Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಜ್ಞಾನ ಸಂಸ್ಥೆಗಳ ಅರಿವಿನ ಮೆಟ್ಟಿಲು

ಕೃಷ್ಣಮೂರ್ತಿ ಹನೂರು
ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿಯಬೇಕು, ಅದು ಇಂಗಿಷ್ ಭಾಷೆಯಲ್ಲೋ, ಕನ್ನಡದಲ್ಲೋ ಎಂಬ ಚರ್ಚೆ ಆರಂಭವಾಗಿ ಎಷ್ಟೋ ವರ್ಷಗಳಾದವು. ಪ್ರಯತ್ನವಿದ್ದಲ್ಲಿ ಎರಡನ್ನೂ ಸಮರ್ಥವಾಗಿ ಕಲಿಸಬಹುದು ಎಂಬ ಉದ್ದೇಶ ಮಾತ್ರ ಇಲ್ಲ. ಕಳೆದ ಅನೇಕ ವರ್ಷಗಳಿಂದ ಶಾಲಾ ಕಾಲೇಜು, ವಿಶ್ವವಿದ್ಯಾನಿಲಯದ ಪದವಿ ಎಂಬುದು ಉದ್ಯೋಗಮುಖಿ ಎಂದಾಗಿ ಇದೇ ಹಿನ್ನೆಲೆಯಲ್ಲಿ ಭಾಷೆ ನಿಕಾಯ, ಕಲೆ ಮತ್ತು ಮೂಲ ವಿಜ್ಞಾನ ಸಂಗತಿಗಳ ನಡುವೆ ತಾರತಮ್ಯ ಸನ್ನಿವೇಶ ಸೃಷ್ಟಿಯಾಗಿ ತತ್ಸಂಬಂಧಿ ಮೇಲರಿಮೆ ಕೀಳರಿಮೆ ಎಂಬುದು ವಿದ್ಯಾರ್ಥಿಗಳನ್ನು ಮಾತ್ರವಲ್ಲ ಅಧ್ಯಾಪಕರನ್ನೂ ಕಾಡುವಂತಾಗಿಬಿಟ್ಟಿದೆ. ಖಾಸಗಿ ಕಾಲೇಜುಗಳಲ್ಲಿ ವಿಷಯವಾರು ಸಂಬಂಧ ವೇತನ ತಾರತಮ್ಯವೂ ಇದೆ. ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಇದೆಲ್ಲ ವೇಗವಾಗಿ ಬೆಳೆದು ಕಲಿಕೆ ಎಂಬುದು ಶ್ರೀಮಂತಿಕೆಯೊಡನೆ ತಳುಕು ಹಾಕಿಕೊಂಡು ಬಡವರ ಮಕ್ಕಳು ಮತ್ತು ಕಾರಿನಲ್ಲಿ ಶಾಲೆಯ ಮುಂದೆ ಬಂದು ಇಳಿಯುವ ಮಕ್ಕಳು ಒಂದು ಸೇರಲಾಗದ, ಮಾತಾಡಲಾಗದ, ಆಡಲಾಗದ ಅಸಮಾನತೆ ಸೃಷ್ಟಿಯಾಗಿದೆ. ಈ ಹೊತ್ತಿನ ಸಾಮಾಜಿಕ ವಾತಾವರಣದಲ್ಲಿಯೂ ಬಡವರ ಶ್ರೀಮಂತರ ನಡುವೆ ಮುಚ್ಚಲಾಗದ ಕಂದಕವು ಕಾಣುತ್ತ ಅದು ಒಂದಾಗುವ ಲಕ್ಷಣವೇ ಕಾಣಿಸುತ್ತಿಲ್ಲ. ಇದಕ್ಕೆ ಕಾರಣ, ಸಾಮಾಜಿಕ ವಿಷಮತೆಯ ಪರಿವೇ? ಮೊದಲಿಗೆ ಕಾಣಿಸಿಕೊಳ್ಳುವುದು ಶಾಲಾ ಶಿಕ್ಷಣದ ಮೊದಲ ಹಂತದಿಂದಲೇ ಎಂದಾಗಿದೆ.
