ಜಿ.ಎಲ್.ತ್ರಿಪುರಾಂತಕ
ಪೂರ್ವಭಾವಿ ಸಭೆಯಂತೆ ದಸರಾ ಪರಾಮರ್ಶನ ಸಭೆಯೂ ಇರಲಿ
ಅರಮನೆಗಳ ನಗರಿ, ಸಾಂಸ್ಕೃತಿಕ ರಾಜಧಾನಿ ಮೈಸೂರು ಅನೇಕ ವಿಷಯಗಳಿಗೆ ಜಗದ್ವಿಖ್ಯಾತಿಯನ್ನು ಹೊಂದಿದೆ. ಐತಿಹಾಸಿಕವಾಗಿ ಇಡೀ ದೇಶಕ್ಕೆ ಮುಕುಟಪ್ರಾಯವಾಗಿ ಕರ್ನಾಟಕ ರಾಜ್ಯದಲ್ಲಿ ಅನೇಕ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿದ್ದರೂ, ಆ ಮುಕುಟದ ಮಣಿಯಾಗಿ ಹೊಳೆಯುತ್ತಿರುವುದು ಮೈಸೂರು ನಗರ ಎನ್ನುವುದು ನಮ್ಮಗಳ ಹೆಮ್ಮೆ. ಮೈಸೂರು ನಗರಕ್ಕೆ ಅಂತಹ ಚುಂಬಕ ಶಕ್ತಿಯನ್ನು ತುಂಬಿದ್ದು ಯದುವಂಶಸ್ಥ ಒಡೆಯರ್ ರಾಜಮನೆತನದವರು ಹಾಗೂ ದೂರದೃಷ್ಟಿ ಹೊಂದಿದ್ದ ದಿವಾನರುಗಳು.
ಮೈಸೂರು ಹೆಸರು ಕೇಳಿದಾಕ್ಷಣ ಸುಗಂಧಭರಿತ ಮೈಸೂರು ಮಲ್ಲಿಗೆ, ಮೈಸೂರು ಸ್ಯಾಂಡಲ್ ಅಂತಹ ಹೆಸರುಗಳೇ ಸುಮಧುರ ನೆನಪುಗಳನ್ನು ಹೊಮ್ಮಿಸಿಬಿಡುತ್ತವೆ. ಅನೇಕರು ಮೈಸೂರು ದಸರಾ ಎಂಬ ಹೆಸರಿಗೆ ಪೂರ್ವಪ್ರತ್ಯಯ ಪದವಾಗಿ ವಿಶ್ವವಿಖ್ಯಾತ ಎಂದು ಬಳಸುತ್ತಾರೆ ಎಂದರೆ ಮೈಸೂರು ದಸರಾಗೆ ಅದರದೆ ಆದ ಗಮ್ಮತ್ತು ಇದೆ ಅಲ್ಲವೇ? ಅಂತಿಮ ದಿನದ ಜಂಬೂಸವಾರಿಯಂತು ಜನಮಾನಸದಿಂದ ಅಳಿಯದೇ ಉಳಿಯುವ ಉತ್ಸವವಾಗಿದೆ.
ರಾಜಮನೆತನದವರ ಆಡಳಿತದಲ್ಲಿ ಆಚರಿಸುತ್ತಿದ್ದ ನವರಾತ್ರಿಯ ದಸರಾ ಮಹೋತ್ಸವಕ್ಕೂ ಇಂದಿನ ರಾಜಕಾರಣಿಗಳ ಆಡಳಿತದಲ್ಲಿ ಏರ್ಪಡಿಸುತ್ತಿರುವ ದಸರಾ ಮಹೋತ್ಸವಕ್ಕೂ ಅಜಗಜಂತರ ವ್ಯತ್ಯಾಸವಿದೆ. ಅರ್ಥಪೂರ್ಣ ಆಚರಣೆಗಿಂತ ಅದ್ಧೂರಿ ಆಚರಣೆಗೆ ಹಾಗೂ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡುತ್ತಿರುವ ಕಾರಣ ನೈಜ ದಸರಾ ಆಚರಣೆಗೆ ಎಲ್ಲೋ ಕುಂದುಂಟಾಗುತ್ತಿದೆ ಎನಿಸುತ್ತಿದೆ. ಸರ್ಕಾರ ಕೋಟಿ ಕೋಟಿ ರೂ. ಅನುದಾನ ಖರ್ಚು ಮಾಡುತ್ತಿದ್ದರೂ ವ್ಯವಸ್ಥಿತವಾಗಿ ಆಚರಿಸುವಲ್ಲಿ ವಿಫಲವಾಗುತ್ತಿದೆ ಎಂಬುದು ಜನರ ಅಭಿಪ್ರಾಯವಾಗಿದೆ. ಜಗತ್ತಿನ ಕಣ್ಣನ್ನು ತನ್ನೆಡೆಗೆ ಸೆಳೆಯುವ ಮೈಸೂರು ದಸರಾವನ್ನು ಸಾಂಪ್ರದಾಯಿಕವಾಗಿ, ಶಿಸ್ತುಬದ್ಧವಾಗಿ, ಅರ್ಥಪೂರ್ಣವಾಗಿ ಹೀಗೆ ಆಚರಿಸಿದರೆ ಸೂಕ್ತ ಎಂಬ ಕುರಿತಾಗಿ ಬೆಳಕು ಚೆಲ್ಲುವ ಪ್ರಯತ್ನವಿದು.
