ಚುನಾವಣಾ ಆಯೋಗವು ನಡೆಸಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ನಂತರ ಕರ್ನಾಟಕದ ಮತದಾರರ ಪಟ್ಟಿಯಿಂದ ಸುಮಾರು ಒಂದು ಕೋಟಿ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಸುದ್ದಿ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಿಂದೆ ಮತದಾರರ ಪಟ್ಟಿಯಲ್ಲಿದ್ದ ಇಷ್ಟು ದೊಡ್ಡ ಸಂಖ್ಯೆಯ ಹೆಸರುಗಳನ್ನು ಈಗ ಏಕಾಏಕಿ ತೆಗದುಹಾಕಲು ಕಾರಣವೇನು? ಇಷ್ಟು ವರ್ಷಗಳ ಕಾಲ ಚುನಾವಣಾ ಆಯೋಗದ ಪರಿಶೀಲನಾ ವ್ಯವಸ್ಥೆ ಏನು ಮಾಡುತ್ತಿತ್ತು? ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದವರೆಲ್ಲರೂ ಪ್ರತಿ ಚುನಾವಣೆಯಲ್ಲೂ ಮತ ಹಾಕಿದ್ದಾರೆ ಎಂದರ್ಥವಲ್ಲ. ಹಾಗೆಯೇ, ಈಗ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದ ಮಾತ್ರಕ್ಕೆ ಅವರೆಲ್ಲರೂ ನಕಲಿ ಮತದಾರರು ಎಂದೂ ಹೇಳಲಾಗದು. ಮೃತರು, ಸ್ಥಳಾಂತರಗೊಂಡವರು, ಎರಡು ಮತ ಕ್ಷೇತ್ರಗಳಲ್ಲಿ ನೋಂದಣಿ ಹೊಂದಿದವರು ಹಾಗೂ ಪತ್ತೆಯಾಗದವರ ಹೆಸರುಗಳನ್ನು ತೆಗೆದುಹಾಕುವುದು ಸರಿಯಾದ ಕ್ರಮ. ಆದರೆ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಿದ್ದರೆ ಅದಕ್ಕೆ ಹೊಣೆ ಯಾರು? ಮುಖ್ಯವಾಗಿ ತಿಳಿಯಬೇಕಾದದ್ದು, ಈಗ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿರುವ ಒಂದು ಕೋಟಿ ಮತದಾರರ ಹೆಸರುಗಳ ಪೈಕಿ ಎಷ್ಟು ಮಂದಿ ಅನರ್ಹ ಮತದಾರರಿದ್ದರು? ಎಷ್ಟು ಮಂದಿ ಅರ್ಹ ನಾಗರಿಕರ ಹೆಸರುಗಳನ್ನು ಕೈಬಿಡಲಾಗಿದೆ? ಎಂಬುದು. ಚುನಾವಣಾ ಆಯೋಗವು ಜಿಲ್ಲಾವಾರು ಮತ್ತು ವಿಧಾನಸಭಾ ಕ್ಷೇತ್ರವಾರು ಸಂಪೂರ್ಣ ವಿವರಗಳನ್ನು ಸಾರ್ವಜನಿಕರಿಗೆ ನೀಡಬೇಕು. ಹೆಸರು ಕಡಿತಕ್ಕೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿ, ಅರ್ಹ ಮತದಾರರಿಗೆ ತಮ್ಮ ಹೆಸರು ಮರುಸೇರ್ಪಡೆಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.
-ಹರಳಹಳ್ಳಿ ಪುಟ್ಟರಾಜು , ಪಾಂಡವಪುರ


