Light
Dark

ಉರುಳಿ ಬಿದ್ದ ಬೆಟ್ಟಗಳಡಿ ಬದಲಾದ ಕೊಡಗು

ಕೊಡಗಿನ ಜನತೆಗೆ ಮಳೆ ಎಂಬುದು ಬದುಕಿನ ಭಾಗ. ಈ ಮಳೆಗೆ ಹೊಂದಿಕೊಂಡು ಜಡಿ ಮಳೆ, ಮಹಾಮಳೆ ಸಾಮಾನ್ಯ ಎಂದುಕೊಂಡವರ ನಂಬಿಕೆಗಳೇ ಸುಳ್ಳಾಗುವಂತೆ ಈಗ ಪ್ರತೀ ಮಳೆಯೂ ಭಯ ಹುಟ್ಟಿಸುತ್ತಿದೆ. ಮಳೆಗಾಲ ಪ್ರಾರಂಭವಾಗುವಾಗ ಮುಂದೇನು ಕಾದಿದೆಯೋ ಎಂದು ಕೊಡಗಿನವರು ಆತಂಕಗೊಳ್ಳುತ್ತಿದ್ದಾರೆ. ದೊಡ್ಡ ಸಿಡಿಲು. ಗುಡುಗು ಕೇಳಿದರೆ ಬೆಚ್ಚಿಬೀಳುತ್ತಾರೆ. ಬೇಡ ಬೇಡ ಎಂದರೂ ಬೆಟ್ಟಗಳತ್ತ ದೃಷ್ಟಿ ನೆಡುತ್ತದೆ.

 

ಅನಿಲ್ ಎಚ್.ಟಿ. (ಹಿರಿಯ ಪತ್ರಕರ್ತ)

ಉರುಳಿ ಬಿದ್ದ ಬೆಟ್ಟಗಳ ಕೆಳಗೆ ಮಣ್ಣುಪಾಲಾದ ತನ್ನ ಆಸೆಯ ಮನೆಯ ಮುಂದೆ ಕುಳಿತು ಆಕಾಶದಲ್ಲಿ ಕವಿದಿದ್ದ ಕಾರ್ಮೋಡಗಳನ್ನು ದಿಟ್ಟಿಸುತ್ತಿದ್ದ ಪೊನ್ನಮ್ಮಳ ಮನದಲ್ಲಿ ಒಂದೇ ಪ್ರಶ್ನೆ, ಹೀಗೇಕಾಯಿತು…? ತಾನು ನಂಬಿದ್ದ ಬೆಟ್ಟ, ತಾನು ನಂಬಿದ್ದ ಮಳೆ, ಗಾಳಿ, ನಂಬಿಕೆ ಇಟ್ಟಿದ್ದ ಮರಗಿಡ, ಪ್ರಕೃತಿ ಎಲ್ಲವೂ ತನಗೆ ಮೋಸ ಮಾಡಿಬಿಟ್ಟಿತೇ..? ಜೀವನದಲ್ಲಿ ದುಡಿದಿದ್ದ ಎಲ್ಲಾ ಹಣವನ್ನೂ ಜೋಡಿಸಿ ಕಟ್ಟಿದ್ದ ಪ್ರೀತಿಯ ಮನೆ ರಾತ್ರೋರಾತ್ರಿ ತನ್ನ ಕಣ್ಣೆದುರಿನಲ್ಲಿಯೇ ನೆಲಕಚ್ಚಿತೇ..? ಬದುಕಿನಲ್ಲಿ ಯಾಕಿಂಥ ಬದಲಾವಣೆ..? ಎಲ್ಲಿ ತಪ್ಪಿ ಹೋಯಿತು ಜೀವನದ ಬಂಡಿ..?
ಅದು ೨೦೧೮ – ಆಗಸ್ಟ್ ೧೬ ರ ರಾತ್ರಿ. ಮಳೆಗಾಲವು ಹೊಸತಲ್ಲದ ಕೊಡಗಿನಲ್ಲಿ ಅಂದು ಸುರಿದ ಮಹಾಮಳೆ ಮಾತ್ರ ಮುಂದಿನ ದಿನಗಳಲ್ಲಿ ಕೊಡಗಿನ ಜನತೆಗೆ ಎಲ್ಲವೂ ಹೊಸತಾಗಿ ನೋಡಲು ಕಾರಣವಾಗಿ ಬಿಟ್ಟಿತು. ರಾತ್ರೋರಾತ್ರಿ ಕೊಡಗಿನ ಹಲವೆಡೆ ಬೆಟ್ಟಗಳು ನಂಬಿಕೆಗಳನ್ನೇ ಬುಡಮೇಲು ಮಾಡುವಂತೆ ಕುಸಿದು ಬಿದ್ದವು. ನೂರಾರು ಮನೆಗಳು, ಜಾನುವಾರುಗಳು, ಜತೆಗೇ ೨೨ ಜೀವಗಳು ಭೂಮಿ ಪಾಲಾದವು.

