Mysore
27
broken clouds

Social Media

ಮಂಗಳವಾರ, 20 ಅಕ್ಟೋಬರ್ 2026
Light
Dark

ಪೊಲೀಸರಿಗೆ ಸಮಾಜವೇ ವಿಶ್ವವಿದ್ಯಾನಿಲಯ, ಜನರೇ ಜಗದ್ಗುರುಗಳು

ಎಸ್. ಎಲ್. ಚೆನ್ನಬಸವಣ್ಣ ,ಐಪಿಎಸ್, ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು 

ದಸರೆ ಬಂದೋಬಸ್ತ್‌ನ ನವಿರಾದ ಅನುಭವಗಳು

ಬಂದೋಬಸ್ತ್ ಎಂಬ ಪದ ಕೇಳಿದ ತಕ್ಷಣ ನೆನಪಿಗೆ ಬರುವುದು ದೇಶದ ಗಡಿ ಕಾವಲು ಕಾಯುವ ಸೈನಿಕರಂತೆ ಎಚ್ಚರವಹಿಸಿ, ದೇಶದ ಆಂತರಿಕ ಭದ್ರತೆಯ ಕರ್ತವ್ಯ ನಿರ್ವಹಿಸುವ ಖಾಕಿ ಪಡೆಯ ಮುಂಜಗ್ರತಾ ಕ್ರಮಗಳು ಮತ್ತು ಹಗಲಿರುಳು ಎನ್ನದೆ ಕಾಲ್ನಡಿಗೆಯಲ್ಲಿ ಓಡಾಡುತ್ತ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಬದ್ಧತೆ .

ಕಳೆದ ವಾರ ನಾನು ಬರೆದಿದ್ದ ಬಂದೋಬಸ್ತ್ ಕುರಿತಾದ ಲೇಖನಕ್ಕೆ ಓದುಗರಿಂದ ಮತ್ತು ಸಹೋದ್ಯೋಗಿಗಳಿಂದ ಬಂದ ಪ್ರೋತ್ಸಾಹದಾಯಕ ಹಾಗೂ ವಿಶ್ಲೇಷಣಾತ್ಮಕ ಪ್ರತಿಕ್ರಿಯೆಗಳು ನನ್ನ ಅರಿವಿನ ದೃಷ್ಟಿಕೋನವನ್ನು ಇನ್ನಷ್ಟು ವಿಸ್ತರಿಸಿದವು. ಮುಂದುವರಿದು, ಈ ಬಾರಿಯ ಮೈಸೂರು ದಸರೆ ಬಂದೋಬಸ್ತ್‌ನ ಒಂದು ವಿಭಾಗದ ಉಸ್ತುವಾರಿ ಕರ್ತವ್ಯ ನಿರ್ವಹಣೆ ಮಾಡುವ ಸಂದರ್ಭ ನನಗೂ ಒದಗಿಬಂತು. ೧೬ ವರ್ಷಗಳ ಹಿಂದೆ ನಾನು ಪ್ರಶಿಕ್ಷಣಾರ್ಥಿಯಾಗಿದ್ದಾಗ ನೋಡಿದ ದಸರೆಗೂ, ಇಂದಿನ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ನೋಡುತ್ತಿರುವ ದಸರೆಗೂ ಕರ್ತವ್ಯದ ವ್ಯಾಪ್ತಿಯಲ್ಲಿ ಎಷ್ಟು ದೊಡ್ಡ ವಿಸ್ತರಣೆಯಾಗಿದೆ ಎಂಬುದನ್ನು ಈ ಬಾರಿ ಕಣ್ಣಾರೆ ಕಂಡೆ. ದಸರೆಗೆ ದೂರದ ಊರುಗಳಿಂದ ಬರುವ ಪ್ರವಾಸಿಗರು ಮತ್ತು ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದರೊಂದಿಗೆ ಪೊಲೀಸ್ ಇಲಾಖೆಯ ಮೇಲಿನ ಜವಾಬ್ದಾರಿಯೂ ಹಲವು ಪಟ್ಟು ಹೆಚ್ಚಾಗಿದೆ. ಅಷ್ಟಕ್ಕೂ ಬದಲಾವಣೆ ಎಂಬುದು ಜಗದ ನಿಯಮವಲ್ಲವೇ? ಈ ಬದಲಾವಣೆಗೆ ತಕ್ಕಂತೆ ಹೊಸ ಹೊಸ ಕಾರ್ಯಕ್ರಮಗಳ ಸೇರ್ಪಡೆ, ಸಂಘಟಕರೊಂದಿಗಿನ ಸಭೆಗಳು, ಸಹಭಾಗಿದಾರರ ಗುರುತಿಸುವಿಕೆ, ಸ್ಥಳಗಳ ಜಂಟಿ ಪರಿಶೀಲನೆ, ಲಾಜಿಸ್ಟಿಕ್ಸ್ ಸಂಗ್ರಹ, ತುರ್ತು ಮತ್ತು ಆಕಸ್ಮಿಕ ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ, ಸಾರ್ವಜನಿಕರ ಸಹಭಾಗಿತ್ವ, ಜಗೃತಿ ಪ್ರಚಾರ ಹಾಗೂ ವಿವಿಐಪಿ ಭದ್ರತೆಯ ಅಣಕು ಕಾರ್ಯಾಚರಣೆಗಳು… ಹೀಗೆ ಪೊಲೀಸ್ ಇಲಾಖೆ ಮಾಡಬೇಕಾದ ಕರ್ತವ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಈ ಬಾರಿಯ ಬಂದೋಬಸ್ತ್‌ನಲ್ಲಿ ಬೇರೆ ಬೇರೆ ಜಿಗಳಿಂದ ಬಂದಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಲಬುರಗಿ ತರಬೇತಿ ಕಾಲೇಜಿನ ಪಿಎಸ್‌ಐ ಪ್ರಶಿಕ್ಷಣಾರ್ಥಿಗಳು ನನ್ನೊಂದಿಗೆ ಕರ್ತವ್ಯದಲ್ಲಿದ್ದರು. ಸಿಬ್ಬಂದಿಯ ಬಳಿ ತೆರಳಿದ ತಕ್ಷಣ ನಾನು ಕರ್ತವ್ಯದ ಬಗ್ಗೆ ಮಾತನಾಡದೆ, ಅವರಿಗೆ ಇರಬಹುದಾದ ಊಟ, ವಸತಿ ಇತ್ಯಾದಿ ಕುಂದುಕೊರತೆಗಳ ಬಗ್ಗೆ ವಿಚಾರಿಸಿದೆ.