ಪಟ್ಟಣಿಗರು ಮಾತ್ರವಲ್ಲದೆ ಗ್ರಾಮೀಣ ಪೋಷಕರೂ ಸರ್ಕಾರಿ ಶಾಲೆ ತರವಲ್ಲವೆಂದು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಬಯಸುವುದು ಏಕೆ, ಅವರ ಕಾಳಜಿಯೇನು, ಅವರ ತಿಳಿವಳಿಕೆಯಲ್ಲಿ ಒಳ್ಳೆಯ ಶಿಕ್ಷಣವೆಂದರೇನು, ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಸಂಸ್ಥೆಗಳು ಹೇಗೆ ಉತ್ತಮ ಎಂಬುದಾಗಿ ಅವರದೇ ಅನಿಸಿಕೆಗಳಿವೆ. ತಿಳಿಯುತ್ತಾ ಹೋದರೆ ಅವು ಸರಿಯಾಗಿಯೇ ಇರುವಂತೆ ತೋರುತ್ತವೆ. ತಮಗೆಟಕುವ ಆದಾಯದೊಳಗೆ ಮಕ್ಕಳ ಓದು ಆಗಬೇಕೆಂದು ಬಯಸುವ ಗ್ರಾಮೀಣ ತಂದೆ ತಾಯಿಗಳು ಸಾಲವಾದರೂ ಖಾಸಗಿ ಶಾಲಾ ಬಸ್ಸು ಹತ್ತಿಸುತ್ತಾರೆ. ಈ ನಡುವೆ ಇಂಥ ಬಡ ತಂದೆ ತಾಯಂದಿರನ್ನು ಮೆಚ್ಚಿಸಲು ಸರ್ಕಾರವೇ ಎರಡು ಮೂರು ವರ್ಷಗಳಿಂದ ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿತು. ಆದರೆ ಅದೂ ಆಯಾ ಶಾಲೆಗಳಲ್ಲೇ ಇರುವ ಮತ್ತು ಬಗೆಹರಿಯದ ಸಮಸ್ಯೆಗಳಿಂದ ಯಶಸ್ವಿಯಾಗಿರುವುದಿಲ್ಲ. ಅಲ್ಲೇ ಕನ್ನಡ ಬೋಧಿಸುವ ಅಧ್ಯಾಪಕರು ತರಬೇತಿ ಶಾಲೆಗಳಲ್ಲಿ ತಿಂಗಳೊಪ್ಪತ್ತು ಟ್ರೈನಿಂಗ್ ಪಡೆದು ಶಾಲೆಗಳಲ್ಲಿ ಇಂಗ್ಲಿಷ್ ಬೋಧಿಸುತ್ತಾರೆ. ಈ ಕ್ರಮದ ಬೋಧನೆ ಯಾವ ಪೂರ್ವ ತಯಾರಿಯೂ ಇಲ್ಲದೆ ಆರಂಭವಾಗಿರುವುದರಿಂದ ಮಕ್ಕಳಿಗೆ ಹತ್ತಾರು ಇಂಗಿಷ್ ವಾಕ್ಯಗಳ ಪರಿಚಯವಾಗಬಹುದೇ ಹೊರತು ಆಮೇಲೆ ಇಂಗ್ಲಿಷ್ ಇರಲಿ, ಕನ್ನಡವನ್ನೂ ಸರಿಯಾಗಿ ಕಲಿಯಲಾಗದ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಇಂಥ ಮಕ್ಕಳು ಸೂಕ್ತ ಮಾರ್ಗದರ್ಶನವಿಲ್ಲದೆ ಹೇಗೋ ಪ್ರೌಢಶಾಲೆ ದಾಟಿಕೊಂಡು ತಮ್ಮ ಗ್ರಾಮ ಸನಿಹದಲ್ಲೇ ಹೋಬಳಿ ಭಾಗಗಳಲ್ಲಿ ಇತ್ತೀಚೆಗೆ ಸ್ಥಾಪನೆಗೊಳ್ಳುತ್ತಿರುವ ಕಡಿಮೆ ಸಂಖ್ಯೆಯ ಅಥವಾ ಒಮ್ಮೊಮ್ಮೆ ವಿದ್ಯಾರ್ಥಿಗಳೇ ಇಲ್ಲದೆ ಮುಚ್ಚಿ ಹೋಗುವ ಸರ್ಕಾರಿ ಪದವಿ ಕಾಲೇಜುಗಳಿಗೆ ದಾಖಲಾಗುವುದಿದೆ. ಹಾಗೆ ಸೇರಿಕೊಳ್ಳುವಲ್ಲಿಯೇ ವಿದ್ಯಾರ್ಥಿಗಳಿಗೆ ಕಲೆ, ಮೂಲ ವಿಜ್ಞಾನ ಅಥವಾ ವಾಣಿಜ್ಯ ವಿಷಯಗಳು ತಮಗೇನೂ ಭವಿಷ್ಯ ತರುವುದಿಲ್ಲವೆಂಬ ಭಾವನೆಯಲ್ಲಿರುತ್ತಿದ್ದಂತೆಯೇ ಅಲ್ಲಿ ತರಗತಿಗಳು ನೋಡನೋಡುತ್ತಿದ್ದಂತೆಯೇ ಆರಂಭವಾಗುತ್ತ, ಮುಕ್ತಾಯಗೊಳ್ಳುತ್ತ ಬರುತ್ತವೆ. ಅದೇ ಸೆಮಿಸ್ಟರ್ ಸ್ಕೀಮ್!
ವಿದ್ಯಾರ್ಥಿಗಳು ತರಗತಿಯಲ್ಲಿ ಆಸೀನರಾಗುವ ಕ್ರಮವೆಂತೆಂದರೆ ಅವರಿಗೆ ಪಠ್ಯ ಬಿಟ್ಟು ಅತ್ತಿತ್ತಲ ಯಾವುದೇ ವೈಚಾರಿಕವೆನಿಸುವ ಸಂಗತಿ ಅಸಂಗತವೆನಿಸುತ್ತದೆ. ಇಟ್ಟ ಪಠ್ಯಕ್ಕೆ ಪೂರಕ ನೋಟ್ಸ್ ಸಿಕ್ಕರೆ ಇನ್ನೇನು ಬಂದೇಬಿಡುವ ಪರೀಕ್ಷೆಗೆ ಅನುಕೂಲ ಎಂಬ ಧಾವಂತದಲ್ಲಿರುತ್ತಾರೆ. ಅಲ್ಲೇನಾದರೂ ಕೊಂಚ ವಿವರವಾಗಿ ಬೋಧನೆಗಯ್ಯುವ ಅಧ್ಯಾಪಕರು ಇದ್ದರೆ ಅವರು ಅಪ್ರಯೋಜಕರೆಂದೂ, ಹಳೆಯ ನೋಟ್ಸ್ ಬರೆಸುವವರು ಸದುಪಯೋಗಿಗಳೆಂದೂ ಭಾವಿಸಲ್ಪಡುತ್ತಾರೆ. ಇದರೊಂದಿಗೆ ಗ್ರಾಮೀಣ ಪದವಿ ಕಾಲೇಜುಗಳು ಅದಾಗ ತಾನೇ ಆರಂಭವಾಗಿರುವಂಥವಾದರೆ ಅಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಗ್ರಂಥ ಭಂಡಾರವೇ ಮೊದಲುಗೊಂಡು ಪೂರ್ಣಪ್ರಮಾಣದ ಅಧ್ಯಾಪಕರ ಹಾಜರಾತಿಯೂ ಇರುವುದಿಲ್ಲ. ಬಹುಪಾಲು ಅತಿಥಿ ಉಪನ್ಯಾಸಕರಿಂದಲೇ ತರಗತಿಗಳು ಕಳೆದುಹೋಗುತ್ತವೆ. ಇನ್ನು ಈ ಅತಿಥಿ ಉಪನ್ಯಾಸಕರ ವೇತನ ತಾರತಮ್ಯವಂತೂ ಅದನ್ನು ಅನುಭವಿಸಿದವರಿಗೇ ಗೊತ್ತು. ಅದು ಆಗಾಗ ಬಗೆಹರಿಯುವಂತೆ ಕಾಣುತ್ತಾ ಪರಿಹಾರವಿಲ್ಲದ ಸಮಸ್ಯೆಯಾಗಿದೆ.