ಮಳೆಯೊಂದು ಕೊಡಗಿನ ಪಾಲಿಗೆ ಎಲ್ಲವನ್ನೂ ಬದಲಾಯಿಸಿತು.
ಅಲ್ಲಿಯವರೆಗೂ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಹಲವರ ಪಾಲಿಗೆ ಕರಾಳ ದಿನಗಳು ಪ್ರಾರಂಭವಾದವು. ಗ್ರಾಮೀಣ ಜನತೆಯ ಜೀವನ ಶೈಲಿಯೇ ಬದಲಾದಂತಾಯಿತು. ಬೆಟ್ಟದ ಜೀವಗಳು ಗ್ರಾಮಗಳನ್ನು ತೊರೆದು ನಗರದತ್ತ ಮುಖ ಮಾಡಿದವು. ಸೂರು ಕಳೆದುಕೊಂಡ ಮಂದಿ ಸರಕಾರ ನೀಡಿದ ನಿವೇಶನಗಳಲ್ಲಿನ ಮನೆಗೆ ತೆರಳಬೇಕಾಯಿತು.
ಕೊಡಗಿನಲ್ಲಿ ಮಹಾಮಳೆ. ಇದು ಯಾರ ಶಾಪ.. ಹೆಚ್ಚುತ್ತಿರುವ ರೆಸಾರ್ಟ್‌ಗಳು , ಮಿತಿಯಿಲ್ಲದ ಪ್ರವಾಸೋದ್ಯಮವೇ ಬೆಟ್ಟ ಬೀಳಲು ಕಾರಣವೇ..? ಹೀಗೆಂದು ಮಾಧ್ಯಮಗಳು ಬೊಬ್ಬಿಟ್ಟವು. ಅದೇ ದಿನಗಳಲ್ಲಿ ಕೇರಳದಲ್ಲಿ ಸಂಭವಿಸಿದ್ದ ಪ್ರಳಯದ ದಶ್ಯಗಳನ್ನೂ ಕೊಡಗಿನಲ್ಲಿ ಸಂಭವಿಸಿದ ವಿಕೋಪದ ದೃಶ್ಯಗಳು ಎಂಬಂತೆ ಪದೇ ಪದೇ ಪ್ರಸಾರ ಮಾಡಿ ಕೊಡಗಿನ ಬಗ್ಗೆಯೇ ಭೀತಿ ಹುಟ್ಟಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿದವು. ಬೆಟ್ಟ ಬಿದ್ದ ಪ್ರದೇಶಗಳಲ್ಲಿ ಹೋಂ ಸ್ಟೇಗಳು, ರೆಸಾರ್ಟ್‌ಗಳು ಇರಲೇ ಇಲ್ಲ ಎಂದು ಕೆಲವರು ಹೇಳುತ್ತಿದ್ದ ಸತ್ಯ ಹೊರಗಿನ ಪ್ರಪಂಚಕ್ಕೆ ಮಳೆ, ಗುಡುಗಿನ ಅಬ್ಬರದಲ್ಲಿ ಕೇಳುತ್ತಲೇ ಇರಲಿಲ್ಲ.


ಕೊಡಗಿನಲ್ಲಿ ಮಳೆಯಿಂದಾಗಿ ಎಲ್ಲವೂ ಅಲ್ಲೋಲ ಕಲ್ಲೋಲವಾಗಿಬಿಟ್ಟಿದೆ. ಕೊಡಗಿಗೆ ಹೋಗುವುದೇ ಅಪಾಯ ಎಂಬಂಥ ಭಾವನೆ ಮೂಡುವಲ್ಲಿ ವದಂತಿಗಳು ಪ್ರಮುಖ ಪಾತ್ರ ವಹಿಸಿದ್ದಾಯಿತು.
