ಗುರುಪ್ರಸಾದ್ ಕಂಟಲಗೆರೆ
ನಾನೂ ಒಂದು ಸಾಹಿತ್ಯ ಹಬ್ಬಕ್ಕೆ ಹೋಗಿದ್ದೆ. ‘ಸಾಹಿತ್ಯ ಹಬ್ಬ’ ಎನ್ನುವುದು ಇವತ್ತಿಗೆ ಕನೆಕ್ಟ್ ಆಗುತ್ತೆ ಎನ್ನುವುದಾದರೆ ‘ಲಿಟರರಿ ಫೆಸ್ಟ್’ ಎಂದು ಇಂಗ್ಲಿಷ್ನಲ್ಲಿ ಕರೆದುಕೊಳ್ಳು ವುದು ಒಳಿತು. ಆ ಲಿಟರೆರಿ ಫೆಸ್ಟ್ ತುಂಬಾ ಐಶಾರಾಮಿಯಾದುದು. ಜಾಗತಿಕವಾಗಿ ಗಮನ ಸೆಳೆದಿರುವಂಥದ್ದು. ಅದರ ಹಿಂದಿನ ವರ್ಷ ಅಲ್ಲಿಗೆ ಹೋದವರು ತಮ್ಮ ತಮ್ಮದೇ ಗುಂಪಿನ ಫೋಟೊ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಕೊಂಡಾಗ ‘ಅವರಿಗಿಂತ ನಾನ್ಯಾವುದರಲ್ಲಿ ಕಮ್ಮಿ’ ಎಂದು ಸಣ್ಣ ಜಲಸ್ ಕೂಡ ಆಗಿತ್ತು. ಮುಂದು ವರಿದು ಇದೆಲ್ಲ ಬರೀ ಅಂತ ವರ್ಗದವರಿಗಷ್ಟೇ ಸೀಮಿತ, ನಮ್ಮಂತಹವರು ಅಂತಹವರ ಕಣ್ಣಿಗೆ ಬೀಳಲು ಸಾಧ್ಯವೇ ಇಲ್ಲ ಎಂದು ‘ಹುಳಿ ದ್ರಾಕ್ಷಿ’ ನಿಲುವಿಗೆ ಬಂದಿದ್ದೆ. ಆದರೆ ಎಂದಾದರೂ ಒಮ್ಮೆ ಇಂತಹ ಐಶಾರಾಮಿ ಸಾಹಿತ್ಯ ಹಬ್ಬಗಳಲ್ಲಿ ಭಾಗವಹಿಸಿ ಅಲ್ಲಿನ ಆತಿಥ್ಯವನ್ನು ಅನುಭವಿಸಬೇಕಲ್ಲ ಎಂಬ ಆಸೆ ಒಳಗೆ ಗುಪ್ತಗಾಮಿನಿಯಾಗಿ ಇದ್ದರೂ ಹೊರಗೆ ವೈರಾಗ್ಯ ತಾಳಿದ್ದೆ.
ಏಕೆಂದರೆ ಫೈವ್ ಸ್ಟಾರ್ ಹೋಟೆಲ್ಗಳಿಗೆ ನಾವಾಗೇ ಹೋಗಿ ಒಂದು ಲೋಟ ಕಾಫಿ ಕುಡಿಯುವುದೂ ದುಬಾರಿ ಎಂದು ಕೇಳಿ ತಿಳಿದಿದ್ದೆ. ಆದರೆ ಈ ಇಂಟರ್ನ್ಯಾಶನಲ್ ಫೆಸ್ಟ್ ನೆಪದಲ್ಲಿ ಎರಡು ದಿನ ತಂಗುವ ಕುಡಿಯುವ ತಿನ್ನುವ ಎಲ್ಲ ಅವಕಾಶ ಉಚಿತವಾಗಿ ಇದೆ ಎಂದ ಮೇಲೆ! ನಾನು ಬರೆದ ಕವಿತೆಗೊ ಕಥೆಗೊ ಮೂಡುವ ಕೋಡಲ್ಲವೆ ಅದು. ಅದರ ಮುಂದಿನ ವರ್ಷ ಅದೇ ವೇದಿಕೆಯಿಂದ ನನಗೂಕರೆ ಬಂದೇ ಬಿಟ್ಟಿತು. ಪಾಪ ನನ್ನಂತೆಯೇ ಬೆಳೆದವರು, ಈಗ ಅಲ್ಲಿ ಪ್ರಭಾವಿ ಸ್ಥಾನದಲ್ಲಿರುವವರು ಅವರಂಥವರನ್ನೇ ಹುಡುಕುತ್ತಿರುತ್ತಾರೇನೊ! ಅವರ ಸಲುವಾಗಿ ನನಗೂ ಒಂದು ಅವಕಾಶ ಒದಗಿ ಬಂದೇ ಬಿಟ್ಟಿತು. ಇದನ್ನು ಅವಕಾಶ ಎನ್ನುವುದೋ ಅಥವಾ ‘ಬಿಡೆಗೆ ಬಸುರಾಗುವುದು’ ಎನ್ನುವುದೋ ಅಥವಾ ‘ಬಸುರಿಗೆ ಬಿಡೆ ನೀಡುವುದು’ ಎನ್ನುವುದೋ ತಿಳಿಯದು. ಬಹುಶಃ ಎರಡರ ಸಮ್ಮಿಶ್ರ ಅಥವಾ ಒಂದೇ ವೇದಿಕೆ; ಎರಡು ಭಿನ್ನ ಅನುಭವಕ್ಕೆ ತುತ್ತಾಗುವುದು ಎನ್ನಬಹುದೇನೊ.
ಈಗಾಗಲೇ ಗುರುತಿಸಿರುವಂತೆ ನಮ್ಮಲ್ಲಿ ಎಡ, ಬಲ, ಮಧ್ಯಮ ಅಂಥ ಮೂರು ವರ್ಗಗಳಿವೆ. ಮೊದಲಿಗೆ ಎಡ ಮತ್ತು ಬಲ ಮಾತ್ರವಿತ್ತಂತೆ. ಆಧುನಿಕತೆ ತಂದೊಡ್ಡಿದ ಹೊಸ ಬಗೆಯ ಸವಾಲು ಮತ್ತು ಸಾಧ್ಯತೆಗಳಿಂದ ಮತ್ತೊಂದು ವರ್ಗ ಸೃಷ್ಟಿಯಾಗಿ ಅದು ‘ಮಧ್ಯಮ’ ಎನಿಸಿಕೊಂಡಿದೆ. ಎಡದವರು ಎಡದಲ್ಲೇ ಬಲದವರು ಬಲದಲ್ಲೇ ಗುರುತಿಸಿಕೊಂಡಾಗ ಅವರವರನ್ನು ಯಾರೂ ಬೊಟ್ಟು ಮಾಡಿ ತೋರಿಸುವುದಿಲ್ಲ. ಅವರವರ ಅಂಗಳದಲ್ಲೇ ಅವರಿದ್ದಾರೆಂದು ಗೇಲಿ ಮಾಡಿಕೊಂಡು ಸುಮ್ಮನಾಗುತ್ತಾರೆ. ಅಕಸ್ಮಾತ್ ಅಲ್ಲೊಬ್ಬ ಇಲ್ಲೊಬ್ಬ ಎಡದವನು ಬಲದ ಅಂಗಳದಲ್ಲಿ ಕಾಣಿಸುವುದು, ಬಲದವನು ಎಡದ ಅಂಗಳದಲ್ಲಿ ಕಾಣಿಸುವುದು ಕಂಡು ಬಂದರೆ ಇದೊಂದು ಎಡ ಬಿಡಂಗಿ ‘ಮಧ್ಯಮಿ’ ಎಂದು ಕರೆಯಲ್ಪಡುತ್ತದೆ. ಈ ಅವಕಾಶವಾದಿ ಮಧ್ಯಮಿ ಬೇರೆ ಅಲ್ಲ ‘ಹಿ ಈಸ್ ನತಿಂಗ್ ಬಟ್ ಬಲ’ ಎಂದು ಕಂಡುಹಿಡಿದು ವ್ಯಾಖ್ಯಾ ನಿಸಲಾಗಿದೆ. ಈ ವಾದ ಪ್ರತಿವಾದ ಎಲ್ಲವೂ ದತ್ತಾಂಶ ಗಳ ಆಧಾರದ ಮೇಲೆ ಅನುಭವಕ್ಕೆ ಬಂದು ಸಾಬೀತಾ ಗಿರುವುದರಿಂದ ಈ ವಾದದಲ್ಲಿ ಹುರುಳಿದೆ ಎಂದು ನಾನೂ ಒಪ್ಪಿಕೊಳ್ಳುತ್ತೇನೆ.
