Mysore
26
overcast clouds

Social Media

ಸೋಮವಾರ, 09 ನವೆಂಬರ್ 2026
Light
Dark

ಸಿಎಂ ಅಚ್ಯುತರಾಯರು ಮತ್ತು ಮಂತ್ರಿ ಗುಲ್ಗುಲೆಯೂ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ 

ಬೆಡ್ ರೂಮಿನ ಎಲೆಕ್ಟ್ರಿಕ್ ಸ್ವಿಚ್ ಬೋರ್ಡಿನ ತ್ರಿಪಿನ್ ಪ್ಲೇಟಿಗೆ ಫಿಕ್ಸ್ ಆಗಿದ್ದ ಪುಟ್ಟ ಕ್ಯಾಮೆರಾ

ಮಡಿಕೇರಿಯ ಸುದರ್ಶನ ಗೆಸ್ಟ್ ಹೌಸಿನ ಬೆತ್ತದ ಕುರ್ಚಿಯ ಮೇಲೆ ಕುಳಿತಿದ್ದ ಸೂರ್ಯ ಪ್ರಕಾಶ್ ಕೈಲಿದ್ದ ರಿಮೋಟ್‌ನಿಂದ ಟಿವಿ ಅನ್ ಮಾಡಿದರು. ಟಿವಿ ಆನ್ ಆಗುತ್ತಿದ್ದಂತೆಯೇ ಪರದೆಯ ಮೇಲೆ ಕಂಡ ದೃಶ್ಯ ಅವರನ್ನು ಅಚ್ಚರಿಗೆ ನೂಕಿತು.

ಹಾಸಿಗೆಯಲ್ಲಿ ಹೊರಳಾಡುತ್ತಿದ್ದ ಗಂಡು-ಹೆಣ್ಣಿನ ಹಸಿಬಿಸಿ ದೃಶ್ಯಗಳು. ಗಮನವಿಟ್ಟು ನೋಡಿದರೆ ಈ ರಾಸಲೀಲೆಯಲ್ಲಿ ಮಂತ್ರಿ ಧರ್ಮೇಂದ್ರ ಗುಲ್ಗುಲೆ ಇರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಈಗ ಜಗೃತಗೊಂಡ ಸೂರ್ಯಪ್ರಕಾಶ್ ಕಿವಿ ಅಗಲಿಸಿದರು. ಟಿವಿ ನಿರೂಪಕ ಅಬ್ಬರದ ಧ್ವನಿಯಲ್ಲಿ ವಿವರಿಸುತ್ತಿದ್ದ.

ಇದು ಮಂತ್ರಿ ಧರ್ಮೇಂದ್ರ ಗುಲ್ಗುಲೆಯ ರಾಸಲೀಲೆ ಪ್ರಕರಣ.ನಟಿ ಕವನಾ ಅವರ ಜತೆ ರಾಸಲೀಲೆ ನಡೆಸುತ್ತಿರುವ ಮಂತ್ರಿ. ಏನಾಗಿದೆ ಇವರಿಗೆ? ರಾಜ್ಯದಲ್ಲಿ ಬರಬಂದು ಜನ ಸಾಯುತ್ತಿದ್ದರೆ ಇವರಿಗೆ ಕಾಮದ ಗರ ಬಡಿದಿದೆ…

ಈಗ ಸೂರ್ಯ ಪ್ರಕಾಶ್ ಅದನ್ನು ನೋಡುತ್ತಲೇ ಕೈಲಿದ್ದ ಮೊಬೈಲ್ ನಿಂದ ಆ ಟಿವಿ ಚಾನೆಲ್ಲಿನ ವರದಿಗಾರ ಸಂದೇಶ್ ಸುಖಾಂತ್‌ಗೆ ಫೋನು ಮಾಡಿದರು.

ಮಿಸ್ಟರ್ ಸಂದೇಶ್, ನಿಮ್ಮ ಚಾನೆಲ್‌ನಲ್ಲಿ ರಾಸಲೀಲೆಯ ರಿಪೋರ್ಟು ನೋಡಿದೆ. ಆದರೆ ಕ್ಯೂರಿಯಾಸಿಟಿಗೆ ಕೇಳುತ್ತಿದ್ದೇನೆ. ಈ ಮಂತ್ರಿ ಧರ್ಮೇಂದ್ರ ಗುಲ್ಗುಲೆ ನಟಿ ಕವನಾ ಜತೆ ಖಾಸಗಿಯಾಗಿ ಕಳೆದ ಕ್ಷಣಗಳ ವಿಡಿಯೋ ಬಂದಿದೆಯಲ್ಲ? ಈ ಸ್ಟಿಂಗ್ ಆಪರೇಷನ್‌ನ ರೂವಾರಿ ಯಾರು? ಅಂತ ಸೂರ್ಯ ಪ್ರಕಾಶ್ ಕೇಳಿದಾಗ, ಸಂದೇಶ್ ಉತ್ಸಾಹದಿಂದಲೇ ವಿವರಿಸುತ್ತಾ ಹೋದ.

ಹಾಗೆ ನೋಡಿದರೆ ಸಂದೇಶ್ ಹತ್ತು ವರ್ಷಗಳ ಹಿಂದೆ ಪರಿಚಿತನಾದವನು. ಮೈಸೂರಿನಲ್ಲಿ ಪತ್ರಿಕೋದ್ಯಮ ಓದಿ ಬಂದಿದ್ದ ಸಂದೇಶ್ ಕೆಲಸಕ್ಕಾಗಿ ತಿರುಗಾಡುತ್ತಿದ್ದಾಗ, ಆತನಿಗೆ ರವಿವಾಣಿ ಪತ್ರಿಕೆಯಲ್ಲಿ ಕೆಲಸ ಸಿಗುವಂತೆ ನೋಡಿಕೊಂಡಿದ್ದೇ ಸೂರ್ಯಪ್ರಕಾಶ್. ಆಗ ಅವರು ರಾಜ್ಯದ ಇಂಟಲಿಜೆನ್ಸ್ ಐಜಿಯಾಗಿ ಸೇವೆಯಲ್ಲಿದ್ದರು.

ಚುರುಕು ಬುದ್ಧಿಯ ಸಂದೇಶ್ ಪತ್ರಿಕೋದ್ಯಮದಲ್ಲಿ ಬೆಳೆಯುತ್ತಾ ಹೋದ. ಶುರುವಿನಲ್ಲಿ ಪತ್ರಿಕೆಗಳಿಗೆ ಕೆಲಸ ಮಾಡಿದವನು ಆನಂತರ ಟಿವಿ ವರದಿಗಾರನಾಗಿ ಸೇರಿಕೊಂಡ. ಮುಂದೆ ಸೂರ್ಯಪ್ರಕಾಶ್ ನಿವೃತ್ತರಾದರೂ ಅವರ ಜತೆ ಸಂಪರ್ಕದಲ್ಲಿದ್ದ. ಹೀಗಾಗಿಯೇ ಟಿವಿಯಲ್ಲಿ ಸುದ್ದಿ ನೋಡಿದ ಕೂಡಲೇ ಮತ್ತು ಆ ಚಾನೆಲ್ಲಿನ ಮುಖ್ಯ ವರದಿಗಾರ ಸಂದೇಶ್ ಆದ್ದರಿಂದ ಸೂರ್ಯಪ್ರಕಾಶ್ ಕುತೂಹಲದಿಂದ ಅವನಿಗೇ ಫೋನು ಮಾಡಿದರು.

ಆತನಾದರೂ ಉತ್ಸಾಹದಿಂದ ವಿವರಿಸುತ್ತಾ ಹೋದ.‘ಸಾರ್, ಮಂತ್ರಿ ಧರ್ಮೇಂದ್ರ ಗುಲ್ಗುಲೆ ಅವರು ಚಿತ್ರ ನಟಿ ಕವನಾ ಅವರ ಜತೆ ಸಿಕ್ಕಿ ಬಿದ್ದಿದ್ದು ಒಂದು ರೋಚಕ ಕತೆ. ವಸ್ತುಸ್ಥಿತಿ ಎಂದರೆ ಧರ್ಮೇಂದ್ರ ಗುಲ್ಗುಲೆ ಹೀಗೆ ಕವನಾ ಜತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಮಾಡಿಸಿದ್ದು, ಧರ್ಮೇಂದ್ರ ಗುಲ್ಗುಲೆಯ ಕಟ್ಟರ್ ವೈರಿ ಮನೋಹರ ಕುರ್ಕುರೆ. ವಾಸ್ತವವಾಗಿ ಕುರ್ಕುರೆಗೆ ನಟಿ ಕವನಾ ಗೊತ್ತು. ಆದರೆ ಅವರು ನೇರವಾಗಿ ಕವನಾಳನ್ನು ಸಂಪರ್ಕಿಸುವ ಬದಲು ‘ಎನಿ ಟೈಮ’ ಟಿವಿ ಚಾನೆಲ್ಲಿನ ವರದಿಗಾರ್ತಿ ಮನಿಷಾ ಇzರಲ್ಲ ಅವರ ಮೂಲಕ ಸಂಪರ್ಕಿಸಿದ್ದಾರೆ.

