Mysore
26
broken clouds

Social Media

ಗುರುವಾರ, 03 ಏಪ್ರಿಲ 2025
Light
Dark

14 ಹಾಸ್ಟೆಲ್‌ಗಳಿಗೆ ಶೀಘ್ರ ಸ್ವಂತ ಕಟ್ಟಡ

ಕೆ.ಬಿ.ರಮೇಶನಾಯಕ

ಮುಂದಿನ ವಾರ ನಿವೇಶನಗಳ ಮಂಜೂರಾತಿ ಪತ್ರ ವಿತರಣೆ 

ಮೈಸೂರು: ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಶೀಘ್ರದಲ್ಲೇ ಸ್ವಂತ ಕಟ್ಟಡ ಭಾಗ್ಯ ಲಭಿಸಲಿದೆ.

ಬಾಡಿಗೆ ಕಟ್ಟಡಗಳಲ್ಲಿರುವ ನಗರದ ೧೩ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕೊಡಲು ಮುಡಾ ಮುಂದಾಗಿದೆ. ಮುಂದಿನ ವಾರ ನಡೆಯಲಿರುವ ಮುಡಾ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ದೊರೆಯುತ್ತಿದ್ದಂತೆ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

ಉತ್ತಮ ಶೈಕ್ಷಣಿಕ ವಾತಾವರಣವನ್ನು ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕಾಲೇಜುಗಳಲ್ಲೇ ಪದವಿ ಪಡೆಯಬೇಕೆಂಬ ಆಸೆ ಹೊತ್ತಿರುವ ಬಡಮತ್ತು ಮಧ್ಯಮ ವರ್ಗಗಳ ವಿದ್ಯಾರ್ಥಿಗಳು ಸರ್ಕಾರಿ ಅಥವಾ ಖಾಸಗಿ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆದರೂ, ವಾಸ್ತವ್ಯಕ್ಕೆ ಸರ್ಕಾರಿ ಹಾಸ್ಟೆಲ್‌ಗಳನ್ನು ಅವ ಲಂಬಿಸುತ್ತಿದ್ದಾರೆ. ಬಾಡಿಗೆ ಕೊಠಡಿಯಲಿದ್ದುಕೊಂಡು ಅಧ್ಯಯನ ಮಾಡುವುದಕ್ಕೆ ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ ಎಂಬುದು ಗಮನಾರ್ಹ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಯಾವುದೇ ವಿದ್ಯಾರ್ಥಿಯು ಕಾಲೇಜು ಮತ್ತು ಹಾಸ್ಟೆಲ್‌ಗೆ ಅರ್ಜಿ ಹಾಕಿದರೆ ಪ್ರವೇಶ ನಿರಾಕರಿಸಬಾರದು ಎಂಬುದಾಗಿ ಆದೇಶ ನೀಡಿದೆ. ಅದಕ್ಕೆ ಪೂರಕವಾಗಿ ೨೦೨೪-೨೫ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ೧೪ ಹಾಸ್ಟೆಲ್ ಗಳನ್ನು ಮಂಜೂರು ಮಾಡಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರಾಜ್ಯದಲ್ಲಿ ೨,೫೩೫ ವಿದ್ಯಾರ್ಥಿನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಲ್ಲಿ ೧,೬೨೦ ವಿದ್ಯಾರ್ಥಿ ನಿಲಯಗಳು ಸ್ವಂತ ಕಟ್ಟಡದಲ್ಲಿವೆ. ೧೯೯ ವಿದ್ಯಾರ್ಥಿನಿಲಯಗಳು ಉಚಿತ ಕಟ್ಟಡ (ಬಾಡಿಗೆ ಇಲ್ಲದೆ) ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ೭೧೬ ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಸ್ಥಳಾವಕಾಶ, ಶೌಚಾಲಯ, ಸ್ನಾನಗೃಹದಂತಹ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯ ಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಆಯವ್ಯಯದ ಲಭ್ಯತೆಯನುಸಾರ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.

೨೦೨೪-೨೫ನೇ ಸಾಲಿನಲ್ಲಿ ಆರಂಭವಾಗಿರುವ ೧೪ ವಿದ್ಯಾರ್ಥಿನಿಲಯಗಳಲ್ಲಿ ತಲಾ ೧೦೦ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಕೃಷ್ಣರಾಜ ಕ್ಷೇತ್ರದಲ್ಲಿ ಐದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಐದು, ಚಾಮರಾಜ ಕ್ಷೇತ್ರದಲ್ಲಿ ಮೂರು, ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಒಂದು ವಿದ್ಯಾರ್ಥಿನಿಲಯವನ್ನು ಆರಂಭಿಸಲಾಗಿದೆ. ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ ಒದಗಿಸಲು ಮುಡಾದಿಂದ ೧೩ ನಿವೇಶನಗಳನ್ನು ಕೊಡಲು ಒಪ್ಪಿಗೆ ದೊರೆತಿದೆ.

ಮುಂದಿನ ಸಭೆಯಲ್ಲಿ ಅನುಮೋದನೆ ದೊರೆಯುತ್ತಿದ್ದಂತೆ ನಿವೇಶನಗಳನ್ನು ಹಸ್ತಾಂತರ ಮಾಡಲಾಗುವುದು. ಅದೇ ರೀತಿ ಪಿರಿಯಾಪಟ್ಟಣ ತಾಲ್ಲೂಕು ತಹಸಿಲ್ದಾರ್ ಜಾಗ ಗುರುತಿಸಿ, ಇಲಾಖೆಗೆ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಇಲಾಖೆಯ ಮೂಲಗಳು ಹೇಳಿವೆ.

” ಜಿಲ್ಲೆಯಲ್ಲಿ ೧೦೬ ವಿದ್ಯಾರ್ಥಿನಿಲಯಗಳು ಮೈಸೂರು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯು ೧೦೬ ವಿದ್ಯಾರ್ಥಿನಿಲಯಗಳನ್ನು ನಿರ್ವಹಿಸುತ್ತಿದೆ. ಆ ಪೈಕಿ ೨೭ ಬಾಡಿಗೆ ಕಟ್ಟಡದಲ್ಲಿದ್ದು, ಇದೀಗ ೧೪ ವಿದ್ಯಾರ್ಥಿನಿಲಯಗಳಿಗೆ ನಿವೇಶನ ಹಂಚಿಕೆಗೆ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ಹಾಗಾಗಿ ಶೀಘ್ರದಲ್ಲೇ ಕಟ್ಟಡಗಳ ನಿರ್ಮಾಣ ಪ್ರಕ್ರಿಯೆ ಶುರುವಾಗಲಿದೆ.”

” ಕಳೆದ ವರ್ಷ ಹೊಸದಾಗಿ ೧೪ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿದ್ದು, ಇದರಲ್ಲಿ ಆರು ಬಾಲಕರ, ಎಂಟು ಬಾಲಕಿಯರ ವಿದ್ಯಾರ್ಥಿನಿಲಯಗಳು ಸೇರಿವೆ. ಮುಡಾದಿಂದ ನಿವೇಶನಗಳ ಮಂಜೂರಾತಿ ಪತ್ರ ದೊರೆಯುತ್ತಿದ್ದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವ ಕಾರಣ ಒಂದೊಂದು ಹಾಸ್ಟೆಲ್‌ನ ಡಿಪಿಆರ್ ತಯಾರಿಕೆಗೆ ತಕ್ಕಂತೆ ಅನುದಾನ ಬಿಡುಗಡೆಯಾಗಲಿದೆ.”

ರಾಘವೇಂದ್ರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ.

Tags: