪ್ರಿಲ 2026
Light
Dark

ಕೊಡಗು | ಜಿಲ್ಲೆಯಲ್ಲಿ 2-3 ಸಾವಿರ ಅನಧಿಕೃತ ಹೋಂಸ್ಟೇ!

ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮಕ್ಕೆ ಒತ್ತಾಯ ; ವಿದೇಶಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಕ್ರಮಕ್ಕೆ ಆಗ್ರಹ 

ನವೀನ್ ಡಿಸೋಜ

ಮಡಿಕೇರಿ : ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಕೊಡಗು ಜಿಲ್ಲೆಯಲ್ಲಿ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿರುವ 2 ಸಾವಿರದಿಂದ 3 ಸಾವಿರ ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆನ್ನುವ ಒತ್ತಾಯ ಕೇಳಿ ಬಂದಿದೆ.

ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ಅನಧಿಕೃತ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಹಲವರು ತಮ್ಮ ಹೋಂಸ್ಟೇಗಳನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ, ಕೆಲವರು ಇನ್ನೂ ಪರವಾನಗಿ ಪಡೆಯದೇ ಹೋಂಸ್ಟೇ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾ52ರು 2,070 ಅಧಿಕೃತ ಹೋಂಸ್ಟೆಗಳಿದ್ದು, ರೆಸಾರ್ಟ್‌ಗಳಿವೆ. ಆದರೆ ಸುಮಾರು 2000ಕ್ಕೂ ಅಧಿಕ ಹೋಂಸ್ಟೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವೆಡೆ ನಿಯಮಗಳ ಉಲ್ಲಂಘನೆಯೂ ಆಗುತ್ತಿದೆ. ಈ ಸಂಬಂಧ ಈಗಾಗಲೇ ಸ್ಥಳೀಯ ಸಂಸ್ಥೆಗಳ ಮೂಲಕ ನೋಟಿಸ್ ನೀಡುವ ಕೆಲಸ ಮಾಡಲಾಗಿದೆ.

ಹೋಂಸ್ಟೇ ನಡೆಸುವವರು ಅಲ್ಲಿಯೇ ವಾಸವಿದ್ದು, ಬಂದ ಅತಿಥಿಗಳಿಗೆ ಮನೆಯಲ್ಲಿಯೇ ಊಟ ನೀಡಿ ಸತ್ಕರಿಸುವುದು ನಿಜವಾದ ಹೋಂಸ್ಟೇ ಪರಿಕಲ್ಪನೆ. ಅದರಲ್ಲೂ 5 ರೂಂಗಳು ಮಾತ್ರ ಇರಬೇಕು ಎಂಬ ನಿಯಮವಿದೆ. ಆದರೆ, ಜಿಲ್ಲೆಯಲ್ಲಿ ಬಾಡಿಗೆ ಹೋಂಸ್ಟೇಗಳು ಕೂಡ ಕಾರ್ಯನಿರ್ವಹಿಸುತ್ತಿವೆ. ಮಾಲೀಕರು ಎಲ್ಲ ದಾಖಲೆಗಳನ್ನು ಸಲ್ಲಿಸಿ ಲೈಸನ್ಸ್ ಪಡೆದಿದ್ದರೂ ತಾವಲ್ಲಿ ವಾಸವಿರುವುದಿಲ್ಲ. ಬದಲಿಗೆ ಬೇರೆಯವರಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡಿರುತ್ತಾರೆ.

