Mysore
24
overcast clouds

Social Media

ಮಂಗಳವಾರ, 20 ಅಕ್ಟೋಬರ್ 2026
Light
Dark

ಸಾಕ್ಷ್ಯಗಳನ್ನು ಗುರುತಿಸಿದ ಮಾಫಿ ಸಾಕ್ಷಿ

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ

ಕೋರ್ಟ್ ವಿಚಾರಣೆಯಲ್ಲಿ ಇಡೀ ಕೃತ್ಯವನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ ಪ್ರದೋಷ್

೧೭.೦೬.೨೦೨೪ರಂದು ಮಧ್ಯಾಹ್ನ ೩ರಿಂದ ೪ ಗಂಟೆ ಸುಮಾರಿಗೆ ನಮ್ಮನ್ನು (ದರ್ಶನ್, ಪ್ರದೋಷ್, ನಾಗರಾಜ್, ವಿನಯ್, ಪವನ್) Stoney Brook ಹೋಟೆಲ್ ಹತ್ತಿರ ಕರೆದುಕೊಂಡು ಹೋದರು. ನಾವು ಆ ಹೋಟೆಲ್ ಹತ್ತಿರ ಹೋಗುವಷ್ಟರಲ್ಲಿ ಚಿಕ್ಕಣ್ಣ(ಚಾ. ಸಾ.೮೦) ಅವರು ಕೂಡ ಬಂದಿದ್ದರು. ಆ ಹೋಟೆಲ್ನಲ್ಲಿ ಇದ್ದ D-Boss Safar ಎಂಬ ಜಾಗಕ್ಕೆ ಕರೆದುಕೊಂಡು ಹೋದರು. ಪಾರ್ಟಿ ಮಾಡಿದ ದಿನ ನಾವೆಲ್ಲರೂ ಯಾವ ರೀತಿ ಕುಳಿತಿದ್ದೆವೋ ಅದೇ ರೀತಿ ನಮ್ಮನ್ನೆಲ್ಲ ಅಲ್ಲಿ ಮತ್ತೆ ಕೂರಿಸಿದರು. ಆ ದಿನ Stoney Brook  ಹೋಟೆಲ್‌ನಲ್ಲಿ ನಮಗೆ ಫುಡ್ ಮತ್ತು ಡ್ರಿಂಕ್ಸ್ ಸರ್ವ್ ಮಾಡಿದ ಹುಡುಗನನ್ನೂ ಕೂಡ ಅಲ್ಲಿಗೆ ಕರೆಸಿದರು. ನಂತರ ಅದರ ಮರು ಚಿತ್ರಣದಂತೆ ಮಾಡಿದ ಫೊಟೋಗಳನ್ನು ತೆಗೆಸಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಲೆ ಕೂದಲು ಬಾಚಿಸಿ ಬಾಚಣಿಗೆ ಸಂಗ್ರಹ:  ೧೯.೦೬.೨೦೨೪ರಂದು ಪೊಲೀಸರು ನಾವು ೧೭ ಜನ ಆರೋಪಿಗಳನ್ನು ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ವೈದ್ಯಕೀಯ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ನಮ್ಮ ಎಲ್ಲಾ ೧೭ ಜನ ಆರೋಪಿಗಳ ರಕ್ತದ ಮಾದರಿಗಳು ಹಾಗೂ hair sample ಪಡೆದುಕೊಂಡರು.