ಪ್ರತಿವರ್ಷ ದಸರಾ ಮುಗಿದ ಮೇಲೆ ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ದಸರಾ ವೈಭವದ ಕುರಿತು ವರದಿ ಪ್ರಸಾರವಾಗುವಂತೆ ಅವ್ಯವಸ್ಥೆ, ಅಸ್ವಚ್ಛತೆ, ಅಶಿಸ್ತು, ನಿಯಮ ಉಲ್ಲಂಘನೆ ಇವುಗಳ ಕುರಿತಾಗಿಯೂ ಹೆಚ್ಚಿನ ವರದಿ ಪ್ರಸಾರವಾಗುತ್ತವೆ. ಈ ಬಾರಿ ದಸರಾದಲ್ಲಿ ಟಿಕೆಟ್/ಪಾಸ್ ಇದ್ದವರು ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಿಸಲು ಸಾಧ್ಯವಾಗದೇ ಇದ್ದುದು, ಸಂವಹನ ಕೊರತೆಯಿಂದ ಜಟ್ಟಿಕಾಳಗ ನಡೆಯದೇ ಹೋದದ್ದು, ನಂದಿಧ್ವಜ ಪೂಜೆಗೆ ತೆರಳುತ್ತಿದ್ದ ಸಚಿವರನ್ನು ಶಿಷ್ಟಾಚಾರದ ಹೆಸರಿನಲ್ಲಿ ತಡೆದದ್ದು, ಅನೇಕ ಕಡೆ ಅವ್ಯವಸ್ಥೆ ಕಂಡುಬಂದಿದ್ದು…..ಹೀಗೆ ಅನೇಕ ವಿಚಾರಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಜಿಲ್ಲಾಡಳಿತವು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ದಸರಾ ಪೂರ್ವಭಾವಿ ಸಭೆಗಳನ್ನು ಏರ್ಪಡಿಸುವಂತೆ ದಸರಾ ಆದ ಮೇಲೆ ಪರಾಮರ್ಶನ ಸಭೆಯನ್ನು ಏರ್ಪಡಿಸಿದಲ್ಲಿ ಮುಂದಿನ ವರ್ಷಗಳಲ್ಲಿ ದಸರಾ ಉತ್ಸವ ಆಚರಣೆಗೆ ಆ ಸಭೆಗಳು ದಿಕ್ಸೂಚಿಯಾಗುತ್ತವೆ.