ಇಂಥ ಪದವಿ ಕಾಲೇಜುಗಳಿಂದ ವಾಕ್ಯ ರಚನಾ ಸಾಮರ್ಥ್ಯವಿಲ್ಲದ ವಿದ್ಯಾರ್ಥಿ ಸಮೂಹ ಸ್ನಾತಕೋತ್ತರ ಪದವಿಗಾಗಿ ನಗರ ಪ್ರದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೋ ಅಥವಾ ಅದೇ ವಿಶ್ವವಿದ್ಯಾನಿಲಯ ತೆರೆದಿರುವ ಇನ್ನಿತರ ಉಪಕೇಂದ್ರಗಳಿಗೋ ಪ್ರವೇಶಿಸುತ್ತಾರೆ. ಇದೀಗ ನಾವು ವಿಶ್ವವಿದ್ಯಾನಿಲಯಗಳಲ್ಲಿ ಕಲಿಯಲು ಅವಕಾಶ ಮಾಡಿಕೊಟ್ಟಿರುವ ಜ್ಞಾನ ಮಾದರಿಗಳಿಗೂ, ಜಾಗತಿಕವಾಗಿ ಅದೇ ವಿಷಯದ ಬೋಧನೆ ಕಲಿಕೆ, ತತ್ಸಂಬಂಧಿ ಸಂಪನ್ಮೂಲಗಳ ಅವಕಾಶಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಮೂರ್ನಾಲ್ಕು ಹಳೆಯ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳು ತಮ್ಮ ಸುತ್ತಿನ ಜಿಲ್ಲಾ ಕೇಂದ್ರಗಳಲ್ಲಿ ಉಪಕೇಂದ್ರಗಳನ್ನು ತೆರೆದು ಅಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿ ಗಳಿಗೆ ಸ್ನಾತಕೋತ್ತರ ಪದವಿ ದೊರೆಯುವಂತೆ ಮಾಡಿವೆ. ಅದು ಸದುದ್ದೇಶವೇ ಸರಿ.
* * *
ನಗರ ಪ್ರದೇಶಗಳನ್ನು ಬಿಟ್ಟರೆ ಗ್ರಾಮೀಣ ಭಾಗದ ರೈತಾಪಿ ಸಮೂಹ ತಮ್ಮ ಮಕ್ಕಳು ಕಾನ್ವೆಂಟ್ ಶಾಲೆಗೆ ಹೋಗಿ ಇಂಗಿಷ್ ಮಾತಾಡುವುದನ್ನು ಕೇಳಿಸಿಕೊಳ್ಳಬೇಕು ಎಂಬ ಮೋಹದಲ್ಲಿರುತ್ತಾರೆಯೇ ಹೊರತು ಮಕ್ಕಳ ಮುಂದಿನ ಗುರಿ ಏನು ಎಂಬ ಅರಿವಿನಲ್ಲಿರುವುದಿಲ್ಲ. ಪದವಿ ತರಗತಿಗಳಿಗೆ ಬಂದ ವಿದ್ಯಾರ್ಥಿಗಳಿಗೂ ತಮ್ಮ ಭವಿಷ್ಯಕ್ಕಾಗಿ ಕಲಿಯಬೇಕಾದದ್ದೇನು, ಆ ನಿಟ್ಟಿನ ಬದ್ಧತೆ ಇವು ಗರಿಷ್ಟ ಪ್ರಮಾಣದಲ್ಲಿರುವುದಿಲ್ಲ. ಅಂಥ ವೇಳೆ ವಿಶ್ವವಿದ್ಯಾನಿಲಯವು ಹಾಗೆ ಬಂದು ಕೂತ ವಿದ್ಯಾರ್ಥಿ ಸಮೂಹಕ್ಕೆ ಯಾವುದೇ ಅರಿವು, ಜ್ಞಾನ ಮೂಡಿಸುವ ಶಿಕ್ಷಕ ಸಮೂಹವನ್ನು ನಿಯೋಜಿಸಿರುವುದು ಉಪಕೇಂದ್ರಗಳಲ್ಲಿ ಕಂಡುಬರುವುದಿಲ್ಲ. ಅಲ್ಲಿಯೂ ಪದವಿ ತರಗತಿಗಳ ಪುನರಾವರ್ತನೆಯ ಯಾಂತ್ರಿಕ ಬೋಧನೆಯೇ ಎದುರಾಗುತ್ತದೆ. ಹಾಗಾಗಿ ನಮ್ಮ ವಿಶ್ವವಿದ್ಯಾನಿಲಯಗಳು ಜಾಗತಿಕಮಟ್ಟದ ಪ್ರಸಿದ್ಧ ವಿಶ್ವವಿದ್ಯಾನಿಲಯಗಳ ಬೋಧನಾ ಗುಣಮಟ್ಟವನ್ನು ಅನುಸರಿಸುವುದು ಇರಲಿ, ಅದರ ಪ್ರಾಥಮಿಕ ಹಂತದ ಬೋಧನಾ ಶಿಸ್ತನ್ನೂ ಮುಟ್ಟಲಾಗುತ್ತಿಲ್ಲ.
ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಕನ್ನಡ ಮಾಧ್ಯಮ ಚರ್ಚೆ ಹಾಗಿರಲಿ, ಉನ್ನತ ಶಿಕ್ಷಣ ಕ್ರಮದಲ್ಲಿಯೂ ಭಾಷಾ ಬಳಕೆಯ ಗತಿ ತುಂಬ ದುರ್ಬಲವಾಗಿರುತ್ತದೆ. ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಬಹುತೇಕ ವಿಭಾಗದ ವಿದ್ಯಾರ್ಥಿಗಳು ತಂತಮ್ಮ ವಿಷಯಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗದ ಕಷ್ಟದಿಂದ ಕನ್ನಡದಲ್ಲೇ ಉತ್ತರಿಸುತ್ತಾರೆ. ಸ್ನಾತಕೋತ್ತರ ವಿಭಾಗಗಳಲ್ಲಿ ವಿಷಯವಾರು ಪಠ್ಯ ಬೋಧನೆ ಇಂಗ್ಲಿಷ್‌ನಲ್ಲಿ ಸಮರ್ಥವಾಗಿ ನಡೆಯುತ್ತಿದೆಯೇ ಎಂಬುದು ಇಲ್ಲಿಯ ಪ್ರಶ್ನೆ. ಕಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರೇ ಸುಲಭ ಕನ್ನಡದಲ್ಲಿ ಭಾಷಾಂತರಿಸಿದ ಅಥಬರೆದ ಗೈಡುಗಳನ್ನು ಓದಿಕೊಂಡು ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಇನ್ನು ನಿಬಂಧ ಮತ್ತು ಪಿಎಚ್.ಡಿ. ಮಹಾಪ್ರಬಂಧ ಸಿದ್ಧತೆಯಲ್ಲಿ ಬೇರೊಬ್ಬ ವಿದ್ವಾಂಸರ ಪುಸ್ತಕ ಭಾಗಗಳನ್ನು ನಕಲು ಇಳಿಸುವ ಪರಿಪಾಠ ಇದ್ದೇ ಇದೆ. ಬುಡಕಟ್ಟು ಸಂಬಂಧದ ಒಂದು ಕ್ಷೇತ್ರಾಧಾರಿತ ಕನ್ನಡ ಮಹಾಪ್ರಬಂಧವನ್ನು ಪ್ರತಿ ಮಾಡಿ ಸಮಾಜಶಾಸ್ತ್ರ ವಿಭಾಗಕ್ಕೆ ಸಲ್ಲಿಸಿದ ಸಂದರ್ಭವೂ ಇದೆ. ಹೀಗೆ ಇಂಗ್ಲಿಷ್-ಕನ್ನಡ ಮಾಧ್ಯಮ ಚರ್ಚೆ ಈಗಾಗಲೇ ಹೇಳಿದಂತೆ ಪ್ರಾಥಮಿಕ ಹಂತದಲ್ಲಿ ಬಿರುಸಾಗಿದ್ದರೂ ಅವು ಆ ಮುಂದಿನ ಹಂತಗಳಲ್ಲಿ ಕಲಿಕೆಯ ವಿಚಾರಕ್ಕೆ ಬಂದರೆ ಸೋತು ಸೊರಗುತ್ತಿವೆ. ಪದವಿಮಟ್ಟದ ಕಾಲೇಜುಗಳಲ್ಲಿ ಕನ್ನಡ ಐಚ್ಛಿಕ ವಿಷಯ ಮುಚ್ಚುತ್ತಾ ಬರುತ್ತಿದ್ದರೆ, ಅನೇಕ ಜಿಲ್ಲಾ ಕೇಂದ್ರಗಳ ಹತ್ತಾರು ಕಾಲೇಜುಗಳಲ್ಲಿ ಐಚ್ಛಿಕ ವಿಷಯವಾಗಿ ಇಂಗ್ಲಿಷ್ ಬೋಧನೆ ಇಲ್ಲವೇ ಇಲ್ಲ. ಐಚ್ಛಿಕ ಭಾಷಾ ಕಲಿಕೆ ಪದವಿ ತರಗತಿಗಳಲ್ಲಿ ಮುಚ್ಚುತ್ತಿವೆ ಎಂದಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಆರಂಭಿಸಿದರೆ ಅಲ್ಲಿಯ ಸ್ನಾತಕೋತ್ತರ ಭಾಷಾ ವಿಭಾಗಗಳಿಗೆ ವಿದ್ಯಾರ್ಥಿಗಳನ್ನು ನಿರೀಕ್ಷಿಸಬಹುದೇ? ಅಥವಾ ಒಂದಲ್ಲ ಒಂದು ದಿನ ಸಂಸ್ಕೃತ, ಪ್ರಾಕೃತ, ಜೈನಶಾಸ್ತ್ರದ ವಿಭಾಗದಂತೆ ಈ ಇಂಗ್ಲಿಷ್, ಕನ್ನಡ ವಿಷಯಗಳೂ ಕ್ಷೀಣಿಸಿ ಹೋಗಬಹುದೇ? ಈಗಾಗಲೇ ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ವಿಭಾಗಗಳಲ್ಲಿ ಶಾಸನ ವಿಷಯ ಸೇರಿದಂತೆ ಹಳಗನ್ನಡವನ್ನು ಓದಬೇಕಾದ ಅಗತ್ಯವಿಲ್ಲ ಎಂದು ಕನ್ನಡ ಪ್ರಾಧ್ಯಾಪಕರೇ ಹೇಳುತ್ತಿದ್ದಾರೆ. ಶಿರವೇ ಇಲ್ಲದ ಶರೀರಕ್ಕೆ ಏನು ಬೆಲೆ?
