Light
Dark

ದೋರನಹಳ್ಳಿ ಎಂಬ ಕನ್ನಡ ಕ್ರೈಸ್ತರ ಹಳ್ಳಿ

ಸಿ. ಮರಿ ಜೋಸೆಫ್

ಕೃಷ್ಣರಾಜನಗರದಿಂದ ಮೈಸೂರಿಗೆ ತೆರಳುವಾಗ ಅರಕೆರೆಯ ಬಳಿ ಎಡಗಡೆ ಹಲವು ಕಿಲೋಮೀಟರು ದೂರದಲ್ಲಿ ಭತ್ತದ ಗದ್ದೆಗಳ ಕ್ಯಾನ್ವಾಸಿನ ಮೇಲೆ ಬಾನಿಗೆ ಗುರಿಯಿಟ್ಟಂತೆ ಚರ್ಚಿನ ಜೋಡಿಗೋಪುರಗಳು ಕಾಣುತ್ತವೆ. ಆ ದಾರಿಯಲ್ಲಿ ಹೋಗಿಬರುವ ಪ್ರಯಾಣಿಕರು ಅತ್ತ ಕಡೆ ನೋಡಿ ಕೈಜೋಡಿಸಿ ನಮಸ್ಕರಿಸುವುದು ಸರ್ವೇಸಾಮಾನ್ಯ. ಸರ್ವ ಧರ್ಮದವರಿಗೂ ಆರಾಧನಾ ಕೇಂದ್ರವಾಗಿರುವ ಈ ಚರ್ಚ್‌ನಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಕ್ರೈಸ್ತಬಾಂಧವರ ಜತೆ ಇತರರೂ ಸೇರಿ ಸಂತ ಅಂಥೋಣಿಯವರ ತೇರು ಎಳೆಯುತ್ತಾರೆ. ಜೋಕಾಲಿ ಆಡುತ್ತಾರೆ. ಬೆಂಡುಬತ್ತಾಸುಗಳನ್ನು ಹಾರಿಸುತ್ತಾರೆ. ಊರ ಸುತ್ತಲೂ ಅಂಗಡಿ ಮುಂಗಟ್ಟೆಗಳು, ಹೂವು ಬತ್ತಿಗಳು, ಬಳೆ ಕಿವಿಯೋಲೆಗಳು, ಹೋಟೆಲುಗಳು, ಮೋಜಿನ ಕೇಂದ್ರಗಳು, ಸರ್ಕಸ್ಸು ಜಾದೂಗಳು, ಬೊಂಬೆ ಆಟಿಕೆಗಳು ಜಾತ್ರೆಗೆ ಜೀವ ತುಂಬುತ್ತವೆ.

ನಾಡಿನ ಉಳಿದೆಡೆಯ ಕ್ರೈಸ್ತರ ಆರಾಧನಾ ಪದ್ಧತಿಗಿಂತ ಭಿನ್ನವಾಗಿ ನೆಲದ ಸಂಸ್ಕೃತಿಯನ್ನು ಮೇಳೈಸಿಕೊಂಡು ತಮ್ಮದೇ ವಿಶೇಷ ಆರಾಧನೆಯ ಮೂಲಕ ಗಮನ ಸೆಳೆದವರು ದೋರನಹಳ್ಳಿಯ ಕ್ರೈಸ್ತರು.

ನೂರಕ್ಕೆ ನೂರು ಕ್ರಿಶ್ಚಿಯನ್ನರೇ ವಾಸಿಸುವ ದೋರನಹಳ್ಳಿ ಗ್ರಾಮವು ಕೆ. ಆರ್.ನಗರ ತಾಲೂಕಿನಲ್ಲಿದ್ದು ತನ್ನ ಒಡಲಲ್ಲಿರುವ ಚರ್ಚಿನ ಕಾರಣದಿಂದ ನಾಡಿನಲ್ಲಿ ಅತ್ಯಂತ ಪ್ರಸಿದ್ಧವೆನಿಸಿದೆ.

