Light
Dark

ಬಡವರ ರಾಗಿಗೆ ಸ್ಟಾರ್ ವ್ಯಾಲ್ಯೂ

ಸಿರಿಧಾನ್ಯವೀಗ ಸಿದ್ಧ ಆಹಾರ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡು! ಸಿರಿಧಾನ್ಯಗಳ ಗುಂಪಿಗೆ ನಮ್ಮ ರಾಗಿಯೇ ರಾಜ ! ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲ ವಯೋಮಾನದವರಿಗೆ ಅಕ್ಕಿಯ ಬದಲು ರಾಗಿ ಹೆಚ್ಚು ಪೌಷ್ಟಿಕಯುಕ್ತ ಆಹಾರ ಎನ್ನುವುದು ಬಲ್ಲವರ ಮಾತು. ದಶಕಗಳ ಹಿಂದೆ ಇಡೀ ದೇಶಕ್ಕೆ ರಾಗಿ ಪೂರೈಸುತ್ತಿದ್ದವರು ನಾವು. ಆದರೆ ನೀರಾವರಿ ಬಂದ ಮೇಲೆ ಮಂಡ್ಯದ ಜನರು ಭತ್ತ ಮತ್ತು ಕಬ್ಬಿನ ಮೇಲೆ ಹೆಚ್ಚು ಒಲವು ತೋರಿದ್ದಾರೆ. ಇಷ್ಟಾದರೂ ದೇಶದ ಶೇ. ೩೫ರಷ್ಟು ರಾಗಿ ನಮ್ಮ ಮಂಡ್ಯ ಜಿಲ್ಲೆಯೊಂದರಲ್ಲೇ ಬೆಳೆಯಲಾಗುತ್ತಿದೆ. ರಾಮ ಧಾನ್ಯ ಕುರಿತ ಧ್ಯಾನವಿದು.

ರಾಗಿಯನು ಉಂಬುವನು ನಿರೋಗಿ ಎಂದೆನಿಸುವನು
ರಾಗಿಯು ಭೋಗಿಗಳಿಗಲ್ಲ
ಬಡವರಿಗಾಗಿ ಬೆಳೆದಿಹುದು ಸರ್ವಜ್ಞ

ಸರ್ವಜ್ಞನ ವಚನಸ್ವರೂಪದ ಈ ತ್ರಿಪದಿ ಬರೆದು ಐದು ನೂರು ವರ್ಷಗಳೇ ದಾಟಿವೆ. ವೈಜ್ಞಾನಿಕವಾಗಿ ಕ್ಯಾಲೋರಿಗಳ ಲೆಕ್ಕದಲ್ಲಿ ಪೌಷ್ಟಿಕಾಂಶ ಅಳೆಯುವ ಮಾನದಂಡಗಳು ಆ ಕಾಲದಲ್ಲಿ ಇರಲಿಲ್ಲ. ಆದರೆ, ರಾಗಿ ರೋಗನಿರೋಧಕ ಎಂಬ ಸತ್ಯ ಗೊತ್ತಿತ್ತು. ಆ ಸತ್ಯವನ್ನು ಸರ್ವಜ್ಞ ವಚನಗಳ ಮೂಲಕ ಅಭಿವ್ಯಕ್ತಿಸಿದ್ದಾನೆ. ರಾಗಿ ಕುರಿತಾದ ಚರ್ಚೆ- ಸಂವಾದ, ವಿಚಾರ ಸಂಕಿರಣಗಳಲ್ಲಿ ಸರ್ವಜ್ಞನ ವಚನ, ಕನಕದಾಸರ ರಾಮಧಾನ್ಯದ ಬಗ್ಗೆ ಪ್ರಸ್ತಾಪವಾಗದೇ ಇದ್ದರೆ ಪರಿಪೂರ್ಣ ಎನಿಸುವುದಿಲ್ಲ. ರಾಗಿಯ ಮಹಾತ್ಮೆಯೇ ಅಂತಹದ್ದು !

ಸರ್ವಜ್ಞ, ದಾಸರ ಬಳಿಕ ರಾಗಿಗೆ ಹಿರಿಮೆ-ಗರಿಮೆ ಬಂದದ್ದು ಡಾ. ಸಿ.ಎಚ್. ಲಕ್ಷ್ಮಣಯ್ಯ ಅವರಿಂದ. ರಾಗಿಗಾಗಿ ಅವರು ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟು ರಾಗಿ ಲಕ್ಷ್ಮಣಯ್ಯ ಎಂದೇ ಹೆಸರಾದರು. ಹತ್ತಾರು ಹೊಸತಳಿ ಸೃಷ್ಟಿಸಿ ‘ರಾಗಿ ಬ್ರಹ್ಮ’ರಾದರು. ಇದೀಗ ರಾಗಿ ಲಕ್ಷ್ಮಣಯ್ಯ ಅವರ ಶತಮಾನೋತ್ಸವ!

ಸರ್ವಜ್ಞನ ವಚನವೇ ವಿವರಿಸುವಂತೆ ರಾಗಿ ಇರುವುದೇ ಬಡವರಿಗಾಗಿ! ಬಡವರು ರಾಗಿಯನ್ನೇ ಯಾಕೆ ಉಪಯೋಗಿಸುತ್ತಾರೆ ಎಂಬುದಕ್ಕೆ ಆರ್ಥಿಕ ಮತ್ತು ಭೌಗೋಳಿಕ ಕಾರಣಗಳಿವೆ. ಅಕ್ಕಿ, ಗೋಧಿ ಸೇರಿದಂತೆ ಇತರ ಆಹಾರ ಧಾನ್ಯಗಳಿಗೆ ಹೋಲಿಸಿದರೆ ರಾಗಿ ಉತ್ಪಾದನಾ ವೆಚ್ಚ ತುಸು ಕಡಿಮೆ. ಬೆಲೆಯೂ ಕಡಿಮೆ. ಒಂದು ಕೆಜಿ ಅಕ್ಕಿ ಕೊಳ್ಳುವ ಮೊತ್ತದಲ್ಲಿ ಎರಡರಿಂದ ಎರಡೂವರೆ ಕೆಜಿ ರಾಗಿ ಕೊಳ್ಳಬಹುದು. ಹೀಗಾಗಿ ಬಡವರಿಗಾಗಿಯೇ ಬೆಳೆದ ಧಾನ್ಯ ಎನ್ನಲಾಗುತ್ತಿದೆ.

ಸಕ್ಕರೆ ಕಾಯಿಲೆ ಉಳ್ಳವರಿಗೆ ಅಕ್ಕಿ ಬದಲು ರಾಗಿ ಉತ್ತಮ ಎಂದು ವೈಜ್ಞಾನಿಕವಾಗಿ ದೃಢಪಟ್ಟ ನಂತರ ರಾಗಿಗೆ ಮೇಲ್ವರ್ಗದ ಜನರಿಂದಲೂ ಬೇಡಿಕೆ ಹೆಚ್ಚಿದೆ. ರಾಗಿಗೆ ‘ಮೌಲ್ಯವರ್ಧನೆ’ ಮಾಡಿದ ನಂತರ ಮೌಲ್ಯವರ್ಧಿತ ಬೆಲೆಯೂ ಹೆಚ್ಚಿದೆ. ರಾಗಿ ಈಗ ಬರೀ ಮುದ್ದೆಗೆ, ರೊಟ್ಟಿಗೆ ಸೀಮಿತವಾಗಿಲ್ಲ. ರಾಗಿ ಬಿಸ್ಕತ್ತು, ದೋಸೆ, ಇಡ್ಲಿ, ಕುಕೀಸ್, ಪಪ್ಸ್, ಶಾವಿಗೆ, ಆರೋಗ್ಯಪೇಯ ಇತ್ಯಾದಿಗಳ ರೂಪದಲ್ಲಿ ಬಳಕೆಯಾಗುತ್ತಿದೆ.

ಮೈಸೂರು ರಾಗಿ ಪ್ರಾಂತ್ಯ

ಕಾಗಿನೆಲೆಯ ಕನಕದಾಸರು ರಾಗಿಗೆ ರಾಮಧಾನ್ಯದ ಪಟ್ಟ ಕೊಟ್ಟಿದ್ದಾರೆ ಎಂದ ಮೇಲೆ ಉತ್ತರ ಕರ್ನಾಟಕದಲ್ಲೂ ಹಿಂದೆ ರಾಗಿ ಬೆಳೆಯಲಾಗುತ್ತಿತ್ತೆನ್ನುವುದು ಸುಸ್ಪಷ್ಟ. ಆದರೆ ಈಗ ಹಳೇ ಮೈಸೂರು ಪ್ರಾಂತ್ಯದಲ್ಲಿ ಮಾತ್ರ ಹೆಚ್ಚಾಗಿ ಬೆಳೆಯಲಾಗುತ್ತ್ತಿದೆ. ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ರಾಗಿಯು ಪ್ರಮುಖ ಬೆಳೆಗಳಲ್ಲೊಂದಾಗಿದ್ದು, ಹೆಚ್ಚಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಮೊದಲು ಮಂಡ್ಯ ಜಿಲ್ಲೆಯಿಡೀ ರಾಗಿ ಬೆಳೆಯಲಾಗುತ್ತಿತ್ತು. ನೀರಾವರಿ ಸೌಲಭ್ಯ ದಕ್ಕಿದ ನಂತರ ರಾಗಿ ಬೆಳೆ ಪ್ರದೇಶವು ಭತ್ತದ ಬೆಳೆ ಪ್ರದೇಶವಾಗಿ ಪರಿವರ್ತನೆಗೊಂಡಿದೆ. ಈಗ ನಾಗಮಂಗಲ, ಮಳವಳ್ಳಿ, ಕೆ.ಆರ್.ಪೇಟೆ ಹಾಗೂ ಪಾಂಡವಪುರ ತಾಲ್ಲೂಕಿನಲ್ಲಿ ಹೆಚ್ಚು ರಾಗಿ ಬೆಳೆಯಲಾಗುತ್ತಿದೆ.

ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡ ರಾಗಿ ಮುದ್ದೆ ಮಂಡ್ಯದ ಜನರ ಜನಪ್ರಿಯ ಆಹಾರ. ಮುದ್ದೆ-ಉಪ್ಪುಸಾರು, ಮುದ್ದೆ- ಬಸ್ಸಾರು, ಮುದ್ದೆ-ನಾಟಿಕೋಳಿ ಸಾರು ಎಂದರೆ ಅದು ಅಪ್ಪಟ ಮಂಡ್ಯ ಬ್ರ್ಯಾಂಡ್.

ವಿವಿಧ ಕಾಲಗಳಿಗೆ ಹೊಂದಿಕೊಂಡು ಬೆಳೆಯುವ ಸಾಮರ್ಥ್ಯ ರಾಗಿಗಿದೆ. ವಿವಿಧ ರೀತಿಯ ಮಣ್ಣು ಹಾಗೂ ಉಷ್ಣಾಂಶವಿರುವ ಹವಾಗುಣಗಳಲ್ಲೂ ಬೆಳೆಯಬಹುದಾಗಿದೆ. ಆದರೆ ೧೫ ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಈ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಈ ಬೆಳೆಯು ಸಮುದ್ರ ಮಟ್ಟದಿಂದ ೩೦೦೦ ಮೀ. ಎತ್ತರದ ಪ್ರದೇಶಗಳವರೆಗೂ ಹೊಂದಿಕೊಂಡು ಬೆಳೆಯುತ್ತದೆ.

ದೇಶದಲ್ಲಿ ೨೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತದೆ. ಈ ಪೈಕಿ ಶೇ.೩೫ರಷ್ಟು ಅಂದರೆ ೭.೫೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕರ್ನಾಟಕದಲ್ಲೇ ಬೆಳೆಯಲಾಗುತ್ತದೆ. ಮಂಡ್ಯ ಜಿಲ್ಲೆಯ ಉತ್ಪಾದನೆ ವಾರ್ಷಿಕ ೧.೯ ರಿಂದ ೨.೦ ಲಕ್ಷ ಟನ್‌ಗಳಷ್ಟಿದೆ. ಉತ್ಪಾದಕತೆಯು ಪ್ರತಿ ಹೆಕ್ಟೇರಿಗೆ ೧೬೫೦ ರಿಂದ ೧೭೫೦ ಕೆ.ಜಿ. ಇದ್ದು ದೇಶದ ಸರಾಸರಿ ಇಳುವರಿಗಿಂತ ಶೇ.೩೫ ರಷ್ಟು ಹೆಚ್ಚಾಗಿದೆ.

ರಾಗಿ ಬ್ರಹ್ಮ ಲಕ್ಷ್ಮಣಯ್ಯ!

ರಾಗಿ ಬೆಳೆ ಸಂಶೋಧನೆಗೆ ಶತಮಾನದ ಇತಿಹಾಸ ಇದೆ. ಡಾ. ಲೆಸ್ಲೀ ಕೋಲ್ಮನ್ ಮಂಡ್ಯ ತಾಲ್ಲೂಕಿನಲ್ಲಿರುವ ವಿ.ಸಿ. ಫಾರಂನಲ್ಲಿರುವ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ೧೯೧೩ರಷ್ಟು ಹಿಂದೆಯೇ ರಾಗಿತಳಿ ಅಭಿವೃದ್ಧಿ ಗೆ ಸಂಶೋಧನೆ ಆರಂಭಿಸಿದ್ದರು. ಆದರೆ ಆರಂಭದಲ್ಲಿ ಯಶಸ್ಸು ಸಿಗದ ಕಾರಣ ಸಂಶೋಧನೆ ಬಹುತೇಕ ನಿಂತು ಹೋಗಿತ್ತು. ೧೯೬೪ರಲ್ಲಿ ಅದನ್ನು ಮುಂದುವರಿಸಿದ ಲಕ್ಷ್ಮಣಯ್ಯ ಆಫ್ರಿಕನ್ ತಳಿಗಳನ್ನು ಬಳಸಿಕೊಂಡು ಇಂಡಾಫ್ ತಳಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾದರು. ನಂತರ ಹತ್ತಾರು ತಳಿಗಳನ್ನು ಅಭಿವೃದ್ಧಿಪಡಿಸಿ ರಾಗಿ ಬ್ರಹ್ಮನೆನಿಸಿಕೊಂಡರು.

