Mysore
21
clear sky

Social Media

ಶನಿವಾರ, 03 ಜನವರಿ 2026
Light
Dark

ಕಬಿನಿ ಜಲಾಶಯದಿಂದ 10 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ

ಮಂಜು ಕೋಟೆ

ಕೇರಳ, ತಾಲ್ಲೂಕಿನ ಗಡಿಯಲ್ಲಿ ಚುರುಕುಗೊಂಡ ಮಳೆಯಿಂದ ಒಳಹರಿವಿನ ಪ್ರಮಾಣ ಹೆಚ್ಚಳ

ಎಚ್.ಡಿ.ಕೋಟೆ: ಕೇರಳ ಹಾಗೂ ರಾಜ್ಯದ ಗಡಿ ಭಾಗದಲ್ಲಿ ಮುಂಗಾರು ಮಳೆ ತೀವ್ರಗೊಂಡಿರುವುದರಿಂದ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯದ ೪ ಕ್ರಸ್ಟ್ ಗೇಟ್‌ಗಳ ಮೂಲಕ ೧೦ ಸಾವಿರ ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ.

ಕಳೆದ ತಿಂಗಳು ಪ್ರಾರಂಭದಲ್ಲಿ ಕೇರಳ ಮತ್ತು ತಾಲ್ಲೂಕಿನಲ್ಲಿ ಸುರಿಯುತ್ತಿದ್ದ ಭಾರಿ ಮಳೆಯಿಂದ ಕುಸಿತ ಕಂಡಿದ್ದ ಕಬಿನಿ ಜಲಾಶಯದ ನೀರಿನ ಮಟ್ಟ ೬೦ ಅಡಿಗಳಿಂದ ೮೦ ಅಡಿಗಳಿಗೆ ಏರಿಕೆಯಾಗಿತ್ತು.

ಜಲಾಶಯ ಭರ್ತಿಯಾಗುವ ಸಾಧ್ಯತೆ ಇದ್ದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ ಹಿತದೃಷ್ಟಿಯಿಂದ ಅಧಿಕಾರಿಗಳು ಜಲಾಶದ ೪ ಗೇಟ್ ಗಳ ಮೂಲಕ ೫,೦೦೦ ಕ್ಯೂಸೆಕ್ಸ್ ನೀರನ್ನು ೭-೮ ದಿನಗಳ ಕಾಲ ಹೊರ ಹರಿಸಿದ್ದರು. ಕಳೆದ ವಾರ ಮಳೆ ದಿಢೀರ್ ಕಡಿಮೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕುಸಿತ ಕಂಡು, ಜಲಾಶಯದ ನಾಲ್ಕು ಗೇಟ್‌ಗಳಲ್ಲಿ ಹರಿಯುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿತ್ತು.

ಕಳೆದ ೪-೫ ದಿನಗಳಿಂದ ಮುಂಗಾರು ಮಳೆ ಕೇರಳ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ಮತ್ತೊಮ್ಮೆ ಜಲಾಶಯದ ನೀರಿನ ಮಟ್ಟ ೭೭ ಅಡಿಯಿಂದ ೮೦ ಅಡಿಗಳಿಗೆ ಏರಿಕೆಯಾಗಿದೆ. ಜಲಾಶಯಕ್ಕೆ ಸದ್ಯ ೨೧ ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಜಲಾಶಯದ ಹಿತದೃಷ್ಟಿಯಿಂದ ಜಲಾಶಯದ ಗರಿಷ್ಟ ಮಟ್ಟ ೮೪ ಅಡಿಗಳಿಗೆ ೪ ಅಡಿ ಬಾಕಿ ಇರುವಂತೆಯೇ ಮಂಗಳವಾರ ಬೆಳಿಗ್ಗೆ ೧೦ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ.

ಮೇ ಮತ್ತು ಜೂನ್ ತಿಂಗಳಿನಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಟ ಮಟ್ಟ ತಲುಪುತ್ತಿದ್ದಂತೆ ಎರಡು ಬಾರಿ ನದಿಗೆ ನಾಲ್ಕು ಗೇಟ್‌ಗಳ ಮೂಲಕ ನೀರು ಹರಿಸುತ್ತಿರುವುದು ಇದೇ ಪ್ರಥಮವಾಗಿದೆ. ಇನ್ನು ಮೂರು ನಾಲ್ಕು ದಿನಗಳ ಕಾಲ ಮಳೆ ಹೀಗೆಯೇ ಮುಂದುವರಿದರೆ ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆಗಳಿದ್ದು, ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡುವುದರಿಂದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧರಾಗಿರುವಂತೆ ಮುನ್ಸೂಚನೆ ನೀಡಿದ್ದಾರೆ

” ೨-೩ ದಿನಗಳಿಂದ ಜಲಾಶಯದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯದ ಹಿತದೃಷ್ಟಿಯಿಂದ ಎರಡನೇ ಬಾರಿ ಮತ್ತೊಮ್ಮೆ ೪ ಗೇಟ್‌ಗಳ ಮೂಲಕ ನೀರನ್ನು ನದಿಗೆ ಬಿಡಲಾಗುತ್ತಿದೆ. ನದಿಪಾತ್ರದಲ್ಲಿರುವ ರೈತರು, ಸಾರ್ವಜನಿಕರು, ಗ್ರಾಮಸ್ಥರು ಜಾಗ್ರತೆಯಿಂದ ಇರುವಂತೆ ಇಲಾಖೆ ವತಿಯಿಂದ ಮನವಿ ಮಾಡಲಾಗಿದೆ.”

-ಚಂದ್ರಶೇಖರ್, ಇಇ, ಕಬಿನಿ ಜಲಾಶಯ

Tags:
error: Content is protected !!