ನಂತರವಷ್ಟೇ ಅವರ ಕರ್ತವ್ಯದ ವಿವರಗಳ ಬಗ್ಗೆ ಚರ್ಚೆ ನಡೆಸಿದೆ. ಅಲ್ಲಿ ನೇಮಕಗೊಂಡಿದ್ದ ಎಎಸ್‌ಐ ಒಬ್ಬರು ಬಂದು, ಸಾರ್, ಎಲ್ಲರೂ ಮೊದಲು ಕರ್ತವ್ಯದ ಬಗ್ಗೆ ಕೇಳುತ್ತಾರೆ, ಆದರೆ ನೀವು ನಮಗಿರಬಹುದಾದ ಕುಂದುಕೊರತೆಗಳ ಬಗ್ಗೆ ಮೊದಲು ವಿಚಾರಿಸಿದಿರಿ. ನಿಮ್ಮ ಈ ಕಾಳಜಿ ನಮಗೆ ಬಹಳ ಹಿಡಿಸಿತು ಎಂದು ಹೆಮ್ಮೆಯಿಂದ ಹೇಳಿ ಸೆಲ್ಯೂಟ್ ಮಾಡಿದರು. ಆ ಕ್ಷಣದಲ್ಲಿ ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣ ವಕ್ಕು ಸರ್ವಜ್ಞ ಎಂಬ ವಚನದ ಸಾಲುಗಳು ನೆನಪಾಗಿ ನನ್ನ ಮುಖದಲ್ಲಿ ಸಹಜ ಮುಗುಳ್ನಗೆ ಮೂಡಿತು.

