Mysore
22
broken clouds

Social Media

ಶುಕ್ರವಾರ, 13 ನವೆಂಬರ್ 2026
Light
Dark

ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರೆಯಲ್ಲಿ 2.19 ಕೋಟಿ ರೂ. ಸಂಗ್ರಹ!

ಮಹಾದೇಶ್ ಎಂ.ಗೌಡ

೫ ದಿನಗಳ ಮಹೋತ್ಸವದಲ್ಲಿ ಲಾಡು ಮಾರಾಟದಲ್ಲೇ ದಾಖಲೆ; ಕಳೆದ ವರ್ಷಕ್ಕಿಂತ ಆದಾಯ ಹೆಚ್ಚಳ 

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ಸಂಭ್ರಮದಿಂದ ಜರುಗಿದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಹರಕೆ, ಸೇವೆ ಹಾಗೂ ಪ್ರಸಾದ ಮಾರಾಟದಿಂದ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಟ್ಟು ೨,೧೯,೨೬,೭೧೫ ರೂ.ಆದಾಯ ಬಂದಿದೆ.

ನ.೬ರಿಂದ ೧೦ ರವರೆಗೆ ನಡೆದ ಜಾತ್ರೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ೫ ಲಕ್ಷಕ್ಕೂ ಹೆಚ್ಚು ಭಕ್ತರು ಮಾದಪ್ಪನ ದರ್ಶನ ಪಡೆದಿದ್ದಾರೆ. ಐದು ದಿನಗಳ ಅವಧಿಯಲ್ಲಿ ಹುಲಿವಾಹನ, ರುದ್ರಾಕ್ಷಿ ವಾಹನ, ಬಸವ ವಾಹನ, ಚಿನ್ನ ಹಾಗೂ ಬೆಳ್ಳಿ ತೇರಿನ ಉತ್ಸವಗಳು, ಪಂಚಕಳಶ ಸಮೇತ ನವರತ್ನ ಕಿರೀಟ ಧಾರಣೆ, ಏಕವಾರ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಪಂಚಾಮೃತ ಅಭಿಷೇಕ, ಇನ್ನಿತರ ವಿಶೇಷ ಸೇವೆಗಳು ವಿಜೃಂಭಣೆಯಿಂದ ಜರುಗಿದವು.

ಯಾವುದರಿಂದ ಎಷ್ಟು ಆದಾಯ?: ಲಾಡು ಮಾರಾಟದಿಂದ ೬೪,೦೬,೪೭೦ ರೂ., ವಿಶೇಷ ಪ್ರವೇಶ ಶುಲ್ಕದಿಂದ ೩೬,೬೦,೦೫೦ ರೂ., ಮಾಹಿತಿ ಕೇಂದ್ರದಿಂದ ೬,೨೭,೭೦೦ ರೂ., ಮಿಶ್ರ ಪ್ರಸಾದದಿಂದ ೫,೯೦,೬೨೫ ರೂ., ಇತರ ಸೇವಾ ಮೂಲದಿಂದ ೪,೭೮,೫೦೦ ರೂ., ಪುದುವಟ್ಟಿನಿಂದ ೨,೪೩,೪೨೨ ರೂ. ಸಂಗ್ರಹವಾಗಿದೆ.

ಲಾಡು ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ: ಮ.ಬೆಟ್ಟದಲ್ಲಿ ತಯಾರಿಸುವ ಲಾಡು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಬೆಟ್ಟಕ್ಕೆ ಬರುವ ಪ್ರತಿಯೊಬ್ಬರೂ ಲಾಡು ಪ್ರಸಾದವನ್ನು ತೆಗೆದುಕೊಂಡು ಹೋಗುವುದುವಾಡಿಕೆ. ೨೦೨೩ರ ದೀಪಾವಳಿ ಜಾತ್ರೆಯಲ್ಲಿ ಲಾಡು ಮಾರಾಟದಿಂದ ೫೪,೬೮,೫೦೦ ರೂ. ಬಂದಿದ್ದರೆ, ೨೦೨೪ರಲ್ಲಿ ೫೮,೩೩,೯೨೫ ರೂ. ಬಂದಿತ್ತು. ಕಳೆದ ಬಾರಿ ೨೦೨೫ರಲ್ಲಿ ೬೩,೭೦,೭೨೫ ರೂ. ಬಂದಿತ್ತು. ಈ ಬಾರಿ ೬೪,೦೬,೪೭೦ ರೂ. ಆದಾಯ ಬಂದಿದ್ದು, ವರ್ಷದಿಂದ ವರ್ಷಕ್ಕೆ ಲಾಡು ಮಾರಾಟ ಪ್ರಮಾಣ ಹೆಚ್ಚಳವಾಗುತ್ತಿರುವುದು ಗಮನಾರ್ಹ. ಕಳೆದ ವರ್ಷ ದೀಪಾವಳಿ ಜಾತ್ರಾ ದಿನಗಳಲ್ಲಿ ವಿಶೇಷ ಪ್ರವೇಶ, ಲಾಡು ಮಾರಾಟ ಸೇರಿದಂತೆ ಇತರೆ ಸೇವೆಗಳಿಂದ ಒಟ್ಟು ೨,೧೬,೪೫,೦೨೦ ರೂ. ಸಂಗ್ರಹವಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಆದಾಯ ಬಂದಿದೆ.

” ಭಕ್ತಾದಿಗಳಿಗೆ ಗುಣಮಟ್ಟದ ಲಾಡುಗಳನ್ನು ವಿತರಣೆ ಮಾಡಲಾಗುತ್ತಿದೆ. ದೀಪಾವಳಿ ಜಾತ್ರಾ ಮಹೋತ್ಸವ ಎಲ್ಲರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ೫ ಲಕ್ಷ ಜನ ಭಕ್ತಾದಿಗಳು ಭೇಟಿ ನೀಡಿದ್ದಾರೆ. ಕಾರ್ತಿಕ ಮಾಸ ಪ್ರಾರಂಭವಾಗಿರುವುದರಿಂದ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.”

? ಪುರುಷೋತ್ತಮ, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

 

 

Tags:
error: Content is protected !!