ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅಕ್ಟೋಬರ್ 23ರಿಂದ ಕರ್ನಾಟಕ ಕಾವೇರಿ ನೀರು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿರುವ ತಮಿಳುನಾಡು, ಈ ವಿಚಾರದಲ್ಲಿ ತುರ್ತಾಗಿ ಮಧ್ಯಪ್ರವೇಶಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿತ್ತು. ಆದರೂ ಕರ್ನಾಟಕ ನೀರು ಬಿಡುಗಡೆ ಮಾಡಿಲ್ಲ ಎಂದು ತಮಿಳುನಾಡು ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನೀರು ಹರಿಸದ ಕಾರಣ ತಮಿಳುನಾಡಿನಲ್ಲಿ ನಾಲ್ಕು ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ ಎಂದೂ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ತಮಿಳುನಾಡು ಸರ್ಕಾರ ಕೋರಿದೆ.