ಮರದಡಿಯ ಪಾಠ: ‘ಕಿವಿಯನ್ನು ನೆಲಕ್ಕೆ ತಾಗಿಸಿಡಿ’ ಇನ್ನೊಂದು ದಿನ ಮಧ್ಯಾಹ್ನ ನನ್ನ ವಾಹನದಲ್ಲಿ ಸಂಚರಿಸುತ್ತಾ ಸಿಬ್ಬಂದಿ ನಿರ್ವಹಿಸುತ್ತಿದ್ದ ಕರ್ತವ್ಯವನ್ನು ಗಮನಿಸುತ್ತಿದ್ದೆ. ಆಗ ಕೆಲ ಪಿಎಸ್‌ಐ ಪ್ರಶಿಕ್ಷಣಾರ್ಥಿಗಳು ದೊಡ್ಡ ಮರವೊಂದರ ಕೆಳಗಿನ ಕಟ್ಟೆಯ ಮೇಲೆ ಸುಮ್ಮನೆ ಕುಳಿತಿರುವುದು ಕಣ್ಣಿಗೆ ಬಿತ್ತು. ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ಅವರ ಬಳಿಗೆ ತೆರಳಿ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಹಿನ್ನೆಲೆಯ ಬಗ್ಗೆ ಮಾತುಕತೆ ಆರಂಭಿಸಿ ಕರ್ತವ್ಯದ ಕುರಿತು ವಿಚಾರಿಸಿದೆ. ಆಗ ಅವರು ಸಾರ್, ಸಾಯಂಕಾಲವಾದಂತೆ ಜನಜಂಗುಳಿ ಹೆಚ್ಚಾಗುತ್ತದೆ, ಈಗ ಹೆಚ್ಚಿನ ಕರ್ತವ್ಯವಿಲ್ಲದ ಕಾರಣ ಸುಮ್ಮನೆ ಕುಳಿತಿದ್ದೆವು ಎಂದರು.

ಆಗ ಅವರಿಗೆ ನಾನು ನೋಡಿ, ನಾವು ಪೊಲೀಸ್ ಅಧಿಕಾರಿಗಳು. ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಮತ್ತು ಕುತೂಹಲದಿಂದ ವಿಷಯಗಳನ್ನು ತಿಳಿದುಕೊಳ್ಳುವ ಹಸಿವು ನಮ್ಮಲ್ಲಿರಬೇಕು. ಸುತ್ತಮುತ್ತ ರಸ್ತೆ ಬದಿಯಲ್ಲಿ ಕಡಲೆಕಾಯಿ, ಹುರಿಗಡಲೆ, ಕಳ್ಳೇಪುರಿ, ಹಣ್ಣುಗಳು, ಜೋಳದ ತೆನೆಗಳು, ಮಹಿಳೆಯರ ಬ್ಯಾಗ್‌ಗಳು, ಮೊಬೈಲ್ ಕವರ್‌ಗಳು ಮತ್ತು ಆಟಿಕೆಗಳನ್ನು ಮಾರಾಟ ಮಾಡುತ್ತಿರುವ ಸ್ಥಳೀಯ ಹಾಗೂ ಹೊರಗಿನಿಂದ ಬಂದಂತಿದ್ದ ಪುರುಷರು-ಮಹಿಳೆಯರನ್ನು ತೋರಿಸಿ, ಅವರ ಸಾಮಾಜಿಕ-ಆರ್ಥಿಕ ಹಿನ್ನೆಲೆ ಅಥವಾ ಪೂರ್ವಾಪರಗಳನ್ನು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದೀರಾ ಎಂದು ಪ್ರಶ್ನಿಸಿದೆ. ಎಲ್ಲರೂ ಇಲ್ಲ ಎಂದು ತಲೆ ಅಡಿಸಿದರು. ಸಾಕಷ್ಟು ವಯಸ್ಸಾದವರು, ಮಹಿಳೆಯರು ಮತ್ತು ಮಕ್ಕಳಾದಿಯಾಗಿ ಪ್ರವಾಸಿಗರು ಅಲ್ಲಿದ್ದು ಕಾಂಪೌಂಡ್ ಮೇಲೆ ವಿಶ್ರಮಿಸುತ್ತಿರುವುದನ್ನು ತೋರಿಸಿ, ಅವರೊಂದಿಗಾದರೂ ಮಾತನಾಡಿದ್ದೀರಾ ಎಂದಾಗಲೂ ಉತ್ತರ ‘ ಇಲ್ಲ’ ಎಂದೇ ಬಂದಿತು.

