ದೆಹಲಿ ಕಣ್ನೋಟ: ಶಿವಾಜಿ ಗಣೇಶನ್ ಅವರ ವಾರದ ಅಂಕಣ
ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಜನತಂತ್ರದ ಜೀವಾಳ
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಅರ್ಹ ಮತದಾರರ ಹೆಸರುಗಳು ನಾಪತ್ತೆ ಅರ್ಥಾತ್ ಉದ್ದೇಶಪೂರ್ವಕವಾಗಿ ತೆಗೆದು ಹಾಕಲಾಗಿರುವವರ ಹೆಸರುಗಳನ್ನು ಮತ್ತೆ ಸೇರಿಸುವ ಕಾರ್ಯಕ್ಕೆ ಕೇಂದ್ರ ಚುನಾವಣಾ ಆಯೋಗ ಮುಂದಾಗಿರುವುದು ಜೆನ್ ಝೀ (ಸಿಜೆಪಿ) ಮತ್ತು ಕಾಂಗ್ರೆಸ್ ಸೇರಿದಂತೆ ಕೆಲವು ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಗಳಿಂದ ಎನ್ನುವ ಸತ್ಯಸಂಗತಿಯನ್ನು ಒಪ್ಪಲೇಬೇಕು. ಮತದಾರರ ಪಟ್ಟಿ ಪರಿಷ್ಕರಣೆ ನಡೆದ ಹದಿನೇಳು ರಾಜ್ಯಗಳಲ್ಲಿ ಈಗಾಗಲೇ ೧೩ ಕೋಟಿ ಮತದಾರರ ಹೆಸರುಗಳು ಕೈಬಿಟ್ಟು ಹೋಗಿರುವುದರಿಂದ ರಾಷ್ಟ್ರದಾದ್ಯಂತ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಜನರು ಸಂಶಯದಿಂದ ನೋಡಬೇಕಾಯಿತು. ಈ ಕಾರಣದಿಂದ ನಿರಂತರವಾಗಿ ದೇಶದ ರಾಜಧಾನಿ ದೆಹಲಿಯಲ್ಲಿಜನತಂತ್ರದ ದನಿ ಕೇಳಿ ಬರುತ್ತಲೇ ಇದೆ.
ಇಷ್ಟು ಬೃಹತ್ ಪ್ರಮಾಣದಲ್ಲಿ ಮತದಾರರ ಹೆಸರನ್ನು ಕೈಬಿಟ್ಟಿರುವುದನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಸಮರ್ಥಿಸಿಕೊಂಡೇ ಬಂದ ಕಾರಣ ಪ್ರಜಪ್ರಭುತ್ವದ ಪರವಾದ ದನಿ ಎತ್ತಿರುವ ಯುವಜನರು ಮತ್ತು ಕೆಲವು ಪ್ರತಿಪಕ್ಷಗಳು ಬೀದಿಗಿಳಿಯಬೇಕಾಯಿತೆನ್ನುವುದು ಜಗಜಹೀರು. ಇದಕ್ಕೆ ಮುಖ್ಯ ಕಾರಣರಾದ ಮುಖ್ಯ ಚುನಾವಣಾ ಆಯುಕ್ತರಾದ eನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿಯುವುದು ಚಳವಳಿ ನಿರತ ಜೆನ್ ಝೀ ಯುವಜನರಿಗೆ ಅನಿವಾರ್ಯವಾಗಿದೆ.
ಆದರೆ ಚುನಾವಣಾ ಆಯೋಗಕ್ಕೆ ಸಿಕ್ಕಿರುವ ಸಂವಿಧಾನಾತ್ಮಕವಾದ ರಕ್ಷಣೆಯಲ್ಲಿ eನೇಶ್ ಕುಮಾರ್ ಸುರಕ್ಷಿತರಾಗಿzರೆ. ಚುನಾವಣಾ ಆಯೋಗದ ತಪ್ಪುಗಳು, ಅವಾಂತರಗಳು ಮತ್ತು ಅದಕ್ಕೆ ಮುಖ್ಯ ಕಾರಣರೆನ್ನಲಾದ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಪಟ್ಟು ಹಿಡಿದಿರುವುದರ ವಿರುದ್ಧ ಆಡಳಿತ ಪಕ್ಷವಾದ ಬಿಜೆಪಿ ನಾಯಕರು ದಿನ ನಿತ್ಯ ಮಾತನಾಡುತ್ತಿರುವುದರಿಂದ ಕೇಂದ್ರ ಸರ್ಕಾರದ ರಕ್ಷಣೆ ಜ್ಞಾನೇಶ್ ಕುಮಾರ್ ಅವರಿಗೆ ಇರುವುದನ್ನು ತಿಳಿಯಲು ಯಾವ ಸಾಕ್ಷ್ಯಾಧಾರಗಳೂ ಬೇಕಾಗಿಲ್ಲ.