ದೇವೇಗೌಡರೇ ಬ್ರಾಂಡ್ ರಾಯಭಾರಿ !

ದೇವೇಗೌಡರು ಪ್ರಧಾನಿಯಾದಾಗ ಅವರ ಇಷ್ಟದ ಆಹಾರದ ಬಗ್ಗೆ ದಿಲ್ಲಿಯ ಪತ್ರಿಕೆಗಳಲ್ಲಿ ಪುಟಗಟ್ಟಲೆ ವರದಿಗಳು ಬಂದಿದ್ದವು. ಈ ಪ್ರಚಾರವನ್ನೇ ಬಳಸಿಕೊಂಡು ದಿಲ್ಲಿಯ ಪಂಚತಾರಾ ಹೊಟೇಲೊಂದು ತನ್ನ ಮೆನುವಿನಲ್ಲಿ ರಾಗಿ ಮುದ್ದೆ ಪರಿಚಯಿಸಿತ್ತು. ಈ ಸತ್ವಯುತ ಆಹಾರ ದೊಡ್ಡವರ ಹೊಟೇಲ್ ಗಳಿಂದ ಈಗಲೂ ದೂರವುಳಿದಿದೆ. ಆದರೆ ರಾಗಿಯ ಬಳಕೆ ದೇಶವ್ಯಾಪಿಯಾಗಿದೆ. ಇವರಲ್ಲಿ ಅಂಗಡಿಯಲ್ಲಿ ದೊರೆಯುವ ನಾನಾ ಬ್ರ್ಯಾಂಡ್‌ಗಳ ರಾಗಿ ಹಿಟ್ಟಿನ ಪೊಟ್ಟಣ ಖರೀದಿಸುವವರೇ ಹೆಚ್ಚು. ಇದರ ಬದಲು ಕಡಿಮೆ ಬೆಲೆಯಲ್ಲಿ ಸಿಗುವ ರಾಗಿ ಧಾನ್ಯವನ್ನು ಖರೀದಿಸಿ ಪುಡಿ ಮಾಡಿಕೊಂಡರೆ ಗ್ರಾಹಕರಿಗೆ ಉಳಿತಾಯ. ರೈತರಿಗೆ ಆದಾಯ ಎನ್ನುವುದು ಬಲ್ಲವರ ಮಾತು.

ಮುದ್ದೆಯೊಂದೇ ಅಲ್ಲ..

ರಾಗಿಹಿಟ್ಟಿನಿಂದ ಮುದ್ದೆ, ರೊಟ್ಟಿ, ದೋಸೆ, ಗಂಜಿ, ಹಲ್ವಾಯಿ (ಸಿಹಿ) ಎಂಬ ತಿನಿಸುಗಳನ್ನು ತಯಾರಿಸುತ್ತಾರೆ. ಒಡ ರಾಗಿಹಿಟ್ಟು ಮಕ್ಕಳ ಪೌಷ್ಟಿಕ ಆಹಾರ. ರಾಗಿ ಅರಳನ್ನು ಹುರಿದು, ನುಣ್ಣಗೆ ಬೀಸಿ ಪುಡಿಮಾಡಿ, ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲದ ಪುಡಿ ಬೆರೆಸಿ, ಹುಣಸೆಹುಳಿ, ಏಲಕ್ಕಿ ಪುಡಿ ಸೇರಿಸಿ ಸೇವಿಸಿದರೆ ಬಹಳ ಬಾಯಿಗೆ ರುಚಿ. ದೇಹಕ್ಕೆ ಸೊಂಪು.ಅರಳು ಪುಡಿಯನ್ನು ಮೊಸರಿನಲ್ಲಿ ಸೇರಿಸಿ, ಸಕ್ಕರೆ ಅಥವಾ ಬೆಲ್ಲದ ಜತೆಯೂ ಸೇವಿಸಬಹುದು.ಮೋಹನ್‌

ಮೋಹನ್‌ ಕುಮಾರ್‌ ಬಿ.ಟಿ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