ಆಗ ಪೊಲೀಸ್ ವೃತ್ತಿಯಲ್ಲಿ ನಾನು ಕಲಿತ ಮೊದಲ ಪಾಠವನ್ನು ಅವರಿಗೆ ಹೇಳಿದೆ: ‘ ಇನ್ ಪೊಲೀಸಿಂಗ್,ಯು ಶುಡ್ ಕೀಪ್ ಯುವರ್ ಇಯರ‍್ಸ್ ಆನ್ ದ ಗ್ರೌಂಡ್’( ಪೊಲೀಸಿಂಗ್‌ನಲ್ಲಿ ನಿಮ್ಮ ಕಿವಿಗಳನ್ನು ನೆಲಕ್ಕೆ ತಾಗಿಸಿಡಿ). ಅಂದರೆ, ನಮ್ಮ ಸುತ್ತಮುತ್ತ ಜರುಗುತ್ತಿರುವ ಘಟನೆಗಳು ಮತ್ತು ವ್ಯಕ್ತಿಗಳನ್ನು ಒಬ್ಬ ಪೊಲೀಸ್ ಅಧಿಕಾರಿಯಾಗಿ ಸೂಕ್ಷ್ಮವಾಗಿ ಗ್ರಹಿಸುವ ವಿಶೇಷ ಗುಣ ನಮ್ಮಲ್ಲಿರಬೇಕಾದುದು ಅತ್ಯಾವಶ್ಯಕ. ಸಾರ್ವಜನಿಕರೊಂದಿಗೆ ಸಂವಹನ ಮಾಡುವುದರಿಂದಲೇ ನಮಗೆ ನೈಜ ಅನುಭವಗಳು ಲಭಿಸುತ್ತವೆ. ಮುಂದುವರಿದು ನಾನು ಅವರಿಗೆ ಇದನ್ನೆಲ್ಲ ನಿಮಗೆ ಹೇಳಲು ನನಗಿರುವ ಒಂದೇ ಅರ್ಹತೆ ಏನೆಂದರೆ ನನಗೂ ನಿಮಗೂ ಇರುವ ಸೇವಾವಧಿಯ ಅಂತರ.. ಅದು ಕೇವಲ ೧೬ ವರ್ಷಗಳು ಅಷ್ಟೇ. ನೀವು ನಿಮ್ಮ ವೃತ್ತಿ ಬದುಕಿನ ಮೊದಲ ವರ್ಷದಲ್ಲಿದ್ದೀರಿ, ನಾನು ೧೬ನೇ ವರ್ಷದಲ್ಲಿದ್ದೇನೆ. ಆದರೆ ನಾವೆಲ್ಲ ಪ್ರತಿದಿನ ಹೊಸ ಹೊಸ ವಿಚಾರಗಳನ್ನು ಕಲಿತು ಅನುಭವ ವಿಸ್ತರಿಸಿಕೊಳ್ಳಲು ಸದಾ ನಮ್ಮನ್ನು ನಾವು ತೆರೆದಿಟ್ಟುಕೊಳ್ಳಬೇಕು. ನಂತರ ನಾನು ಭೇಟಿ ಮಾಡಿದ ಆ ೧೦ ಪ್ರಶಿಕ್ಷಣಾರ್ಥಿಗಳಿಗೆ ತಲಾ ಒಬ್ಬಿಬ್ಬರು ಸಾರ್ವಜನಿಕರೊಂದಿಗೆ ಮಾತನಾಡಿ ನಂತರ ಅವರ ಅನುಭವಗಳನ್ನು ಹಂಚಿಕೊಳ್ಳುವಂತೆ ಒಂದು ಸಣ್ಣ ಹೊಸ ಪ್ರಯೋಗ ನಡೆಸಲು ಸೂಚಿಸಿದೆ. ಅನುಭವಗಳ ಹಂಚಿಕೊಳ್ಳುವಿಕೆ ಮತ್ತು ಪ್ರಶಿಕ್ಷಣಾರ್ಥಿಗಳಲ್ಲಿ ಮೂಡಿದ ಅರಿವು: ಮರುದಿನ ಮತ್ತೆ ಭೇಟಿಯಾದಾಗ ಪ್ರಶಿಕ್ಷಣಾರ್ಥಿಗಳು ಶಾಲಾ ಮಕ್ಕಳು ಗುರುಗಳಿಗೆ ಮನೆಪಾಠ ಒಪ್ಪಿಸುವಂತೆ ತಾವು ಮಾತನಾಡಿಸಿದ ವ್ಯಕ್ತಿಗಳ ಕಥೆಗಳನ್ನು ಒಬ್ಬೊಬ್ಬರಾಗಿ ಹೇಳತೊಡಗಿದರು. ಅವರ ಅನುಭವದ ಬುತ್ತಿ ಆಸಕ್ತಿಕರವಾಗಿತ್ತು:

