ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಲಾದರ್ ದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದು, ರೈತರು ತೀವ್ರ ಆತಂಕಗೊಂಡಿದ್ದಾರೆ.
ಗ್ರಾಮದ ಜೋಸೆಫ್ ಎಂಬುವರಿಗೆ ಸೇರಿದ ಜಮೀನಿಗೆ ರಾತ್ರಿ ವೇಳೆ ನುಗ್ಗಿದ ಕಾಡಾನೆಗಳ ಹಿಂಡು, ಜಮೀನಿನಲ್ಲಿ ಚೆನ್ನಾಗಿ ಬೆಳೆದಿದ್ದ ಜೋಳದ ಬೆಳೆಯನ್ನು ತುಳಿದು ಹಾಳು ಮಾಡಿದೆ. ಜೊತೆಗೆ ತೆಂಗಿನ ಮರಗಳನ್ನು ಮುರಿದು ಹಾಕಿದ್ದು, ಜಮೀನಿನಲ್ಲಿದ್ದ ಕೃಷಿ ಪರಿಕರಗಳನ್ನು ಸಹ ನಾಶಪಡಿಸಿದೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿದ್ದು, ರಾತ್ರಿಯಾದರೆ ಸಾಕು ಆನೆಗಳು ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾಡಾನೆಗಳ ಭಯದಿಂದ ರೈತರು ರಾತ್ರಿ ವೇಳೆ ಜಮೀನಿಗೆ ಹೋಗಲು ಹೆದರುವಂತಾಗಿದೆ. ಜಮೀನಿನಲ್ಲಿ ಕಾವಲು ಕಾಯುವವರೂ ಆನೆಗಳ ದಾಳಿಗೆ ಸಿಲುಕುವ ಭೀತಿಯಲ್ಲಿದ್ದಾರೆ. ಬೆಳೆ ಕೈಗೆ ಬರುವ ಸಮಯದಲ್ಲೇ ಆನೆಗಳು ದಾಳಿ ಮಾಡಿರುವುದರಿಂದ ರೈತ ಜೋಸೆಫ್ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಗಳನ್ನು ಕಾಡಿನೊಳಗೆ ಹಿಮ್ಮೆಟ್ಟಿಸಲು ಕ್ರಮ ಕೈಗೊಳ್ಳಬೇಕು, ಹಾಗೂ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.




