ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮ ಪಂಚಾಯಿತಿಯು ಹದಿನಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು ೭ ಸಾವಿರ ಜನ ಸಂಖ್ಯೆಯನ್ನು ಹೊಂದಿದ್ದು, ಒಟ್ಟು ೧೮ ಜನ ಗ್ರಾ.ಪಂ ಚುನಾಯಿತ ಸದಸ್ಯರಿದ್ದಾರೆ. ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು, ಸಿಬ್ಬಂದಿ ಜೊತೆಗೆ ಗ್ರಾಮಸ್ಥರ ಸಹಕಾರದೊಂದಿಗೆ ೨೦೨೧-೨೨ ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ರ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿ ಶೇ. ೧೧೦ ರಷ್ಟು ಸಾಧನೆ ಮಾಡಲಾಗಿದೆ.ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಹಾಗು ಸ್ಥಳೀಯ ಶಾಸಕರ ನಿಧಿಯಿಂದ ನೂತನವಾದ ಗ್ರಾಮ ಪಂಚಾಯಿತಿ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು ಸದ್ಯದಲ್ಲೆ ಕಾಮಗಾರಿ ಪೂರ್ಣಗೊಳ್ಳಲಿದೆ. ಗ್ರಾಮದಲ್ಲಿ ಅಂತರ್ಜಲ ಹೆಚ್ಚಿಸುವ ಸಲುವಾಗಿ ಕೆರೆ ಹೂಳೆತ್ತುವ ಕಾಮಗಾರಿ, ಇಂಗು ಗುಂಡಿ ನಿರ್ಮಾಣ, ಕೆರೆ ಪುನಶ್ಚೇತನ ಕಾಮಗಾರಿ ಮಾಡಲಾಗಿದೆ. ರೈತರಿಗೆ ಅನುಕೂಲವಾಗುವಂತೆ ತಮ್ಮ ಜಮೀನುಗಳಲ್ಲಿ ಕೃಷಿಹೊಂಡ, ಬದು ನಿರ್ಮಾಣ, ಗಿಡ ನಡುವ ಕಾಮಗಾರಿ, ಜಮೀನು ಸಮತಟ್ಟು ಕಾಮಗಾರಿ ಮಾಡಲಾಗಿದೆ. ಜಾನುವಾರು/ ಕುರಿ ಸಾಕಾಣಿಗೆ, ಮೀನು ಸಾಕಾಣಿಕೆ ಸಲುವಾಗಿ, ದನದ ಕೊಟ್ಟಿಗೆ, ಮೀನು ಸಾಕಾಣಿಕೆ ಹೊಂಡ, ಕುರಿ ಶೆಡ್ಡು ನಿರ್ಮಾಣ, ವೈಯಕ್ತಿಕ ಶೌಚಾಲಯ ಹಾಗು ಇನ್ನು ಹಲವಾರು ವೈಯಕ್ತಿಕ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.ಓದುಗರಿಗೆ ಸಹಾಯವಾಗಲು ಗ್ರಾಮ ಪಂಚಾಯಿತಿಯ ಗ್ರಂಥಾಲಯವನ್ನು ನವೀಕರಿಸಿ ಡಿಜಿಟಲ್ ಲೈಬ್ರರಿಯನ್ನಾಗಿ ಉನ್ನತಿಕರಿಸಿ ಲೈಬ್ರರಿಗೆ ಪ್ರತ್ಯೇಕವಾಗಿ ಹೊಸ ವೆಬ್ ಸೈಟ್ ರೂಪಿಸಲಾಗಿದೆ. ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಉಪಯೋಗವಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲಾ ಕುಟುಂಗಳಿಗೆ ಡಸ್ಟ್ ಬಿನ್‌ಗಳನ್ನು ವಿತರಿಸಿ ಕಸ ಸಂಗ್ರಹಣೆ ಮಾಡುವ ಕಾರ್ಯವನ್ನು ಪಂಚಾಯಿತಿಯಿಂದ ಹಮ್ಮಿಕೊಳ್ಳಲಾಗುವುದು.ನರೇಗಾ ಯೋಜನೆ ಅಡಿಯಲ್ಲಿ ರೈತರ ಜಮೀನಿಗೆ ಹೋಗುವ ರಸ್ತೆ ನಿರ್ಮಾಣ, ಮನೆಗಳಲ್ಲಿ ಪೌಷ್ಟಿಕ ತೋಟ ನಿರ್ಮಾಣ ಹಾಗೂ ಮುಂತಾದ ಅಭಿವೃದ್ದಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.
ಗ್ರಾಮದ ಪುರಾತನ ಮಾದಪ್ಪ ದೇವಾಲಯ ವನ್ನು ಪುನರುಜ್ಜೀವಗೊಳಿಸಲಾಗಿದೆ. ಮೈಸೂರು ಹಾಗೂ ನಂಜನಗೂಡು ತಾಲ್ಲೂಕಿನ ಹಲವು ಗ್ರಾಮಗಳಿಂದ ಜನ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಾರೆ. ದೇಗುಲಕ್ಕೆ ಹೊಸ ರೂಪ ನೀಡಿ ರುವುದು ಅವರೆಲ್ಲರಿಗೂ ಸಂತಸ ತಂದಿದೆ.