ಒಬ್ಬ ಪ್ರಶಿಕ್ಷಣಾರ್ಥಿ ರಸ್ತೆಬದಿ ಕಳ್ಳೇಪುರಿ ಮಾರುತ್ತಿದ್ದ ಮಹಿಳೆಯೊಬ್ಬಳನ್ನು ಮಾತನಾಡಿಸಿದಾಗ, ಆಕೆ ಸಮೀಪದ ಹಳ್ಳಿಯಿಂದ ಬಂದಿದ್ದಳೆಂದೂ, ಆಕೆಯ ಕುಡುಕ ಗಂಡನಿಂದಾಗಿ ಸಂಸಾರದ ಜವಾಬ್ದಾರಿಯ ಭಾರ ಅವಳ ಹೆಗಲ ಮೇಲೆ ಬಿದ್ದು ಮಗುವಿನ ಫೀಸ್‌ಗಾಗಿ ದಸರೆ ಸಮಯದಲ್ಲಿ ಈ ವ್ಯಾಪಾರ ಮಾಡುತ್ತಿರುವುದಾಗಿಯೂ ಅಳಲು ತೋಡಿಕೊಂಡಿದ್ದಳು. ಆಕೆಯನ್ನು ಅಲ್ಲಿಂದ ತೆರವುಗೊಳಿಸಬೇಕೆ ಅಥವಾ ಬಿಡಬೇಕೆ ಎಂಬ ನೈತಿಕ ಸಂದಿಗ್ಧತೆಯಲ್ಲಿ (ಎಥಿಲ್ ಡೈಲೆಮಾ) ಸಿಲುಕಿದ್ದ ಪ್ರಶಿಕ್ಷಣಾರ್ಥಿ, ಕೊನೆಗೆ ಆಕೆಯ ಕಷ್ಟಕ್ಕೆ ಮರುಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಜಗದಲ್ಲಿ ಕುಳಿತು ವ್ಯಾಪಾರ ಮಾಡಲು ಸೂಚಿಸಿದ್ದಾಗಿ ತಿಳಿಸಿದರು. ಅವರ ಸಹಾನುಭೂತಿಯ ಸ್ಪಂದನೆಗೆ ಮನಸ್ಸಿನ ಹೆಮ್ಮೆಪಟ್ಟೆ.

ಮತ್ತೊಬ್ಬ ಮಹಿಳಾ ಪ್ರಶಿಕ್ಷಣಾರ್ಥಿ, ಕರ್ತವ್ಯದ ವೇಳೆ ಸಾರ್ವಜನಿಕರು ನಾವು ಗೌರವದಿಂದ ಮಾತನಾಡಿದಾಗ ಕೇಳುತ್ತಾರೆ.ಆದರೆ ಕೆಲವೊಬ್ಬರು ವ್ಯಂಗ್ಯವಾಗಿ ಮಾತನಾಡಿದಾಗಲೂ ಸಂಯಮ ಕಳೆದುಕೊಳ್ಳದೆ ಕರ್ತವ್ಯ ನಿರ್ವಹಿಸಿದ್ದಾಗಿ ಹೇಳಿದರು. ಆಗ ಅವರಿಗೆ ಶರಣರ ನುಡಿಯೊಂದನ್ನು ನೆನಪಿಸಿದೆ:

ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯ… ಲೋಕದಲ್ಲಿ ಹುಟ್ಟಿ ಬಂದ ಬಳಿಕ ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವತಾಳದೆ ಸಮಾಧಾನಿಯಾಗಿರಬೇಕು. ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಅನಾಮಧೇಯತನವನ್ನ (ಅನಾನಿಮಿಟಿ) ದುರುಪಯೋಗ ಪಡಿಸಿಕೊಂಡು ಹೀಗೆಲ್ಲ ವರ್ತಿಸುತ್ತಾರೆ. ಅದಕ್ಕಾಗಿಯೇ ನೀವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ನಿಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ಬೀಟ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ನೇರ ಸಂಪರ್ಕದಲ್ಲಿದ್ದರೆ ಇಂತಹ ಅನಾಮಧೇಯ ವರ್ತನೆಗಳು ತಾವಾಗಿಯೇ ಮಾಯವಾಗುತ್ತವೆ ಎಂದು ತಿಳಿಸಿದೆ.