ಆದರೆ ಇನ್ನೊಂದು ವರ್ಗ ವಿದೆ. ಆ ವರ್ಗದ ಕಾರ್ಯವೈಖರಿ ಹೇಗೆಂದರೆ ತನಗೆ ಅವಕಾಶ ಅಲ್ಲಿ ಒದಗಿಲ್ಲ ಎಂದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಬಂದು ಕಾರಿಕೊಳ್ಳತೊಡಗುತ್ತದೆ. ಅಕಸ್ಮಾತ್ ಅದು ಬಲದ್ದೇ ವೇದಿಕೆಯಾಗಿರಲಿ, ಅಲ್ಲಿ ತನಗೆ ಅವಕಾಶ ಒದಗಿ ಬಂದಿದ್ದರೆ ನಾಜೂಕಾಗಿ ಅದನ್ನು ಸಮರ್ಥಿಸಿಕೊಂಡು ಒಂದು ಪೋಸ್ಟ್ ಹಾಕುತ್ತದೆ. ಅವಕಾಶ ಒದಗಿಲ್ಲ ಎಂದ ಕೂಡಲೆ ಉಗ್ರರೂಪ ತಾಳಿ ಆ ವೇದಿಕೆಯನ್ನು ಆಯೋಜಕರ ಜಾತಿ, ವರ್ಗ, ಲಿಂಗ ಎಲ್ಲವನ್ನೂ ಜನ್ಮ ಜಾಲಾಡಿ ಬಿಡುತ್ತದೆ. ಈ ವಿಶಿಷ್ಟ ವರ್ಗಕ್ಕೆ ಏನೆಂದು ಕರೆಯುವುದೋ ಕಾಣದು.
ಈ ವೈಚಾರಿಕ ಚರ್ಚೆಯನ್ನು ಬದಿಗೊತ್ತಿ ನನ್ನ ಆ ಫೆಸ್ಟ್ ನ ಅನುಭವಕ್ಕೆ ಹಿಂತಿರುಗುವುದಾದರೆ, ಕರಾರುವಾಕ್ಕಾಗಿ ಸಂಜೆ ನಾಲ್ಕು ಗಂಟೆಗೆ ನಾನಿರುವ ಸೆಷನ್ ಶುರುವಾಗುವುದರಲ್ಲಿತ್ತು. ಈ ಫೆಸ್ಟ್ಗಳ ಟೈಮ್ ಅಂದ್ರೆ ಟೈಮು, ಎಲ್ಲವೂ ನಿಗದಿತ ಸಮಯಕ್ಕೇ ಶುರುವಾಗಿ ಮುಗಿಯುತ್ತವೆ ಎಂದು ಕೇಳಿ ತಿಳಿದಿದ್ದೆ. ಇಡೀ ದಿನ ಫೆಸ್ಟ್ಗಾ ರಜೆ ಹಾಕಿದ್ದ ನಾನು, ನನ್ನದು ಹೇಗಿದ್ದರೂ ಸಂಜೆ ಕಾರ್ಯಕ್ರಮವಲ್ಲವ ಮತ್ತೆ ಮತ್ತೆ ರಜೆ ಹಾಕಲು ಕಷ್ಟವಾಗುತ್ತದೆ, ಆದ್ದರಿಂದ ಸಂದಿಯಲ್ಲಿ ಸಮಾರಾಧನೆ ಎಂದು ಮಧ್ಯದಲ್ಲಿ ನನ್ನ ಹಿತೈಷಿಯೊಬ್ಬ ರನ್ನು ಭೇಟಿಮಾಡಿ ಹೋಗುವುದೆಂದು ತೀರ್ಮಾನಿ ಸಿದ್ದೆ. ಅವರೂ ನನಗಾಗಿ ಸಮಯ ಕೊಟ್ಟಿದ್ದರು. ಹಾಳಾದ್ದು ನಾನು ಹೀಗೆ ನಾಲ್ಕುಗಂಟೆಗೆ ಅಲ್ಲಿರ ಬೇಕೆಂದು ಹೇಳಿಕೊಂಡಿದ್ದರೂ ಆಗುತ್ತಿತ್ತು. ಹೀಗೆಂದು ಹೇಳಿಕೊಂಡರೆ ನಾನು ಹೋಗುತ್ತಿರುವ ಕಾರ್ಯಕ್ರಮದ ಪೂರ್ವಾಪರವನ್ನೆಲ್ಲ ಕೆದಕಿ ನನಗೂ ಬುದ್ಧಿ ಹೇಳುವ ಅಪಾಯದಿಂದ ತಪ್ಪಿಸಿಕೊಳ್ಳಲು ನನ್ನ ಮತ್ತೊಂದು ಮುಖ್ಯ ಕಾರ್ಯದ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಆ ಹಿತೈಷಿ ಮಾತಿನ ಲಹರಿಯಲ್ಲಿದ್ದರು. ಗಂಟೆ ಒಂದಾಯಿತು. ಎರಡಾಯಿತು ಮಾತು ಮುಗಿಯಲೇ ಇಲ್ಲ. ಕೈ ಕೈ ಹಿಸುಕಿಕೊಂಡು ಚಡಪಡಿಸತೊಡಗಿದೆ. ಅಂತೂ ಆ ಫೆಸ್ಟ್ ಶುರುವಾಗಲು ಇನ್ನು ಎರಡು ಗಂಟೆ ಬಾಕಿ ಇರುವಾಗ ನಾನು ಅವರಿಂದ ಬೀಳ್ಕೊಡಲ್ಪಟ್ಟು ನಿಟ್ಟುಸಿರು ಬಿಟ್ಟೆ.
‘ಒಳ್ಳೆ ಮೊತ್ತವನ್ನು ಕೊಡುತ್ತಾರೆ ನಿರಾಕರಿಸಬೇಡಿ, ಕಾರ್ ಬಾಡಿಗೆ ಎಲ್ಲವನ್ನೂ ಫಾರ್ಮ್ ಭರ್ತಿ ಮಾಡಿ ಪಡೆದುಕೊಳ್ಳಿ’ ಎಂದು ನನ್ನನ್ನು ಸೂಚಿಸಿದ್ದವರು ಕಿವಿ ಮಾತು ಹೇಳಿದ್ದರು. ನಾನು ಕಾರ್ ಬಾಡಿಗೆ ಮಾಡಿಕೊಂಡು ಹೋಗುವಷ್ಟು ದೊಡ್ಡವನೇನಲ್ಲ. ಸರ್ಕಾರಿ ಬಸ್ನಲ್ಲೇ ಹೋಗಿ ಹೆಚ್ಚುವರಿ ಉಳಿಕೆ ಹಣವನ್ನು ಜೋಬಿಗೆ ಇಳಿಸಿಕೊಳ್ಳೋಣವೆಂದು ಲೆಕ್ಕ ಹಾಕಿದ್ದೆ. ಆದರೆ ನಿಗದಿತ ಸ್ಥಳ ತಲುಪಲು ಕೇವಲ ಎರಡು ಗಂಟೆ ಮಾತ್ರ ಉಳಿದಿರುವಾಗ ಈ ಟ್ರಾಫಿಕ್ನಲ್ಲಿ ಕಷ್ಟ ಸಾಧ್ಯವೆಂದು ಅರಿತು ಅನಿವಾರ್ಯವಾಗಿ ಕ್ಯಾಬ್ ಬುಕ್ ಮಾಡಿಕೊಂಡೆ. ಡ್ರೈವರ್ಗೆ ತುರ್ತುಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ವೇಗವಾಗಿ ತಲುಪಿಸಬೇಕೆಂದು ಕೇಳಿಕೊಂಡೆ. ಸಮಯ ಓಡುತ್ತಿತ್ತು. ಆ ಟೆನ್ಷನ್ನಲ್ಲಿ ನಾನು ಏನು ಮಾತಾಡಬೇಕೆಂಬ ವಿಷಯ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಬೆವತುಕೊಳ್ಳುತ್ತಿದ್ದೆ. ಹೇಗಾದರೂ ಮಾಡಿ ನಿಗದಿತ ಸಮಯಕ್ಕೆ ತಲುಪಬೇಕಲ್ಲ ಎಂಬ ಧಾವಂತ ತೀವ್ರವಾಗ ತೊಡಗಿತು. ಆ ಐಶಾರಾಮಿ ಫೆಸ್ಟ್ ನಡೆಯುವ ಜಾಗ ತಲುಪುವಷ್ಟರಲ್ಲಿ ನಮ್ಮ ಸೆಷನ್ ಶುರುವಾಗಿ ಹತ್ತು ನಿಮಿಷವಾಗಿತ್ತು. ಅವಸರದಿ ಓಡೋಗಿ ಆಯೋಜಕ ರಿಗೆ ಕಾಣಿಸಿಕೊಂಡೆ. ನನಗಾಗಿ ಇಟ್ಟಿದ್ದ ಕುರ್ಚಿಯನ್ನು ನಾನು ಬಾರದಿರುವಾಗ ಹಿಂದಕ್ಕೆ ಸರಿಸಿ ಸಮಯಕ್ಕೆ ಸರಿಯಾಗಿ ಹಾಜರಿದ್ದ ಮೂವರನ್ನಷ್ಟೇ ಕೂರಿಸಿ ಚರ್ಚೆ ಶುರುಮಾಡಿದ್ದರು. ಲೇಟಾಗಿ ಬಂದ ನನ್ನನ್ನು ಅವರೇನು ಕ್ಯಾರೆ ಎನ್ನಲಿಲ್ಲ. ಕೊನೆಗೂ ನನ್ನನ್ನು ಸೂಚಿಸಿದ್ದ ಆ ವ್ಯಕ್ತಿಯೇ ಮತ್ತೆ ಕುರ್ಚಿಯನ್ನು ಮುಂದಕ್ಕೆ ಹಾಕಿಸಿ ನನ್ನನ್ನು ಆಹ್ವಾನಿಸಿದರು. ನನ್ನ ಮಾತಿನ ಸರದಿ ಬಂದಾಗ ‘ನೀವೆಲ್ಲ ಇಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಬಂದು ಕಾದು ಕುಳಿತಿದ್ದೀರಿ, ನೀವೆಲ್ಲ ಅಷ್ಟು ಕಂಫರ್ಟ್ ಝೋನ್ನಲ್ಲಿ ಇದ್ದು ಸಾಹಿತ್ಯದ ಹಬ್ಬದಲ್ಲಿ ಪಾಲ್ಗೊಂಡಿದ್ದೀರಿ, ನಿಮ್ಮೊಂದಿಗೆ ಮಾತಾ ಡಲು ಬಂದಿರುವ ನಾನು ನಿಮ್ಮಷ್ಟು ಕಂಫರ್ಟ್ ಝೋನ್ನಲ್ಲಿ ಇಲ್ಲ. ನಾನು ನನ್ನ ಹಳ್ಳಿಯಿಂದ ಇಲ್ಲಿಗೆ ಬರುವುದೇ ಒಂದು ಮಹಾ ಪ್ರಯಾಣ, ಆದ್ದರಿಂದ ತಡವಾಗಿದ್ದಕ್ಕೆ ನಾನೇನು ಕ್ಷಮೆ ಕೇಳುವುದಿಲ್ಲ. ಏಕೆಂದರೆ ನೀವೆಲ್ಲ ನನ್ನ ಸ್ವೀಕರಿಸಿರುವುದೇ ತಡವಾಗಿ’ ಎಂದು ಪ್ರವೇಶಿಕೆ ಹಾಕಿಕೊಂಡು ಸಂವಾದಕ್ಕೆ ಹೊರಳಿದ್ದೆ.
