‘ದೂರ ಶಿಕ್ಷಣ’ದ ಮೂಲಕ ಕಾನೂನು ಡಿಗ್ರಿ ಪಡೆದ ಛಲಗಾರರು
ಪ. ಬಂಗಾಳದ ಕೊಲ್ಕೋತ್ತಾದ ಒಂದು ಸಾಂಪ್ರದಾಯಸ್ಥ ಕುಟುಂಬದಲ್ಲಿ ಹುಡುಗನಾಗಿ ಹುಟ್ಟಿದ ಜೋಯಿತಾ ಮೊಂಡಲ್ಗೆ ೧೦ ವರ್ಷ ತುಂಬುವ ಹೊತ್ತಿಗೆ ತಾನು ಹುಡುಗ ಅಲ್ಲ, ಹುಡುಗಿ ಅಂತ ಅನ್ನಿಸತೊಡಗಿತು. ಹೆಣ್ಣು ಮಕ್ಕಳಂತೆ ಬಟ್ಟೆ ಧರಿಸಲು, ಅಲಂಕಾರ ಮಾಡಿಕೊಳ್ಳಲು, ಗೊಂಬೆಗಳೊಂದಿಗೆ ಆಡಲು ಮನಸ್ಸಾಗುತ್ತಿತ್ತು. ಆದರೆ, ತಾನು ಹುಡುಗನಾಗಿರುವುದರಿಂದ ಹಾಗೆಲ್ಲ ಮಾಡುವಂತಿಲ್ಲ ಎಂಬ ಸಾಮಾಜಿಕ ಕಟ್ಟಳೆ ಗೊತ್ತಿದ್ದುದರಿಂದ ತಡೆದುಕೊಳ್ಳುತ್ತಿದ್ದರು. ತುಡಿತ ಹೆಚ್ಚಾದಾಗ ಯಾರಿಗೂ ತೋರದಂತೆ ಅದೆಲ್ಲ ಮಾಡುತ್ತಿದ್ದರು. ಆದರೆ, ಹಾಗೆ ಮಾಡುವಾಗ ಸಿಕ್ಕಿ ಹಾಕಿಕೊಂಡು ಮನೆಯವರಿಂದ ಬೈಗುಳ ತಿನ್ನುತ್ತಿದ್ದರು. ಮುಂದೆ ವರ್ಷಗಳು ಕಳೆದಂತೆ ಇದೇಕಾರಣಕ್ಕೆ ಜೋಯಿತಾ ಮೊಂಡಲ್ ಕಿರುಕುಳ ಅನುಭವಿಸುವುದು, ಗೇಲಿಗೊಳಗಾಗುವುದು ಸಾಮಾನ್ಯವಾಗತೊಡಗಿತು.