ದಸರಾ ಮಹೋತ್ಸವ ಯಶಸ್ವಿಯಾಗಲು ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಅಷ್ಟೇ ಅಲ್ಲ ಸಂಘ-ಸಂಸ್ಥೆಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸ ಬೇಕಾಗುತ್ತದೆ. ಅನೇಕ ಇಲಾಖೆಗಳ ನೂರಾರು ಅಧಿಕಾರಿಗಳು ಹಾಗೂ ಸಾವಿರಾರು ಸಿಬ್ಬಂದಿ ದಸರಾ ಮಹೋತ್ಸವಕ್ಕೆ ನಿಯೋಜನೆಗೊಂಡಿರುತ್ತಾರೆ. ಎಲ್ಲರೂ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿತು, ಇದೊಂದು ನಾಡಹಬ್ಬ, ಇಡೀ ರಾಜ್ಯಕ್ಕೆ ಕೀರ್ತಿಯನ್ನು ತರುವಂತಹ ಉತ್ಸವ, ಅದಕ್ಕಾಗಿ ನಮ್ಮ ಶಕ್ತಿಮೀರಿ ತೊಡಗಿಸಿಕೊಂಡು ಯಶಸ್ವಿಗೊಳಿಸೋಣ ಎಂದು ಭಾವಿಸಿದರೆ ದಸರಾ ಮಹೋತ್ಸವವು ಯಾವುದೇ ನ್ಯೂನತೆ ಇಲ್ಲದೆ ವ್ಯವಸ್ಥಿತವಾಗಿ ನಡೆಯುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅನೇಕ ನಿಯೋಜಿತ ಸಿಬ್ಬಂದಿಗೆ ನಾನೊಬ್ಬ ಮಾಡಿದರೆ ಎಲ್ಲೋ ಸರಿಹೋಗಿಬಿಡುತ್ತದೆಯೇ ಎಂಬ ಬೇಜವಾಬ್ದಾರಿಯಿಂದ ಮೈಮರೆಯುವ ಕಾರಣ ಅವ್ಯವಸ್ಥೆ ತಾಂಡವವಾಡುತ್ತದೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ೪೫ ದಿನಗಳ ಕಾಲ ನಡೆದ ಮಹಾಕುಂಭ ಮೇಳದಲ್ಲಿ ೬೬ ಕೋಟಿ ಜನ ಭಾಗವಹಿಸಿದ್ದರು. ಅಲ್ಲಿ ಅನೇಕ ಪೂರ್ವಸಿದ್ಧತೆಗಳೊಂದಿಗೆ ಸೂಕ್ತ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿತ್ತು. ದಸರಾ ಮಹೋತ್ಸವಕ್ಕೆ ಕೋಟಿ ಲೆಕ್ಕದಲ್ಲಿ ಜನ ಬರದೇ ಇದ್ದರೂ ಬರುವ ಲಕ್ಷಾಂತರ ಜನರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದು ಕಷ್ಟ ಸಾಧ್ಯವೇನಲ್ಲ. ಪ್ರತಿವರ್ಷ ದಸರಾ ಮಹೋತ್ಸವ ಅನೇಕ ವಿಶೇಷತೆಗಳಿಂದ ಕೂಡಿರುತ್ತದೆ. ಜೊತೆಗೆ ಅನೇಕ ವಿವಾದಗಳಿಂದಲೂ ಕೂಡಿರುತ್ತದೆ. ಜಿಲ್ಲಾಡಳಿತಕ್ಕೆ ವಿಶೇಷ ಇಚ್ಛಾಶಕ್ತಿ ಇದ್ದರೆ ಅಮೋಘವಾದ ವ್ಯವಸ್ಥೆಯನ್ನು ಕಲ್ಪಿಸಿ, ಬೇರೆ ರಾಜ್ಯದಲ್ಲಿ ಏರ್ಪಡಿಸುವ ಉತ್ಸವಗಳ ಅಧಿಕಾರಿಗಳು ಇಲ್ಲಿಗೆ ಬಂದು ಅಧ್ಯಯನ ಮಾಡಿಕೊಂಡು ಹೋಗುವಂತೆ ಮಾಡಬಹುದು. ಇದಕ್ಕೆ ಆಡಳಿತ ಸಿಬ್ಬಂದಿಯಲ್ಲಿ ಭಾಗವಹಿಸುವ ಸಾರ್ವಜನಿಕರೂ ಸಹಕರಿಸಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದಕ್ಕಾಗಿ ಕೆಲವು ಮಾರ್ಗಸೂಚಿ ಸಲಹೆಗಳನ್ನು ಪಟ್ಟಿ ಮಾಡುವ ಪ್ರಯತ್ನ ಇಲ್ಲಿದೆ.
ಮೈಸೂರಿಗೆ ಸ್ವಚ್ಛ ನಗರಿ ಎಂಬ ಗರಿ ಬಹಳ ಕಾಲದಿಂದ ಇದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದು ಎಂದು ಅರಿಯಬೇಕು. ಅನೇಕ ಸ್ವಯಂಸೇವಾ ಸಂಸ್ಥೆ ಹಾಗೂ ಸಂಘಗಳು ಇದಕ್ಕೆ ಕೈಜೋಡಿಸುತ್ತವೆ. ಇಂತಹ ಸಂಘಗಳನ್ನು ಗುರುತಿಸಿ ಜಿಲ್ಲಾಡಳಿತ ಅವರ ಸೇವೆಯನ್ನು ಪಡೆಯಬಹುದು.
ಸ್ವಚ್ಛತೆಗೆ ಸಂಬಂಧಿಸಿದ ಕ್ರಮಗಳು
* ದಸರಾ ಕಾರ್ಯಕ್ರಮ ನಡೆಯುವ ಎ ಸ್ಥಳಗಳಲ್ಲಿ ಅಗತ್ಯ ಸಂಖ್ಯೆಯ ಕಸದಬುಟ್ಟಿಗಳನ್ನು ಇರಿಸಬೇಕು.
* ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಚೆಲ್ಲದೆ ಕಸದ ಬುಟ್ಟಿಯ ಹಾಕಬೇಕು. ಕಸ ಎಸೆಯುವವರಿಗೆ ದಂಡ ವಿಽಸುವ ವ್ಯವಸ್ಥೆ ಜರಿಗೊಳ್ಳಬೇಕು.
* ಪ್ರತಿ ಕಾರ್ಯಕ್ರಮದ ನಂತರ ತಕ್ಷಣವೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು.
* ಆಹಾರಮೇಳದ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ವಿಶೇಷ ತಂಡ ನಿಯೋಜಿಸಬೇಕು.
ಸಂಚಾರಿ ಮತ್ತು ವಾಹನಗಳ ಶಿಸ್ತು:
* ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಮಾರ್ಗಸೂಚಿ ನಿಗದಿಪಡಿಸಿ, ಪಾರ್ಕಿಂಗ್ ಸ್ಥಳಗಳ ಕುರಿತು ಬೋರ್ಡ್ಗಳನ್ನು ಅಳವಡಿಸುವ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸಿಗುವಂತೆ ಪ್ರಸಾರ ಮಾಡಬೇಕು.
* ಅಗತ್ಯವಿರುವ ಕಡೆ ಖಾಸಗಿ ವಾಹನ ನಿಯಂತ್ರಿಸಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಿಸಬೇಕು.ಪಾದಚಾರಿಗಳಿಗೆ ಪ್ರತ್ಯೇಕ ಸುರಕ್ಷಿತ ಮಾರ್ಗ
ಆಹಾರ ಮೇಳದಲ್ಲಿ ನಿಯಂತ್ರಣ:
* ಆಹಾರ ಮಳಿಗೆಗಳಿಗೆ ಸೂಕ್ತ ಪರವಾನಗಿ ಕಡ್ಡಾಯಗೊಳಿಸಬೇಕು.
* ಆಹಾರದ ಗುಣಮಟ್ಟ ಮತ್ತು ಶುಚಿತ್ವವನ್ನು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಪರಿಶೀಲಿಸಬೇಕು.
* ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕಸದಬುಟ್ಟಿ ವ್ಯವಸ್ಥೆ ಸರಿಯಿರಬೇಕು.
* ವ್ಯಾಪಾರಿಗಳು ಹಾಗೂ ಮಳಿಗೆ ಸಿಬ್ಬಂದಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು.
ಪ್ರವಾಸಿಗರಿಗೆ ಅಗತ್ಯ ಸೌಲಭ್ಯ:
* ಪ್ರವಾಸಿಗರಿಗೆ ಮೈಸೂರು ದಸರಾ ಕುರಿತು ಅಗತ್ಯ ಮಾಹಿತಿ ಒದಗಿಸಲು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿ, ಸ್ವಯಂಸೇವಕರನ್ನು ನಿಯೋಜಿಸಬೇಕು.
* ಕನ್ನಡ, ಇಂಗ್ಲಿಷ್ ಹಾಗು ಹಿಂದಿ ಭಾಷೆಗಳಲ್ಲಿ ಮಾಹಿತಿ ನೀಡಬೇಕು.
* ಪ್ರವಾಸಿಗರಿಗೆ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಿಸ್ತು
* ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ಪ್ರಾರಂಭವಾಗಿ ಮುಕ್ತಾಯಗೊಳ್ಳಬೇಕು.
* ಕಲಾವಿದರಿಗೆ ಹಾಗೂ ಗಣ್ಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
* ಸ್ಥಳೀಯ ಕಲೆ, ಸಾಹಿತ್ಯ, ಸಂಗೀತ ಹಾಗೂ ಜನಪದ ಸಂಸ್ಕೃತಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.
* ಕಾರ್ಯಕ್ರಮಗಳ ಗುಣಮಟ್ಟ ಹಾಗೂ ಸಾಂಸ್ಕೃತಿಕ ಮೌಲ್ಯಕ್ಕೆ ಆದ್ಯತೆ ನೀಡಬೇಕು.
* ಆಡಳಿತಾತ್ಮಕ ಹೊಣೆಗಾರಿಕೆ ಹಾಗೂ ಸಾರ್ವಜನಿಕ ಸಹಭಾಗಿತ್ವ
* ಪ್ರತಿ ವಿಭಾಗಕ್ಕೂ ಜವಾಬ್ದಾರಿಯುತ ಅಧಿಕಾರಿಯನ್ನು ನಿಯೋಜಿಸಬೇಕು.
? ಸ್ವಚ್ಛತೆ, ಸಂಚಾರ, ಸುರಕ್ಷತೆ ಹಾಗೂ ಆರೋಗ್ಯ ವಿಭಾಗಗಳ ನಡುವೆ ಸಮನ್ವಯ ಇರಬೇಕು.
* ಸಾರ್ವಜನಿಕರಿಂದ ದೂರು ಸ್ವೀಕರಿಸಲು ಸಹಾಯವಾಣಿ ಹಾಗೂ ಡಿಜಿಟಲ್ ದೂರು ವ್ಯವಸ್ಥೆ ಕಲ್ಪಿಸಬೇಕು.
* ಪ್ರತಿದಿನದ ಕಾರ್ಯನಿರ್ವಹಣೆಯ ಕುರಿತು ಪರಿಶೀಲನಾ ಸಭೆ ನಡೆಸಬೇಕು.
ವಿನೂತನ ಸಲಹೆಗಳು:
* ಕ್ಯೂಆರ್ ಕೋಡ್ ಆಧಾರಿತ ದೂರು ವ್ಯವಸ್ಥೆ
* ಕಸ, ಸಂಚಾರ ಸಮಸ್ಯೆ ಅಥವಾ ಅವ್ಯವಸ್ಥೆಯನ್ನು ಫೋಟೋ ಸಹಿತ ಅಧಿಕಾರಿಗಳಿಗೆ ಕಳುಹಿಸುವ ವ್ಯವಸ್ಥೆ ಸ್ವಚ್ಛ ದಸರಾ ಸ್ಪರ್ಧೆ
* ಅತ್ಯಂತ ಸ್ವಚ್ಛ ಮಳಿಗೆ ಹಾಗೂ ಉತ್ತಮ ಸ್ವಯಂ ಸೇವಕ ತಂಡಗಳಿಗೆ ಬಹುಮಾನ
* ಸ್ವಚ್ಛ ದಸರಾ ರಾಯಭಾರಿಗಳು: ಗಣ್ಯರು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳ ಮೂಲಕ ಸಾರ್ವಜನಿಕ ಜಾಗೃತಿ
* ಮೈಸೂರು ದಸರಾ ಕೇವಲ ಒಂದು ಉತ್ಸವವಲ್ಲ, ಅದು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ವೈಭವ ಹಾಗೂ ಆತಿಥ್ಯಕ್ಕೆ ಜಗತ್ತಿನ ಮುಂದೆ ಹಿಡಿದ ಕನ್ನಡಿ.
ಜನಸಂದಣಿ ನಿಯಂತ್ರಣ ಮತ್ತು ಸುರಕ್ಷತೆ:
* ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರ ನಿಗಾ ವಹಿಸಬೇಕು.
* ಜನಸಂದಣಿಗೆ ಅನುಗುಣವಾಗಿ ಸಿಬ್ಬಂದಿ ನಿಯೋಜಿಸಬೇಕು.
* ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ನೆರವು ವ್ಯವಸ್ಥೆ ಮಾಡಬೇಕು.
* ಅಗತ್ಯ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ ಇರಬೇಕು.




