ಶುಭಾ ಸಂಜಯ್ ಅರಸ್
ಸಂಸ್ಥಾಪಕಿ ಮತ್ತು ವ್ಯವಸ್ಥಾಪಕಿ,
ಮೈಸೂರು ಸಾಹಿತ್ಯ ಸಂಭ್ರಮ,
ಮೈಸೂರು ಬುಕ್ ಕ್ಲಬ್ಸ್ ಚಾರಿಟೇಬಲ್ ಟ್ರಸ್ಟ್
ನವರಾತ್ರಿಯ ಬೆಳಕು ನಿರಂತರವಾಗಿರಲಿ
ಮೈಸೂರು ದಸರಾ ಕೇವಲ ಹಬ್ಬವಲ್ಲ, ಅದು ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಹೆಮ್ಮೆಯ ಪ್ರತೀಕ. ನಾನೂರು ವರ್ಷಗಳಿಗೂ ಮೀರಿದ ಪರಂಪರೆ ಹೊಂದಿರುವ ಈ ನಾಡಹಬ್ಬ ಇಂದು ವಿಶ್ವ ಪ್ರಸಿದ್ಧವಾಗಿದೆ. ಆದರೆ ಇಂದು ದಸರಾ ಕೇವಲ ದೀಪಾಲಂಕಾರ, ಜಂಬೂ ಸವಾರಿ ಮತ್ತು ಜನಜಂಗುಳಿಗೆ ಸೀಮಿತವಾಗಿದೆಯೇ? ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ನಮ್ಮ ಊರಿನ ಬೆಳವಣಿಗೆಗೆ ಉತ್ತಮ.
ಇಂದು ದಸರಾ ಎಂದರೆ ಹತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಲಕ್ಷಾಂತರ ಬಲ್ಬಗಳ ಬೆಳಕು, ದಿಬ್ಬದ ಮೇಲೆ ಜನಸಂದಣಿಗಳಿಂದ ತುಂಬಿದೆ. ಆದರೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ, ಸ್ಥಳೀಯ ಕಲಾವಿದರಿಗೆ ವೇದಿಕೆಯ ಅವಕಾಶಗಳು ಕಡಿಮೆಯಾಗಿವೆ ಮತ್ತು ಪರಿಸರದ ಬಗ್ಗೆ ಕಾಳಜಿ ಕ್ಷೀಣಿಸುತ್ತಿದೆ. ದಸರಾ ಹಬ್ಬವನ್ನು ಮತ್ತಷ್ಟು ಸುಂದರಗೊಳಿಸಬೇಕು. ದಸರಾವನ್ನು ಮರೆಯಲಾಗದ ಅನುಭವವಾಗಿಸೋಣ, ಕೇವಲ ಪ್ರದರ್ಶನವಲ್ಲ.
ಸ್ಥಳೀಯರಿಗೆ ಮೊದಲ ಆದ್ಯತೆ: ದಸರಾ ಸಮಯದಲ್ಲಿ ಪ್ರತಿಯೊಂದು ಏರಿಯಾಗಳಲ್ಲಿ ದೊಡ್ಡ ಸಿನಿಮಾ ತಾರೆಯರ ಜೊತೆಗೆ ಮೈಸೂರಿನ ನಮ್ಮ ಜನಪದ ಕಲಾವಿದರು, ದೊಂಬಿದಾಸರು, ಕಂಸಾಳೆ, ವೀರಗಾಸೆ, ನಮ್ಮೂರಿನ ಮಕ್ಕಳ ಬ್ಯಾಂಡ್ ಗಳನ್ನು ನಿಗದಿತ ಸಮಯದಲ್ಲಿ ಮಾಡಿಸುವುದರಿಂದ, ನಮ್ಮ ಪ್ರತಿಭೆಗಳಿಗೆ ಅವಕಾಶಗಳು ದೊರೆಯುತ್ತದೆ. ನಮ್ಮ ಕಲೆಗಳು- ನಮ್ಮ ಜನರಿಗೆ ಮಕ್ಕಳಿಗೆ ಪರಿಚಯವಾಗುತ್ತದೆ