ನನಗಿರುವ ಮಾಹಿತಿಯ ಪ್ರಕಾರ,ಮನಿಷಾ ಮೂಲಕ ಕವನಾಗೆ ಹೋದ ಆಫರ್ ಒಂದು ಕೋಟಿ. ಯಾವಾಗ ಈ ಆಫರ್ ಬಂತೋ ಆಗ ಕವನಾ ಧರ್ಮೇಂದ್ರ ಗುಲ್ಗುಲೆ ಅವರನ್ನು ಜಲಕ್ಕೆ ಬೀಳಿಸಲು ರೆಡಿ ಆಗಿದ್ದಾಳೆ. ಮತ್ತು ಆಕೆಗೆ ಸಹಾಯ ಮಾಡಿದ ಮನಿಷಾ ಇಸ್ರೇಲಿನಿಂದ ತರಿಸಿದ್ದ ಪುಟ್ಟ ಕ್ಯಾಮೆರಾವನ್ನು ಕವನಾಳ ಬೆಡ್ ರೂಮಿನಲ್ಲಿರುವ ಎಲೆಕ್ಟ್ರಿಕ್ ಸ್ವಿಚ್ ಬೋರ್ಡಿನ ತ್ರಿಪಿನ್ ಪ್ಲೇಟಿಗೆ ಫಿಕ್ಸ್ ಮಾಡಿದ್ದಾಳೆ.

ನಿಮಗೆ ಗುಲ್ಗುಲೆಯ ಕತೆ ಗೊತ್ತಲ್ಲ, ಹಿಂದಿನಿಂದಲೂ ಹೆಣ್ಣು ಬಾಕ. ಕವನಾ ನೀಡಿದ ಆಹ್ವಾನಕ್ಕೆ ಮಾರುಹೋಗಿ ಏರ್ ಪೋರ್ಟ್ ರಸ್ತೆಯಲ್ಲಿರುವ ಆಕೆಯ ಅಪಾರ್ಟ್‌ಮೆಂಟಿಗೆ ಹೋಗಿದ್ದಾರೆ. ಹೀಗೆ ಮೂರ್ನಾರ್ಲು ಬಾರಿ ಹೋಗಿ ಬಂದ ನಂತರ ಈ ವಿಡಿಯೋ ಮನೋಹರ ಕುರ್ಕುರೆ ಕೈ ಸೇರಿದೆ. ಪರಿಣಾಮ?ಇವತ್ತು ಗುಲ್ಗುಲೆ ಅವರ ಲೈಂಗಿಕ ಹಗರಣದ ಬಾಂಬು ಸಿಡಿದಿದೆ.

ಹೀಗೆ ಸಂದೇಶ್ ವಿವರವಾಗಿ ಹೇಳುತ್ತಾ ಹೋದಾಗ ಮೌನವಾಗಿ ಎಲ್ಲವನ್ನೂ ಆಲಿಸಿದ ಸೂರ್ಯ ಪ್ರಕಾಶ್ ಅವರು: ‘ಸಂದೇಶ್, ನಾವು ಡ್ಯೂಟಿಯಲ್ಲಿರುವ ಕಾಲದಲ್ಲಿ ಈ ಸ್ಟಿಂಗ್ ಆಪರೇಷನ್ನುಗಳ ಹೊಡೆತ ಇರಲಿಲ್ಲ ನೋಡಿ. ಹಾಗೇನಾದರೂ ಅವತ್ತು ಸ್ಟಿಂಗ್ ಜಾಲ ಇದ್ದಿದ್ದರೆ ಎಷ್ಟು ಜನ ಮುಖ್ಯಮಂತ್ರಿಗಳು, ಮಂತ್ರಿಗಳು ಖೆಡ್ಡಾಕ್ಕೆ ಬೀಳುತ್ತಿದ್ದರೋ ಗೊತ್ತಿಲ್ಲ’ ಎಂದು ನಕ್ಕರು.

ಹೀಗೆ ಸಂದೇಶ್ ಜತೆ ಮಾತು ಮುಗಿಸಿ ಕರೆಯನ್ನು ಕಟ್ ಮಾಡಿದ ನಂತರ, ಸೂರ್ಯಪ್ರಕಾಶ್ ಅವರಿಗೆ ಎಸ್.ಎಂ.ಅಚ್ಯುತ್ ರಾವ್ ಅವರ ನೆನಪು ಬಂತು. ಅವರು ಮುಖ್ಯಮಂತ್ರಿಯಾಗಿದ್ದಾಗ ತಾನೇ ನಾನು ಇಂಟಲಿಜೆನ್ಸ ಐಜಿಯಾಗಿ ಕೆಲಸ ಮಾಡಿದ್ದು? ತುಂಬ ದೊಡ್ಡ ಮನುಷ್ಯ. ಆಗೆಲ್ಲ ತಮ್ಮ ಸಚಿವ ಸಂಪುಟದ ಕೆಲ ಮಂತ್ರಿಗಳ ಲೈಂಗಿಕ ಹಗರಣಗಳ ಬಗ್ಗೆ ಸುದ್ದಿ ಹರಿದಾಡಿದಾಗ ಅಚ್ಯುತ್ ರಾವ್ ಅವರು ಮೌನವಾಗಿ ಬಿಡುತ್ತಿದ್ದರು. ಒಂದು ದಿನ ಬೆಳಿಗ್ಗೆ ಲಾನ್ ಟೆನ್ನಿಸ್ ಅಸೋಸಿಯೇಷನ್‌ಗೆ ಮುಖ್ಯಮಂತ್ರಿಗಳ ಜತೆ ಹೋದ ಸೂರ್ಯ ಪ್ರಕಾಶ್ :‘ಸಾರ್, ಮಂತ್ರಿಗಳೆನಿಸಿಕೊಂಡವರು ರಾಸಲೀಲೆಯಲ್ಲಿ ತೊಡಗಿಕೊಂಡರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಿಲ್ಲವೇ? ಇಂತಹವರನ್ನು ಏಕೆ ಸಹಿಸಿಕೊಳ್ಳಬೇಕು?ಅಂತ ಕೇಳಿದರು.