* * *
ಕರ್ನಾಟಕದ ಯಾವುದೇ ಗ್ರಾಮೀಣ ಭಾಗದ ಹೆಣ್ಣು ಗಂಡು ಮಕ್ಕಳು ನಾನಾ ಕಾರಣಗಳಿಗಾಗಿ ನಗರದ ಪ್ರಸಿದ್ಧ ವಿದ್ಯಾ ಕೇಂದ್ರಗಳತ್ತ ಬರುವ ಸ್ಥಿತಿಯಲ್ಲಿರುವುದಿಲ್ಲ. ಅಷ್ಟಾದರೂ ಇವರು ಸ್ನಾತಕೋತ್ತರ ಪದವಿ ಪಡೆದು ಹೇಗಾದರೂ ತಮ್ಮದೊಂದು ಬದುಕಿನ ಮಾರ್ಗವನ್ನು ಹುಡುಕಬೇಕೆಂಬ ತವಕದಲ್ಲಿ ಅಲ್ಲಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ಸ್ನಾತಕೋತ್ತರ ಕೇಂದ್ರಗಳತ್ತ ಬರುತ್ತಾರೆ. ವಿಶ್ವವಿದ್ಯಾನಿಲಯ ಅದರ ಉಪಕೇಂದ್ರಗಳೆಂದರೆ ನಿರ್ಮಾಣವಾಗುವ ಹೊಸ ಕಟ್ಟಡಗಳಿಗಿಂತ ಅಲ್ಲಿ ಬೇಕಾಗಿರುವುದು ಸಮರ್ಥ ಅಧ್ಯಾಪಕರೇ. ಆದರೆ ಇದೀಗ ಐವತ್ತು ನೂರು ವರ್ಷಗಳನ್ನು ಪೂರೈಸಿರುವ ವಿಶ್ವವಿದ್ಯಾನಿಲಯಗಳಲ್ಲೇ ವಿದ್ಯಾರ್ಥಿಗಳು ಸಮರ್ಥ ಅಧ್ಯಾಪಕರಿಂದ ಪಾಠ ಕೇಳುವ ಅವಕಾಶ ತಪ್ಪಿಹೋಗಿದೆ. ಈ ಅಧ್ಯಾಪಕ ನಿಯೋಜನೆಯ ಪ್ರಕ್ರಿಯೆ ಯಾವುದೇ ಪ್ರಸಿದ್ಧ ವಿ.ವಿ. ಮತ್ತು ಅದರ ಉಪಕೇಂದ್ರಗಳು ಅಥವಾ ಸ್ಥಾಪನೆಗೊಂಡು ಹತ್ತಿಪ್ಪತ್ತು ವರ್ಷಗಳಿಂದ ನರಳುತ್ತಿರುವ ವಿಷಯವಾರು ವಿಶ್ವವಿದ್ಯಾನಿಲಯಗಳಿಗೇ ಸಾಧ್ಯವಾಗುತ್ತಿಲ್ಲ. ಇದು ಗೊತ್ತಿದ್ದರೂ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳಿದೆ.ಇದರೊಡನೆ ಇಲ್ಲೆಲ್ಲ ಭ್ರಷ್ಟಾಚಾರದ ಅವ್ಯವಹಾರವೂ ಸೇರಿಕೊಂಡಿದೆಯಲ್ಲ!
ಯಥಾವಿಧಿಯಾಗಿ ಅಪಾರ ಸಂಖ್ಯೆಯಲ್ಲಿ ಯಾವ್ಯಾವುದೋ ಕ್ರಮದಲ್ಲಿ ನಿಯೋಜನೆಗೊಂಡ ಅತಿಥಿ ಉಪನ್ಯಾಸಕರಿಂದಲೇ ಸ್ನಾತಕೋತ್ತರ ಸಿದ್ಧಿಯನ್ನು ಪಡೆದು ವಿದ್ಯಾರ್ಥಿಗಳು ಹೊರಬೀಳಬೇಕಾಗಿದೆ. ಹಾಗೆ ಬಿದ್ದವರಿಗೆ ತಮ್ಮ ಮುಂದಿನ ಮಾರ್ಗವೇನು ಎನಿಸಿ ಯಾವುದೇ ಸ್ಪರ್ಧೆಗೆ ಅಸಮರ್ಥರಂತೆ ಕಾಣಿಸಿಕೊಳ್ಳುತ್ತಾರೆ. ತಾವು ಬಂದು ಸೇರಿದ ನಗರಗಳಲ್ಲಿ ದಾರಿ ತೋರದೆ, ಗ್ರಾಮ ಮೂಲದ ವಾಪಸು ಪ್ರಯಾಣ ಇಷ್ಟವಾಗದೇ ನಿರುದ್ಯೋಗದ ನಿಟ್ಟುಸಿರಿನಲ್ಲಿ ತೊಳಲುತ್ತಾರೆ. ಈ ನಡುವೆ ಸರ್ಕಾರವು ವಿಶ್ವವಿದ್ಯಾನಿಲಯಗಳು ಸಾಂಪ್ರದಾಯಿಕ ಪದವಿಗಳನ್ನು ನೀಡುವ ಸಂಸ್ಥೆಗಳಾಗದೆ ಉದ್ಯೋಗ ಕೌಶಲಗಳನ್ನು ಹೇಳಿಕೊಡುವ ಪರಿವರ್ತನಾ ಕೇಂದ್ರಗಳಾಗಬೇಕು ಎಂದು ಹೇಳಹೊರಟಿದೆ. ಅದಕ್ಕಾಗಿ ಹೊಸ ಶಿಕ್ಷಣ ನೀತಿಯನ್ನು ತರುತ್ತಿದೆ. ಈಗಾಗಲೇ ಇಪ್ಪತ್ತು ವರ್ಷಗಳಿಂದ ಜಾರಿಯಲ್ಲಿರುವ ಸೆಮಿಸ್ಟರ್ ಪದ್ಧತಿ, ಕಾಲೇಜು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪೂರ್ಣ ಕಲಿಕೆಯ ಪರಿಪಾಠವೇ ಇಲ್ಲದೆ ನಿಷ್ಪ್ರಯೋಜಕ ಎನ್ನುವಂತಾಗಿರುತ್ತದೆ. ಇನ್ನು ಹೊಸ ಶಿಕ್ಷಣ ನೀತಿ ಎಂದರೆ ಜಾರಿಯ ನಂತರವೇ ಅದರ ಸಾಧಕ ಬಾಧಕಗಳನ್ನು ಕಾದು ನೋಡಬೇಕಾಗಿದೆ. ಪದವಿ ತರಗತಿಯ ವಿದ್ಯಾರ್ಥಿಗಳು ಒಂದೊಂದು ವರ್ಷಕ್ಕೆ ಒಂದೊಂದು ಅರ್ಹತಾ ಪತ್ರ ಪಡೆಯುವ ಕ್ರಮವೇ ಅನುಮಾನಾಸ್ಪದ. ತರಗತಿಗಳಲ್ಲಿ ಪಾಠ ಹೇಳಲಾಗದೇ, ಕೇಳಲಾಗದೇ ಇರುವವರಿಗೆ ಇದು ಚಾಪೆ ಹಾಸಿ ಕೊಟ್ಟಂತಾಗಬಹುದು.