ಒಂದು ಕೊಠಡಿಯಲ್ಲಿ ವೈದ್ಯರು ನಮ್ಮೆಲ್ಲ ೧೭ ಆರೋಪಿಗಳ ಬ್ಲೆಡ್ ಸ್ಯಾಂಪಲ್ ಪಡೆದುಕೊಂಡರು. ಆ ರೂಂನಲ್ಲಿ ನಾವು ಸಾಲಾಗಿ ನಿಂತುಕೊಂಡಿದ್ದೆವು. ವೈದ್ಯರು ಒಬ್ಬಬ್ಬರನ್ನೇ ಕರೆದು ಬ್ಲೆಡ್ ಸ್ಯಾಂಪಲ್ ಕಲೆಕ್ಟ್ ಮಾಡಿದರು. ನಂತರ ಒಬ್ಬಬ್ಬರಿಗೂ ಒಂದು ಬಾಚಣಿಗೆಯನ್ನು ಕೊಟ್ಟು, ತಲೆ ಕೂದಲು ಬಾಚಿಕೊಳ್ಳಲು ತಿಳಿಸಿದರು. ಅವರು ಹೇಳಿದಂತೆ ನಾವೆಲ್ಲರೂ ತಲೆ ಕೂದಲು ಬಾಚಿಕೊಂಡೆವು. ನಂತರ ವೈದ್ಯರ ಸೂಚನೆಯಂತೆ ಪ್ರತಿಯೊಬ್ಬರು ತಲೆ ಕೂದಲು ಬಾಚಿಕೊಂಡಿದ್ದ ಬಾಚಣಿಗೆಯನ್ನು ಅವರು ಮೊದಲೇ ಕೊಟ್ಟಿದ್ದ ಒಂದು ಬಿಳಿ ಬಟ್ಟೆಗೆ ಸುತ್ತಿ ಕೊಟ್ಟೆವು. ನಂತರ ಆ ಬಿಳಿ ಬಟ್ಟೆಯ ಮೇಲೆ ನಮ್ಮ ನಮ್ಮ ಹೆಸರುಗಳನ್ನು ಬರೆದುಕೊಂಡರು. ಆ ಸಮಯದಲ್ಲಿ ಮಹಜರ್ ಸಾಕ್ಷಿದಾರರು ಇದ್ದು ವಿವರಗಳನ್ನು ಟೈಪ್ ಮಾಡಿಸುತ್ತಿದ್ದರು. ಮಹಜರ್ ಸಮಯದಲ್ಲಿ ಸಾಕ್ಷ್ಯ ದಾಖಲಿಸಲು ೨೮ ಫೋಟೋಗಳನ್ನು ತೆಗೆಸಿದರು. ಆ ದಿನ ನಮ್ಮೊಂದಿಗೆ ನಿಖಿಲ್ ನಾಯ್ಕ ಮತ್ತು ಕಾರ್ತಿಕ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರಲಿಲ್ಲ.

ಮುಖ್ಯ ವಿಚಾರಣೆಯಲ್ಲಿ ಸಾಕ್ಷ್ಯಗಳನ್ನು ಗುರುತಿಸಿದ ಪ್ರದೋಷ್:  ೨೧.೦೬.೨೦೨೪ರಂದು ಪೊಲೀಸರು ಮತ್ತೆ ನನ್ನ ಇನ್ನೊಂದು ಸ್ವ ಇಚ್ಛಾ ಹೇಳಿಕೆಯನ್ನು ದಾಖಲು ಮಾಡಿಕೊಂಡರು. ನನ್ನನ್ನು ಮುಖ್ಯ ವಿಚಾರಣೆ ಮಾಡುವ ಸಂದರ್ಭದಲ್ಲಿ ಸಹಿ ಮತ್ತು ದಾಖಲೆಗಳ ಸಾಕ್ಷಿಗೆ ಗಿರಿನಗರ ಬ್ರಾಂಚ್‌ನ ಎಚ್‌ಡಿಎಫ್ಸಿ‌ ಬ್ಯಾಂಕ್ ದಾಖಲೆಗಳನ್ನು ಪಡೆದಿದ್ದರು. ಅದನ್ನೇ ಸಹಿ ಸಾಕ್ಷಿಯಾಗಿ ಪರಿಗಣಿಸಿದರು. ನನ್ನ ಮುಖ್ಯ ವಿಚಾರಣೆ ವೇಳೆ, ಮೃತ ರೇಣುಕಾಸ್ವಾಮಿಯ ಫೋಟೋಗಳನ್ನು ನೋಡಿದರೆ ಗುರುತಿಸಲು ಆಗುತ್ತದೆಯಾ ಎಂದು ಸಾಕ್ಷಿ ಫೋಟೋಗಳನ್ನು ತೋರಿಸಿದರು.

ನನಗೆ ಗುರುತಿಸಲು ಆಗುತ್ತದೆ ಎಂದಾಗ ೬ ಫೋಟೋಗಳನ್ನು ತೋರಿಸಿದರು. ಅದರಲ್ಲಿ ಇರುವ ವ್ಯಕ್ತಿಯೇ ಮೃತ ರೇಣುಕಾಸ್ವಾಮಿ ಎಂದು ಗುರುತಿಸಿದೆ.