ಅವರ ಮಾತು ಕೇಳಿದ ಮುಖ್ಯಮಂತ್ರಿಗಳು:‘ಮಿಸ್ಟರ್ ಸೂರ್ಯ ಪ್ರಕಾಶ್, ಇದು ತಪ್ಪು ಅಂತ ನನಗೆ ಗೊತ್ತಿದೆ. ಹಾಗೆಯೇ ಸಿಕ್ಕು ಬಿದ್ದರೆ ಅವರು ರಾಜಕೀಯವಾಗಿ ಮೂಲೆಗುಂಪಾಗಿ ಹೋಗುತ್ತಾರೆ. ಅಽಕಾರ ಕಳೆದುಕೊಳ್ಳುತ್ತಾರೆ ಎಂಬುದೂ ಗೊತ್ತಿದೆ. ಆದರೆ ಇದೇ ವಿಷಯವನ್ನು ಸಾರ್ವಜನಿಕ ಚರ್ಚೆಗೆ ಗುರಿಯಾಗಿಸಿದರೆ ವ್ಯವಸ್ಥೆಗೆ ಕೆಟ್ಟ ಸಂದೇಶ ಹೋಗುತ್ತದೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದರಲ್ಲ ಅವರ ಬಗ್ಗೆ ನಿಮಗೇ ಗೊತ್ತಿದೆ.ಇದನ್ನು ನಿಮಗೇಕೆ ಹೇಳಿದೆ ಎಂದರೆ ಇಂತಹ ಸಂಬಂಧ ಗಳನ್ನಿಟ್ಟುಕೊಂಡವರ ತಲಾಶೆಗೆ ಇಳಿದರೆ ವಿಧಾನಸೌಧ ಮಾತ್ರವಲ್ಲ, ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಇಂಥವರದೇ ಕತೆಗಳು. ಹಾಗಂತ ಇದರ ವಿರುದ್ಧ ಹೋರಾಡಿ ಸಮಾಜದಿಂದ ಇದನ್ನು ಕಿತ್ತು ಹಾಕುತ್ತೇವೆ ಅಂದುಕೊಳ್ಳಿ. ಆಗ ನಾವು ಜನರ ಕೆಲಸ ಮಾಡುವುದನ್ನು ಬಿಟ್ಟು ಇದನ್ನೇ ಉದ್ಯೋಗ ಮಾಡಿಕೊಳ್ಳಬೇಕಾಗುತ್ತದೆ’ ಎಂದರು.

ಅವರ ಧ್ವನಿಯಲ್ಲಿದ್ದ ಅಸಹಾಯಕತೆ ಸೂರ್ಯಪ್ರಕಾಶ್ ಅವರಿಗೆ ಅರ್ಥವಾಯಿತು. ಅವತ್ತು ಹೀಗೆ ಮಾತನಾಡುತ್ತಿದ್ದಂತೆಯೇ ಸೂರ್ಯ ಪ್ರಕಾಶ್ ಅವರ ಮೊಬೈಲಿಗೆ ಫೋನು ಬಂತು.ಅತ್ತ ಕಡೆಯಿಂದ ಮಾತನಾಡುತ್ತಿದ್ದವರು ಮುಖ್ಯಮಂತ್ರಿಗಳ ಆಪ್ತರಾದ ನಿರಂಜನ್‌ಗೌಡರು. ಎತ್ತಿದ ಮಾತಿಗೇ ಅವರು:‘ಸೂರ್ಯಪ್ರಕಾಶ್ ಅವರೇ, ಮಾಜಿ ಮುಖ್ಯ ಮಂತ್ರಿಗಳಾದ ಸೋಮ ಕೃಷ್ಣ ರಾನಡೆ ಅವರು ಅತುಲ್ಯ ಆಸ್ಪತ್ರೆಗೆ ಸೇರಿದ್ದಾರೆ. ಸೌಜನ್ಯಕ್ಕಾಗಿ ಒಂದು ಸಲ ಅತುಲ್ಯ ಆಸ್ಪತ್ರೆಗೆ ಹೋಗಿ ಅವರನ್ನು ಭೇಟಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಿ’ ಅಂತ ಹೇಳಿ ಕರೆಯನ್ನು ಕಟ್ ಮಾಡಿದರು.

