ಮೈಸೂರು : ಜಿಲ್ಲಾಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಇಂದು ದಸರೆ ಆನೆಗಳನ್ನು ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರೊಟ್ಟಿಗೆ ಸಮಯವನ್ನು ಕಳೆದು ಅವರ ಕಾರ್ಯವನ್ನು ಪ್ರಶಂಸಿಸಿ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾವುತ ಮತ್ತು ಕಾವಾಡಿಗರ ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಇದೇ ವೇಳೆ ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರವನ್ನು ಸಚಿವರು ವೀಕ್ಷಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಬಾರಿ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಸಜ್ಜಾಗಿದೆ. ದಸರಾಗೆ ಎಲ್ಲಾ ತಯಾರಿ ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ನಾಳೆ ಸಂಜೆ ಅಂತಿಮವಾಗಲಿದೆ ಎಂದು ತಿಳಿಸಿದರು.