ಪ್ರವಾಸಿಗರು ಅನೇಕ ತಿಂಗಳ ಕಾಲ ಮಳೆನಾಡಿನ ಕೊಡಗಿಗೆ ಬಾರದೇ ಉದ್ಯಮಿಗಳು ತತ್ತರಿಸಿದರು. ಕಾಫಿಗೆ ಬೆಲೆ ಕುಸಿದ ಸಂದರ್ಭ ಹೋಂಸ್ಟೇ ಮೂಲಕ ಮನೆಯಲ್ಲಿಯೇ ಪ್ರವಾಸಿಗರನ್ನು ಅತಿಥಿಗಳಂತೆ ನೋಡಿಕೊಂಡು ಆತಿಥ್ಯ ನೀಡುತ್ತಿದ್ದ ಅನೇಕ ಮನೆ ಮಾಲೀಕರು ಪ್ರವಾಸಿಗರು ಬಾರದೇ ಹೋಂಸ್ಟೇಗಳ ಬಾಗಿಲು ಮುಚ್ಚಿದರು. ಮಳೆಯ ಊರಿನಲ್ಲಿ ಕೆಲಸ ಮಾಡುವುದಾ? ಬೇಡವೇ ಬೇಡ ಎಂದು ಕುಟುಂಬದವರು ಹಠ ಹಿಡಿದ ಪರಿಣಾಮ ಹೋಟೇಲ್ ಗಳ ಕಾರ್ಮಿಕರು ಘಟ್ಟ ಇಳಿದು ಕರಾವಳಿಗೆ ತೆರಳಿದರು. ಹೋಟೇಲ್ ಉದ್ಯಮವೂ ನಲುಗಿತು.
ಮಡಿಕೇರಿಯ ಹಳೇ ಬಸ್ ಸ್ಟಾಂಡ್ ನಲ್ಲಿ ನಗರದ ಹೃದಯದಂತಿದ್ದ ಪುಟ್ಟ ಬೆಟ್ಟವೂ ಮಳೆಯಿಂದಾಗಿ ಕುಸಿದು ಬಿತ್ತು. ಮಂಜಿನ ನಗರಿಗೆ ಕಪ್ಪುಚುಕ್ಕೆಯಂತೆ ಕುಸಿದು ಬಿದ್ದ ಬೆಟ್ಟ ಕಾಣತೊಡಗಿತು.. ಕೊಡಗಿನ ದುರ್ವಿಧಿಗೆ ನಿದರ್ಶನ ಎಂಬಂತೆ ಇದು ಕಂಡುಬಂತು.
ಆಂಧ್ರ, ತೆಲಂಗಾಣ, ಚೆನ್ನೈ, ಮುಂಬೈ, ಪೂನಾ, ಕೇರಳಗಳಿಂದ ಕೊಡಗಿನಲ್ಲಿ ತೋಟ, ರೆಸಾರ್ಟ್ ಖರೀದಿಸಲು ಸಾಲುಗಟ್ಟಿ ಬರುತ್ತಿದ್ದ ವಾಹನಗಳು ಏಕಾಏಕಿ ಕಡಿಮೆಯಾದವು. ಕೊಡಗಿನಲ್ಲಿ ಭೂಮಿ ಖರೀದಿಸಿದರೆ ಸಮಸ್ಯೆಯಾಗುತ್ತದೆ ಎಂಬ ಭಾವನೆ ವ್ಯಾಪಕವಾಗತೊಡಗಿತು. ರಿಯಲ್ ಎಸ್ಟೇಟ್ ವಹಿವಾಟು ನಂಬಿಕೊಂಡಿದ್ದ ನೂರಾರು ಮಂದಿ ಕಂಗಾಲಾದರು. ಕೊಡಗಿನಲ್ಲಿ ಭೂಮಿ ಬೆಲೆ ಇಲ್ಲಿನ ಬೆಟ್ಟದ ಜತೆಯೇ ಕುಸಿದು ಬಿತ್ತು.ಕೊಡಗಿನ ಪಶ್ಟಿಮಘಟ್ಟ ಪ್ರದೇಶಗಳಲ್ಲಿ ನೆಲೆಸಿದ್ದ ಗ್ರಾಮೀಣ ಮಂದಿಯ ವಲಸೆ ಪ್ರಾರಂಭವಾಯಿತು. ಅದಾಗಲೇ ನಗರ ಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಯುವ ಪೀಳಿಗೆ ಹಳ್ಳಿಗಳಲ್ಲಿ ಜೀವನ ಕಟ್ಟಿಕೊಂಡಿದ್ದ ತಮ್ಮ ಹಿರೀಕರನ್ನು ಇಲ್ಲಿ ನೆಲೆಸುವುದು ಸುರಕ್ಷಿತವಲ್ಲ. ನೀವೂ ನಮ್ಮೊಂದಿಗಿರಿ ಎಂದು ನಗರ ಪ್ರದೇಶಗಳಿಗೆ ಕರೆದೊಯ್ದರು. ಕಷ್ಟವೋ. ಸುಖವೋ.. ಇಚ್ಛ್ಚೆಯಿದೆಯೋ ಇಲ್ಲವೋ.. ಮನಸ್ಸಿತ್ತೋ ಇಲ್ಲವೋ ಅನೇಕ ಹಳ್ಳಿಗರು ತಮ್ಮ ನೆಲೆಗೆ ವಿದಾಯ ಹೇಳಿದ್ದಾಯಿತು.
