ಎಸ್.ಎಸ್.ಭಟ್
ನಂಜನಗೂಡು: ರಾಜ್ಯದ ಧಾರ್ಮಿಕ ಹಾಗೂ ಕೈಗಾರಿಕಾ ಕ್ಷೇತ್ರವಾದ ನಂಜನಗೂಡು ಈಗ ಮಾದಕ ದ್ರವ್ಯ ಎಂಡಿಎಂಎ ವ್ಯವಹಾರದ ಕೇಂದ್ರವಾಗಲಾರಂಭಿಸಿದೆಯೇ? ಎಂಬ ಆತಂಕದ ಪ್ರಶ್ನೆ ಎದುರಾಗಿದೆ. ಹೊರಗಡೆಯಿಂದ ತರಿಸಲಾದ ಮಾದಕ ದ್ರವ್ಯಗಳನ್ನು ಬಾಳೆ ತೋಟದಲ್ಲಿ ಶೇಖರಣೆ ಮಾಡಲಾಗುತ್ತಿರುವ ಆಘಾತಕಾರಿ ವಿಷಯ ಕೇರಳ ಪೊಲೀಸರಿಂದ ಬೆಳಕಿಗೆ ಬಂದಾಗ ಬೆಚ್ಚಿ ಬಿದ್ದವರು ಸ್ಥಳೀಯ ಜನತೆ ಹಾಗೂ ಸ್ಥಳೀಯ ಪೊಲೀಸರು.
ಕೇರಳದಲ್ಲಿ ಮಾದಕ ದ್ಯವ್ಯ ಮಾರಾಟದ ಬೆನ್ನು ಬಿದ್ದ ಪೊಲೀಸರಿಗೆ ಅದು ರಸಬಾಳೆಗೆ ಹೆಸರಾದ ನಂಜನಗೂಡಿನಿಂದ ಸರಬರಾಜಾಗುತ್ತಿದೆ ಎಂಬ ಮಾಹಿತಿ ಲಭ್ಯವಾದಾಗ ಜಾಗರೂಕರಾದ ಅವರು ನೇರವಾಗಿ ತಾಲ್ಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುರಿಹುಂಡಿ ಸಮೀಪದ ಬಾಳೆ ತೋಟದ ಮೇಲೆ ದಾಳಿ ಮಾಡಿ ಕೇರಳ ರಾಜ್ಯದ ಅಲಪ್ಪುಳ್ಳ ಜಿಲ್ಲೆಯ, ಹಾಲಿ ನಂಜನಗೂಡಲ್ಲಿ ವಾಸವಾಗಿದ್ದ ದಾನೇಶ್ ನಾಯರ್ ಎಂಬಾತನನ್ನು ಮಾದಕ ದ್ರವ್ಯಗಳ ಸಹಿತ ವಶಕ್ಕೆ ಪಡೆದು ಕೇರಳ ತಲುಪಿದಾಗಲೇ ಈ ವಿಷಯ ಬೆಳಕಿಗೆ ಬಂದಿದ್ದು, ಸ್ಥಳೀಯ ಪೊಲೀಸರ ಕಾರ್ಯವೈಖರಿಯ ಬಗ್ಗೆ ಜನ ಹುಬ್ಬೇರಿಸುವಂತೆ ಮಾಡಿದೆ.
ದಾನೇಶ್ ನಾಯರ್ ಕುರಿಹುಂಡಿ ಗ್ರಾಮದ ಬಳಿ ಜಮೀನನ್ನು ಬಾಳೆ ಬೆಳೆಯಲು ಗುತ್ತಿಗೆಗೆ ಪಡೆದಿದ್ದು ಆ ಬಾಳೆಯ ಜೊತೆ ಕೇರಳಕ್ಕೆ ಇತರ ತೋಟದ ಬಾಳೆಯನ್ನು ಕೂಡ ಖರೀದಿಸಿ ಬಾಳೆಗೊನೆ ಸರಬರಾಜನ್ನೂ ನಡೆಸುತ್ತಿದ್ದ ಎನ್ನಲಾಗಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ನಾಯರ್ ನಗರದ ಹೊರವಲಯದ ದೇವೀರಮ್ಮನಹಳ್ಳಿಯ ವೃತ್ತದ ಬಳಿ ಬಾಡಿಗೆಗೆ ಮನೆ ಪಡೆದು ಅಲ್ಲೇ ವಾಸವಾಗಿದ್ದು, ತನ್ನ ಕರಾಳ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.