ಒಂದು ವರ್ಷ ಪದವಿ ತರಗತಿ ಓದಿದವನು ಒಂದು ಸರ್ಟಿಫಿಕೇಟ್ ಹಿಡಿದು ಹೊರಗಾಗಬಹುದು. ಅನಂತರ ಒಂದೆರಡು ವರ್ಷ ಕಳೆದು ಮತ್ತೆ ಕಾಲೇಜಿಗೆ ವಾಪಸಾಗಿ ಮುಂದೆ ಹೋದ ಗೆಳೆಯರನ್ನು ಮರೆತು ಹಿಂದಿನಿಂದ ಬಂದ ಹೊಸಬರನ್ನು ಕೂಡಿಕೊಳ್ಳಬಹುದು. ಇದು ಕಾಲೇಜು ಬಿಟ್ಟು ಮತ್ತೆ ವಾಪಸಾದ ವಿದ್ಯಾರ್ಥಿಯ ಮನಸಿಗೆ ಒಗ್ಗುವಂಥದ್ದೇ? ಆಗಾಗ ಬದಲಾಗುವ ಭಾಷಾ ಪಠ್ಯಕ್ಕೆ ಹೊಂದಿಕೊಳ್ಳುವ ಬಗೆ ಹೇಗೆ? ಇದರೊಂದಿಗೆ ಇಲ್ಲಿ ಭಾಷಾ ಕಲಿಕೆಗೆ ಪ್ರಾಧಾನ್ಯತೆಯೇ ಇಲ್ಲವಾಗುತ್ತಿರುವ ಸೂಚನೆಯಿದ್ದು ಬರವಣಿಗೆಯ ಶಕ್ತಿ, ಆಸಕ್ತಿ ಇನ್ನೂ ಕಡಿಮೆಯಾಗಬಹುದು. ಪದವಿ ತರಗತಿಗೆ ಸೇರಿದ ಒಂದು ವರ್ಷದಲ್ಲೇ ಬಿಟ್ಟುಹೋಗಬಹುದಾದ ವಿದ್ಯಾರ್ಥಿ ಸಮೂಹದಿಂದ ಯಾವ ವಿದ್ಯೆ, ಜ್ಞಾನ, ತಂತ್ರ ಕೌಶಲ ಕಲಿಕೆ ಸಾಧ್ಯವಾಗಬಹುದು?
* * *
ಇನ್ನು ಇತ್ತೀಚೆಗೆ ಕೇಳಿ ಬರುತ್ತಿರುವ ಹೊಸ ಕಲಿಕಾ ಮಾದರಿಗಳೊಂದಿಗೆ, ತರಗತಿಯಲ್ಲಿ ಕಲಿಯಬಹುದಾದ ಸಾಧ್ಯತೆಯೂ ಹೋಗಿ, ಸಿದ್ಧಪಡಿಸಿದ ಪಾಠಗಳನ್ನು ಯಂತ್ರೋಪಕರಣಗಳ ಮುಖೇಣ ಕಲಿಯುತ್ತ ಅಗತ್ಯ ಬಿದ್ದರೆ ಒಂದೆರಡು ವಾರ ಕಾಂಟ್ಯಾಕ್ಟ್ ಪ್ರೋಗ್ರಾಮಿನಲ್ಲಿ ತಮ್ಮ ಉಳಿದ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಇದಕ್ಕೆಲ್ಲ ನಮ್ಮ ಅಧ್ಯಾಪಕವೃಂದ ಸಿದ್ಧವಿದೆಯೇ ಎಂಬುದೂ ಒಂದು ಮುಖ್ಯ ಪ್ರಶ್ನೆ. ಹಾಗಾದರೆ ಯಾವ ಬಗೆಯ ಶಿಕ್ಷಣ ಮಾದರಿ ನಮಗಿಂದು ಅಗತ್ಯವಿದೆ ಎಂಬ ಸಾಧ್ಯತೆಯೂ ಕಾಣುತ್ತಿಲ್ಲ. ಈ ಹೊತ್ತಿನ ಎಲ್ಲ ಸಮಸ್ಯೆಗಳೂ ಪಕ್ಷ ಜಾಡ್ಯದ ಪರ-ವಿರೋಧ ಚರ್ಚೆಯಲ್ಲೇ ಮುಳುಗೇಳುತ್ತಿವೆ. ಸರ್ಕಾರದ ಒತ್ತಾಯದ ಮೇರೆಗೆ, ಶಿಕ್ಷಣ ಇಲಾಖೆಯ ಅನಿವಾರ್ಯ ಆಜ್ಞೆಯಲ್ಲಿ ಅದದೇ ಪಠ್ಯಗಳನ್ನು ತಿರುಗಿಸಿ ಉರುಗಿಸಿ ಇಡುವುದರ ಮೇಲೆ ಅದು ಜಾರಿಗೆ ಬರುತ್ತಿದೆ.
