ಕೆ.ಬಿ.ರಮೇಶನಾಯಕ
ಕಾಮಗಾರಿ ವೇಳೆ ಒಂದು ಕಡೆ ಸಂಚಾರ ನಿರ್ಬಂಧ; ಮತ್ತೊಂದು ಕಡೆ ಓಡಾಟಕ್ಕೆ ಅವಕಾಶ
ವೈಟ್ ಟಾಪಿಂಗ್ ಕಾಮಗಾರಿಗೆ ಅತ್ಯಾಧುನಿಕ ಯಂತ್ರಗಳ ಬಳಕೆ
ಪ್ರತಿದಿನ ೨ ಗಂಟೆಗೆ ೩೦೦ರಿಂದ ೪೦೦ ಮೀಟರ್ ವರೆಗೆ ವೈಟ್ ಟಾಪಿಂಗ್ ಕಾಮಗಾರಿ
ಮೈಸೂರು: ಮುಂದಿನ ೩೦-೪೦ ವರ್ಷಗಳ ಕಾಲ ಯಾವುದೇ ಸಮಸ್ಯೆ ಇಲ್ಲದಂತೆ ವಾಹನ ಸವಾರರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಕಾರಣದಿಂದ ನಗರದ ಪ್ರಮುಖ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುತ್ತಿದ್ದು, ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆಯೇ ಉಳಿದ ೯ ರಸ್ತೆಗಳ ಕಾಮಗಾರಿಗಳನ್ನು ಶುರು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ದಸರಾ ಮಹೋತ್ಸವ ಆರಂಭಕ್ಕೂ ಮುನ್ನ ಮೂಲ ಸೌಕರ್ಯಗಳೊಂದಿಗೆ ೩ ರಸ್ತೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದ ಅಧಿಕಾರಿಗಳು ಇದೀಗ ಬೇರೆ ಬೇರೆ ರಸ್ತೆಗಳ ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾದ ಕಾಮಗಾರಿಗಳಿಗೆ ವೇಗ ನೀಡಲು ಮುಂದಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯರ ಸೂಚನೆಯಂತೆ ಕಾಮಗಾರಿಗಳು ಶೀಘ್ರವೇ ಪ್ರಾರಂಭವಾಗಲಿವೆ. ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಅರಮನೆ ನಗರಿ ಮೈಸೂರಿನ ರಸ್ತೆಗಳ ದುರಸ್ತಿಗಾಗಿ ಪ್ರತಿವರ್ಷ ಕೋಟ್ಯಂತರ ರೂ. ಖರ್ಚು ಮಾಡುವ ಜತೆಗೆ, ದಸರಾ ವೇಳೆಯಲ್ಲಿ ಡಾಂಬರೀಕರಣಕ್ಕಾಗಿ ಕನಿಷ್ಠ ೫ ರಿಂದ ೧೦ ಕೋಟಿ ರೂ. ಬಿಡುಗಡೆ ಮಾಡುತ್ತಿದ್ದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿತ್ತು.
ಇದನ್ನು ಮನಗಂಡಿದ್ದ ಜಿಲ್ಲೆಯವರೇ ಆಗಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ನಗರ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಮಹತ್ವದ ನಿರ್ಧಾರ ಮಾಡಿ, ಮೊದಲ ಹಂತದಲ್ಲಿ ೪೬.೮೮ ಕಿ.ಮೀ ಉದ್ದದ ೧೨ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ೩೯೩.೮೫ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು. ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ ತತ್ ಕ್ಷಣವೇ ಸಿಕ್ಕಿದ್ದರಿಂದಾಗಿ ಕಳೆದ ಮೇ ತಿಂಗಳಲ್ಲಿ ಶುರು ಮಾಡಲಾಗಿತ್ತು. ಅದರಂತೆ, ದಸರಾ ಸಂದರ್ಭದಲ್ಲಿ ೩ ರಸ್ತೆಗಳನ್ನು ಮುಗಿಸುವ ಮಾತನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳಿರುವಂತೆ ಈಗ ಸುಸಜ್ಜಿತವಾಗಿ ಮುಗಿಸಿದ್ದಾರೆ.
