ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ತನ್ನದೇ ಆದ ವಿಶಿಷ್ಟ ಪರಂಪರೆ ಹೊಂದಿದೆ. ಅಂದಿನ ಮಹಾರಾಜರು ಜನಸಾಮಾನ್ಯರಿಗಾಗಿ ದಸರಾ ಆರಂಭ ಮಾಡಿದರು ಎಂಬುದು ಜನಜನಿತ. ಇದಕ್ಕೆ ವ್ಯತಿರಿಕ್ತವಾಗಿ ಈಗಿನ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ . ದಸರಾದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ಮುಂಭಾಗದಲ್ಲಿ ಜನಪ್ರತಿನಿಧಿಗಳ ಕಡೆಯವರು ಮತ್ತು ಅಧಿಕಾರಿಗಳದ್ದೇ ದರ್ಬಾರು.
ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಭದ್ರತಾ ದೃಷ್ಟಿಯಿಂದ ಶ್ರಮಿಸಿದ ಪೊಲೀಸರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಆದರೆ ಕೆಲವು ಕಡೆ ಅವಶ್ಯಕತೆಗಿಂತಲೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿ ಸಾರ್ವಜನಿಕರ ಸ್ಥಳಗಳಲ್ಲಿ ಸಾಮಾನ್ಯ ಜನರ ಮುಕ್ತ ಸಂಚಾರಕ್ಕೆ ಅಡಚಣೆ ಮಾಡಿದ್ದು ಸರಿಯಲ್ಲ. ಕಳೆದ ಎರಡು ವರ್ಷಗಳಿಂದ ಜಂಬೂ ಸವಾರಿ ವೀಕ್ಷಣೆಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ವಿಐಪಿ ಪಾಸ್ ಗಳ ಹಂಚಿಕೆ ಮಾಡಿದ ಪರಿಣಾಮ ಹಣ ಕೊಟ್ಟು ಪಾಸ್ ಪಡೆದ ಅನೇಕರು ಹೊರಗೆ ನಿಂತು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದರು.
ಹಾಗಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಇಂತಹ ಪ್ರಮಾದಗಳಿಗೆ ಅವಕಾಶ ನೀಡದೆ ವ್ಯವಸ್ಥಿತ ರೀತಿಯಲ್ಲಿ ಜನಸಾಮಾನ್ಯರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಬಂದವರು ಅತೃಪ್ತರಾಗದಂತೆ, ಪಾಸ್ ಪಡೆದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ದಸರಾ ಹಬ್ಬವನ್ನು ಆಚರಣೆ ಮಾಡಬೇಕಿದೆ.
-ಎಂ.ಪಿ. ದರ್ಶನ್ ಚಂದ್ರ, ಮುಕ್ಕಡಹಳ್ಳಿ