ಪ್ರಾಥಮಿಕ ಹಂತದಿಂದ ಹಿಡಿದು ಇಂಗ್ಲಿಷ್, ಕನ್ನಡವೋ, ವಿಜ್ಞಾನವೋ, ತಾಂತ್ರಿಕ ಕೌಶಲ ಸಂಗತಿಗಳೋ ಇವನ್ನು ಭವಿಷ್ಯದ ದೃಷ್ಟಿಯ ನೆಲೆಯಲ್ಲಿ ಅಂತರಂಗಪೂರ್ವಕವಾಗಿ ಪಾಠ ಹೇಳುವ ಬೋಧಕ ಸಮೂಹ ಹೆಚ್ಚು ಕಾಣಿಸುತ್ತಿಲ್ಲ. ಇದೆಲ್ಲದರೊಂದಿಗೆ ಒಂದಲ್ಲ ಒಂದು ದಿನ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ, ಕೊಂಡೊಯ್ಯುತ್ತಿವೆ ಎಂದು ತಿಳಿಯಲಾಗುತ್ತಿರುವ ಲಾಭದಾಯಕ ರಾಷ್ಟ್ರೀಯ ಕಂಪನಿಗಳೇ ಶಿಕ್ಷಣವನ್ನು ಗುತ್ತಿಗೆ ಪಡೆದು ತಮ್ಮ ನಾನಾ ವ್ಯವಹಾರಗಳನ್ನು ವಿದ್ಯಾರ್ಥಿಗಳ ತಲೆಗೆ ಅದೇ ಅತ್ಯುನ್ನತ ಶಿಕ್ಷಣವೆಂದು ತುಂಬಬಹುದೇ. ಅವರ ಪಾರಂಪರಿಕ ಅರಿವಿನ ಅಥವಾ ಸುತ್ತಲಿನ ಸಾಂಸ್ಕೃತಿಕ ಸಂಗತಿಗಳನ್ನು ಒಣಗಿಸಿಬಿಡಬಹುದೇ? ಈ ಥರದ ಬರಗಾಲವು ದೊಡ್ಡಣ್ಣಗಳೆನಿಸಿಕೊಳ್ಳುವ ದೇಶಗಳಲ್ಲೆಲ್ಲ ಈಗಾಗಲೇ ಕಾಸಿಕೊಳ್ಳುವ ಸೂಚನೆಗಳಿವೆ.
ಮತೀಯವಾಗುತ್ತಿರುವ ಶಿಕ್ಷಣ ಸಂಸ್ಥೆಗಳಿಂದ, ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚಿರುವ ಜಾತಿವ್ಯವಹಾರ, ಭ್ರಷ್ಟಾಚಾರದೊಂದಿಗೆ, ಹೇಗೋ ಮುಂದಿನ ಚುನಾವಣಾ ಆಮಿಷಗಳನ್ನೊಡ್ಡುವುದೇ ಘನ ಯೋಜನೆಗಳಾಗಿರುವ ಜಡ ಸರ್ಕಾರಗಳಿಂದ ವಿದ್ಯಾರ್ಥಿ ಸಮೂಹದಲ್ಲಿ ಕಲಿಕೆಯ ಉತ್ಸಾಹವಿಲ್ಲದೆ, ಜ್ಞಾನದಾನದ ಶಿಕ್ಷಣ ಸಂಸ್ಥೆಗಳಲ್ಲಿ ಅರಿವಿನ ಬೆಳಕು ಕಾಣದಂತಾಗಿದೆ.
