ಕೇಶವ್ ಎಂ.
ಮೀನುಗಾರಿಕೆಯನ್ನೇ ನಂಬಿರುವ ಕುಟುಂಬಗಳು ಕಂಗಾಲು
ಮೈಸೂರು: ಜಿಲ್ಲೆಯ ತಾಲ್ಲೂಕುವಾರು ೫೦೦ಕ್ಕೂ ಹೆಚ್ಚು ಮಳೆಯಾಶ್ರಿತ ಕೆರೆಗಳು ಹಾಗೂ ನೀರಾವರಿ ಆಶ್ರಿತ ಕೆರೆಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಮೀನು ಉತ್ಪಾದನೆ ಹಾಗೂ ಮೀನು ಮರಿಗಳ ಬಿತ್ತನೆಗೆ ಹೊಡೆತ ಬಿದ್ದಿದೆ. ಇದರಿಂದ ಮೀನುಗಾರಿಕೆಯನ್ನೇ ನಂಬಿರುವ ಕುಟುಂಬಗಳು ಕಂಗಾಲಾಗಿವೆ.
ಮಳೆ ಅಭಾವದಿಂದ ಕೃಷಿ ಚಟುವಟಿಕೆಗೆ ಹೊಡೆತ ಬಿದ್ದಂತೆ ಮೀನುಗಾರಿಕೆಯ ಮೇಲೂ ಹೊಡೆತ ಬಿದ್ದಿದೆ. ಮಳೆ ಅಭಾವದಿಂದ ಜಿಲ್ಲೆಯ ಅನೇಕ ಮಳೆಯಾಶ್ರಿತ ಕೆರೆಗಳಲ್ಲಿ ನೀರು ಬತ್ತಿ ಹೋಗಿದೆ. ಅಲ್ಲದೇ, ದೊಡ್ಡ ಕೆರೆಗಳಲ್ಲಿ ನೀರು ತಳಮಟ್ಟ ಸೇರುತ್ತಿದೆ.
ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ೩೦೦ ಹೆಕ್ಟೇರ್ ಪ್ರದೇಶ ಹೊಂದಿರುವ ಹೈರಿಗೆ ಕೆರೆಯಲ್ಲಿಯೇ ನೀರು ತಳಮಟ್ಟ ಸೇರಿದೆ. ಚಳಿಗಾಲದಲ್ಲಿ ಮೀನು ಬಿತ್ತನೆ ಮಾಡಿದರೆ, ಅವುಗಳು ದಪ್ಪ ಆಗುವುದಿಲ್ಲ. ಅಲ್ಲದೇ, ನವೆಂಬರ್ನಲ್ಲಿ ಕೆಲವೆಡೆ ಮೀನು ಮರಿಗಳು ಬಿತ್ತನೆಗೂ ಸಿಗುವುದಿಲ್ಲ. ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಕೆರೆಗಳಲ್ಲಿ ನೀರು ಮತ್ತಷ್ಟು ಕಡಿಮೆಯಾಗಲಿದೆ. ಈ ಬಾರಿಯ ಮಳೆ ಅಭಾವದಿಂದ ಮೀನುಗಾರಿಕೆಗೆ ಬಹಳ ಹಿನ್ನಡೆಯಾಗಿದೆ.
ಮೀನುಗಾರಿಕೆ ಇಲಾಖೆ ಮಾಹಿತಿಯ ಪ್ರಕಾರ ಮೈಸೂರಿನಾ ದ್ಯಂತ ೬೧.೧೯ ಲಕ್ಷ ಮೀನು ಮರಿಗಳು(ಏಪ್ರಿಲ್ನಿಂದ ಅಕ್ಟೋಬರ್ವರೆಗೆ) ಬಿತ್ತನೆಯಾಗಿದ್ದು, ಇದರಿಂದ ಮೀನುಗಾರಿಕೆ ಇಲಾಖೆ ನೀಡಿರುವ ಗುತ್ತಿಗೆ ಹಾಗೂ ಟೆಂಡರ್ ಕೆರೆಗಳಲ್ಲಿ ಮೀನು ಇಳುವರಿ ಕಡಿಮೆಯಾಗಿದ್ದು, ಮೀನುಗಾರಿಕೆಯನ್ನು ನಂಬಿರುವ ಕುಟುಂಬಗಳಿಗೆ ಆತಂಕ ಎದುರಾಗಿದೆ. ಮೀನುಗಾರಿಕೆ ಇಲಾಖೆಯು ೯೯ ಕೆರೆಗಳನ್ನು ನಿರ್ವಹಣೆ ಮಾಡುತ್ತಿದೆ. ಉಳಿದ ಕೆರೆಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.
ಮೀನುಗಾರಿಕೆ ಇಲಾಖೆ ವತಿಯಿಂದ ನಡೆಸುತ್ತಿರುವ ೯೯ ಕೆರೆಗಳಲ್ಲಿ ೨೦೨೫-೨೬ರಲ್ಲಿ ೧,೮೪೧ ಮೆಟ್ರಿಕ್ ಟನ್ ಮೀನು ಉತ್ಪಾದನೆಯಾದರೆ, ೨೦೨೬-೨೭ರಲ್ಲಿ ೨,೧೨೧ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ೨೦೨೫-೨೬ರಲ್ಲಿ ೧.೪೮ ಕೋಟಿ ಮೀನು ಮರಿಗಳನ್ನು ಬಿತ್ತನೆ ಮಾಡಿದರೆ, ೨೦೨೬-೨೭ಕ್ಕೆ ೬೧.೧೯(ಏಪ್ರಿಲ್ನಿಂದಅಕ್ಟೋಬರ್ವರೆಗೆ) ಲಕ್ಷ ಮೀನಿನ ಮರಿಗಳ ಬಿತ್ತನೆ ಮಾಡಲಾಗಿದೆ. ೯೯ ಕೆರೆಗಳ ಪೈಕಿ ೮೫ ಕೆರೆಗಳಲ್ಲಿ ಮೀನುಗಳ ವಿಲೇವಾರಿಯಾಗಿದ್ದು, ೧೪ ಕೆರೆಗಳು ನೀರಿಲ್ಲದೇ ಒಣಗಿ ಹೋಗಿದೆ.
ಮೀನುಗಾರಿಕೆಯನ್ನು ನಂಬಿ ೧೧,೫೪೯ ಕುಟುಂಬಗಳು ಜೀವನ ನಡೆಸುತ್ತಿವೆ. ಅಲ್ಲದೇ, ಮೀನುಗಾರರ ಇಲಾಖೆಯಲ್ಲಿ ೪೫,೫೫೯ ಮಂದಿ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ನೋಂದಣಿ ಮಾಡಿ ಅಕೊಂಡಿದ್ದಾರೆ.
ಕೆರೆಗಳ ಜಲ ವಿಸ್ತೀರ್ಣದ ಮೇಲೆ ಒಂದು ಹೆಕ್ಟೇರ್ ಪ್ರದೇಶಕ್ಕೆ ೫೦ ಸಾವಿರದಿಂದ ೩ ಲಕ್ಷದವರೆಗೆ ಮೀನಿನ ಮರಿಗಳ ಬಿತ್ತನೆ ಕಾರ್ಯ ನಡೆಯಲಿದೆ. ಮೀನುಗಾರಿಕೆ ಇಲಾಖೆ ಅಽನದಲ್ಲಿರುವ ಕೆರೆಗಳಲ್ಲಿ ಬರದಿಂದ ಮೀನು ಮರಿ ಬಿತ್ತನೆ ಕುಂಠಿತವಾಗಿದ್ದು, ಮುಂದಿನ ವರ್ಷ ಮೀನು ಉತ್ಪಾದನೆ ಕಡಿಮೆಯಾಗಲಿದೆ. ಕಳೆದ ವರ್ಷ ಬಿಟ್ಟಿರುವ ಮೀನನ್ನು ಮೀನುಗಾರರು ಹಿಡುವಳಿ ಮಾಡಿಕೊಳ್ಳುತ್ತಾರೆ. ಗೌರಿ ಮೀನು(ಸಾಮಾನ್ಯ ಗೆಂಡೆ) ಕಡಿಮೆ ನೀರು ಇದ್ದಾಗಲೂ ಸಾಕಾಣಿಕೆ ಮಾಡಲು ಅನುಕೂಲವಾಗಲಿದೆ. ನೀರು ಕಡಿಮೆ ಇದ್ದರೂ ಉತ್ಪಾದನೆಯಾಗಲಿದೆ. ಕಾಂಟ್ಲಾ, ಅರೋಹ ಸೇರಿದಂತೆ ಇತರೆ ಮೀನುಗಳ ಸಾಕಾಣಿಕೆನೀರಿನ ಪ್ರಮಾಣ ಜಾಸ್ತಿ ಬೇಕಾಗುತ್ತದೆ. ಬರದ ಹಿನ್ನೆಲೆಯಲ್ಲಿ ಮೀನಿನ ಬೆಲೆಯೂ ಕೂಡ ಹೆಚ್ಚಳವಾಗಿದೆ.
” ೯೯ ಕೆರೆಗಳಲ್ಲಿ ೨೦೨೫-೨೬ರಲ್ಲಿ ೪೦ ಗುತ್ತಿಗೆ, ೫೦ ಟೆಂಡರ್, ೨೦೨೬-೨೭ರಲ್ಲಿ ೩೮ ಗುತ್ತಿಗೆ , ೪೭ ಕರೆಗಳಿಗೆ ಟೆಂಡರ್ಕರೆಯಲಾಗಿತ್ತು. ಅಲ್ಲದೇ, ಮೀನು ಉತ್ಪಾದನೆಯು ೨೦೨೫-೨೬ರಲ್ಲಿ ೧,೮೪೨ ಮೆಟ್ರಿಕ್ ಟನ್, ೨೦೨೬-೨೭ರಲ್ಲಿ ೨,೧೨೧ ಮೆಟ್ರಿಕ್ ಟನ್ ಆಗಿದೆ. ಮೀನು ಮರಿ ಬಿತ್ತನೆಯಲ್ಲಿ ೨೦೨೫-೨೬ರಲ್ಲಿ ೧.೪೮ ಕೋಟಿ, ೨೦೨೬-೨೭ರಲ್ಲಿ ೬೧.೧೯ ಲಕ್ಷ ಮೀನು ಮರಿಗಳ ಬಿತ್ತನೆ ಮಾಡಲಾಗಿದೆ.”
” ಬರಗಾಲದಿಂದ ಮೀನು ಮರಿಗಳ ಬಿತ್ತನೆ ಕುಂಠಿತವಾಗಲಿದೆ. ಇದರಿಂದ ಮೀನು ಹಿಡುವಳಿಯಲ್ಲಿ ಕಡಿಮೆಯಾಗಲಿದೆ. ಕಳೆದ ವರ್ಷ ಬಿಟ್ಟಿರುವ ಮೀನನ್ನು ಹಿಡುವಳಿ ಮಾಡಿಕೊಳ್ಳುತ್ತಾರೆ. ಬರದಿಂದ ಮುಂದಿನ ವರ್ಷವೂ ವ್ಯತಿರಿಕ್ತ ಪರಿಣಾಮ ಬೀರಲಿದೆ.”
ಜಿ.ಎಚ್.ಮಂಜುನಾಥ್, ಉಪ ನಿರ್ದೇಶಕ, ಮೀನುಗಾರಿಕೆ ಇಲಾಖೆ
” ಸಾಲ ಮಾಡಿ ಮೀನುಗಾರಿಕೆ ಮಾಡಲು ಕೆರೆಗೆ ಇಂತಿಷ್ಟು ದುಡ್ಡು ಎಂದು ಗುತ್ತಿಗೆ ಪಡೆಯಲಾಗಿದೆ. ಆದರೆ, ಮಳೆ ಇಲ್ಲದೇ ಕೆರೆಗಳು ಬತ್ತಿ ಹೋಗಿವೆ. ಮೈಸೂರಿನಲ್ಲಿ ಮಳೆ ಆಶ್ರಿತದಲ್ಲಿರುವ ೫೦೦ಕ್ಕೂ ಹೆಚ್ಚುಕೆರೆಗಳಲ್ಲಿ ನೀರು ಇಲ್ಲದೇ ಸಾಕಾಣಿಕೆಗೆ ಕಷ್ಟವಾಗಿದೆ. ಇದರಿಂದ ಸಾವಿರಾರು ಕುಟುಂಬಗಳಿಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ.”
ಭೈರಪ್ಪಗೌಡ, ಮೀನು ಗುತ್ತಿಗೆದಾರ