ಜೋಯಿತಾ ಮೊಂಡಲ್ ಶಾಲೆಯಲ್ಲೂ ಇದೇ ರೀತಿಯ ಕಿರುಕುಳ, ಗೇಲಿ ಎದುರಿಸುತ್ತಿದ್ದರು. ಶಾಲೆಯಲ್ಲಿ ಅವರಿಗೊಬ್ಬ ಸ್ನೇಹಿತ ಇದ್ದಿದ್ದ. ಆವನು ಅಂತಹ ಸನ್ನಿವೇಶಗಳಲ್ಲಿ ಇವರ ನೆರವಿಗೆ ಬರುತ್ತಿದ್ದ. ಆದರೆ, ಹತ್ತನೇ ತರಗತಿಯಲ್ಲಿರುವಾಗ ಅವನು ಶಾಲೆ ಬಿಟ್ಟ ಕಾರಣ ಜೋಯಿತಾ ಮೊಂಡಲ್ ಅಕ್ಷರಶಃ ಒಬ್ಬಂಟಿಗರಾದರು. ಆಗ ಅವರೂ ಶಾಲೆ ಬಿಟ್ಟರು. ಮನೆಯವರಿಗೆ ತಾನು ಶಾಲೆ ಬಿಟ್ಟಿದ್ದನ್ನು ಹೇಳದೆ, ತಾಯಿಗೆ ತನಗೆ ಪಕ್ಕದ ದಿನಾಜ್ಪುರ್ ಜಿಲ್ಲೆಯ ಇಸ್ಲಾಂಪುರ್ನಲ್ಲಿ ಒಂದು ಕೆಲಸ ಸಿಕ್ಕಿದೆ, ಅಲ್ಲಿಗೆ ಹೋಗಿ, ಸರಿಯಾಗದಿದ್ದರೆ ಎರಡು ತಿಂಗಳಲ್ಲಿ ವಾಪಸ್ ಬರುತ್ತೇನೆ ಎಂದು ಮನೆ ಬಿಟ್ಟರು. ಆದರೆ, ಅಂದು ಮನೆ ಬಿಟ್ಟ ಜೋಯಿತಾ ಮೊಂಡಲ್ ಮತ್ತೆಂದೂ ವಾಪಸ್ ಮನೆಗೆ ಹೋಗಲಿಲ್ಲ. ತನ್ನ ಮನದಿಚ್ಛೆಯಂತೆ ಹೆಣ್ಣಿನಂತೆ ಉಡುಪು ಧರಿಸತೊಡಗಿದರು, ಅಲಂಕಾರ ಮಾಡಿಕೊಳ್ಳ ತೊಡಗಿದರು. ಇತರ ಟ್ರಾನ್ಸ್ ಜೆಂಡರುಗಳ ಸಂಪರ್ಕ ಸಾಧಿಸಿ, ಮದುವೆ ಸಮಾರಂಭಗಳಿಗೆ ಹೋಗುವುದು, ಹೆರಿಗೆಯಾದ ಮನೆಗಳಿಗೆ ಹೋಗಿ ನವಜತ ಶಿಶುಗಳನ್ನು ಹರಸುವುದು, ಜನರ ದುರದೃಷ್ಟಗಳನ್ನು ನಿವಾರಿಸಲು ಹಾಡುವುದು, ಕುಣಿಯುವುದು ಮಾಡತೊಡಗಿದರು. ಹಾಗೂ, ಅವುಗಳ ಜೊತೆಯಲ್ಲೇ ಟ್ರಾನ್ಸ್ಜೆಂಡರ್ ಸಮುದಾಯದ ಏಳಿಗೆಗಾಗಿ ಕೆಲಸ ಮಾಡ ತೊಡಗಿದರು.
ತಮ್ಮ ಟ್ರಾನ್ಸ್ಜೆಂಡರ್ ಸಮುದಾಯದ ಏಳಿಗೆಗೆ ಶ್ರಮಿಸಬೇಕು ಎಂಬ ಜೋಯಿತಾ ಮೊಂಡಲ್ರ ಯೋಚನೆ ಅವರನ್ನು, ಮನೆ ಬಿಟ್ಟ ಕಾರಣ ಕಡಿದು ಹೋದ ತನ್ನ ಶಿಕ್ಷಣವನ್ನು ಮುಂದುವರಿಸಲು ಪ್ರಚೋದಿಸಿತು. ಅವರು ‘ದೂರ ಶಿಕ್ಷಣ’ದ ಮೂಲಕ ಕಲಿಯಲು ಪ್ರಾರಂಭಿಸಿ, ಕಾನೂನು ಡಿಗ್ರಿಯನ್ನು ಕೂಡಾ ಮಾಡಿದರು. ೨೦೦೯ರಲ್ಲಿ ಚುನಾವಣಾ ಆಯೋಗವು ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತದಾನದ ಹಕ್ಕು ಪಡೆಯಲು ಸಹಾಯವಾಗಲು ‘ಪುರುಷ’ ಹಾಗೂ ‘ಸೀ’ ಎಂಬ ಎರಡು ಲಿಂಗಗಳ ಜೊತೆಗೆ ಮೂರನೇ ಲಿಂಗವಾಗಿ ‘ಇತರರು’ ಎಂಬ ವಿಭಾಗವನ್ನು ಸೇರಿಸಿತು. ೨೦೧೦ರಲ್ಲಿ ಜೋಯಿತಾ ಮೊಂಡಲ್ ಮತದಾನದ ಹಕ್ಕು ಪಡೆದು, ಆ ಹಕ್ಕು ಪಡೆದ ದಿನಾಜ್ಪುರದ ಪ್ರಪ್ರಥಮ ಟ್ರಾನ್ಸ್ಜೆಂಡರ್ ವ್ಯಕ್ತಿ ಎನಿಸಿಕೊಂಡರು.