ಪ್ರಾಥಮಿಕ ಶಿಕ್ಷಣದ ವಲಯದಲ್ಲಿ ಓದು, ಬರಹಗಳ ಗುಣಮಟ್ಟವೇ ಕಡಿಮೆಯಾಗಿರುವುದರಿಂದ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಶೈಕ್ಷಣಿಕ ಸಂಶೋಧನೆಗಳಿಗೆ ಬೆಲೆಯೇ ಇಲ್ಲದಂತಾಗಿರುವ ಸ್ಥಿತಿಯನ್ನು ಕುರಿತು ಚರ್ಚೆ ನಡೆಯುತ್ತಲೇ ಇದೆ. ಶಿಕ್ಷಣ, ಸಂಶೋಧನೆ ಯಾರ ಅರಿವಿಗೂ ಬಾರದಂತೆ ಉದ್ಯಮೀಕರಣಗೊಳ್ಳುತ್ತಿದೆ. ಕ್ರಿಯಾಶೀಲ, ಸೂಕ್ಷ್ಮವೆನಿಸುವ ಸಮಾಜಸ್ಪಂದಿ ತಿಳಿವಳಿಕೆಗಳಿಗಿಂತ ಹೆಚ್ಚಾಗಿ ಜೀವನೋಪಾಯದ ತಾಂತ್ರಿಕ ಕಸುಬುಗಳನ್ನು ಕಲಿಸುವುದೇ ಶಿಕ್ಷಣ ಎಂಬಂತಾಗಿದೆ. ಇದರ ಮೇಲೆ ಯಂತ್ರೋಪಕರಣಗಳು ಪ್ರಾಥಮಿಕ ಶಾಲೆಯಿಂದ ಕಾಲೇಜುಗಳವರೆಗೂ ಪ್ರವೇಶ ಮಾಡಿ, ನಮ್ಮ ಶಿಕ್ಷಣ ಸಂಸ್ಥೆಗಳ ಸ್ವರೂಪವನ್ನೇ ಬದಲಾಯಿಸಲಾಗುತ್ತಿದೆ. ಎಲ್ಲೆಡೆಯೂ ಸಿಸಿ ಕ್ಯಾಮೆರಾಗಳು, ಜಿಪಿಎಸ್ ಟ್ರ್ಯಾಕಿಂಗ್, ಬಯೋಮೆಟ್ರಿಕ್ ಹಾಜರಿ ಇತ್ಯಾದಿಗಳ ಬಳಕೆಯನ್ನು ನೋಡುವಲ್ಲಿ ಅವುಗಳ ನಿರ್ವಹಣೆಯೇ ಬೋಧನೆಗಿಂತಲೂ ಮುಖ್ಯವಲ್ಲದೆ, ಅದರಿಂದಲೂ ನುಣುಚಿಕೊಳ್ಳುವ ದಾರಿ ಯಾವುದು ಎಂದಾಗಿಬಿಟ್ಟಿದೆ. ತಾತ್ಕಾಲಿಕವೆನಿಸುವ ಅಧಿಕಾರ, ಅಂತಸ್ತು, ಪದವಿಗಳನ್ನು ಹೇಗಾದರೂ ಯಾವ ಮಾರ್ಗದಲ್ಲಾದರೂ ಪಡೆದು ಕೋಟ್ಯಾಧಿಪತಿಗಳೆನಿಸಿ, ಹುಸಿ ಗೌರವದ ಮೇಲೆ ಓಡಾಡುವುದರಿಂದ ಸರ್ಕಾರದ ಮತ್ತು ಅದರ ಅಂಗಸಂಸ್ಥೆಗಳ ಮುನ್ನಡೆ ಸಾಧ್ಯವಾಗುವುದಿಲ್ಲ. ಎಲ್ಲದರ ಏಳಿಗೆ ಇರುವುದು ತಕ್ಕಮಟ್ಟಿಗಾದರೂ ಅಂತರಂಗದಲ್ಲಿರಬಹುದಾದ ಸರಳ, ನಿಸ್ವಾರ್ಥ ಮನಸ್ಥಿತಿ ಮತ್ತು ಕಾಯಕ ಬಲದಿಂದ. ೧೯೭೪ರಲ್ಲಿಯೇ ಕುವೆಂಪು ಅವರು ಬೆಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪದವೀಧರ ವಿದ್ಯಾರ್ಥಿಗಳ ಮುಂದೆ ಮಾತನಾಡುತ್ತಾ, ಭಾರತೀಯ ಜಗತ್ತು ಭಯಂಕರ ಸಮಸ್ಯೆಗಳ ಜಟಿಲ ಕಂಟಕಮಯ ಸಂಕಟದಲ್ಲಿ ಸಿಕ್ಕಿ ದಿಕ್ಕುಗಾಣದೆ ದಾರಿ ತಪ್ಪಿ ತೊಳಲುತ್ತಿರುವಾಗ ಯಾರು ತಾನೆ ಏನು ಉಪದೇಶ ಭಾಷಣ ಮಾಡಿ ನಿಮ್ಮ ಮನಸ್ಸನ್ನು ಆಶಾವಾದದತ್ತ ಕರೆದೊಯ್ಯಲು ಸಾಧ್ಯ? ಸರ್ವನಾಶದಲ್ಲೂ ಆಶಾವಾದಿ ಎಂದು ತನ್ನನ್ನು ತಾನೇ ಬಣ್ಣಿಸಿಕೊಳ್ಳುವ ಕವಿಯ ಚೇತನವೂ ಕಿಬ್ಬಿಯಂಚಿನಲ್ಲಿ ತತ್ತರಿಸುತ್ತಾ ನಿಂತಂತಿದೆ. ನಾನಿಂದು ನಿಮ್ಮ ಹೆಗಲ ಹೊರೆಯನ್ನು ಇಳಿಸಲು ಬಂದಿಲ್ಲ; ಇನ್ನಷ್ಟು ಹೊರೆಗಳನ್ನು ಹೊರಿಸಲು ಬಂದಿದ್ದೇನೆ. ನೀವಿನ್ನೂ ಜೀವನದ ಉತ್ಸಾಹದಲ್ಲಿರುವ ಯುವಜನರು; ಎಂತಹ ಕಷ್ಟಗಳು ಬಂದರೂ ಧೈರ್ಯದಿಂದ ಎದುರಿಸುವ ಸಾಹಸ ಚೇತನರಾಗಿದ್ದೀರಿ. ನಾವು ಎದೆಗೆಟ್ಟರೂ ನೀವು ಎದೆಗೆಡುವುದಿಲ್ಲ ಎಂಬ ಭರವಸೆ ನನಗಿದೆ ಎಂದಿದ್ದಾರೆ.
ಎಲ್ಲ ಕಾಲಕ್ಕೂ ಜಾಣ-ಜಾಣೆಯರಾದ ವಿದ್ಯಾರ್ಥಿ ಸಮೂಹವು ಅಲ್ಪಸಂಖ್ಯೆಯಲ್ಲಾದರೂ ಇದ್ದೇ ಇರುತ್ತದೆ. ಅವರು ದೇಶವನ್ನು ಮುನ್ನಡೆಸುವರೆಂಬ ಭರವಸೆಯನ್ನು ನಾವೆಲ್ಲ ತಾಳಬಹುದಾಗಿರುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