ಮಳೆ ತಂದ ಬದಲಾವಣೆಗೆ ಕೊಡಗು ತತ್ತರಿಸಿಯಾಗಿತ್ತು. ೨೦೧೮ ರ ಹಿಂದೆಯೇ ೨೦೧೯, ಅದರ ಹಿಂದೆಯೇ ೨೦೨೦ ಬಂತು. ಮೂರು ವರ್ಷವೂ ಮಳೆಗಾಲ ಅಟ್ಟಹಾಸ ಮೆರೆಯಿತು. ತಲಕಾವೇರಿ ಎಂಬ ಕಾವೇರಿ ಪವಿತ್ರ ಕ್ಷೇತ್ರದಲ್ಲಿ ಬೆಟ್ಟ ಬಿದ್ದು ಅರ್ಚಕರ ಕುಟುಂಬವೇ ಮಣ್ಣಿನಡಿ ಕೊನೆಯುಸಿರೆಳೆಯಿತು. ಕೊಡಗಿನ ಪ್ರತಿಯೊಂದು ತಾಲೂಕಿನಲ್ಲಿಯೂ ಮಳೆ ಎಂಬುದು ಮಾರಿಯಾಗಿ ಪರಿಣಮಿಸಿ ಜೀವನದಲ್ಲಿ ಬದಲಾವಣೆಗೆ ಕಾರಣವಾಯಿತು.
ಮಳೆಯ ನಂತರ ಬಂದ ಕೋವಿಡ್ ಸೋಂಕು ಕೂಡ ಎಲ್ಲರಂತೆ ಕೊಡಗಿನಲ್ಲಿಯೂ ಸಾಕಷ್ಟು ಬದಲಾವಣೆಗೆ ಕಾರಣವಾಗಿತ್ತು. ಖಾಸಗಿ ಬಸ್ ಗಳು ಬಹುಪಾಲು ಸಂಚಾರ ನಿಲುಗಡೆಗೊಳಿಸಿದವು.. ಮುಚ್ಚಿದ ಹೋಟೇಲ್ ಗಳ ಪಾಕಶಾಲೆಯಲ್ಲಿ ಇಂದಿಗೂ ಬೆಂಕಿ ಉರಿದಿಲ್ಲ. ಸಾವಿರಾರು ಮಕ್ಕಳಿಂದ ತುಂಬಿದ್ದ ಖಾಸಗಿ ಶಾಲೆಗಳು ಶಾಲೆ ಪ್ರಾರಂಭವಾಗಿದೆ… ಮಕ್ಕಳನ್ನು ಕಳುಹಿಸಿ .. ಎಂದು ಪ್ರಚಾರ ಮಾಡುವಂತಾಗಿದೆ. ಕೊಡಗಿನ ಕೇಂದ್ರ ಸ್ಥಾನ ಮಡಿಕೇರಿಯಲ್ಲಿದ್ದ ಏಕೈಕ ಚಿತ್ರಮಂದಿರ ಕಾವೇರಿ ಮಹಲ್ ತನ್ನ ೫೦ ನೇ ವರ್ಷಾಚರಣೆಯ ಸಂಭ್ರಮಕ್ಕೆ ೧ ವರ್ಷವಿದ್ದಾಗಲೇ ಪರದೆ ಎಳೆದುಕೊಂಡು ವ್ಯಾಪಾರ ಮಳಿಗೆ ತಲೆಎತ್ತಲು ಕಾರಣವಾಗಿದೆ.