ನಿರಂಜನ್ ಗೌಡರು ಹೇಳಿದ ಮಾತನ್ನು ಪಕ್ಕದ ಇದ್ದ ಮುಖ್ಯಮಂತ್ರಿ ಅಚ್ಯುತ್ ರಾವ್ ಅವರಿಗೆ ಹೇಳಿದಾಗ: ಓ,ನಡೆಯಿರಿ ಸೂರ್ಯಪ್ರಕಾಶ್ ಅತುಲ್ಯ ಆಸ್ಪತ್ರೆಗೆ ಹೋಗಿ ಬರೋಣ ಎಂದರು. ಲಾನ್ ಟೆನ್ನಿಸ್ ಅಸೋಸಿಯೇಷನ್‌ನಿಂದ ಐದೇ ನಿಮಿಷದ ದಾರಿ. ಕಾರು ಆತುಲ್ಯ ಆಸ್ಪತ್ರೆಯ ಆವರಣಕ್ಕೆ ಬಂದಾಗ ಕೆಳಗಿಳಿದ ಸಿಎಂ ಅಚ್ಯುತ್ ರಾವ್ ಮತ್ತು ಸೂರ್ಯಪ್ರಕಾಶ್ ಮಾಜಿ ಸಿಎಂ ರಾನಡೆ ಅವರಿದ್ದ ಕೋಣೆಯ ಬಳಿ ಹೋದರು.

ಆದರೆ ಇವರು ಕೋಣೆಯ ಬಳಿ ಹೋಗುತ್ತಿದ್ದಂತೆಯೇ ಲಾಯರ್ ಒಬ್ಬರು ರಾನಡೆ ಅವರ ಬಳಿ ಮಾತನಾಡುತ್ತಿರುವುದು ಕಾಣಿಸಿತು. ನೋಡಿದರೆ ರಾನಡೆಯವರು ತುಂಬ ಚಿಂತೆಯಲ್ಲಿದ್ದಂತೆ ಕಾಣುತ್ತಿದ್ದರು. ಸರಿ, ಇದಾದ ಐದು ನಿಮಿಷಗಳ ನಂತರ ಲಾಯರ್ ಹೊರಗೆ ಬಂದರು. ಮತ್ತು ಒಳಗೆ ಹೋದ ಸಿಎಂ ಅಚ್ಯುತ್ ಅವರು:ಸಾರ್ ಹೇಗಿದ್ದೀರಿ? ಎಂದು ರಾನಡೆಯವರ ಕುಶಲ ವಿಚಾರಿಸಿದರು.

ಇದಾದ ಸ್ವಲ್ಪ ಹೊತ್ತಿನ ನಂತರ ರಾನಡೆ ಅವರಿದ್ದ ಕೋಣೆಯಿಂದ ಹೊರಬರಬೇಕು.ಆಗ ಇದ್ದಕ್ಕಿದ್ದಂತೆ ಅಚ್ಯುತ್ ರಾವ್ ಅವರು ರಾನಡೆಯವರನ್ನು ನೋಡಿ: ಸಾರ್,ನಾವು ಬರುವ ಮುಂಚೆ ಲಾಯರ್ ಬಂದಿದ್ದರಲ್ಲ ಏನು ವಿಷಯ?’ಎಂದು ಕೇಳಿದರು. ಆಗ ರಾನಡೆಯವರ ಮುಖದಲ್ಲಿ ವಿಷಾದದ ನಗುವೊಂದು ಸುಳಿಯಿತು.‘ಓ ಲಾಯರ್ ಅವರು ಬಂದಿದ್ದಾ?ಅದು ಸಿದ್ಧಾಪುರದಲ್ಲಿರುವ ನಮ್ಮ ತೋಟವನ್ನು ಮಾರುವ ವಿಷಯ ಚರ್ಚಿಸಬೇಕಿತ್ತು. ಯಾಕೆಂದರೆ ನನಗೆ ಪದೇ ಪದೇ ಅನಾರೋಗ್ಯ.ಹೀಗಾಗಿ ಚಿಕಿತ್ಸೆಯ ವೆಚ್ಚಕ್ಕಾಗಿ ಹಣ ಬೇಕಲ್ಲ? ಹೀಗಾಗಿ ಆ ತೋಟವನ್ನು ಮಾರಬೇಕು ಎಂದು ತೀರ್ಮಾನಿಸಿz.  ಅದಕ್ಕಾಗಿ ಆ ಪ್ರೊಸೆಸ್ ಮುಗಿಸಲು ನಮ್ಮ ಲಾಯರ್ ಅವರನ್ನು ಕರೆಸಿz ಎಂದರು.

