ದಾಸೇಗೌಡ
ಸರಗೂರು: ಅಕ್ಕಿ ಕೊಟ್ಟರೆ ರಾಗಿ ಇಲ್ಲ, ರಾಗಿ ಕೊಟ್ಟರೆ ಅಕ್ಕಿ ಇಲ್ಲ ಎಂಬುದು ಗ್ರಾಹಕರ ಆರೋಪ
ಸರಗೂರು: ಪಟ್ಟಣದ ೩ನೇ ವಾರ್ಡ್ನ ಸ್ಲಂ ಬೋರ್ಡ್ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪದಾರ್ಥಗಳು ಸಮರ್ಪಕ ವಿತರಣೆಯಾಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇಲ್ಲಿ ಅಕ್ಕಿ ಮತ್ತು ರಾಗಿ ಪಡೆಯಲು ಬರುವ ಬಡ ಕುಟುಂಬಗಳು ಪ್ರತಿನಿತ್ಯ ಸಂಕಷ್ಟ ಎದುರಿಸುತ್ತಿವೆ. ಅಂಗಡಿ ಮಾಲೀಕನೂರ್ ಅಹಮದ್ ಅವರು ತಿಂಗಳಲ್ಲಿ ಒಂದೆರಡು ದಿನ ಮಾತ್ರ ಅಂಗಡಿ ತೆರೆಯುತ್ತಾರೆ. ಅಕ್ಕಿ ವಿತರಿಸಿದರೆ ರಾಗಿ ನೀಡುವುದಿಲ್ಲ, ರಾಗಿ ನೀಡಿದರೆ ಅಕ್ಕಿ ನೀಡುವುದಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಾರ್ಡ್ನ ಯಜಮಾನರಾದವೆಂಕಟಪ್ಪ ಮಾತನಾಡಿ, ನ್ಯಾಯಬೆಲೆ ಅಂಗಡಿಯಲ್ಲಿ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಪಡಿತರ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿಯ ಶಿರಸ್ತೆದಾರ್ ಅವರೊಂದಿಗೆ ಮಾತನಾಡಿದ್ದೇವೆ. ಪ್ರಸ್ತುತ ಅಂಗಡಿ ಮಾಲೀಕರನ್ನು ತೆರವುಗೊಳಿಸಿ, ಬೇರೆಯವರಿಗೆ ಅಂಗಡಿ ವಹಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ರಾಮಚಂದ್ರ ಮಾತನಾಡಿ, ಅಂಗಡಿ ಮಾಲೀಕರಿಗೆ ಆರೋಗ್ಯ ಸಮಸ್ಯೆ ಇರುವುದರಿಂದಲೂ ವಿತರಣೆಯಲ್ಲಿ ತೊಂದರೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ಬಡ ಗ್ರಾಹಕರು ಸಂಕಷ್ಟ ಅನುಭವಿಸುವಂತಾಗಬಾರದು. ಅಧಿಕಾರಿಗಳು ಮಧ್ಯಪ್ರವೇಶಿಸಿ ಜನರಿಗೆ ನ್ಯಾಯ ಒದಗಿಸಬೇಕು ಎಂದರು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಂಗಡಿ ತೆರೆಯುವ ದಿನಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಪಡಿತರ ವಿತರಣೆ ಯಲ್ಲಿನ ಲೋಪಗಳನ್ನು ಪರಿಶೀಲಿಸಿ, ಅರ್ಹ ಗ್ರಾಹಕರಿಗೆ ಅಕ್ಕಿ, ರಾಗಿ ಸೇರಿದಂತೆ ಸರ್ಕಾರ ನಿಗದಿಪಡಿಸಿದ ಪದಾರ್ಥಗಳನ್ನು ಸಮರ್ಪಕವಾಗಿ ವಿತರಿಸುವಂತೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ನ್ಯಾಯಬೆಲೆ ಅಂಗಡಿಯ ನಿರ್ವಹಣೆಯನ್ನು ಬೇರೆಯ ವರಿಗೆ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
” ಅಂಗಡಿ ಮಾಲೀಕರು ೩೫ಕ್ಕೂ ಹೆಚ್ಚು ಗ್ರಾಹಕರಿಂದ ಹೆಬ್ಬೆಟ್ಟು ಹಾಕಿಸಿಕೊಂಡಿದ್ದಾರೆ. ಆದರೆ ಅವರಿಗೆ ಇನ್ನೂ ಅಕ್ಕಿ ವಿತರಿಸಿಲ್ಲ ಎಂಬ ದೂರುಗಳಿವೆ. ಕೂಲಿ ಕೆಲಸಕ್ಕೆ ಹೋಗುವ ಬಡವರು ಪಡಿತರಕ್ಕಾಗಿ ಅಂಗಡಿ ಮುಂದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಂಗಡಿಯಲ್ಲಿ ಒಂದು ಬಾರಿ ಕೂಡ ರಾಗಿ ವಿತರಿಸಿಲ್ಲ. ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.”
-ಆಟೋ ರಮೇಶ್, ಕಾಂಗ್ರೆಸ್ ಮುಖಂಡ