ಪರಿಸರ ಸ್ನೇಹಿ ದಸರಾ: ಜಂಬೂ ಸವಾರಿಯಲ್ಲಿ ಆನೆಗಳ ಬದಲು ಪರ್ಯಾಯ ಚಿಂತನೆ, ಚರ್ಚೆಗಳ ಮೂಲಕ ನವೀನ ವಿಧಾನವನ್ನು ಪ್ರಾರಂಭ ಮಾಡಬೇಕು. ಪ್ಲಾಸ್ಟಿಕ್ ಮುಕ್ತ ದಸರಾ, ಬಿದಿರಿನಿಂದ ಮಾಡಿದ ಅಲಂಕಾರ, ಎಡೆ ಕುಡಿಯುವ ನೀರಿನ ವ್ಯವಸ್ಥೆ. ಕರಕುಶಲ ನಗರದ ಕಲಾವಿದರಿಂದ ತಯಾರಿಸಿದ ಮಣ್ಣಿನ ಗೊಂಬೆಗಳ ದಸರಾ ಬೊಂಬೆ ಪ್ರದರ್ಶನ ಹೀಗೆ ವೈವಿಧ್ಯಮಯ ಹೊಸ ಆಲೋಚನೆಗಳ ಅವಶ್ಯಕತೆ ಇದೆ.
ಪುಸ್ತಕ ಮತ್ತು ಜ್ಞಾನದ ದಸರಾ: ದಸರಾ ಕೇವಲ ನೃತ್ಯ ಸಂಗೀತವಲ್ಲ. ಯಾವುದಾದರೂ ಪ್ರಮುಖ ಆವರಣದಲ್ಲಿ ‘ಮೈಸೂರು ಪುಸ್ತಕ ಹಬ್ಬ’ – ಹಳೆಯ ಮೈಸೂರಿನ ಕುರಿತ ಪುಸ್ತಕಗಳ ಪ್ರದರ್ಶನ, ಲೇಖಕರೊಂದಿಗೆ ಸಂವಾದ, ಪುಸ್ತಕದ ಪ್ರಕಾಶಕರು, ಲೇಖಕರು, ಭಾಷಾಂತರಕಾರರು, ಓದುಗರ ಮಧ್ಯ ಆರೋಗ್ಯಕರ ಗೋಷ್ಠಿಗಳು ಇವೆಲ್ಲವನ್ನೂ ನಡೆಸಬೇಕು. ಮುಖ್ಯವಾಗಿ ಮಕ್ಕಳಿಗಾಗಿ ಮಾಡಿದರೆ ಇನ್ನು ಉತ್ತಮ.
ಡಿಜಿಟಲ್ ಮತ್ತು ಸ್ಮಾರ್ಟ್ ದಸರಾ: ಒಂದು ‘ಮೈಸೂರು ದಸರಾ ಆಪ್’- ಎಲ್ಲ ಕಾರ್ಯಕ್ರಮಗಳ ಲೈವ್ ಮಾಹಿತಿ, ಪಾರ್ಕಿಂಗ್ ಸ್ಥಳ, ಶೌಚಾಲಯ, ಕುಡಿಯುವ ನೀರು, ಕಳೆದುಹೋದ ಮಕ್ಕಳ ಸಹಾಯವಾಣಿಗಳನ್ನು ಒದಗಿಸಬೇಕು. ಪ್ರತಿ ಸ್ಥಳದಲ್ಲಿ ಕ್ಯೂಆರ್ ಕೋಡ್ ಮೂಲಕ ಆ ಸ್ಥಳದ ಇತಿಹಾಸ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ದೊರೆಯುವಂತಿರಬೇಕು
ಕರಕುಶಲ ಮೇಳಕ್ಕೆ ಹೊಸ ರೂಪ: ಮೈಸೂರು ವೀಳ್ಯದೆಲೆಯ ಬೀಡಾಗಳು, ನಂಜನಗೂಡು ಬಾಳೆಹಣ್ಣಿನ ನಿಜವಾದ ರುಚಿಯನ್ನು ಒದಗಿಸಬೇಕು. ಕುಂಬಾರರು, ಗೊಂಬೆ ಮಾಡುವವರು ತಮ್ಮ ಕೈಯಾರೆ ಮಾಡುವುದನ್ನು ಜನರ ಮುಂದೆಯೇ ತೋರಿಸಬೇಕು.