ರಾನಡೆ ಅವರ ಮಾತು ಕೇಳದ ಮುಖ್ಯಮಂತ್ರಿಗಳು ಹೆಚ್ಚು ಮಾತನಾಡಲಿಲ್ಲ. ಬದಲಿಗೆ ಮತ್ತೊಮ್ಮೆ ಅವರಿಗೆ ನಮಸ್ಕರಿಸಿ ಅತುಲ್ಯ ಆಸ್ಪತ್ರೆಯಿಂದ ಹೊರಬಂದರು. ಹೀಗೆ ಹೊರಬಂದವರು ತುಂಬ ಹೊತ್ತು ಮಾತನಾಡಲಿಲ್ಲ. ಕೊನೆಗೊಮ್ಮೆ ಸೂರ್ಯಪ್ರಕಾಶ್ ಅವರ ಕಡೆ ತಿರುಗಿ:‘ಮಿಸ್ಟರ್ ಸೂರ್ಯಪ್ರಕಾಶ್, ಈ ರಾನಡೆಯವರು ಅಧಿಕಾರದಲ್ಲಿದ್ದಾಗ ಮದ್ಯದ ದೊರೆ ಹರಿ ಚರಣ್ ಅಂಬೋಡೆ ತುಂಬ ಕ್ಲೋಸಾಗಿದ್ದರು ಅಂತಾರಲ್ಲ? ಅವರು ಇವರಿಗೆ ದಂಡಿಯಾಗಿ ಹಣ ಕೊಟ್ಟರು. ಮತ್ತು ಅ ಹಣದಿಂದ ಇವರು ಬೆಂಗಳೂರು ಮತ್ತು ತಮ್ಮೂರಿನಲ್ಲಿ ಅಪಾರ ಆಸ್ತಿ ಮಾಡಿದರು ಎನ್ನುತ್ತಾರಲ್ಲ? ಹಾಗೇನಾದರೂ ಆಗಿದ್ದರೆ ಇವರೇಕೆ ಟ್ರೀಟ್‌ಮೆಂಟಿಗಾಗಿ ತೋಟವನ್ನು ಮಾರುವ ಸ್ಥಿತಿ ಬರಬೇಕಿತ್ತು?’ ಎಂದು ಕೇಳಿದರು.

ಆಗ ಸೂರ್ಯಪ್ರಕಾಶ್ ಅವರು ಖೇದದ ಧ್ವನಿಯಲ್ಲಿ:ಸಾರ್,ಎಂಟು ವರ್ಷಗಳ ಹಿಂದೆ ಸಿಎಂ ಆಗಿದ್ದರಲ್ಲ ಬಾರೆಕೊಪ್ಪ ಸಿಂಗಾರಪ್ಪ ಅವರ ವಿಷಯದಲ್ಲೂ ಇಂತಹದೇ ಪುಕಾರುಗಳು ಎದ್ದಿದ್ದವು.ಮದ್ಯದ ದೊರೆಗಳು ಕೊಟ್ಟ ಹಣದಲ್ಲಿ ಸಿಂಗಾರಪ್ಪ ಅವರು ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಆಸ್ತಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.ಮೆಜೆಸ್ಟಿಕ್‌ಗೆ ಹೋದರಂತೂ ಕಣ್ಣಿಗೆ ಕಾಣಿಸುವ ಟಾಕೀಸುಗಳು, ವ್ಯಾಪಾರಿ ಮಳಿಗೆಗಳನ್ನು ತೋರಿಸುವ ಜನ ಇದು ಸಿಂಗಾರಪ್ಪನವರದು ಎನ್ನುತ್ತಿದ್ದರು. ಆದರೆ ಇವತ್ತು ಸಿಂಗಾರಪ್ಪನವರ ಸ್ಥಿತಿ ನೋಡಿ. ಅವರೀಗ ಕೋಟಿಗಟ್ಟಲೆ ಸಾಲ ಇರುವ ನಾಯಕ ’ಎಂದರು.