ಮತ್ತೊಬ್ಬ ಪ್ರಶಿಕ್ಷಣಾರ್ಥಿ ತಾನು ಸುಮ್ಮನೆ ತಿರುಗಾಡುತ್ತಿದ್ದ ಯುವಕನೊಬ್ಬನನ್ನು ವಿಚಾರಿಸಿದಾಗ, ಆತ ಊರು ಬಿಟ್ಟು ಬಂದು ತಿಂಗಳು ಕಳೆದಿದ್ದು ನಗರದ ದೇವಸ್ಥಾನಗಳಲ್ಲಿ ದೊರೆಯುವ ಉಚಿತ ಪ್ರಸಾದ-ಊಟಗಳನ್ನು ತಿಂದುಕೊಂಡು ಸುಮ್ಮನೆ ತಿರುಗಾಡುತ್ತಿರುವುದು ಗೊತ್ತಾಯಿತೆಂದು, ಇನ್ನು ಹೆಚ್ಚಿನ ವಿಚಾರಣೆ ಎಲ್ಲಿ ಮಾಡುತ್ತಾರೋ ಎಂದು ಗಾಬರಿಗೊಂಡ ಆತ ಅಲ್ಲಿಂದ ಕಾಲ್ಕಿತ್ತಿದ್ದೇನೆ. ಅಂತಹ ವ್ಯಕ್ತಿಗಳು ಸಣ್ಣಪುಟ್ಟ ಅಪರಾಧ ಎಸಗುವ ಸಾಧ್ಯತೆ ಇರುವುದರಿಂದ ಅವರ ಮೇಲೆ ಕೈಗೊಳ್ಳಬೇಕಾದ ಮುಂಜಗ್ರತಾ ಕ್ರಮಗಳ ಬಗ್ಗೆ ತಿಳಿಸಿಕೊಟ್ಟೆ.

ಪರ ಊರಿನಿಂದ ಬಂದಿದ್ದ ವಯಸ್ಸಾದ ದಂಪತಿಗಳಿಗೆ ದಸರೆ ಸ್ಥಳಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಅವರು ಅಭಿನಂದಿಸಿದ ತಮ್ಮ ಅನುಭವವನ್ನು ಮತ್ತೊಬ್ಬರು ಹಂಚಿಕೊಂಡರು. ಅದು ಆ ಹಿರಿಯ ಜೀವಿಗಳಿಗೆ ಪೊಲೀಸ್ ಅಧಿಕಾರಿಗಳು ಸಹಾಯಹಸ್ತವನ್ನು ಚಾಚಿದ ಅಪರೂಪದ ಕ್ಷಣವಾಗಿತ್ತು. ಇನ್ನು ವಿವಿಐಪಿ ಸಂಚಾರದ ವೇಳೆ ತಡೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರೊಬ್ಬರ ಬಗ್ಗೆ ಮಾತನಾಡುತ್ತಾ, ಆರಂಭದಲ್ಲಿ ಆ ಪ್ರಶಿಕ್ಷಣಾರ್ಥಿ ವ್ಯಕ್ತಿಯ ಆಕ್ರೋಶವನ್ನು ತಪ್ಪಾಗಿ ಗ್ರಹಿಸಿದ್ದರೂ, ನಂತರ ತಾಳ್ಮೆಯಿಂದ ವಿಚಾರಿಸಿದಾಗ ಅವರಿಗೆ ತುರ್ತಾಗಿ ಹೊರ ಹೋಗಬೇಕಾದ ಅನಿವಾರ್ಯತೆ ಇತ್ತು ಎಂಬುದು ಅರ್ಥವಾಯಿತೆಂದು ವಿವರಿಸಿದ. ಈ ಎಲ್ಲ ಅನುಭವಗಳನ್ನು ಅವರೊಂದಿಗೆ ಚರ್ಚಿಸುತ್ತ ನಾನು ಅವರಿಗೆ

