ಬೆಂಗಳೂರು: ‘ಬಿಜೆಪಿಯವರು ರೀಲ್ಸ್ ರಾಜರು. ಬೆಂಗಳೂರಿಗೆ ಹೊಸ ಯೋಜನೆ ತಂದಿದ್ದಾರಾ?’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಮೆಟ್ರೋ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಸಕ್ರಿಯವಾಗಿರುವ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಜನಸಾಮಾನ್ಯರಿಗೆ ಇವರ ಕೊಡುಗೆ ಏನು ಎಂದು ವಾಗ್ದಾಳಿ ನಡೆಸಿದರು.
‘ಟನಲ್ ಯೋಜನೆಗೂ ವಿರೋಧ, ಮೆಟ್ರೋ ವಿಚಾರದಲ್ಲೂ ಆಕ್ಷೇಪ. ಕರ್ನಾಟಕಕ್ಕೆ ತಮ್ಮಿಂದ ಆಗಿರುವ ಒಂದು ಕೆಲಸವನ್ನು ತೋರಿಸಲಿ’ ಎಂದು ಸವಾಲು ಹಾಕಿದರು.
‘ಕೇಂದ್ರ ಸಚಿವರಿಗೆ ಮನವಿ ಪತ್ರ ಕೊಟ್ಟು, ಫೋಟೊ ತೆಗೆಸಿಕೊಂಡು ಬರುವುದಷ್ಟೇ ಇವರ ಕೆಲಸ. ಯುವ ಸಂಸದರು ರೀಲ್ಸ್ ಮಾಡುವುದಕ್ಕೆ ಸೀಮಿತರಾಗಿದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.