ಬದಲಾವಣೆ ಜಗದ ನಿಯಮ ಹೌದು. ಎಲ್ಲವೂ ಬದಲಾಗಲೇ ಬೇಕು.. ಹೇಗೆ ಕೊಡಗಿನ ಸುಂದರ ದಿನಗಳು ಮಹಾಮಳೆ, ಲಾಕ್ ಡೌನ್ ನಿಂದಾಗಿ ಸಾಕಷ್ಟು ಬದಲಾವಣೆಗೆ ಒಳಗಾಯಿತೋ ಹಾಗೇ ಕೊಡಗಿನ ಕರಾಳ ದಿನಗಳೂ ಕೊನೇ ಆಗಲೇಬೇಕಾಗಿದೆ. ಇದೀಗ ಮತ್ತೆ ಕೊಡಗಿನತ್ತ ಪ್ರವಾಸಿಗರು ಮೆಲ್ಲನೇ ಕಾಲು ಹಾಕುತ್ತಿದ್ದಾರೆ. ರಿಯಲ್ ಎಸ್ಟೇಟ್ ಮತ್ತೆ ಬಾಗಿಲು ತೆರೆದುಕೊಳ್ಳುತ್ತಿದೆ.. ಹಳೇ ಬಸ್ ಸ್ಟಾಂಡ್ ಬದಲಿಗೆ ಮಡಿಕೇರಿಯ ಹೊಸ ಬಸ್ ಸ್ಟಾಂಡ್ ಕಡೆಗೆ ಪ್ರಯಾಣಿಕರು ಸಾಗುತ್ತಿದ್ದಾರೆ. ಕಾವೇರಿ ಮಹಲ್ ಬದಲಿಗೆ ೩೦ ಕಿಮೀ ದೂರದ ಕುಶಾಲನಗರದ ಕೂರ್ಗ್ ಮಲ್ಟಿಫ್ಲೆಕ್ಸ್‌ನತ್ತ ಪ್ರೇಕ್ಷಕರು ತೆರಳುತ್ತಿದ್ದಾರೆ. ಭೂಕುಸಿತದಿಂದ ತಳಕಚ್ಚಿದ್ದ ಚೆಟ್ಟಳ್ಳಿ ರಸ್ತೆಯ ಕಾಮಗಾರಿ ಎರಡು ವರ್ಷಗಳಿಂದ ಆಗಾಗ್ಗೆ ಕುಸಿಯುತ್ತಿರುವ ಮಣ್ಣಿನ ಮಧ್ಯೆಯೇ ನಡೆಯುತ್ತಾ ಸಾಗಿದೆ.
ಮಳೆಗಾಲ ಬರುತ್ತಿದ್ದಂತೆಯೇ ಎನ್ ಡಿಆರ್‌ಎಫ್ ತಂಡ ಮಡಿಕೇರಿಯಲ್ಲಿ ಬೀಡು ಬಿಟ್ಟು ಭಯಬೇಡ, ಮಳೆಯಿಂದಾಗಿ ದುರಂತ ಸಂಭವಿಸಿದರೆ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಅಭಯ ನೀಡುವಂತಾಗಿದೆ.
ನಂಬಿಕೆಯೇ ಮುಖ್ಯ ಎಂಬಂತೆ ಈ ಮಳೆಗಾಲದಲ್ಲಿ ದುರಂತ ಸಂಭವಿಸಲಿಕ್ಕಿಲ್ಲ ಎಂಬ ಭರವಸೆಯೊಂದಿಗೆ ಕೊಡಗಿನ ಜನರ ಜೀವನ ಮುಂದಕ್ಕೆ ಸಾಗಿದೆ. ಬೆಟ್ಟದಡಿ ಮತ್ತೆ ಹೊಸ ಮನೆ ಮಾಡಿದರೆ ಹೇಗೆ..? ಯಾರು ಸಾಲ ಕೊಟ್ಟಾರು..? ಸಾಲ ತಂದು ಕಷ್ಟಪಟ್ಟು ಮನೆ ಕಟ್ಟಿ ಈ ಗೂಡಿನೊಳಗೆ ತಾನು ಸೇರಿಕೊಳ್ಳುವಷ್ಟರಲ್ಲಿ ಮತ್ತೆ ಮಳೆ ಬಂದು ಬೆಟ್ಟ ಕುಸಿದರೇ..? ತಾನು ಉಳಿದೇನೇ ? ಅರ್ಧ ಬಿದ್ದ ಬೆಟ್ಟ ನೋಡುತ್ತಾ ಕುಳಿತ ಪೊನ್ನಮ್ಮಳ ಮನದಲ್ಲಿ ಪ್ರಶ್ನೆಗಳು ಅಂತರ್ಜಲದಂತೆ ಪುಟಿದೇಳುತ್ತಲೇ ಇದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