Mysore
29
light rain

Social Media

ಸೋಮವಾರ, 19 ಅಕ್ಟೋಬರ್ 2026
Light
Dark

ಸ್ಟಿಂಗ್ ಆಪರೇಷನ್: ತನಿಖೆಗಿಂತ ಹೇಳಿಕೆಗಳ ಭರಾಟೆ

ಕರ್ನಾಟಕದ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಟಿಂಗ್ ಆಪರೇಷನ್ ಎಂಬುದು ಕಳಂಕ ತಂದಿದೆ. ರಾಜಕಾರಣ ತಲುಪಿರುವ ಅಧೋಗತಿಗೂ ಇದು ಕನ್ನಡಿ ಹಿಡಿದಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಅವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಯಿತು ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಗೊಂದಲ ಸೃಷ್ಟಿಸಿದೆ. ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ವಾಗ್ಯುದ್ಧ ನಡೆದಿದೆ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವಿನ ಮಾತಿನ ಜಟಾಪಟಿ ರಾಜಕಾರಣದಲ್ಲಿ ಸಭ್ಯತೆಯ ಎಲ್ಲೆಯನ್ನು ಮೀರಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆದಿದೆ ಎಂದು ಸ್ವತಃ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ತಮಗೂ ಯಾವುದೇ ಸಂಬಂಧ ಇಲ್ಲ. ಆದರೂ ಇದನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ತಮ್ಮ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕಟಣೆ ಇಲ್ಲವೇ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸುಳ್ಳನ್ನು ಸತ್ಯವಾಗಿ ಬಿಂಬಿಸುವುದು ಸುಲಭದ ಕೆಲಸವಾಗಿದೆ ಎಂಬುದು ಸಿದ್ದರಾಮಯ್ಯ ಅವರ ಹೇಳಿಕೆ.

ಬೆಂಗಳೂರು ಪೊಲೀಸ್ ಆಯುಕ್ತರಿಗೆ ಅವರು ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಸುಮಾರು ೫೦ ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಆರೋಪಕ್ಕೆ ಯಾವತ್ತೂ ಸಿಲುಕಿದವರಲ್ಲ. ಅವರ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿದೆ. ಪೊಲೀಸರ ಸಮಗ್ರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ. ರಾಜಕಾರಣದಲ್ಲಿ ಎದುರಾಳಿಗಳನ್ನು ಜನತಂತ್ರದ ಮಾರ್ಗದಲ್ಲಿ ಎದುರಿಸಬೇಕೇ ವಿನಾಕೀಳುಮಟ್ಟಕ್ಕೆ ಇಳಿಯಬಾರದು. ಸಿದ್ದರಾಮಯ್ಯ ಅವರು ಜನಸಮೂಹದ ನಾಯಕರು.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಕರ್ನಾಟಕದಲ್ಲಿ ಸುದೀರ್ಘ ಕಾಲ ಮುಖ್ಯಮಂತ್ರಿಯಾದ ದಾಖಲೆ ಬರೆದಿದ್ದಾರೆ. ಅಂಥವರ ಹೆಸರಿಗೆ ಮಸಿ ಬಳಿಯುವ ಕಾರ್ಯವನ್ನು ಯಾರೇ ಮಾಡಿದ್ದರೂ ಅದು ಖಂಡನೀಯ. ಅಂಥವರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಬೇಕಾಗುತ್ತದೆ.

ಸಿದ್ದರಾಮಯ್ಯ ಅವರು ಈ ಕುರಿತು ಮೌನಕ್ಕೆ ಶರಣಾಗಿದ್ದಾರೆ. ತನಿಖೆ ನಡೆಯುವಾಗ ಈ ಕುರಿತು ಪ್ರತಿಕ್ರಿಯಿಸುವುದು ಸೂಕ್ತವೂ ಅಲ್ಲ. ಅವರ ನಡೆ ಸರಿಯಾಗಿಯೇ ಇದೆ. ಆದರೆ, ಸಿದ್ದರಾಮಯ್ಯ ಅವರು ಸುಮ್ಮನಾದರೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸ್ಟಿಂಗ್ ಆಪರೇಷನ್ ವಿಷಯವನ್ನು ಕೈಗೆತ್ತಿಕೊಂಡು ರಾಜ್ಯ ಸರ್ಕಾರದ ವಿರುದ್ಧ ದಿನವೂ ವಾಗ್ದಾಳಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಪರ ಎಂಬಂತೆ ತೋರ್ಪಡಿಸಿಕೊಂಡು ರಾಜಕೀಯ ದಾಳ ಉರುಳಿಸಿದ್ದಾರೆ. ಕುಮಾರಸ್ವಾಮಿ ಅವರ ಗುರಿ ಏನಿದ್ದರೂ ಮುಖ್ಯಮಂತ್ರಿ ಶಿವಕುಮಾರ್ ಅವರೇ ಆಗಿದ್ದಾರೆ. ಇದು ಸಟಿಕ ಸ್ಪಷ್ಟ. ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿದವರನ್ನು ಬಂಧಿಸಬೇಕು, ಜಾ.ದಳ ಸಾಮಾಜಿಕ ಜಾಲತಾಣ ಘಟಕದಲ್ಲಿ ಕೆಲಸ ಮಾಡುವವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಕುಮಾರಸ್ವಾಮಿ ಧರಣಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಪಾದಯಾತ್ರೆಯನ್ನೂ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಈ ವಿಚಾರದಲ್ಲಿ ಹೆಚ್ಚು ಆಕ್ರಮಣಕಾರಿ ಧೋರಣೆ ತಳೆದಿರುವುದು ಕಂಡು ಬರುತ್ತದೆ. ಪೊಲೀಸರು ತಾವು ಹೇಳಿದಂತೆ ತನಿಖೆ ನಡೆಸಬೇಕೆಂಬ ನಿಲುವು ಸರಿಯಲ್ಲ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರು. ಅವರು ತಮ್ಮ ಮಾತಿನ ಭರದಲ್ಲಿ ಕೆಲವು ಅನಪೇಕ್ಷಿತ ಪದಗಳನ್ನು ಬಳಸಿರುವುದು ಸರಿಯಲ್ಲ. ಕೇಂದ್ರ ಸಚಿವರು ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು.

ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಪಡೆಯಲು ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಪ್ರಯತ್ನಿಸಬೇಕಾದ ಇಂತಹ ಹೊತ್ತಲ್ಲಿ ಸ್ಟಿಂಗ್ ಆಪರೇಷನ್‌ಗಳ ಬಗ್ಗೆ ಸರ್ಕಾರ ಹಾಗೂ ಪ್ರತಿಪಕ್ಷಗಳು ಚರ್ಚಿಸುತ್ತಿರುವುದು ದುರಂತ.

” ಎಚ್.ಡಿ.ಕುಮಾರಸ್ವಾಮಿ ಅವರು ಸ್ಟಿಂಗ್ ಆಪರೇಷನ್ ಕುರಿತು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ ಅವರದೇ ಮಿತ್ರಪಕ್ಷ ಬಿಜೆಪಿ ಈ ವಿಚಾರದಲ್ಲಿ ಅವರೊಂದಿಗೆ ಬೀದಿಗೆ ಇಳಿಯುವುದಿರಲಿ, ಅವರಷ್ಟು ಆಕ್ರಮಣಕಾರಿಯಾಗಿಯೂ ವರ್ತಿಸುತ್ತಿಲ್ಲ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿ ಎಂಬಂತಿದೆ ಬಿಜೆಪಿಯ ಧೋರಣೆ”

 

 

Tags:
error: Content is protected !!