ನನ್ನ ಮುಖ್ಯ ವಿಚಾರಣೆಯ ವೇಳೆ, ೨ನೇ ಆರೋಪಿ ದರ್ಶನ್, ೩ನೇ ಆರೋಪಿ ಪವನ್ ಅಲಿಯಾಸ್ ಪುಟ್ಟಸ್ವಾಮಿ, ೧೦ನೇ ಆರೋಪಿ ವಿನಯ್, ೧೧ನೇ ಆರೋಪಿ ನಾಗರಾಜ್, ೧೨ನೇ ಆರೋಪಿ ಲಕ್ಷ್ಮಣ್, ೧೩ನೇ ಆರೋಪಿ ದೀಪಕ್ ಅವರಿಗೆ ಫೋನ್ ಮಾಡಿದ್ದೆ ಎಂದು ಒಪ್ಪಿಕೊಂಡೆ. ಅವರ ಫೋನ್ ನಂಬರ್‌ಗಳನ್ನು ನನ್ನ ಮೊಬೈಲ್‌ಲ್ಲಿ ಸೇವ್ ಮಾಡಿದ್ದೆ. ಆದರೆ ೬ನೇ ಆರೋಪಿ ಜಗದೀಶ್ ಮೊಬೈಲ್ ಫೋನ್ ನಂಬರ್ ಅನ್ನು ಸೇವ್ ಮಾಡಿರಲಿಲ್ಲ. ಆದರೆ ನಂಬರ್ ಕಾಲ್ ಲಿಸ್ಟ್‌ನಲ್ಲಿ ಹಾಗೆಯೇ ಇತ್ತು.

ನನ್ನ ಮುಖ್ಯವಿಚಾರಣೆಯ ಸಂದರ್ಭದಲ್ಲಿ, ಆ ದಿನ ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿ ಹೊಡೆದಾಗ, ಆತನ ಒಳಉಡುಪುಗಳು ಅಲ್ಲೇ ಬಿದ್ದಿದ್ದವು. ಆ ಒಳ ಉಡುಪುಗಳನ್ನು ನಾನು ಎತ್ತಿ ಆತನಿಗೆ ಕೊಟ್ಟಿದ್ದೆ. ನಂತರ ಆತ ಅಲ್ಲಿಯೇ ಬಿದ್ದಿದ್ದ ಕಪ್ಪು ಬಣ್ಣದ ತುಂಬು ತೋಳಿನ ಟೀ ಶರ್ಟನ್ನು ಎತ್ತಿ ಹಾಕಿಕೊಂಡಿದ್ದ ಎಂದು ತಿಳಿಸಿದ್ದೆ. ಅದನ್ನು ವಿಚಾರಣೆ ವೇಳೆ ತೋರಿಸಿದಾಗ ಕಪ್ಪು ಮತ್ತು ಗ್ರೇ ಕಲರ್ ತುಂಬು ತೋಳಿನ ಟೀ ಶರ್ಟನ್ನು ನೋಡಿ ಗುರುತಿಸಿದೆ. ನೀಲಿ ಬಣ್ಣದ ಅಂಡರ್‌ವೇರ್ ತೋರಿಸಿದಾಗ, ಅದು ರೇಣುಕಾಸ್ವಾಮಿಯ ಒಳ ಉಡುಪು ಎಂದು ಗುರುತಿಸಿದೆ. ನಂತರ ನ್ಯಾಯಾಲಯದ ಆದೇಶದಂತೆ ಮುಚ್ಚಳಿಕೆ ಬರೆಸಿಕೊಂಡು, ನಿಗದಿಪಡಿಸಿದ ದಿನಾಂಕಗಳಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಮಾಫಿ ಸಾಕ್ಷಿ ಪ್ರದೋಷ್‌ಗೆ ನಿರ್ದೇಶನ ನೀಡಿತು

‘ಟೆನ್ಶನ್‌ನಲ್ಲಿ ಅವರ ಹೆಸರು ನೆನಪಿಗೆ ಬರುತ್ತಿಲ್ಲ’: 