ದಸರಾ ನಂತರವೂ ಉಳಿಯುವಂತಿರಲಿ: ೧೦ ದಿನ ಮುಗಿದರೆ ದಸರಾ ಮುಗಿಯಬಾರದು. ವರ್ಷವಿಡೀ ‘ದಸರಾ ಮ್ಯೂಸಿಯಂ’ ಮತ್ತು ದಸರಾ ನೆನಪಿನ ಅಂಚೆ ಚೀಟಿ, ಪುಸ್ತಕಗಳು ಪ್ರವಾಸಿಗರಿಗೆ ಲಭ್ಯವಿರಬೇಕು. ಇದಕ್ಕೆ ಮೈಸೂರಿನಲ್ಲಿ ನೆಲೆಸಿರುವ, ಅರಿತಿರುವ, ಇಚ್ಛೆ ಇರುವವರನ್ನು ಗುರುತಿಸಿ ಅವರಿಗೆ ಜವಾಬ್ದಾರಿಯನ್ನು ಕೊಡಬೇಕು- ಅವರು ಎಲೆ ಮರೆಯ ಕಾಯಂತಿರುವಂತಹವರನ್ನು ಹುಡುಕಿ ಅವರಿಗೆ ಅವಕಾಶ ಕಲ್ಪಿಸಬೇಕು. ಮಕ್ಕಳಿಗಾಗಿ ಹೆಚ್ಚು ಕಾರ್ಯಕ್ರಮಗಳನ್ನು ಶಾಲೆಯಲ್ಲಿ/ ಆಯಾ ಏರಿಯಾಗಳಲ್ಲಿ ನಡೆಸಿದರೆ ಇನ್ನೂ ಉತ್ತಮ. ಸ್ಥಳೀಯ ಮತ್ತು ಗ್ರಾಮಾಂತರ ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ, ಪ್ರದರ್ಶನಗಳನ್ನು ರೂಪಿಸಬಹುದು.
ಕೊನೆಯ ಮಾತು: ಮೈಸೂರು ದಸರಾ ನಮ್ಮದು. ಅದನ್ನು ಕೇವಲ ಸರ್ಕಾರದ ಹಬ್ಬವಾಗಿಸದೆ, ಜನರ ಹಬ್ಬವಾಗಿಸಬೇಕು. ನಮ್ಮ ಮಕ್ಕಳು ಹೆಮ್ಮೆಯಿಂದ ಇದು ನಮ್ಮ ದಸರಾ ಎಂದು ಹೇಳುವಂತಾಗಬೇಕು. ಆಗ ಮಾತ್ರ ದಸರಾ ನಿಜವಾದ ಅರ್ಥದಲ್ಲಿ ವಿಶ್ವ ವಿಖ್ಯಾತವಾಗುತ್ತದೆ.
“೧೦ ದಿನ ಮುಗಿದರೆ ದಸರಾ ಮುಗಿಯಬಾರದು. ವರ್ಷವಿಡೀ ‘ದಸರಾ ಮ್ಯೂಸಿಯಂ’ ಮತ್ತು ದಸರಾ ನೆನಪಿನ ಅಂಚೆ ಚೀಟಿ, ಪುಸ್ತಕಗಳು ಪ್ರವಾಸಿಗರಿಗೆ ಲಭ್ಯವಿರಬೇಕು. ಇದಕ್ಕೆ ಮೈಸೂರಿನಲ್ಲಿ ನೆಲೆಸಿರುವ, ಅರಿತಿರುವ, ಇಚ್ಛೆ ಇರುವವರನ್ನು ಗುರುತಿಸಿ ಅವರಿಗೆ ಜವಾಬ್ದಾರಿಯನ್ನು ಕೊಡಬೇಕು.”