ತನ್ನ ಪ್ರಶಾಂತ ವಾತಾವರಣದಿಂದಲೇ ಗಮನ ಸೆಳೆಯುವ ದೋರನಹಳ್ಳಿ ಗ್ರಾಮವು ದಿಬ್ಬದ ಮೇಲಿದ್ದು ಎರಡೂ ಕಡೆಯ ಕಣಿವೆಗಳ ಕಡೆ ಹಾಯುವ ಕಾವೇರಿಯ ನಾಲೆಗಳಿಂದ ಇಲ್ಲಿನ ನೆಲ,ಜಲ ಸಮೃದ್ಧವಾಗಿದೆ. ಇಲ್ಲಿನ ಜನರ ಮುಖ್ಯ ಕಸುಬು ಕೃಷಿ. ಫಲವತ್ತಾದ ಭೂಮಿಯಲ್ಲಿ ಭತ್ತ, ಕಬ್ಬು , ತೆಂಗು ರಾಗಿಯಲ್ಲದೆ ವಾಣಿಜ್ಯ ಬೆಳೆಗಳನ್ನೂ ಬೆಳೆದುಕೊಳ್ಳುತ್ತಾರೆ. ಇಲ್ಲಿ ಸುಮಾರು ಇನ್ನೂರು ವರ್ಷಗಳ ಹಿಂದೆ ಒಕ್ಕಲಿಗನ ನೇಗಿಲಿಗೆ ಸಿಕ್ಕಿಕೊಂಡ ಪುಟ್ಟ ಬೊಂಬೆಯಾಕಾರದ ಮರದ ಪ್ರತಿಮೆಯೊಂದು ಇಡೀ ಊರಿನ ಬದಲಾವಣೆಗೆ ಕಾರಣವಾಯಿತು. ಈ ಪ್ರತಿಮೆಯಿಂದ ಏನೆಲ್ಲ ಪವಾಡಗಳು ಸಂಭವಿಸಿದವು ಎಂಬ ಐತಿಹ್ಯಗಳೇ ದೋರನಹಳ್ಳಿಯ ವಿಶೇಷತೆಗೆ ಕಾರಣ.