ಕೋರ್ಟ್‌ನಲ್ಲಿ ಸಾಕ್ಷ್ಯ ನುಡಿಯಲು ಬಂದು ತಡಬಡಾಯಿಸಿದ ಚಿಕ್ಕಣ್ಣ

ನನ್ನ ಹೆಸರು ಚಿಕ್ಕಣ್ಣ, ನನಗೆ ೪೨ ವರ್ಷ ವಯಸ್ಸು. ೨ನೇ ಆರೋಪಿ ದರ್ಶನ್ ನನಗೆ ಸುಮಾರು ೧೫ ವರ್ಷಗಳಿಂದ ಗೊತ್ತು. ೧ನೇ ಆರೋಪಿ ಪವಿತ್ರಾ ಗೌಡ ೨-೩ ವರ್ಷಗಳಿಂದ ಗೊತ್ತು. ನಾನು ದರ್ಶನ್ ಅವರೊಂದಿಗೆ ೩-೪ ಸಿನಿಮಾಗಳಲ್ಲಿ ನಟನೆ ಮಾಡಿದ್ದೇನೆ. ೧೪ನೇ ಆರೋಪಿ ಪ್ರದೋಷ್ ನನಗೆ ಸುಮಾರು ೩-೪ ವರ್ಷಗಳಿಂದ ಗೊತ್ತು ಎಂದು ಪ್ರದೋಷ್‌ನನ್ನು ನೋಡಿ ಗುರುತಿಸಿದರು. ಯಾವ ಕಾರಣಕ್ಕೆ ಸಾಕ್ಷಿ ನುಡಿಯಲು ಕರೆದಿದ್ದಾರೆ ಎಂದು ಗೊತ್ತಾ ಎಂದು ಕೇಳಿದ್ದಕ್ಕೆ ಚಿಕ್ಕಣ್ಣ, ‘ಕೃತ್ಯ ನಡೆದ ದಿನ ಇವರೊಂದಿಗೆ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರ ಬಗ್ಗೆ ಸಾಕ್ಷಿ ಹೇಳಲು ಕರೆದಿದ್ದಾರೆ ಎಂದು ಗೊತ್ತು. ನಾನು ಯಾವ ದಿನಾಂಕದಂದು ಊಟಕ್ಕೆ ಹೋಗಿದ್ದೆ ಎಂದು ನೆನಪಿಲ್ಲ. ಆ ದಿನ ನಾವು Stoney Brook ಹೋಟೆಲ್‌ಗೆ ಊಟಕ್ಕೆ ಹೋಗಿದ್ದೆವು. ನಾನು ಒಬ್ಬನೇ ಹೋಟೆಲ್‌ಗೆ ಹೋಗಿದ್ದೆ. ಸಮಯ ಸರಿಯಾಗಿ ನೆನಪಿಲ್ಲ. ಮಧ್ಯಾಹ್ನ ಸುಮಾರು ೧ರಿಂದ ೩ ಗಂಟೆ ಇರಬಹುದು. ಯಾರೊಂದಿಗೆ ಊಟ ಮಾಡಿದಿರಿ ಎಂದು ಕೇಳಿದ್ದಕ್ಕೆ, ಚಿಕ್ಕಣ್ಣ ದರ್ಶನ್, ಪ್ರದೋಷ್, ವಿನಯ್ ಇನ್ನೂ ೩-೪ ಜನ ಇದ್ದರು. ಈಗ ನನಗೆ ಟೆನ್ಶನ್‌ನಲ್ಲಿ ಅವರ ಹೆಸರುಗಳು ನೆನಪಿಗೆ ಬರುತ್ತಿಲ್ಲ. ಅಲ್ಲಿ ನಾವು ನನ್ನ ಸಿನಿಮಾದ ಬಗ್ಗೆ ಮಾತನಾಡಿದ್ದೆವು. ಅಲ್ಲಿ ಮತ್ತೇನು ನಡೆದಿಲ್ಲ’ ಎಂದು ಹೇಳಿದರು. ನಂತರ ಕೋರ್ಟ್‌ನಲ್ಲಿ ಹಾಜರಿದ್ದ ಆರೋಪಿಗಳಾದ ವಿನಯ್, ಪವನ್ ಅವರನ್ನು ಗುರುತಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್, ನಾಗು ಅಲಿಯಾಸ್ ನಾಗರಾಜ್ ಅವರನ್ನು ನೋಡಿ ಗುರುತಿಸಿದರು.