ಒಂದೆರಡು ಸುತ್ತಿಗೆ ನಮ್ಮ ಸಂವಾದ ಮುಕ್ತಾಯಗೊಂಡಿತ್ತು. ನಲವತ್ತು ನಿಮಿಷದ ನಮ್ಮ ಸೆಷನ್ನಲ್ಲಿ ಹೆಚ್ಚೆಂದರೆ ಏಳರಿಂದ ಹತ್ತು ನಿಮಿಷ ನನ್ನ ಪಾಲಿನದ್ದಾಗಿರಬಹುದು. ಕಾರ್ಯಕ್ರಮ ಮುಕ್ತಾಯವಾದಾಗ ಸಹಿ ಪಡೆದು ಒಂದು ಕವರ್ನಲ್ಲಿ ಹಣ ಇಟ್ಟು ಕೊಟ್ಟಿದ್ದರು. ವಾಷ್ರೂಮ್ಗೆ ಹೋಗಿ ಮೆಲ್ಲಗೆ ಎಷ್ಟಿರಬಹುದೆಂದು ಬಿಚ್ಚಿನೋಡಿದೆ. ಒಳ್ಳೆಯ ಮೊತ್ತವನ್ನೇ ಇಟ್ಟಿದ್ದರು. ನನ್ನ ಗೆಳೆಯನಿಗೆ ‘ಇಷ್ಟು ಇಟ್ಟವ್ರೆ ಕಣಯ್ಯ’ ಅಂದೆ. ಹೌಹಾರಿದ ಅವನು ‘ಏನ್ ಸರ್ ನೀವು ಮಾತಾಡಿದ ಒಂದೊಂದು ಶಬ್ದವೂ ನೂರಿನ್ನೂರರ ವೇಗದಲ್ಲಿ ಹಣಗಳಿಸಿದೆ’ ಅಂದ. ಇಬ್ಬರೂ ನಕ್ಕೆವು. ಆ ದಿನ ಸಂಜೆ ಉತ್ತರ ಕರ್ನಾಟಕದ ಗೆಳೆಯನೊಬ್ಬನ ಹೊಸ ಪುಸ್ತಕ ಚರ್ಚೆ ಪುಸ್ತಕ ಮಳಿಗೆಯೊಂದರಲ್ಲಿ ಆಪ್ತರೊಂದಿಗೆ ಏರ್ಪಟ್ಟಿತ್ತು. ಈ ಐಶಾರಾಮಿ ವಾಸ್ತವ್ಯವನ್ನು ತ್ಯಜಿಸಿ ಅಲ್ಲಿಗೆ ಹೋದೆ. ಅಲ್ಲಿದ್ದ ನನ್ನದೇ ಬಳಗದವರು ‘ಏನ್ ವಿಶೇಷ ಇವತ್ತು ಅಷ್ಟು ದೂರದಿಂದ ಬಂದಿದಿಯಾ?’ ಎಂದು ಆಶ್ಚರ್ಯದಿಂದ ಕೇಳಿದರು. ಬಹುತೇಕ ಅಲ್ಲಿದ್ದವರು ಇಂಥ ಫೆಸ್ಟ್ ಗಳ ಕಟು ವಿಮರ್ಶಕರಾಗಿದ್ದರು. ಕೊನೆಗೂ ನಾನು ಬಂದಿದ್ದ ಉದ್ದೇಶವನ್ನು ಹೇಳಿ ‘ಒಳ್ಳೆ ಮೊತ್ತ ಕೊಟ್ಟವ್ರೆ ಇವತ್ತು ನಿಮ್ಗೆಲ್ಲ ನಂದೇ ಪಾರ್ಟಿ’ ಎಂದೆ. ‘ಹಿಂಗಾದ್ರು ಅವ್ರ ದುಡ್ಡು ನಮ್ಮಂತಹವರಿಗೂ ಸೇರುವಂತಾಗಲಿ ತಗ’ ಎಂದು ಒಂದೊಂದು ಎಕ್ಸ್ಟ್ರಾ ಬೀರು ಆರ್ಡರ್ ಮಾಡಿದರು. ಹೀಗೆ ನನ್ನ ಮೊದಲ ಲಿಟರರಿ ಫೆಸ್ಟ್ ಸಮಾರೋಪ ಕಂಡಿತು.
” ಇದನ್ನು ಅವಕಾಶ ಎನ್ನುವುದೋ ಅಥವಾ ‘ಬಿಡೆಗೆ ಬಸುರಾಗುವುದು’ ಎನ್ನುವುದೋ ತಿಳಿಯದು. ಬಹುಶಃ ಎರಡರ ಸಮ್ಮಿಶ್ರಣ ಇರಬಹುದು”




