ಬನ್ನೂರು ಬಸ್‌ಸ್ಟಾಂಡಿನ ಪಕ್ಕ ಸೊಪ್ಪು ಮಾರುತ್ತ ಕೂತಿರುವ ಮಾರ್ಗೋಡನಹಳ್ಳಿಯ ಭಾಗ್ಯಮ್ಮ ಅಪ್ರತಿಮ ಹಾಡುಗಾತಿ ಅನ್ನುವುದು ಸೊಪ್ಪು ಕೊಳ್ಳಲು ಬರುವ ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಅವರ ಪ್ರಕಾರ ಆಕೆ ಬಹಳ ಒಳ್ಳೆಯ ಮಾತುಗಾರ್ತಿ ಮತ್ತು ಆಗೀಗ ದನದ ದಲ್ಲಾಳಿ ಕೆಲಸ ಮಾಡುವ ಸಣ್ಣ ಮಟ್ಟಿಗಿನ ಏಜೆಂಟು ಮತ್ತು ಒಮ್ಮೊಮ್ಮೆ ಗಂಡಿಗೆ ಹೆಣ್ಣು ಹುಡುಕುವ, ಹೆಣ್ಣಿಗೆ ಗಂಡು ಹುಡುಕುವ ಮದುವೆ ದಲ್ಲಾಳಿ.
ಆದರೆ ಈ ಸೊಪ್ಪು ಮಾರಾಟ ಇತ್ಯಾದಿಗಳು ಆಕೆಗೆ ಹೊಟ್ಟೆಪಾಡಿನ ಚಿಂತೆ ನೀಗಿಸುವ ದಾರಿಗಳು ಮಾತ್ರ. ಆಕೆಯ ನಿಜವಾದ ಸಂತೋಷ ಇರುವುದು ಸೋಬಾನೆ ಹೇಳುವುದರಲ್ಲಿ ಮತ್ತು ಮೈಸೂರು ಸೀಮೆಯ ಜಾನಪದ ಕಾವ್ಯಗಳನ್ನು ಸಮಯದ ಪರಿವೆಯಿಲ್ಲದೆ ಹಾಡುವುದರಲ್ಲಿ.
ಹೀಗಿರುವ ಭಾಗ್ಯಮ್ಮ ಕೆಲಕಾಲದ ಹಿಂದೆ ಸೊಪ್ಪು ಮಾರಿದ ನಂತರ ಹಳ್ಳಿಗೆ ವಾಪಸು ನಡೆದುಕೊಂಡು ಹೋಗುತ್ತಿರುವಾಗ ವಾಹನವೊಂದು ಆಕೆಯ ಮೇಲೆ ನುಗ್ಗಿಬಂದು, ಒಂದು ಕಾಲು ಊನವಾಗಿ, ಆಗ ನಡೆದ ಆಪರೇಷನ್ನಿನಲ್ಲಿ ಹಾಕಿದ ರಾಡನ್ನು ಇನ್ನೂ ಕಾಲೊಳಗೆ ಇಟ್ಟುಕೊಂಡು ಆಕೆ ನಡೆಯುತ್ತಿರುವಳು. ಆಪರೇಷನ್ನು ನಡೆಸಲು ನೆರವಾದ ಮಹಾನುಭಾವರನ್ನು ನೆನೆದುಕೊಂಡು ಕೈಮುಗಿಯುವಳು. ಆಕೆಯ ಮಾತುಗಳಲ್ಲಿ ಯಾರ ಮೇಲೂ ಸಿಟ್ಟಿಲ್ಲ. ಕುಹಕವಿಲ್ಲ. ಯಾವುದರ ಮೇಲೂ ಬೇಸರವಿಲ್ಲ. ಯಾವ ಹೊತ್ತಿನಲ್ಲೂ ಮನಸ್ಸಿನೊಳಗೆ ಯಾವುದೋ ಒಂದು ಹಾಡನ್ನು ಗುನುಗಿಕೊಂಡು ಸಂತೋಷದಲ್ಲಿರುವಳು.
mysoorininda@gmail.com