* ಆರೋಪಿ ನಂ.೧-ಪವಿತ್ರಾ ಗೌಡ: ದರ್ಶನ್ ಗೆಳತಿ ಹಾಗೂ ಎರಡನೇ ಪತ್ನಿ(ಪ್ರದೋಷ್‌ಗೆ ೮ ವರ್ಷಗಳ ಪರಿಚಯ)

* ಆರೋಪಿ ನಂ.೨-ದರ್ಶನ್: ಚಲನಚಿತ್ರ ನಾಯಕ ನಟ(ಪ್ರದೋಷ್‌ಗೆ ೨೩ ವರ್ಷಗಳ ಪರಿಚಯ)

* ಆರೋಪಿ ನಂ.೩-ಪವನ್: ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ(ಪ್ರದೋಷ್‌ಗೆ ೭ ವರ್ಷಗಳ ಪರಿಚಯ)

* ಆರೋಪಿ ನಂ.೪-ರಾಘವೇಂದ್ರ: ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ (ಪ್ರದೋಷ್‌ಗೆ ಮೊದಲಿನಿಂದಲೂ ಪರಿಚಯ)

* ಆರೋಪಿ ನಂ.೫-ನಂದೀಶ್: ದರ್ಶನ್ ಜೊತೆ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಶ್ರೀರಂಗಪಟ್ಟಣ ತಾಲ್ಲೂಕಿನ ಚಾಮಲಾಪುರದ ನಿವಾಸಿಯಾದ ಈತ ಪ್ರದೋಷ್‌ಗೆ ೫ ವರ್ಷಗಳ ಪರಿಚಯ

* ಆರೋಪಿ ನಂ.೬-ಜಗದೀಶ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ

* ಆರೋಪಿ ನಂ.೭-ಅನುಕುಮಾರ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ

* ಆರೋಪಿ ನಂ.೮-ರವಿಶಂಕರ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ

* ಆರೋಪಿ ನಂ.೯-ಧನರಾಜ್: ಪ್ರದೋಷ್‌ಗೆ ೬ ವರ್ಷಗಳ ಪರಿಚಯ

* ಆರೋಪಿ ನಂ.೧೦-ವಿನಯ್: ಪಬ್ ಮಾಲೀಕ ಹಾಗೂ ದರ್ಶನ್ ಸ್ನೇಹಿತ(ಪ್ರದೋಷ್‌ಗೆ ೪ ವರ್ಷಗಳ ಪರಿಚಯ)

* ಆರೋಪಿ ನಂ.೧೧: ನಾಗರಾಜ್ -ಮೈಸೂರಿನಲ್ಲಿರುವ ದರ್ಶನ್ ಫಾರಂ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ದರ್ಶನ್ ಸ್ನೇಹಿತ(ಪ್ರದೋಷ್‌ಗೆ ೧೮ ವರ್ಷಗಳ ಪರಿಚಯ)

* ಆರೋಪಿ ನಂ.೧೨-ಲಕ್ಷ್ಮಣ್: ದರ್ಶನ್ ಕಾರು ಚಾಲಕ

* ಆರೋಪಿ ನಂ.೧೩-ದೀಪಕ್: ಲೋನ್ ಕಟ್ಟದೆ ಇರುವ ವಾಹನಗಳನ್ನು ಜಪ್ತಿ ಮಾಡುವ ಟೀಂನಲ್ಲಿ ಕೆಲಸ (೧೦ನೇ ಆರೋಪಿ ವಿನಯ್ ಮೂಲಕ ಪ್ರದೋಷ್‌ಗೆ ೪ ವರ್ಷಗಳ ಪರಿಚಯ)

* ಆರೋಪಿ ನಂ.೧೪: ಪ್ರದೋಷ್- ಐಟಿ ಕಂಪೆನಿ ಉದ್ಯೋಗಿ ಹಾಗೂ ದರ್ಶನ್ ಸ್ನೇಹಿತ (೨೦೦೩ರಿಂದ ಪರಿಚಯ)

* ಆರೋಪಿ ನಂ.೧೫: ಕಾರ್ತಿಕ್-ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್ ಮಾಡಿಸಲು ಕರೆತಂದಿದ್ದ ಹುಡುಗ

* ಆರೋಪಿ ನಂ.೧೬: ಕೇಶವಮೂರ್ತಿ- ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್ ಮಾಡಿಸಲು ಹೆಚ್ಚುವರಿಯಾಗಿ ಕರೆತಂದಿದ್ದ ಹುಡುಗ

* ಆರೋಪಿ ನಂ.೧೭: ನಿಖಿಲ್ ನಾಯ್ಕ-ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರೆಂಡರ್ ಮಾಡಿಸಲು ಕರೆತಂದಿದ್ದ ಹುಡುಗ

 

 

Tags:
error: Content is protected !!