ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳ ದಿಢೀರ್ ಬದಲಾವಣೆಯಿಂದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ಗೊಂದಲ ಮೂಡಿದೆ. ಶೇಕಡಾ ೮೦ರಷ್ಟು ಶಿಕ್ಷಕರನ್ನು ಜನಗಣತಿ, ಜಾತಿಗಣತಿ, ಎಸ್ಐಆರ್ ಮೊದಲಾದ ಬೋಧಕೇತರ ಕೆಲಸಗಳಿಗೆ ನಿಯೋಜಿಸುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮತ್ತು ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕಾ ಗುಣಮಟ್ಟ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಒಬ್ಬರು ಅಥವಾ ಇಬ್ಬರು ಶಿಕ್ಷಕರಿಂದ ಶಾಲೆ ನಡೆಸಲಾಗುತ್ತಿದ್ದು, ಇದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಕೂಡಲೇ ಸರ್ಕಾರವು ಬೋಧಕೇತರ ಕಾರ್ಯಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು. ಅಲ್ಲದೆ, ಪರೀಕ್ಷಾ ವೇಳಾಪಟ್ಟಿಯಲ್ಲಿ ಸ್ಥಿರತೆ ಕಾಯ್ದುಕೊಂಡು, ಗ್ರಾಮೀಣ ಶಾಲೆಗಳಿಗೆ ಅಗತ್ಯವಿರುವಷ್ಟು ಶಿಕ್ಷಕರನ್ನು ನಿಯೋಜಿಸುವುದರೊಂದಿಗೆ ಮೂಲಭೂತ ಸೌಕರ್ಯ ಒದಗಿಸಬೇಕು.
-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು


