ಚಾಮರಾಜನಗರ : ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಭಾರತ್ ಜೋಡೊ ಯಾತ್ರೆಯು ನಾಳೆ (30-09-2022) ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡುತ್ತಿರುವ ಹಿನ್ನೆಲೆ ಪಟ್ಟಣದಲ್ಲಿ ಪಕ್ಷದ ವತಿಯಿಂದ ಹಾಕಲಾಗಿದ್ದ ನಾಯಕರ ಫ್ಲೆಕ್ಸ್ಗಳನ್ನು ಇಂದು ಬೆಳಗಿನಜಾವ ದುಷ್ಕರ್ಮಿಗಳು ಬ್ಲೇಡ್ ಹಾಕಿ ಹರಿದು ಹಾಕಿದ್ದಾರೆ.
ಗುಂಡ್ಲುಪೇಟೆ ಪಟ್ಟಣದಲ್ಲಿ ಸುರಭಿ ಹೋಟೆಲ್ನಿಂದ ಊಟಿ ರಸ್ತೆಯ ಉದ್ದಕ್ಕೂ ಅಳವಡಿಸಿದ್ದ ಫ್ಲೆಕ್ಸ್ಗಳಿಗೆ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾರೆ.. ಎಐಸಿಸಿ ನಾಯಕ ರಾಹುಲ್ ಗಾಂಧಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಚಾಮರಾಜನಗರ ಶಾಸಕ ಸಿ ಪುಟ್ಟರಂಗಶೆಟ್ಟಿ ಭಾವಚಿತ್ರಗಳಿರುವ ಫ್ಲೆಕ್ಸ್ ಅನ್ನು ಹರಿದು ಹಾಕಲಾಗಿದೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿದ್ದು ಪ್ಲೇಕ್ಸ್ ಹರಿದುಹಾಕಿದರೆ ನಾವೇನು ಹೆದರುವುದಿಲ್ಲ, ಇಂತವುಗಳನ್ನು ನಾವು ಬಹಳಷ್ಟು ನೋಡಿದ್ದೇವೆ ಎಂದು ಬಿಜೆಪಿಯ ವಿರುದ್ಧ ಕಿಡಿಕಾರಿದ್ದಾರೆ.
ಫ್ಲೆಕ್ಸ್ಗಳಿಗೆ ಬ್ಲೇಡ್ ಹಾಕಿರುವ ಸಂಬಂಧ ಯೂತ್ ಕಾಂಗ್ರೆಸ್ ವತಿಯಿಂದ ದೂರು ದಾಖಲು ಮಾಡಿದ್ದಾರೆ. ಬಿಜೆಪಿಯ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಣಯ್ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಆರೋಪಿಸುವ ಮೂಲಕ ಕೂಡಲೇ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಪ್ರಣಯ್ ಅವರು ಫ್ಲೆಕ್ಸ್ಗಳಿಗೆ ಬ್ಲೇಡ್ ಹಾಕಿರುವ ಸಂಬಂಧ ದೂರು ದಾಖಲಾಗಿರವುದರ ಕುರಿತು ಪೊಲೀಸಿನವರು ಕ್ರಮ ಕೈಗೊಂಡು ಕಿಡಿಗೇಡಿಗಳನ್ನು ಬಂಧಿಸುತ್ತಾರೆ, ಅವರ ಮೇಲೆ ಸೂಕ್ತ ಕಾನೂಕು ಕ್ರಮಗಳನ್ನು ಕೈಗೊಳ್ಳುತ್ತಾರೆ, ಅಂತಹ ಹೇಯ ಹಾಗೂ ಲಜ್ಜೆಗೆಟ್ಟ ಕೆಲಸವನ್ನು ಸಾಮಾನ್ಯ ಕಾರ್ಯಕರ್ತರು ಮಾಡುವುದಿಲ್ಲ. ಫ್ಲೆಕ್ಸ್ಗಳನ್ನು ಹರಿದು ಹಾಕಿರುವ ಕೆಲಸ ಯಾರೇ ಮಾಡಿದರು ಅದು ತಪ್ಪು ಅಂತವರಿಗೆ ಶಿಕ್ಷೆಯಾಗಲಿ,ಅದು ಬಿಟ್ಟು ಆರೋಪವನ್ನು ಮಾಡುವುದು, ಕುಮ್ಮಕ್ಕು ಮಾಡುತ್ತಿದ್ದಾರೆನ್ನುವುದು ತಪ್ಪು, ನನ್ನನ್ನು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಮತ್ತು ಉಳಿಸುವ ಬಗ್ಗೆ ನನ್ನ ಪಕ್ಷ ತೀರ್ಮಾನ ಮಾಡುತ್ತದೆ. ಅದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.