ಹೀಗೆ ಬಾಡಿಗೆ ಅಥವಾ ಭೋಗ್ಯಕ್ಕೆ ಪಡೆದುಕೊಂಡವರು ಕೆಲಸದವರನ್ನಿಟ್ಟು ಹೋಂಸ್ಟೇ ನಡೆಸುತ್ತಾರೆ. ನಿಜವಾದ ಮಾಲೀಕರಾಗಲಿ, ಭೋಗ್ಯಕ್ಕೆ ಪಡೆದವರಾಗಲೀ ಹೋಂಸ್ಟೇನಲ್ಲಿ ಇರುವುದೇ ಇಲ್ಲ. ಹೀಗೆ ನಡೆಸುವುದು ಕಾನೂನು ಬಾಹೀರವಾಗಿದ್ದು, ಇಂತಹ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಈ ಹಿಂದೆ ನಡೆದ ಪೊಲೀಸ್ ಇಲಾಖೆ, ಸಾರ್ವಜನಿಕ ಸಂಪರ್ಕ ಸಭೆ ಮತ್ತು ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಕೇಳಿಬರುತ್ತಲೇ ಇತ್ತು. ಆದರೂ ಸಾಕಷ್ಟು ಭಾಗಗಳಲ್ಲಿ ಇದು ಮುಂದುವರಿದಿದೆ. ಮಾಲೀಕರು ಅಲ್ಲಿಯೇ ವಾಸವಿರಬೇಕು, ರಕ್ತ ಸಂಬಂಧಿಗಳೂ ವಾಸವಿದ್ದು ನಡೆಸಬಹುದು, ಗಂಟೆ ಲೆಕ್ಕದಲ್ಲಿ ಹೋಂಸ್ಟೇ ನೀಡುವಂತಿಲ್ಲ, ಕನಿಷ್ಠ 30 ದಿನಗಳ ಸಿಸಿ ಟಿವಿ ಫುಟೇಜ್ ಇರಬೇಕು, ಪ್ರತಿ ಗೆಸ್ಟ್ ವಿವರ ಪುಸ್ತಕದಲ್ಲಿ ದಾಖಲಾಗಿರಬೇಕು ಎಂಬಿತ್ಯಾದಿ ನಿಯಮಗಳಿದ್ದರೂ ಅವು ಕೆಲವೆಡೆ ಪಾಲನೆಯಾಗುತ್ತಿಲ್ಲ. ಹೀಗಾಗಿ ಅನಧಿಕೃತ ಹೋಂಸ್ಟೇ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ನಿಯಮ ಪಾಲನೆಗೆ ಒತ್ತು ನೀಡಬೇಕೆನ್ನುವ ಒತ್ತಾಯ ಕೂಡ ಕೇಳಿ ಬಂದಿದೆ.

ಮಾಲೀಕರು ಅಲ್ಲಿಯೇ ವಾಸವಿರುವುದು ಕಡ್ಡಾಯ
ಹೋಂಸ್ಟೇ ಲೈಸನ್ಸ್ ಪಡೆಯುವಾಗಲೇ ಮಾಲೀಕರು ಅಲ್ಲಿಯೇ ವಾಸ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ವಾಸಸ್ಥಳ ದೃಢೀಕರಣ ಪತ್ರ ಪಡೆಯಲಾಗುತ್ತದೆ. ಮಾಲೀಕರ ಮಕ್ಕಳು, ಅಣ್ಣ, ಅಕ್ಕ ಹೀಗೆ ರಕ್ತ ಸಂಬಂಧಗಳು ಅಲ್ಲಿಯೇ ಇದ್ದು ಹೋಂಸ್ಟೇ ನಡೆಸುವುದಾದರೆ ಮಾಲೀಕರು ಅಲ್ಲಿರಬೇಕೆಂದಿಲ್ಲ. ಆದರೆ ಅಲ್ಲಿ ಒಬ್ಬರೋ ಇಬ್ಬರೋ ಕೆಲಸದವರನ್ನಿರಿಸಿ ಮಾಲೀಕರು ಬೇರೆಲ್ಲೋ ಇರುವುದು, ಬಾಡಿಗೆ ಅಥವಾ ಲೀಜ್‌ಗೆ ಪಡೆದವರು ಕೇರ್ ಟೇಕರ್ ಒಬ್ಬರನ್ನಿರಿಸಿ ವ್ಯವಹಾರ ನಡೆಸುವುದು ಕಾನೂನುಬಾಹಿರವಾಗಿದೆ. ಕೆಲಸದವರು ಇದ್ದರೂ ಮಾಲೀಕರು ಅಲ್ಲಿಯೇ ಇರುವುದು ಕಡ್ಡಾಯ. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿ ಹಲವು ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆಬಂದಿದ್ದು, ಅಂತಹ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಮಾಹಿತಿ ನೀಡಿದ್ದಾರೆ.