೨೦೧೧ರಲ್ಲಿ ಜೋಯಿತಾ ಮೊಂಡಲ್ ಯಾವುದೋ ಕೆಲಸದ ನಿಮಿತ್ತ ಕೊಲ್ಕೋತ್ತಾದ ಒಂದೆಡೆ ಹೋಗಿದ್ದಾಗ ರಾತ್ರಿ ಉಳಿದುಕೊಳ್ಳುವ ಅನಿವಾರ್ಯ ಎದುರಾಯಿತು. ಆದರೆ, ಅವರು ಟ್ರಾನ್ಸ್ಜೆಂಡರ್ ವ್ಯಕ್ತಿ ಎಂಬ ಕಾರಣಕ್ಕೆ ಅಲ್ಲಿನ ಹೋಟೆಲುಗಳು ಕೋಣೆ ನೀಡಲು ನಿರಾಕರಿಸಿದವು. ಆಗ ಅವರು ಅಲ್ಲಿನ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆಯಬೇಕಾಗಿ ಬಂದಿತು. ಅದೊಂದು ದುಃಸ್ವಪ್ನದಂತಹ ಅನುಭವವಾಗಿತ್ತು. ಅದು ಅವರಿಗೆ ತಮ್ಮ ಸಮುದಾಯಕ್ಕೆ ಇನ್ನೂ ಹೆಚ್ಚಿನದ್ದು ಮಾಡಬೇಕಾದ ಅಗತ್ಯವನ್ನು ಮನದಟ್ಟು ಮಾಡಿತು.
ಜೋಯಿತಾ ಮೊಂಡಲ್ ‘ದಿನಾಜ್ಪುರ್ ನೋತುನ್ ಆಲೋ ಸೊಸಾಯಿಟಿ’ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರು. ಅದರ ಮೂಲಕ ಅವರು ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಮನೆಯವರನ್ನು ಆಮಂತ್ರಿಸಿ, ಅವರಿಗೆ ಟ್ರಾನ್ಸ್ ಜೆಂಡರ್ ವ್ಯಕ್ತಿಗಳು ದಿನನಿತ್ಯ ಅನುಭವಿಸುವ ಕಷ್ಟಗಳ ಬಗ್ಗೆ ಸಿನಿಮಾ, ವಿಡಿಯೋಗಳನ್ನು ತೋರಿಸಿ, ಅವರನ್ನು ಅರ್ಥ ಮಾಡಿಕೊಂಡು ಸಹಾನುಭೂತಿಯಿಂದ ನೋಡಲು ಅವರ ಮನೋಪರಿವರ್ತನೆಗೆ ಪ್ರಯತ್ನಿಸಿದರು. ಶಾಲಾ -ಕಾಲೇಜುಗಳಿಗೆ ಭೇಟಿ ಕೊಟ್ಟು ಶಿಕ್ಷಕರು, ವಿದ್ಯಾರ್ಥಿಗಳಿಗೆ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಬಗ್ಗೆ ತಿಳಿವಳಿಕೆ ಹಂಚಿಕೊಂಡರು. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಟ್ರಾನ್ಸ್ ಜೆಂಡರ್ ವಿಷಯ ಕೇಂದ್ರಿತ ಬೀದಿ ನಾಟಕಗಳನ್ನು ಪ್ರದರ್ಶಿಸಿದರು. ಜೋಯಿತಾ ಮೊಂಡಲ್ ೨೯ ವರ್ಷ ಪ್ರಾಯದವರಾಗಿದ್ದಾಗ ೨೦೧೭ರ ಜುಲೈ ತಿಂಗಳಲ್ಲಿ ಕೊಲ್ಕೋತ್ತಾದ ಒಂದು ಲೋಕ ಅದಾಲತ್ ಕೋರ್ಟಿನ ನ್ಯಾಯಾಧೀಶೆಯಾಗಿ ನೇಮಿಸಲ್ಪಟ್ಟರು. ಆ ಮೂಲಕ ಅವರು ಭಾರತದ ಪ್ರಪ್ರಥಮ ಟ್ರಾನ್ಸ್ಜೆಂಡರ್ ನ್ಯಾಯಾಽಶೆ ಎಂಬ ದಾಖಲೆ ಬರೆದರು.
ವಿಶೇಷವೆಂದರೆ, ಅವರು ನ್ಯಾಯಾಽಶೆಯಾಗಿ ನೇಮಿಸಲ್ಪಟ್ಟ ಕೋರ್ಟು ಹಿಂದೆ ಅವರು ರಾತ್ರಿ ಮಲಗುತ್ತಿದ್ದ ಬಸ್ ನಿಲ್ದಾಣದಿಂದ ಕೆಲವೇ ನಿಮಿಷಗಳಷ್ಟು ದೂರದಲ್ಲಿದೆ! ಹಿಂದೆ ಅವರು ಬದುಕು ನಡೆಸಲು ಬೇಡುತ್ತಿದ್ದ ರಸ್ತೆಗಳಲ್ಲಿ ಈಗ ಹವಾನಿಯಂತ್ರಿತ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಜೋಯಿತಾ ಮೊಂಡಲ್ರ ನಂತರ ೨೦೧೮ರಲ್ಲಿ ಇನ್ನಿಬ್ಬರು ಟ್ರಾನ್ಸ್ಜೆಂಡರ್ ವ್ಯಕ್ತಿಗಳು ನ್ಯಾಯಾಧೀಶೆಯರಾಗಿ ಆಯ್ಕೆಯಾದರು. ನಾಗ್ಪುರದ ವಿದ್ಯಾ ಕಾಂಬ್ಲೆ ಮತ್ತು ಅಸ್ಸಾಮಿನ ಸ್ವಾತಿ ಬಿಧಾನ್ ಬರುಹಾ ಎಂಬವರೇ ಆ ಇಬ್ಬರು. ವಿದ್ಯಾ ಕಾಂಬ್ಳೆ ಮಹಾರಾಷ್ಟ್ರದ ಲೋಕಅದಾಲತ್ ನ್ಯಾಯಾಧೀಶೆಯಾಗಿ ಆಯ್ಕೆಯಾದರೆ, ಸ್ವಾತಿ ಬರುಹಾ ಗುವಾಹಟಿಯ ಲೋಕ ಅದಾಲತ್ ನ್ಯಾಯಾಧೀಶೆಯಾಗಿ ನಿಯುಕ್ತಿಗೊಂಡರು.
