ಕೆ.ಆರ್.ನಗರ: ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ 25 ವರ್ಷದ ಸುಶ್ಮಿತಾ ಹಾಗೂ ಅವರ ನವಜಾತ ಶಿಶು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನ ಮಳಲಿ ಗ್ರಾಮದ ಸುಶ್ಮಿತಾ ಅವರನ್ನು ರಾತ್ರಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಿಗ್ಗೆ ಹೆರಿಗೆ ವೇಳೆ ಸುಶ್ಮಿತಾ ಮತ್ತು ಮಗು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಲ್ಲಿಯೇ ಹೆರಿಗೆ ಮಾಡಿಸಲು ಸಾಧ್ಯವಿಲ್ಲ ಎಂದು ಮೊದಲೇ ತಿಳಿಸಿದ್ದರೆ ಮೈಸೂರಿಗೆ ಕರೆದೊಯ್ಯುತ್ತಿದ್ದೆವು ಎಂದು ಸಂಬಂಧಿಕರು ಅಳಲು ತೋಡಿಕೊಂಡರು. ಸುಶ್ಮಿತಾ ಅವರ ಸ್ಥಿತಿಯ ಬಗ್ಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಲಿಲ್ಲ ಎಂದೂ ಆರೋಪಿಸಿದರು.
ವಿಷಯ ತಿಳಿದ ಬಳಿಕ ಶಾಸಕ ಡಿ. ರವಿಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಸಂಬಂಧಿಕರು ತಮ್ಮ ಆರೋಪಗಳನ್ನು ಶಾಸಕರ ಮುಂದಿಟ್ಟರು.
ಪಟ್ಟಣದ ಪೊಲೀಸ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಯಿ ಮತ್ತು ಮಗುವಿನ ಸಾವಿಗೆ ನಿಖರ ಕಾರಣ ತನಿಖೆಯ ಬಳಿಕ ತಿಳಿಯಬೇಕಿದೆ.