ಕೊನೆಗೆ ಹೀಗಂದೆ: ನಮ್ಮಲ್ಲಿ ಅನೇಕ ಬಾರಿ ವ್ಯಕ್ತಿಗಳ ಅಥವಾ ಘಟನೆಗಳ ಬಗ್ಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳು ಇರುತ್ತವೆ. ಆದರೆ ‘ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು’ ಎಂಬಂತೆ ಖುzಗಿ ಮಾತನಾಡಿಸದೆ ಯಾವುದೇ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಬಾರದು. ಉದಾಹರಣೆಗೆ ನಾನು ನೀವೆಲ್ಲ ಸುಮ್ಮನೆ ಮರದ ಕೆಳಗೆ ಕುಳಿತಿದ್ದನ್ನು ನೋಡಿ ನಿಮ್ಮನ್ನೆಲ್ಲ ‘ಕೆಲಸ ಕದಿಯುವವರು’ ಎಂದು ಭಾವಿಸಿ ಸುಮ್ಮನಾಗಿದ್ದರೆ, ನಿಮ್ಮಲ್ಲಿರುವ ಈ ಅದ್ಭುತ ಮಾನವೀಯ ಗುಣಗಳು ಮತ್ತು ಕರ್ತವ್ಯದ ಬಗೆಗಿರುವ ಅದಮ್ಯ ಆಸಕ್ತಿ ನನ್ನ ಗಮನಕ್ಕೆ ಬರುತ್ತಿರಲಿಲ್ಲವಲ್ಲವೇ? ಎಂದು ಕೇಳಿದೆ. ಅದಕ್ಕೆ ಅವರು ನಿಜ ಸರ್ ಎಂದು ತಲೆಯಾಡಿಸಿದರು. ಅವರ ಈ ಅನುಭವಗಳನ್ನೆಲ್ಲ ನಂತರ ಬರೆದು ನನಗೆ ಕಳಿಸಿರಿ ಎಂದು ಆಗ್ರಹಿಸಿದೆ. ಮುಂದುವರಿದು ಅವರಿಗೆ ಪೊಲೀಸ್ ಇಲಾಖೆಯಲ್ಲಿ ನಾವು ಯಾವಾಗಲೂ ನಮ್ಮ ಕಿವಿಗಳನ್ನು ನೆಲಕ್ಕೆ ತಾಗಿಸಿರಬೇಕು.ಆಗ ನಮ್ಮ ಸುತ್ತಲಿನ ಜಗತ್ತಿನಲ್ಲಿ ನಡೆಯುತ್ತಿರುವ ಕಂಪನಗಳು ಅರ್ಥವಾಗುತ್ತವೆ ಎಂದೆ.

” ಪ್ರತಿ ವ್ಯಕ್ತಿಯೊಂದಿಗಿನ ಸಂವಹನ ಮತ್ತು ಪ್ರತಿ ಘಟನೆಗಳು ನಮ್ಮಲ್ಲಿ ಅಂತರಮುಖಿಯಾದ ಅರಿವಿನ ಪಯಣಕ್ಕೆ ಕಾರಣವಾಗಬೇಕು. ಏಕೆಂದರೆ ಪೊಲೀಸರಿಗೆ ಸಮಾಜವೇ ವಿಶ್ವವಿದ್ಯಾನಿಲಯ, ಜನರೇ ಜಗದ್ಗುರುಗಳು, ಮತ್ತು ನಾವು ಸದಾಕಾಲವೂ ಹೊಸದನ್ನು ಕಲಿಯುವ ವಿದ್ಯಾರ್ಥಿಗಳು! ಎಂದು ನಾನು ಪ್ರಶಿಕ್ಷಣಾರ್ಥಿಯಾಗಿದ್ದಾಗಿನ ಅನುಭವಿ ಅಧಿಕಾರಿಯೊಬ್ಬರಿಂದ ನಾನು ಕೇಳಿದ್ದ ಮತ್ತು ನಾನು ಈಗಲೂ ಪಾಲಿಸುತ್ತಿರುವ ಕಿವಿಮಾತನ್ನು ಅವರಿಗೂ ಹೇಳಿದೆ.”

 

 

Tags:
error: Content is protected !!