ಸೂರ್ಯಪ್ರಕಾಶ್ ಅವರ ಮಾತು ಕೇಳಿದ ಮುಖ್ಯಮಂತ್ರಿ ಅಚ್ಯುತ್ ರಾವ್ ಅವರು: ಹಾಗಿದ್ದರೆ ಮದ್ಯದ ದೊರೆಗಳು ಕೊಟ್ಟ ಹಣ?ಎಂದು ಪ್ರಶ್ನಿಸಿದರು.ಆಗ ಸೂರ್ಯಪ್ರಕಾಶ್ ಪುನಃ ಹೇಳುತ್ತಾ ಹೋದರು. ಸಾರ್, ಅಧಿಕಾರಸ್ಥರಿಗೆ ಆಪ್ತರಾಗುವ ಮದ್ಯದ ದೊರೆಗಳು ಒಂದಷ್ಟು ಹಣ ಕೊಡುವುದು ನಿಜ.ಆದರೆ ಅವರು ಕೊಡುವ ದುಡ್ಡನ್ನು ಚುನಾವಣೆಗಳಿಗೆ ಮತ್ತು ರಾಜಕಾರಣಕ್ಕೆ ಅಂತ ಅಧಿಕಾರದಲ್ಲಿರುವವರು ಹಂಚಿಬಿಡುತ್ತಾರೆ. ಅರ್ಥಾತ್,ಅವರು ಕೊಡುವ ಹಣ ಅಧಿಕಾರದಲ್ಲಿರುವವರ ಬಳಿ ಉಳಿಯುವುದಿಲ್ಲ. ಸಾಲದೆಂಬಂತೆ ನೂರು ರೂಪಾಯಿ ಕೊಡುವ ಮದ್ಯದ ದೊರೆಗಳು ಲಕ್ಷ ರೂಪಾಯಿ ಕೊಟ್ಟೆವು ಎಂಬಂತೆ ಷೋ ಕೊಟ್ಟು ಎಲ್ಲರ ಮನಸ್ಸಿನಲ್ಲಿ ಸಂಶಯ ಮೂಡಿಸಿರುತ್ತಾರೆ’ ಎಂದರು. ಯಾವಾಗ ಸೂರ್ಯಪ್ರಕಾಶ್ ಅವರು ಈ ಮಾತು ಹೇಳಿದರೋ ಇದಾದ ನಂತರ ಮುಖ್ಯಮಂತ್ರಿ ಅಚ್ಯುತ್ ರಾವ್ ಅವರು ಹೆಚ್ಚು ಮಾತನಾಡಲಿಲ್ಲ. ಬದಲಿಗೆ ಮರುದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಜಿ ಸಿಎಂ ರಾನಡೆಯವರ ವಿಷಯ ಪ್ರಸ್ತಾಪಿಸಿದರು. ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುವ ನಿರ್ಣಯಕ್ಕೆ ಒಪ್ಪಿಗೆ ಪಡೆದರು.

ಇದಾದ ಮರುದಿನವೇ ಅಬಕಾರಿ ಇಲಾಖೆಯ ಪ್ರಮುಖರ ಮೀಟಿಂಗು ಕರೆದು:‘ರಾಜ್ಯದ ಡಿಸ್ಟಿಲರಿ ಮಾಲೀಕರಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ಹಣ ಎಷ್ಟು? ಮತ್ತು ವಾಸ್ತವವಾಗಿ ಬರಬಹುದಾದ ಹಣ ಎಷ್ಟು?’ ಎಂದು ಕೇಳಿದರು. ಅವರು ಹೀಗೆ ಕೇಳಿದ್ದೇ ತಡ,ಸಭೆಯಲ್ಲಿದ್ದ ಹಿರಿಯ ಅಧಿಕಾರಿ ತಲ್ಲಂ ಗೋಪಾಲಕೃಷ್ಣ ಅವರು:‘ಸಾರ್,ಡಿಸ್ಟಿಲರಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿರುವ ಹಣ ವರ್ಷಕ್ಕೆ ಒಂದು ಸಾವಿರ ಕೋಟಿ ರೂಪಾಯಿ. ಆದರೆ ಕಟ್ಟುನಿಟ್ಟಾಗಿ ತೆರಿಗೆ ವಸೂಲು ಮಾಡಿದರೆ ಇದು ಹತ್ತು ಸಾವಿರ ಕೋಟಿ ರೂಪಾಯಿಗಳಿಗೇರುತ್ತದೆ. ಆದರೆ ಅವರು ರಾಜಕಾರಣದ ಸಖ್ಯವನ್ನು ಬಳಸಿಕೊಂಡು ಅಪಾರ ಪ್ರಮಾಣದ ಮದ್ಯ ಉತ್ಪಾದಿಸುತ್ತಾರೆ. ಆದರೆ ಉತ್ಪಾದಿಸಿದ ಮದ್ಯದ ಶೇಕಡಾ ಹತ್ತರಷ್ಟು ಮದ್ಯಕ್ಕೂ ತೆರಿಗೆ ಕಟ್ಟುವುದಿಲ್ಲ. ಹೀಗೆ ತೆರಿಗೆ ಕಟ್ಟದೆ ಹೊರಹೋಗುವ ಮದ್ಯವೇ ಸೆಕೆಂಡ್ಸ್. ಈ ಸೆಕೆಂಡ್ಸ್ ಪುನಃ ಬೇರೆ ಬೇರೆ ಕಳ್ಳ ಮಾರ್ಗಗಳಲ್ಲಿ ಥರ್ಡ್ಸ್ ರೂಪದಲ್ಲಿ ಮಾರಾಟವಾಗುತ್ತದೆ ಎಂದು ಇಂಚಿಂಚು ವಿವರವನ್ನೂ ಕೊಟ್ಟರು. ಈ ವಿವರನ್ನು ಪಡೆದ ಮುಖ್ಯಮಂತ್ರಿ ಅಚ್ಯುತ್ ರಾವ್ ಅವರು:‘ಇನ್ನುಮುಂದೆ ಡಿಸ್ಟಿಲರಿಗಳು ಉತ್ಪಾದಿಸುವ ಮದ್ಯವನ್ನು ಸರ್ಕಾರ ಸ್ಥಾಪಿಸುವ ಪಾನೀಯ ನಿಗಮಕ್ಕೆ ಕೊಟ್ಟು ಹಣ ಪಡೆಯಲಿ.