ಅರಮನೆ ಪಶ್ಚಿಮ ಗೇಟ್‌ನಿಂದ ಬೋಗಾದಿ ಗ್ರಾಮದ ೬ ಕಿ.ಮೀ., ಹಾರ್ಡಿಂಜ್ ವೃತ್ತದಿಂದ ಸರ್ಕಾರಿ ಅತಿಥಿಗೃಹ, ಎಫ್ಟಿಎಸ್ ಸರ್ಕಲ್ ಮಾರ್ಗವಾಗಿ ಕೊಲಂಬಿಯಾ ಏಷಿಯಾ ವೃತ್ತದವರೆಗಿನ ೫.೬ ಕಿ. ಮೀ., ಬಸವೇಶ್ವರ ವೃತ್ತದಿಂದ ಶ್ರೀರಾಂಪುರ ದವರೆಗಿನ ೬.೪ ಕಿ.ಮೀ. ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಮಾಡುವ ಜತೆಗೆ, ಬಫರ್ ಜೋನ್ ಅಭಿವೃದ್ಧಿ, ಆಯ್ದ ಭಾಗಗಳಲ್ಲಿ ಫುಟ್‌ಪಾತ್ ಅಭಿವೃದ್ಧಿ, ಆಯ್ದ ಭಾಗಗಳಲ್ಲಿ ಚರಂಡಿ ನಿರ್ಮಾಣ, ಅಡ್ಡಮೋರಿಗಳ ಅಭಿವೃದ್ದಿ ಕಾಮಗಾರಿ, ವಿದ್ಯುತ್ ದೀಪ ಅಳವಡಿಸುವುದು, ಯುಟಿಲಿಟಿ ಸ್ಥಳಾಂತರ ಕಾಮಗಾರಿ ಮುಗಿಸಿದ್ದರಿಂದಾಗಿ ಈ ಮೂರೂ ರಸ್ತೆಗಳಲ್ಲಿ ವಾಹನಗಳ ಸವಾರರು ಸುಗಮವಾಗಿ ಸಂಚರಿಸುತ್ತಿದ್ದಾರೆ.
ದೀಪಾವಳಿ ಬಳಿಕ ಉಳಿಕೆ ರಸ್ತೆಗಳ ಅಭಿವೃದ್ಧಿ: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆಯೇ ಉಳಿದ ಎಲ್ಲ ರಸ್ತೆಗಳಲ್ಲೂ ವೈಟ್ ಟಾಪಿಂಗ್ ಜತೆ ಜತೆಗೆ ಮೂಲ ಸೌಕರ್ಯಗಳ ಕೆಲಸ ಮುಗಿದ ಮೇಲೆ ವಾಹನಗಳ ಸಂಚಾರಕ್ಕೆ ಮುಕ್ತವಾಗಿರಿಸಲಾಗುತ್ತದೆ. ರೈಲ್ವೆ ನಿಲ್ದಾಣ ವೃತ್ತದಿಂದ ನಂಜನಗೂಡು ಎಲೆ ತೋಟ ಜಂಕ್ಷನ್‌ವರೆಗೆ, ಮೆಟ್ರೋಪೋಲ್ ವೃತ್ತದಿಂದ ಹುಣಸೂರು ರಿಂಗ್ ರಸ್ತೆ, ಜೆಎಲ್‌ಬಿ ರಸ್ತೆಯಿಂದ ಮೇಟಗಳ್ಳಿ ಜಯದೇವ ಆಸ್ಪತ್ರೆ, ಸಬ್ ಅರ್ಬನ್ ಬಸ್ ನಿಲ್ದಾಣದಿಂದ ಕೆ.ಆರ್.ಆಸ್ಪತ್ರೆ, ಕುಕ್ಕರಹಳ್ಳಿ ಕೆರೆ ಜಂಕ್ಷನ್‌ನಿಂದ ವಿಜಯ ಬ್ಯಾಂಕ್, ‘ಆಂದೋಲನ ’ ಸರ್ಕಲ್‌ವರೆಗೆ, ಹಾರ್ಡಿಂಜ್ ವೃತ್ತದಿಂದ ಸರ್ಕಾರಿ ಅತಿಥಿಗೃಹ, ಪೊಲೀಸ್ ಅಕಾಡೆಮಿ, ಹಾರ್ಡಿಂಜ್ ವೃತ್ತದಿಂದ ತಾಲ್ಲೂಕು ಕಚೇರಿವರೆಗಿನ ರಸ್ತೆಗಳ ಕಾಮಗಾರಿ ಆರಂಭಿಸಲಾಗುತ್ತದೆ.