ಅನಧಿಕೃತ ಹೋಂಸ್ಟೇಗಳ ನಿಯಂತ್ರಣ ಅಗತ್ಯ. . .
ಅನಧಿಕೃತ ಹೋಂಸ್ಟೇಗಳ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮನವಿ ಮಾಡಿದ್ದಾರೆ. ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿದ್ದಂತೆಯೇ ಹೋಂಸ್ಟೇಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇವುಗಳನ್ನು ಶಿಸ್ತುಬದ್ಧ ವ್ಯವಸ್ಥೆ ಅಡಿಯಲ್ಲಿ ನಡೆಸಲು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೆಲವು ನಿಯಮಾವಳಿಗಳಿದ್ದು ಅದರ ಪ್ರಕಾರವೇ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಹೋಂಸ್ಟೇಗಳಿಗೆ ಪರವಾನಗಿ ನೀಡಲಾಗುತ್ತದೆ. ಆದರೆ ಅನಧಿಕೃತ ಹೋಂಸ್ಟೇಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾನೂನು ಬಾಹಿರ ಚಟುವಟಿಕೆಗಳು ನಡೆಯಲು ಆಸ್ಪದ ಕೊಡುತ್ತಿವೆ. ಇವುಗಳ ವಿರುದ್ಧ ದೂರುಗಳಿದ್ದರೂ ನಿಯಮಾವಳಿಗಳು ಇಲ್ಲದ ಕಾರಣ ಕ್ರಮ ತೆಗೆದುಕೊಳ್ಳಲು ಪೊಲೀಸರು ಅಸಹಾಯಕರಾಗಿದ್ದಾರೆ ಎಂದು ಹೇಳಿದ್ದಾರೆ.

ಕೊಡಗಿನಲ್ಲಿ 2-3 ಸಾವಿರ ಹೋಂ ಸ್ಟೇಗಳು ನೋಂದಣಿ ಆಗದೆ ಕಾರ್ಯನಿರ್ವಹಿಸುತ್ತಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಹೋಂಸ್ಟೇಗಳ ನೋಂದಣಿಗೆ ಬಳಸುವ ಆಪ್‌ನಲ್ಲಿ ಸಮಸ್ಯೆ ಇರುವ ಕಾರಣ ನೋಂದಣಿ ನಿಧಾನ ಆಗುತ್ತಿದೆ. ಆದರೂ ನ್ಯಾಯಬದ್ಧವಾಗಿ ವ್ಯವಹಾರ ನಡೆಸುವ ಉದ್ದೇಶದಿಂದ ಎಲ್ಲ ಹೋಂಸ್ಟೇಗಳೂ ನೋಂದಣಿ ಮಾಡಿಕೊಳ್ಳಬೇಕಾಗಿದೆ. ನೋಂದಣಿಗೆ ನಿಯಮಾವಳಿಗಳು ಇರುವುದರಿಂದ ಹೋಂಸ್ಟೇಗಳಲ್ಲಿ ನಡೆಯುವ ಕಾನೂನು ವಿರೋಧಿ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತವೆ. -ಮೋಂತಿ ಗಣೇಶ್, ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ

ಕೊಡಗು ಜಿಲ್ಲೆಯಲ್ಲಿ 2,070 ಅಧಿಕೃತ ಹೋಂಸ್ಟೇಗಳಿದ್ದು, 52 ಅಧಿಕೃತ ರೆಸಾರ್ಟ್‌ಗಳಿವೆ. ಈಗಾಗಲೇ ಅನಧಿಕೃತ ಹೋಂಸ್ಟೇಗಳ ನೋಂದಾವಣಿಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಹೋಂಸ್ಟೇಗಳಲ್ಲಿ ಸುರಕ್ಷತೆ ದೃಷ್ಟಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಸಂಬಂಧ ಸಭೆ ನಡೆಸಲಾಗುತ್ತಿದ್ದು, ಆ ಬಳಿಕ ಮಾಹಿತಿ ನೀಡಲಾಗುವುದು. -ನಿತಿನ್ ಚಕ್ಕಿ, ಉಪನಿರ್ದೇಶಕರು(ಪ್ರಭಾರ), ಪ್ರವಾಸೋದ್ಯಮ ಇಲಾಖೆ

Tags:
error: Content is protected !!