ಕೇರಳಂನ ಅತ್ಯುತ್ತಮ ರೈತ ಪ್ರಶಸ್ತಿ ಪುರಸ್ಕೃತನಾಗಿರುವ ದಾನೇಶ್ ನಾಯರ್, ನೈಜೀರಿಯಾದಿಂದ ಬೆಂಗಳೂರಿಗೆ ಬಂದ ಡ್ರಗ್ಸ್ನ್ನು ಅಲ್ಲಿಂದ ತಾಲ್ಲೂಕಿನ ಕುರಿಹುಂಡಿಗೆ ತಂದು ಬಾಳೆ ತೋಟದಲ್ಲಿ ಶೇಖರಣೆ ಮಾಡಿ ಬಾಳೆಗೊನೆ ಯೊಂದಿಗೆ ಅದನ್ನು ಕೇರಳಕ್ಕೆ ಸಾಗಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಕೇರಳದಲ್ಲಿ ಮಾರಾಟವಾದ ಎಂಡಿಎಂಎ ಬೆನ್ನು ಬಿದ್ದ ಅಲ್ಲಿನ ಪೊಲೀಸರು ಆ ಮಾಹಿತಿಯ ಮೇರೆಗೆ ಇಲ್ಲಿಗೆ ಬಂದು ಬಾಳೆ ತೋಟಕ್ಕೆ ನುಗ್ಗಿ ಮಾದಕ ವಸ್ತುಗಳ ಶೇಖರಣಾ ತಾಣವನ್ನು ಪತ್ತೆಹಚ್ಚಿ ನಾಯರ್ನನ್ನು ವಶಕ್ಕೆ ಪಡೆದಿರುವುದು ನಮ್ಮ ರಾಜ್ಯದ ಗುಪ್ತಚರ ವ್ಯವಸ್ಥೆ ತಲೆ ತಗ್ಗಿಸುವಂತೆ ಮಾಡಿದೆ.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಪೊಲೀಸರು, ಈಗ ಕೇರಳ ಪೊಲೀಸರು ನಮ್ಮ ರಾಜ್ಯಕ್ಕೆ ಬಂದು ಅಕ್ರಮಗಳನ್ನು ಪತ್ತೆ ಹಚ್ಚಿದ್ದು, ನಮ್ಮ ಪೊಲೀಸರೇನು ಮಾಡುತ್ತಿದ್ದಾರೆ ಎಂಬ ಗುಸು ಗುಸು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರಲಾರಂಭಿಸಿದೆ.
ಕೆಲ ವರ್ಷಗಳ ಹಿಂದೆ ಕಬ್ಬು ಬೆಳೆದ ಕೇರಳಿಗ ಅದರ ಮಧ್ಯೆ ಗಾಂಜಾ ಗಿಡ ಬೆಳೆದಿದ್ದ. ಈಗ ಬಾಳೆ ತೋಟದಲ್ಲಿ ಎಂಡಿಎಂಎ ಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಕೇರಳದವರಿಗೆ ಜಮೀನನ್ನು ಗುತ್ತಿಗೆಗೆ ಕೊಡುವ ಸ್ಥಳೀಯರು ಎಚ್ಚರ ವಹಿಸುವಂತೆ ಮಾಡಿದೆ. ಕೈಗಾರಿಕೆ ಹಾಗೂ ಶೈಕ್ಷಣಿಕ ಹಬ್ ಆಗುತ್ತಿರುವ ನಂಜನಗೂಡಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು ಹಿಂದೆ ಪೊಲೀಸ್ ಅಧಿಕಾರಿಯ ಮಗನೇ ಡ್ರಗ್ಸ್ ಸೇವಿಸಿ ಮಾಡಿದ ಅಪಘಾತದ ತನಿಖೆ ನ್ಯಾಯಯುತವಾಗಿ ನಡೆದಿದ್ದರೆ ಅಂದೇ ನಂಜನಗೂಡಿನ ಮಾದಕ ದ್ಯವ್ಯದ ಮಾರಾಟ ಜಾಲ ಬೆಳಕಿಗೆ ಬರುತ್ತಿತ್ತು. ತಮ್ಮವರು ಎಂದು ಅದನ್ನು ಮುಚ್ಚಿ ಹಾಕಿದ್ದಕ್ಕೆ ಈಗ ಕೇರಳದ ಪೊಲೀಸರು ಬಂದು ನಮ್ಮನ್ನು ಎಚ್ಚರಿಸುವಂತಾಯಿತು ಎನ್ನುತ್ತಾರೆ ಸಾರ್ವಜನಿಕರು.
ಕುರಿಹುಂಡಿಯಲ್ಲಿ ಶೇಖರಣೆಯಾಗುತ್ತಿದ್ದ ಎಂಡಿಎಂಎ ಕೇರಳಕ್ಕೆ ಮಾತ್ರ ಸಾಗಣೆಯಾಗುತ್ತಿತ್ತೆ? ಅಥವಾ ನಂಜನಗೂಡು, ಸುತ್ತ ಮುತ್ತಲೂ ಸರಬರಾಜಾಗುತ್ತಿತ್ತೆ? ಕೇರಳಕ್ಕೆ ಬಾಳೆಗೊನೆಯೊಂದಿಗೆ ಸಾಗಣೆಯಾಗುತ್ತಿದ್ದಎಂಡಿಎಂಎ ಬೆಂಗಳೂರಿನಿಂದ ನಂಜನಗೂಡಿನ ಕುರಿಹುಂಡಿ ತೋಟಕ್ಕೆ ಬರುತ್ತಿದ್ದ ದಾರಿ ಯಾವುದು? ಹೇಗೆ ತರಲಾಗುತ್ತಿತ್ತು? ಎಂಬುದನ್ನಾದರೂ ನಮ್ಮ ಪೊಲೀಸರು ತನಿಖೆ ಮಾಡಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಿ ನಂಜನಗೂಡಿಗರಿಗೆ ನ್ಯಾಯ ಒದಗಿಸಬೇಕು ಎನ್ನುತ್ತಾರೆ ಸ್ಥಳೀಯರು.