ವೈಟ್ ಟಾಪಿಂಗ್ ಕಾಮಗಾರಿ ಮಾಡುವಾಗ ಒಂದು ಬದಿಯ ರಸ್ತೆಯಲ್ಲಿ ಸಂಚಾರ ನಿರ್ಬಂಧ ವಿಧಿಸಿ ಮತ್ತೊಂದು ಬದಿಯಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ವೈಟ್ ಟಾಪಿಂಗ್ ಕಾಮಗಾರಿಗೆ ಅತ್ಯಾಧುನಿಕ ಯಂತ್ರಗಳನ್ನು ಬಳಸುವ ಜತೆಗೆ, ಎಲ್ಲಾ ರೀತಿಯ ಮೆಟಿರಿಯಲ್‌ಗಳನ್ನು ಜತೆಗೆ ಇಟ್ಟುಕೊಂಡು ದಿನದ ೨ ಗಂಟೆಗೆ ೩೦೦ರಿಂದ ೪೦೦ ಮೀಟರ್‌ವರೆಗೆ ಟಾಪಿಂಗ್ ಮಾಡುವುದರಿಂದ ಬಹುಬೇಗನೆ ಮುಗಿಯಲಿದೆ. ವೈಟ್ ಟಾಪಿಂಗ್ ಮಾಡುತ್ತಿದ್ದಂತೆಯೇ ಗೋಣಿ ಚೀಲಗಳನ್ನು ಹೊದಿಸಿ ನೀರು ಸಿಂಪಡಿಸುವ ಕೆಲಸವು ನಡೆಯುವುದರಿಂದ ನಿಧಾನವಾಗಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೇಗ ಮುಗಿಸಲು ಸೂಚನೆ: ತಮ್ಮ ತಂದೆಯ ಕಾಲದಲ್ಲಿ ಮಂಜೂರಾಗಿರುವ ಕಾಮಗಾರಿಗಳಿಗೆ ವೇಗ ನೀಡಲು ಮುಂದಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ವೈಟ್ ಟಾಪಿಂಗ್ ಕಾಮಗಾರಿಗಳ ಕುರಿತಂತೆ ಮಾಹಿತಿ ಪಡೆದು ನಿಗದಿತ ಸಮಯದಲ್ಲಿ ಮುಗಿಸುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಕಳೆದ ವಾರವಷ್ಟೇ ಖಾಸಗಿ ಕಾರ್ಯಕ್ರಮಕ್ಕೆ ಆಗಮಿ ಸಿದ್ದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು, ತ್ವರಿತಗತಿಯಲ್ಲಿ ಮುಗಿಸುವಂತೆ ಹೇಳಿದ್ದಾರೆ. ಹೀಗಾಗಿ, ಸಚಿವರು ವೈಟ್ ಟಾಪಿಂಗ್, ಡಾ.ಬಿ.ಆರ್.ಅಂಬೇಡ್ಕರ್ ಭವನ, ಕೆ.ಆರ್.ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಹೊಸ ಹೊರರೋಗಿಗಳ ವಿಭಾಗದ ಕಟ್ಟಡವನ್ನು ಮುಗಿಸುವುದಕ್ಕೆ ಗಮನಹರಿಸಿದ್ದಾರೆ.
ಉಳಿದ ೯ ರಸ್ತೆಗಳ ಕಾಮಗಾರಿಗಳ ಆರಂಭಕ್ಕೆ ಸಿದ್ಧತೆ; ವೇಗ ನೀಡಲು ಮುಂದಾದ ಸಚಿವ ಯತೀಂದ್ರ ಸಿದ್ದರಾಮಯ್ಯ
” ನಗರದಲ್ಲಿ ಈಗಾಗಲೇ ಮೂರು ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗಳು ಮುಗಿದು ಸಾರ್ವ ಜನಿಕರು ಸುಗಮವಾಗಿ ಸಂಚರಿಸುತ್ತಿದ್ದಾರೆ. ಉಳಿದ ೯ ಕಾಮಗಾರಿಗಳನ್ನು ಆರಂಭಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದೆ. ವೈಟ್ ಟಾಪಿಂಗ್ ಕಾಮಗಾರಿಯು ಬೇರೆ ರೀತಿಯಲ್ಲಿ ನಿಧಾನವಾಗಲ್ಲ. ಪ್ರತಿನಿತ್ಯ ೩೦೦ ರಿಂದ ೪೦೦ ಮೀಟರ್ ಟಾಪಿಂಗ್ ಆಗುವುದರಿಂದ ನಿಗದಿತ ಸಮಯದಲ್ಲಿ ಮುಕ್ತಾಯವಾಗಲಿದೆ.”
-ಎಚ್.ಆರ್.ಪದ್ಮನಾಭ್, ಕಾರ್ಯಪಾಲಕ ಅಭಿಯಂತರರು




