Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಒಂದು ಶತಕದಲ್ಲಿ ಬರೋಬ್ಬರಿ 15 ದಾಖಲೆ ನಿರ್ಮಾಣಮಾಡಿರುವ ಕಿಂಗ್‌ ಕೊಹ್ಲಿ

ಅಫ್ಘಾನಿಸ್ತಾನ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 53 ಎಸೆತಗಳಲ್ಲಿ  ಭರ್ಜರಿ ಶತಕ ಸಿಡಿಸಿದ್ದರು. ಅಷ್ಟೇ ಅಲ್ಲದೆ ಅಂತಿಮ 61 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 12 ಫೋರ್​ನೊಂದಿಗೆ ಅಜೇಯ 122 ರನ್​ ಬಾರಿಸಿ ಮಿಂಚಿದ್ದರು. ವಿಶೇಷ ಎಂದರೆ ಇದು ವಿರಾಟ್ ಕೊಹ್ಲಿ 71ನೇ ಶತಕ.  ಇನ್ನು ಈ ಒಂದು ಭರ್ಜರಿ ಸೆಂಚುರಿಯೊಂದಿಗೆ ಕಿಂಗ್ ಕೊಹ್ಲಿ ಬರೋಬ್ಬರಿ 15 ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ. ಹಾಗಿದ್ದರೆ ಆ 15 ದಾಖಲೆಗಳು ಯಾವುವು ನೋಡೋಣ.

  1.  ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ 4ನೇ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಕೂಡ ಕೊಹ್ಲಿ ಬರೆದಿದ್ದಾರೆ.
  2. ವಿಶೇಷ ಎಂದರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆ ಟ್​ನಲ್ಲಿ ಅತ್ಯಧಿಕ ಮೊತ್ತ ಬಾರಿಸಿದ ದಾಖಲೆ ಕೂಡ ಕೊಹ್ಲಿ ಪಾಲಾಗಿದೆ. ಈ ಹಿಂದೆ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ದ 118 ರನ್​ ಬಾರಿಸಿದ್ದು ದಾಖಲೆಯಾಗಿತ್ತು.ಇದೀಗ ವಿರಾಟ್ ಕೊಹ್ಲಿ 122 ರನ್ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.
  3. ಇನ್ನು ಅಫ್ಘಾನಿಸ್ತಾನ್ ವಿರುದ್ದ ಟಿ20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನೂ ಕೊಹ್ಲಿ ಬರೆದಿದ್ದಾರೆ.
  4. ಇದಲ್ಲದೆ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಶತಕ ಬಾರಿಸಿದ 2ನೇ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನೂ ಕೂಡ ಕೊಹ್ಲಿ ನಿರ್ಮಿಸಿದ್ದಾರೆ.ಸದ್ಯ ಈ ಪಟ್ಟಿಯಲ್ಲಿ 100 ಶತಕ ಬಾರಿಸಿದ ಸಚಿನ್ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಕೊಹ್ಲಿ 71 ಶತಕ ಬಾರಿಸಿ 2ನೇ ಸ್ಥಾನಕ್ಕೇರಿದ್ದಾರೆ.
  5. ಇನ್ನು ಟಿ20 ಕ್ರಿಕೆಟ್​ನಲ್ಲಿ ಇದು ವಿರಾಟ್ ಕೊಹ್ಲಿಯ ಅತ್ಯಧಿಕ ಮೊತ್ತ ಎಂಬುದು ವಿಶೇಷ. ಅಂದರೆ ಈ ಹಿಂದೆ ಆರ್​ಸಿಬಿ ಪರ ಕೊಹ್ಲಿ 113 ರನ್​ ಬಾರಿಸಿದ್ದರು. ಇದೀಗ 122 ರನ್ ಬಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
  6. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 50 ಪ್ಲಸ್ ರನ್ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಅಂದರೆ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 32 ಅರ್ಧಶತಕ ಹಾಗೂ 1 ಶತಕ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ.
  7. ಇದಲ್ಲದೆ ಟಿ20 ಕ್ರಿಕೆಟ್​ನಲ್ಲಿ 3500 ರನ್​ ಬಾರಿಸಿದ 2ನೇ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಕೂಡ ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.
  8. ಹಾಗೆಯೇ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ಶತಕ ಸಿಡಿಸಿ ಅಜೇಯರಾಗಿ ಉಳಿದ ದಾಖಲೆಯನ್ನೂ ಸಹ ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.
  9. ಇನ್ನು ಏಷ್ಯಾಕಪ್ ಟಿ20 ಯಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನೂ ಕೂಡ ಕೊಹ್ಲಿ ಬರೆದಿದ್ದಾರೆ.
  10. ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ಶತಕ ಗಳಿಸಿದ ನಾಲ್ಕನೇ ಭಾರತೀಯ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಸುರೇಶ್ ರೈನಾ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಈ ಸಾಧನೆ ಮಾಡಿದ್ದರು.
  11. ಟಿ20 ಕ್ರಿಕೆಟ್​ನಲ್ಲಿ 100 ಸಿಕ್ಸ್​ಗಳನ್ನು ಸಿಡಿಸಿದ 2ನೇ ಭಾರತೀಯ ಆಟಗಾರ ಹಾಗೂ ವಿಶ್ವದ 10ನೇ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.
  12. ಯುಎಇ ಮೈದಾನದಲ್ಲಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಮೊತ್ತ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆ ಕೂಡ ಇದೀಗ ವಿರಾಟ್ ಕೊಹ್ಲಿ (122)ಯ ಪಾಲಾಗಿದೆ.
  13. ಈ ಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 24 ಸಾವಿರ ರನ್​ಗಳ ಗಡಿದಾಟಿದ 7ನೇ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ 3ನೇ ಭಾರತೀಯ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಮಾತ್ರ ಈ ಸಾಧನೆ ಮಾಡಿದ್ದರು.
  14. ಅತೀ ಕಡಿಮೆ ಇನಿಂಗ್ಸ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 24 ಸಾವಿರ ರನ್ ಪೂರೈಸಿದ ದಾಖಲೆ ಕೂಡ ಈ ಶತಕದೊಂದಿಗೆ ಕೊಹ್ಲಿ ತಮ್ಮದಾಗಿಸಿಕೊಂಡಿರುವುದು ವಿಶೇಷ. ಕಿಂಗ್ ಕೊಹ್ಲಿ ಕೇವಲ 522 ಇನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
  15. ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ಕೂಡ ಬರೆದಿದ್ದಾರೆ. ಟಿ20ಯಲ್ಲಿ 13 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಕೊಹ್ಲಿ ಅಫ್ಘಾನಿಸ್ತಾನದ ಮೊಹಮ್ಮದ್ ನಬಿಯ ಈ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಒಟ್ಟಿನಲ್ಲಿ 1 ಶತಕದ ಮೂಲಕ ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಹಲವು ದಾಖಲೆ ಬರೆದು ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