ಮಾರಾಟದ ಜವಾಬ್ದಾರಿ ಸರ್ಕಾರಕ್ಕಿರಲಿ, ಆಗ ತೆರಿಗೆ ವಂಚನೆ ನಿಂತಂತಾಗುತ್ತದೆ ಅಲ್ಲವೇ?’ ಎಂದರು. ಮುಖ್ಯಮಂತ್ರಿಗಳ ಮಾತಿಗೆ ಸಭೆಯಲ್ಲಿದ್ದ ಅಧಿಕಾರಿಗಳ ಪೈಕಿ ಕೆಲವರು ‘ಹೌದು ಸಾರ್’ ಎಂದರಾದರೂ, ಬಹುತೇಕರ ಮುಖ ಕಪ್ಪಿಟ್ಟಿತ್ತು. ಅದನ್ನು ನೋಡುತ್ತಲೇ ಅಚ್ಯುತ್ ರಾವ್ ಅವರಿಗೆ ವಿಷಯ ಸ್ಪಷ್ಟವಾಯಿತು. ಮದ್ಯದ ದೊರೆಗಳ ಹಣ ತಿನ್ನುವವರು ಇಲಾಖೆಯ ಇದ್ದಾರೆ. ಹೀಗಾಗಿ ಅವರಿಗೆ ಹೊಡೆದರೆ ಇವರ ಆದಾಯದ ಗತಿ ಏನಾಗಬೇಕು? ಎನ್ನಿಸಿ ನಗು ಬಂತು. ಹೀಗೆ ಹಳೆಯದನ್ನು ನೆನಪಿಸಿಕೊಂಡ ಸೂರ್ಯಪ್ರಕಾಶ್ ಮುಖ್ಯಮಂತ್ರಿ ಅಚ್ಯುತ್ ರಾವ್ ಅವರ ನಡೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ: ಅವರಂತಹ ರಾಜಕಾರಣಿಗಳೆಲ್ಲಿ? ಈ ಧರ್ಮೇಂದ್ರ ಗುಲ್ಗುಲೆ, ಮನೋಹರ ಕುರ್ಕುರೆ ಅವರಂತಹ ರಾಜಕಾರಣಿಗಳೆಲ್ಲಿ?ಎಂದು ಯೋಚಿಸಿದರು.

ಆದರೆ ಇಂತಹ ಯೋಚನೆಗೆ ಉತ್ತರ ಸಿಗುವುದಿಲ್ಲ ಎನ್ನಿಸಿ ಹಾಗೆಯೇ ಕುರ್ಚಿಗೆ ಒರಗಿಕೊಂಡರು. ಇವತ್ತು ಇದರ ಪ್ರಮಾಣ ನಲವತ್ತು ಸಾವಿರ ಕೋಟಿ ರೂಪಾಯಿಗಳಿಗೇರಿದೆ.

” ಕೆಲವೇ ದಿನಗಳಲ್ಲಿ ಪಾನೀಯ ನಿಗಮ ಸ್ಥಾಪನೆಯಾಗಿ ರಾಜ್ಯದ ಎಲ್ಲ ಡಿಸ್ಟಿಲರಿಗಳು ಉತ್ಪಾದಿಸುವ ಮದ್ಯ ಸರ್ಕಾರ ಸ್ಥಾಪಿಸಿದ ಪಾನೀಯ ನಿಗಮದ ಮೂಲಕವೇ ಮಾರಾಟವಾಗಬೇಕು ಎಂಬ ಕಾನೂನು ಜರಿಯಾಯಿತು.ಇದಾದ ನಂತರ ಸರ್ಕಾರದ ವಾರ್ಷಿಕ ಆದಾಯ ಗಗನಕ್ಕೇರಿತು”

 

 

Tags:
error: Content is protected !!