೨೦೧೧ರ ಜನಗಣತಿಯ ಪ್ರಕಾರ ಭಾರತದಲ್ಲಿರುವ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಸಂಖ್ಯೆ ೪.೮೮ ಲಕ್ಷ. ಇದು ನಿಖರವಾದ ಸಂಖ್ಯೆ ಅಲ್ಲವೆಂಬುದು ಎಲ್ಲರಿಗೂ ತಿಳಿದ ವಿಚಾರ. ಏಕೆಂದರೆ, ಈ ಜನಗಣತಿ ನಡೆದ ಸಮಯದಲ್ಲಿ ದೇಶದಲ್ಲಿ ಟ್ರಾನ್ಸ್ಜೆಂಡರ್ ವ್ಯಕ್ತಿಗಳು ತಮ್ಮ ಅಸ್ತಿತ್ವವನ್ನು ಬಹಿರಂಗಗೊಳಿಸಲು ಹೆದರಬೇಕಾದ ವಾತಾವರಣ ತೀವ್ರವಾಗಿತ್ತು. ೨೦೦೯ರಲ್ಲಿ ಚುನಾವಣಾ ಆಯೋಗ ಇವರನ್ನು ಮೂರನೇ ಲಿಂಗವೆಂದು ಗುರುತಿಸಿದ ನಂತರ, ಹಾಗೂ ಅದಕ್ಕೂ ಹೆಚ್ಚಾಗಿ, ೨೦೧೮ರಲ್ಲಿ ಸುಪ್ರೀಂ ಕೋರ್ಟು ಸೆಕ್ಷನ್ ೩೭೭ನ್ನು ತೆಗೆದು ಹಾಕಿ ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಿದ ನಂತರ ಟ್ರಾನ್ಸ್ ಜೆಂಡರ್ ಸಮುದಾಯ ತನ್ನ ಅಸ್ತಿತ್ವವನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳಲು ಸಾಧ್ಯವಾಗುತ್ತಿದೆ.
ಇಂದು ದೇಶದಲ್ಲಿ ಟ್ರಾನ್ಸ್ಜೆಂಡರುಗಳ ಜನಸಂಖ್ಯೆ ಸುಮಾರು ೬೦-೭೦ ಲಕ್ಷ ಎಂದು ಅಂದಾಜಿಸಲಾಗುತ್ತದೆ. ಇತರ ಸಾಮಾನ್ಯರಂತೆ ಈ ಸಮುದಾಯದಲ್ಲೂ ಪ್ರತಿಭಾವಂತರಿಗೇನೂ ಕೊರತೆಯಿಲ್ಲ. ಕೊರತೆಯಿರುವುದು ಅವಕಾಶದ್ದು. ಮೇಲೆ ಹೇಳಿದ ನ್ಯಾಯಾಧೀಶರಲ್ಲದೆ ವಕೀಲರು, ಪೊಲೀಸ್ ಅಧಿಕಾರಿಗಳು, ಕಾಲೇಜ್ ಪ್ರಿನ್ಸಿಪಾಲ್, ಶಾಸಕರು, ಸೈನಿಕರು, ಆಪರೇಷನ್ ಥಿಯೇಟರ್ ಟೆಕ್ನೀಶಿಯನ್ ಮೊದಲಾಗಿ ವಿವಿಧ ರಂಗಗಳಲ್ಲಿ ಟ್ರಾನ್ಸ್ ಜೆಂಡರುಗಳು ತಮ್ಮ ಸಾಧನೆಯನ್ನು ತೋರಿಸುತ್ತಿದ್ದಾರೆ.
” ಇಂದು ದೇಶದಲ್ಲಿ ಟ್ರಾನ್ಸ್ಜೆಂಡರುಗಳಜನಸಂಖ್ಯೆ ಸುಮಾರು ೬೦-೭೦ ಲಕ್ಷ ಎಂದು ಅಂದಾಜಿಸಲಾಗುತ್ತದೆ. ಇತರ ಸಾಮಾನ್ಯರಂತೆ ಈ ಸಮುದಾಯದಲ್ಲೂ ಪ್ರತಿಭಾವಂತರಿಗೇನೂ ಕೊರತೆಯಿಲ್ಲ. ಕೊರತೆಯಿರುವುದು ಅವಕಾಶದ್ದು.”