ಮೈಸೂರು ನಗರದಂತೆ ಶತಮಾನದ ಹಿಂದೆಯೇ ಈ ಹಳ್ಳಿಯನ್ನು ಯೋಜನಾಬದ್ಧವಾಗಿ ರೂಪಿಸಲಾಗಿದೆ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಸಂಭವಿಸಿದ ಘೋರ ಪ್ಲೇಗ್ ದುರಂತದಲ್ಲಿ ಹಳೆಯ ದೋರನಹಳ್ಳಿಯನ್ನು ಗ್ರಾಮಸ್ಥರೆಲ್ಲರೂ ತೊರೆದಿದ್ದರು. ಹೀಗಾಗಿ ಹಳ್ಳಿ ಬೇಚಿರಾಕ್ (ಜನಶೂನ್ಯ) ಆಯಿತು. ಬಳಿಕ ಕ್ರೈಸ್ತ ಪಾದ್ರಿಗಳ ಪ್ರಯತ್ನದಿಂದ ಇಂದಿನ ತಾಣದಲ್ಲಿ ಹೊಸ ಹಳ್ಳಿ ಯೋಜಿತವಾಗಿ ಕಟ್ಟಲ್ಪಟ್ಟಿತು. ಹಾಗಾಗಿ ಊರಿನಲ್ಲಿ ವಿಶಾಲವಾದ ರಸ್ತೆಗಳಿವೆ. ಮನೆಮನೆಗಳ ನಡುವೆ ಸಾಕಷ್ಟು ಅಂತರವಿದೆ.ಚರ್ಚಿನ ಬಾವಿಯಿಂದಲೇ ಕೊಳಾಯಿಗಳ ಮೂಲಕ ಊರಿನ ಮನೆಮನೆಗೂ ನೀರು ಸರಬರಾಜು ಮಾಡಲಾಗಿದೆ. ಚರ್ಚಿನ ಆವರಣದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ, ಯಾತ್ರಿಕರ ತಂಗುದಾಣ, ಬ್ಯಾಂಕು, ಪೋಸ್ಟಾಫೀಸು, ಸಮುದಾಯಭವನ, ಉಪಾಹಾರಗೃಹ ಎಲ್ಲವೂ ಇವೆ. ಒಂದರಿಂದ ಪಿಯುಸಿವರೆಗಿನ ಉನ್ನತ ದರ್ಜೆಯ ಶಾಲೆಯಿದೆ. ಬುದ್ದಿಮಾಂದ್ಯ ಮಕ್ಕಳ ಆರೈಕೆಗಾಗಿ ಪ್ರತ್ಯೇಕ ಕಟ್ಟಡವಿದೆ, ಊರ ಹೊರಗೆ ವೃದ್ಧಾಶ್ರಮವಿದೆ. ಚರ್ಚಿನ ಕಾರಣದಿಂದ ಊರ ಮಕ್ಕಳು ಬುದ್ಧಿವಂತರಾಗಿ ಪಟ್ಟಣಗಳಲ್ಲಿ ಒಳ್ಳೊಳ್ಳೆಯ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಹಳೆಯ ದೋರನಹಳ್ಳಿಯು ಇತ್ತೆಂದು ಹೇಳಲಾಗುವ ಸಮಾಧಿಹಳ್ಳದ ಮೇಲಿನ ಬೋರೆಯ ಮೇಲೆ ಒಂದು ಗುಡಿಯಿದ್ದು ಅಲ್ಲಿದ್ದ ಮನೆಮಠಗಳೆಲ್ಲ ನೆಲಕಚ್ಚಿ ಹೊಲಗಳಾಗಿವೆ. ಎಷ್ಟೋ ಜನರಿಗೆ ಇಲ್ಲೊಂದು ಊರಿತ್ತೆಂದು ಊಹಿಸಿಕೊಳ್ಳುವುದೂ ಕಷ್ಟವೆನಿಸುವಷ್ಟು ಅದರ ಚಹರೆ ಕಳೆದುಹೋಗಿದೆ. ಆ ಕಡೆ ಕೈದೋರಿ ಗುರುತು ಕಾಣಿಸುತ್ತಿದ್ದ ಹಿರಿತಲೆಗಳೂ ಇಂದು ಕಣ್ಮರೆಯಾಗಿದ್ದಾರೆ. ಸಮಾಧಿಹಳ್ಳದ ಬದಿಯಲ್ಲಿರುವ ಪುರಾತನ ಜೆಸ್ವಿತ್ ಶಿಲುಬೆಕಲ್ಲು ಮಾತ್ರ ಇಂದಿಗೂ ಮುಕ್ಕಾಗದೆ ಸೆಟೆದು ನಿಂತಿದೆ.

ದೋರನಹಳ್ಳಿ ಕ್ರೈಸ್ತರ ಹಳ್ಳಿಯಾದ ಬಗೆ
ನೂರಾರು ವರ್ಷಗಳ ಹಿಂದಿನ ಆ ದಿನಗಳಲ್ಲಿ ದೋರನಹಳ್ಳಿಯ ರೈತನೊಬ್ಬ ಹೊಲ ಉಳುತ್ತಿರುವಾಗ ಆತನ ನೇಗಿಲಿಗೆ ಏನೋ ಸಿಲುಕಿದಂತಾಯಿತು. ನೇಗಿಲು ಬಿಡಿಸಿ ಮಣ್ಣು ಕೆದರಿದಾಗ ಕಂಡಿದ್ದು ಮರದ ಗೊಂಬೆ. ಹುಳ ಹತ್ತದೇ ಚೆನ್ನಾಗಿದ್ದ ಗೊಂಬೆ ತನ್ನ ಮಕ್ಕಳಿಗೆ ಆಟಿಕೆಯಾಯಿತೆಂದು ರೈತನ ಮೊಗದಲ್ಲಿ ಮಂದಹಾಸ ಮಿನುಗಿತು. ಕಾಲಾಂತರದಲ್ಲಿ ತನಗೆ ದುರ್ದೆಶೆ ಆರಂಭವಾದಾಗ ವಿಚಲಿತನಾಗಿ ತನಗೆ ದೊರೆತ ಸನ್ಯಾಸಿಯ ಪ್ರತಿಮೆಗೊಂದು ಮಂಟಪ ಕಟ್ಟಿ ನಮಸ್ಕಾರ ಮಾಡಿದ. ಅವನ ದುರ್ದೆಸೆ ಅಳಿದು ಆತ ಏಳಿಗೆ ಹೊಂದಿದ. ಮುಂದೊಂದು ದಿನ ಶ್ರೀರಂಗಪಟ್ಟಣದಿಂದ ಹಾಸನಕ್ಕೆ ಪಯಣಿಸುತ್ತಿದ್ದ ಫ್ರೆಂಚ್ ಪಾದ್ರಿಯೊಬ್ಬರು ಹದಿಮೂರು ಅಂಗುಲ ಎತ್ತರದ ಪ್ರತಿಮೆಯನ್ನು ಸೂಕ್ಷ್ಮವಾಗಿ ಗಮನಿಸಿ ಇದು ಸಂತ ಅಂತೋಣಿಯ ಪ್ರತಿಮೆ ಎಂದು ಗುರುತಿಸಿದರು.

ಈ ಪವಾಡಕ್ಕೆ ಕಾರಣರಾದ ಸಂತ ಅಂತೋಣಿಯ ಮೂಲ ಪೋರ್ಚುಗಲ್. ೧೧೯೫ರ ಆಗಸ್ಟ್ ೧೫ರಲ್ಲಿ ಜನಿಸಿದ ಅಂತೋಣಿ ಚಿಕ್ಕವಯಸ್ಸಿನಲ್ಲೇ ಸನ್ಯಾಸತ್ವದ ಕಡೆ ಆಕರ್ಷಿತರಾದವರು, ಬದುಕಿರುವಾಗಲೇ ಪವಾಡಪುರುಷನೆನಿಸಿಕೊಂಡವರು. ಜೂನ್ ೧೩ ಅವರು ಮರಣಿಸಿದ ದಿನ. ಅಂದು ಪ್ರಪಂಚದಾದ್ಯಂತ ಹರಡಿರುವ ಅಂತೋಣಿಯವರ ದೇಗುಲಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತವೆ. ದೋರನಹಳ್ಳಿಗೆ ಅಂದು ಜಾತ್ರೆಯ ಸಂಭ್ರಮ.

ದೋರನಹಳ್ಳಿ ಚರ್ಚ್
ಸಂತನ ಸ್ವರೂಪವಿದ್ದ ತಾಣದಲ್ಲಿ ರೈತ ಕಟ್ಟಿದ್ದ ಹಳೆಯ ಮಂಟಪವು ಅಳಿದ ಮೇಲೆ ಮಂಗಳೂರಿನ ಚಂದಪ್ಪ ಶೆಟ್ಟಿ ಎಂಬವರು ೧೯೭೭ರಲ್ಲಿ ಮತ್ತೊಂದು ಸುಂದರವಾದ ಮಂಟಪವನ್ನು ಕಟ್ಟಿಸಿದ್ದರು. ಅನೇಕ ವರ್ಷಗಳ ಕಾಲ ಜನ ಈ ಮಂಟಪ ಮುಂದೆ ಅಡ್ಡ ಬಿದ್ದು ನಮಸ್ಕಾರ ಮಾಡುತ್ತಾ ಅಲ್ಲಿನ ಮಣ್ಣನ್ನು ಕಣ್ಣಿಗೊತ್ತಿಕೊಂಡು ಒಂದು ಹಿಡಿ ಮಣ್ಣನ್ನು ಒಯ್ದು ತಮ್ಮ ಮನೆಯ ಅಡಿಪಾಯಕ್ಕೆ ಹಾಕಿಕೊಳ್ಳುತ್ತಿದ್ದರು. ಈಗ ಆ ಸ್ಥಳದಲ್ಲಿ ಎತ್ತುಗಳನ್ನು ಹೂಡಿ ಹೊಲ ಉಳುತ್ತಿರುವ ರೈತನ ನಿಜರೂಪದ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ದೇವಾಲಯಕ್ಕೆ ಬರುವವರಿಗೆ ಇದೊಂದು ಪ್ರೇಕ್ಷಣೀಯ ತಾಣವಾಗಿದೆ.

