–ಎಂ.ಎನ್.ಸುಮನಾ, ವಕೀಲರು
ನಮ್ಮ ತಂದೆ ಟಿ.ಎನ್.ನಾಗರಾಜ್ ಮೂಲತಃ ಸಮಾಜವಾದಿ. ಯಾವುದೇ ಸಮಾಜವಾದದ ಹೋರಾಟ ಮೂಂಚೂಣಿ ನಮ್ಮಲ್ಲಿಯೇ ಪ್ರಾರಂಭವಾಗುತ್ತಿತ್ತು. ಆಂದೋಲನ ದಿನಪತ್ರಿಕೆ ಪ್ರಾರಂಭಕ್ಕೂ ಮುನ್ನ ಸಮಾಜವಾದದ ಹೋರಾಟಗಳಲ್ಲಿ ರಾಜಶೇಖರ ಕೋಟಿ ಅವರು ನಮ್ಮ ತಂದೆಯವರೊಂದಿಗೆ ಪಾಲ್ಗೊಳ್ಳುತ್ತಿದ್ದರು.
೧೯೮೦ರ ಹಾಸುಪಾಸಿನಲ್ಲಿ ಆಂದೋಲನ ದಿನಪತ್ರಿಕೆ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಸಮಾಜವಾದ ಹೋರಾಟದ ಹಿನ್ನೆಲೆಯಲ್ಲಿ ಆಂದೋಲನ ಪತ್ರಿಕೆ ಭಾಗವಾಗಿ ರಾಜಶೇಖರ ಕೋಟಿ ಅವರು ಪಾಲ್ಗೊಳ್ಳುತ್ತಿದ್ದರು. ನಮ್ಮ ತಂದೆ ಕಾಲನಂತರವೂ ಕೋಟಿ ಅವರೊಂದಿಗಿನ ಒಡನಾಟ ಬೆಳೆಯಿತು. ರಾಜಶೇಖರ ಕೋಟಿ ಅವರು ಮಹಿಳಾ ಸಂಘಟನೆಯ ಹೋರಾಟಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸುತ್ತಿದ್ದರು.
೧೯೯೫ರ ವೇಳೆಗೆ ಸಮತಾ ಅಧ್ಯಯನ ಕೇಂದ್ರ ಒಂದು ಟ್ರಸ್ಟ್ ಆಗಿ ಪರಿವರ್ತನೆಯಾಯಿತು. ರಾಜಶೇಖರ ಕೋಟಿ ಅವರು ನ್ಯಾಯದ ಪರ ನಿಲ್ಲುತ್ತಿದ್ದಂತೆ ಆಂದೋಲನ ದಿನಪತ್ರಿಕೆಯೂ ನಮ್ಮ ಪರ ನಿಲ್ಲುತ್ತಿತ್ತು. ಸಮತಾ ಟ್ರಸ್ಟ್ ಸ್ಥಾಪನೆಗೆ ಸ್ಥಳದ ಕುರಿತು ವಿವಾದ ಹುಟ್ಟಿಕೊಂಡಾಗ ಆಂದೋಲನ ಪತ್ರಿಕೆ ನೈಜ ವರದಿಗಳನ್ನು ದಾಖಲಿಉತ್ತಾ ನ್ಯಾಯಸಿಗುವಂತೆ ಮಾಡಿತ್ತು.
ನಂತರ ೧೯೯೮ರಲ್ಲಿ ರಾಜಶೇಖರ ಕೋಟಿ ಅವರೊಂದಿಗೆ ಅನೇಕ ಮಹಿಳಾ ಹೋರಾಟಗಾರರು ಶಕ್ತಿಧಾಮದ ಟ್ರಸ್ಟಿಗಳಾಗಿ ಸೇರಿಕೊಂಡೆವು. ಅಲ್ಲಿನ ಅನೇಕ ಚಟುವಟಿಕೆಗಳನ್ನು ಆಂದೋಲನ ದಿನಪತ್ರಿಕೆ ಪ್ರೋತ್ಸಾಹಿಸುತ್ತಿತ್ತು.
ಒಂದೊಮ್ಮೆ ಕಾಡುಗಳ್ಳ ವೀರಪ್ಪನ್ ಡಾ.ರಾಜ್‌ಕುಮಾರ್‌ಅವರನ್ನು ಅಪಹರಿಸಿದ್ದ ಸಮಯದಲ್ಲಿ ಪಾರ್ವತಮ್ಮ ಅವರೂ ಇತ್ತ ಬರಲಾಗಲಿಲ್ಲ. ಈ ವೇಳೆ ಸುಮಾರು ೨ ವರ್ಷಗಳ ಕಾಲ ಶಕ್ತಿಧಾಮಕ್ಕೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಆಗ ನಮ್ಮ ಸಂಕಷ್ಟಕ್ಕೆ ಸ್ಪಂಧಿಸಿದ್ದು ರಾಜಶೇಖರ ಕೋಟಿ ಅವರು, ಸಾವಿರಾರು ರೂ. ಜಾಹೀರಾತುಗಳನ್ನು ಉಚಿತವಾಗಿ ಪತ್ರಿಕೆಯಲ್ಲಿ ಪ್ರಕಟಿಸಿಕೊಡುವ ಮೂಲಕ ಸಂಸ್ಥೆಗೆ ನೆರವಾದರು. ಸಂಸ್ಥೆಯ ಬೆಳವಣಿಗೆಗೂ ರಚನಾತ್ಮಕ ಸಲಹೆ ಸೂಚನೆ ಕೊಡುತ್ತಿದ್ದರು. ಯಾವುದೇ ಸಂದರ್ಭದಲ್ಲಿ ಸಹಾಯ ಕೇಳಿದರೂ ಸಹಕರಿಸುತ್ತಿದ್ದರು. ಅವರ ಮನೆ ಬಾಗಿಲು ಮುಚ್ಚಿದ್ದನ್ನೇ ನಾವು ನೋಡಿರಲಿಲ್ಲ.
ಮಹಿಳೆಯರು ಎಂದರೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದ ಕಾಲಘಟ್ಟದಲ್ಲಿ, ನಮ್ಮ ವಿಚಾರ ಚಿಂತೆಗಳನ್ನು ಹೊರಹಾಕಲು ವೇದಿಕೆ ಕಲ್ಪಿಸಿದ್ದು, ವೇದಿಕೆಯಾಗಿಯೇ ಇದ್ದದ್ದು ಆಂದೋಲನ ದಿನಪತ್ರಿಕೆ.