ಫ್ರೆಂಚ್ ಪಾದ್ರಿಗಳು, ಭಕ್ತಾದಿಗಳು ಸೇರಿ ಕಟ್ಟಿಸಿದ ದೇವಾಲಯಗಳು ಕಾಲಾಂತರದಲ್ಲಿ ಪುಟ್ಟದಾಗಿ ತೋರಿದ್ದರಿಂದ ಕೆಡವಲ್ಪಟ್ಟು ಮತ್ತೆ ಮತ್ತೆ ಹಿರಿದಾಗಿವೆ. ಆ ಒಂದು ಲೆಕ್ಕಾಚಾರದಲ್ಲಿ ಪಡುವಣ ದಿಕ್ಕಿಗೆ ಮುಖ ಮಾಡಿರುವ ಈಗಿನ ದೇವಾಲಯ ಐದನೆಯದು. ೧೯೬೯ರ ಜೂನ್ ೧೩ರಂದು ಉದ್ಘಾಟನೆಯಾದ ಶಿಲುಬೆಯಾಕಾರದ ಅಡಿಪಾಯದ ಮೇಲೆ ಕಟ್ಟಿರುವ ಈ ಗುಡಿಯಲ್ಲಿ ಸುಮಾರು ಒಂದು ಸಾವಿರ ಮಂದಿ ಕುಳಿತು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಬಹುದು. ಪೂಜಾಪೀಠಕ್ಕೆದುರು ನಿಂತರೆ ಬಲಬದಿ ಕಾಣುವ ಗಾಜಿನ ಫಲಕವಿರುವ ಕಿರುಗೂಡಿನಲ್ಲಿ ಇನ್ನೂರು ವರ್ಷಗಳ ಹಿಂದೆ ರೈತನಿಗೆ ದೊರೆತ ಅದ್ಭುತ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ ವ್ಯಾಟಿಕನ್‌ನ ಪ್ರಾಚ್ಯವಸ್ತು ಸಂಗ್ರಹಾಲಯದಿಂದ ತರಿಸಲಾದ ಸಂತ ಅಂತೋಣಿಯವರ ಅವಶೇಷದ ಚೂರನ್ನೂ ಇರಿಸಲಾಗಿದೆ. ಈ ಚರ್ಚಿನ ಹಿಂದೆ ೧೯೨೦ರಲ್ಲಿ ಧರ್ಮರಾಜ ಶೆಟ್ಟಿಯವರು ಕಟ್ಟಿಸಿದ್ದ ಪೂರ್ವದ ಬಾಗಿಲಿನ ದೇವಾಲಯವನ್ನು ೧೯೯೫ರಲ್ಲಿ ಜೀರ್ಣೋದ್ಧಾರ ಮಾಡಿಸಿ ಹರಕೆಯ ಗುಡಿಯನ್ನಾಗಿ ಕರೆಯಲಾಗಿದೆ.

ಗುದ್ದಾಲಿ ತರಿಸಿರಿ ದಿಬ್ಬಾನೆ ಅಗೆಸಿರಿ
ದಪ್ಪಾನೆ ಡೋಲ ಬಡಿಸಿರಿ ದ್ವಾರ್ನಳ್ಳಿ
ದಿಬ್ಬದ ಮ್ಯಾಲ್ತೇರ ಹರಿಸೀರೊ
ಎಂಬ ಕ್ರೈಸ್ತ ಜನಪದರ ತ್ರಿಪದಿ ಇಂದು ಮರೆಯಾಗಿದ್ದರೂ ದೋರ್ನಳ್ಳಿ ಸಂತ ಅಂತೋಣಿಯವರು ಕನ್ನಡ ಕ್ರೈಸ್ತರ ಮನೆಮಾತಾಗಿರುವುದಂತೂ ನಿಜ. ಹಿಂದೆಲ್ಲ ಭಕ್ತರು ಎತ್ತಿನ ಗಾಡಿಗಳಲ್ಲಿ ವಾರ ಮುಂಚಿತವಾಗಿ ಬಂದು ಜಾತ್ರೆ ಮುಗಿಸಿಕೊಂಡು ಹೋಗುತ್ತಿದ್ದರು. ಈಗ ಜೂನ್ ಹದಿಮೂರರಂದು ಬೆಳ್ಳಂಬೆಳಗ್ಗೆಯೇ ಸಾವಿರಾರು ಭಕ್ತರು ಧಾವಿಸಿ ಬರುತ್ತಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