ಈ ಮಧ್ಯೆ ಚುನಾವಣಾ ಆಯೋಗ ಸಂವಿಧಾನಬದ್ಧವಾಗಿ ಸ್ವತಂತ್ರ ಕಾರ್ಯನಿರ್ವಹಿಸುವ ಸಂಸ್ಥೆ ಎನ್ನುವ ನೆಪದಲ್ಲಿ ಕೇಂದ್ರ ಸರ್ಕಾರವಾಗಲಿ ಪ್ರಧಾನ ಮಂತ್ರಿಯಾಗಲಿ ಈ ವಿಷಯದಲ್ಲಿ ಹೊರನೋಟಕ್ಕೆ ಮೌನವಹಿಸಿರುವಂತೆ ಕಂಡರೂ ಈ ಎಲ್ಲ ಅಕ್ರಮಗಳಿಗೆ ಕೇಂದ್ರ ಸರ್ಕಾರದ ಪರೋಕ್ಷ ಸೂಚನೆಯೇ ಕಾರಣ ಎನ್ನುವ ಸತ್ಯ ತಿಳಿಯಲು ವಿಶೇಷ eನವೇನೂ ಬೇಕಿಲ್ಲ. ಆದರೆ ಮತದಾರರ ಹಕ್ಕನ್ನು ರಕ್ಷಿಸುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಹೋರಾಡುತ್ತಿರುವ ಯುವ ಜನರು ಮತ್ತು ಪ್ರತಿಪಕ್ಷಗಳ ಪ್ರತಿಭಟನೆ, ಕೂಗನ್ನು ಅಡಗಿಸುವ ಎಲ್ಲ ತಂತ್ರಗಳನ್ನೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಹತ್ತಿಕ್ಕುತ್ತಿರುವ ಸತ್ಯ ಈಗ ಬಟ್ಟಬಯಲಾಗಿದೆ.
ಪ್ರಜಪ್ರಭುತ್ವ ವ್ಯವಸ್ಥೆ ಇರುವ ಎಲ್ಲ ರಾಷ್ಟ್ರಗಳಲ್ಲೂ ಆಡಳಿತ ನಡೆಸುವ ಸರ್ಕಾರದ ವಿರುದ್ಧ ತಮಗಿರುವ ಭಿನ್ನಾಭಿಪ್ರಾಯ ಮತ್ತು ವಿರೋಧ ವ್ಯಕ್ತಪಡಿಸಲು ಸರ್ಕಾರವೇ ಪ್ರತಿಭಟನೆಯ ಸ್ಥಳವನ್ನು ಗೊತ್ತುಪಡಿಸಿವೆ. ಜನರ ಈ ಭಿನ್ನ ದನಿ ಆಳುವವರ ಕಿವಿಗೆ ಬೀಳಲು ಜನಪ್ರತಿನಿಽಗಳ ಶಾಸಕಾಂಗ ಮತ್ತು ಸಂಸತ್ತು ಇರುವ ಮಗ್ಗುಲ ಜನರ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಯ ದನಿ ಕೇಳುವ ವ್ಯವಸ್ಥೆಯನ್ನು ಅನುಸರಿಸಿಕೊಂಡು ಬಂದಿವೆ. ನಮ್ಮ ದೇಶದಲ್ಲೂ ಈ ಪ್ರತಿಭಟನೆ ಮತ್ತು ಭಿನ್ನಾಭಿಪ್ರಾಯದ ದನಿ ಎತ್ತಲು ಮೂರು ದಶಕಗಳ ಹಿಂದೆ ರಾಷ್ಟ್ರಪತಿ ಭವನ, ಸಂಸತ್ ಭವನ ಮತ್ತು ಪ್ರಧಾನಿ ಸೇರಿದಂತೆ ಇತರೆ ಸಚಿವರುಗಳ ಕಾರ್ಯಸ್ಥಳಗಳ ಕಟ್ಟಡಗಳು ಕೂಗಳತೆಯ ಇದ್ದ ಇಂಡಿಯಾ ಗೇಟ್ ಬಳಿಯ ಬೋಟ್ ಕ್ಲಬ್ ಪ್ರದೇಶವಿತ್ತು. ಆದರೆ ರೈತ ಚಳವಳಿಯೊಮ್ಮೆ ಅತಿರೇಕಕ್ಕೆ ಹೋಗಿ ಪ್ರತಿಭಟನಾಕಾರರು ಸಂಸತ್ ಭವನದತ್ತ ನುಗ್ಗುವ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಬೋಟ್ ಕ್ಲಬ್ ಪ್ರದೇಶವನ್ನು ರದ್ದುಪಡಿಸಿ ಸಮೀಪದ ಜಂತರ್ ಮಂತರ್ ಪ್ರದೇಶವನ್ನು ಗೊತ್ತುಪಡಿಸಲಾಯಿತು. ಈ ಸ್ಥಳ ಚಿಕ್ಕದಾದರೂ ಸಂಸತ್ ಭವನಕ್ಕೆ ಹತ್ತಿರವಾದುದರಿಂದ ಸಹಜವಾಗಿ ಅನ್ಯಾಯಕ್ಕೊಳಗಾದವರು, ಅನ್ಯಾಯದ ವಿರುದ್ಧ ಹೋರಾಡುವ ಮಂದಿ ಮತ್ತು ಇತರೆ ಸಂಘ ಸಂಸ್ಥೆಗಳು ತಮ್ಮ ಪ್ರತಿಭಟನೆಯ ದನಿ ಎತ್ತುತ್ತಾ ಬಂದರು. ಆದರೆ ಕಳೆದ ತಿಂಗಳು ಸಿಜೆಪಿ ಯುವಕರು ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಆದ ಪೊಲೀಸ್ ಹಿಂಸಾಚಾರದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರತಿಭಟನಾ ಸ್ಥಳಕ್ಕೆ ಪರ್ಯಾಯವಾಗಿ ಬೇರೊಂದು ಸ್ಥಳವನ್ನು ಗೊತ್ತುಪಡಿಸಿ ಎನ್ನುವ ನೆಪಕ್ಕಾಗಿ ಕಾಯುತ್ತಿದ್ದಂತೆ ಇದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಗ ಜಂತರ್ ಮಂತರ್ ಪ್ರದೇಶವನ್ನು ಪ್ರತಿಭಟನೆಗೆ ರದ್ದುಗೊಳಿಸಿ ಸಂಸತ್ ಭವನದಿಂದ ೨೦- ೨೫ ಕಿ.ಮೀ. ದೂರದಲ್ಲಿರುವ ರಾಮಲೀಲಾ ಮೈದಾನ, ಬುರಾರಿ ಹಾಗೂ ಸಿಬಿಡಿ ಮೈದಾನಗಳನ್ನು ಗೊತ್ತುಪಡಿಸುವ ಮೂಲಕ ನ್ಯಾಯಕ್ಕಾಗಿ ಹೋರಾಡುವ ಜನರನ್ನು ದೂರವಿಟ್ಟಿದೆ.
ನಿಜ. ಜಂತರ್ ಮಂತರ್ ಇರುವ ಜಗ ಚಿಕ್ಕದು. ಇಲ್ಲಿ ಕೇವಲ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳು, ಸಂಘಟನೆಗಳು ಮಾತ್ರವಲ್ಲ ವೈಯಕ್ತಿಕವಾಗಿ ಹತ್ತಾರು ವರ್ಷಗಳಿಂದ ಸರ್ಕಾರ ಮತ್ತು ಖಾಸಗಿ ವ್ಯಕ್ತಿಗಳಿಂದ ಅನ್ಯಾಯಕ್ಕೊಳಗಾದ ಜನರೂ ಇಲ್ಲಿ ಬಂದು ನ್ಯಾಯ ಸಿಗುವವರೆಗೂ ಧರಣಿ, ಉಪವಾಸ ಸತ್ಯಾಗ್ರಹ ಮಾಡಿದ ಜಗ. ರಾಜಧಾನಿ ದೆಹಲಿಯ ರಕ್ಷಣೆಗೆ ಇರುವ ಪೊಲೀಸ್ ವ್ಯವಸ್ಥೆ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಉಸ್ತುವಾರಿಯಲ್ಲಿದೆ. ಪ್ರತಿಭಟನೆಯನ್ನು ಹತ್ತಿಕ್ಕುವಲ್ಲಿ ಪರಿಣತರಾದ ಗೃಹ ಸಚಿವ ಅಮಿತ್ ಶಾ ಅವರಿಗೆ ಇಂತಹದೊಂದು ಅವಕಾಶ ಬೇಕಿತ್ತು. ಅದಕ್ಕಾಗಿ ಕೂಡಲೇ ಜಂತರ್ ಮಂತರ್ ಪ್ರದೇಶವನ್ನು ಪ್ರತಿಭಟನೆಯಿಂದ ನಿಷೇಧಿಸಿ ಪ್ರತಿಭಟನೆಯನ್ನು ಹೊಸಕಿಹಾಕುವ ಕ್ರಮ ಕೈಗೊಂಡಿದ್ದಾರೆ. ಕಳೆದ ಒಂದು ತಿಂಗಳಿಂದ ದೇಶದಾದ್ಯಂತ ವಿಶೇಷವಾಗಿ ದೆಹಲಿಯಲ್ಲಿ ಯುವಜನರು ಸಿಜೆಪಿ ಹೆಸರಿನಲ್ಲಿ ಒಗ್ಗೂಡಿ ನಡೆಸುತ್ತಿರುವ ಹೋರಾಟ ಮತದಾರರ ಹಕ್ಕನ್ನು ರಕ್ಷಿಸುವ ಮೂಲಕ ಪ್ರಜಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವ ಉದ್ದೇಶ ಹೊಂದಿದೆ. ದೇಶದ ಭವಿಷ್ಯದ ನಾಳೆಗಳು ಈ ಯುವಜನರಿಗೆ ಸೇರಿದ್ದು. ಈ ಸತ್ಯವನ್ನು ಅರಿತು ಸರ್ಕಾರ ಯುವಜನರ ದನಿಯನ್ನು ಗೌರವಿಸಬೇಕು. ಈ ಯುವಕರೆಲ್ಲ ದೇಶದ ಭವ್ಯ ಭಾರತದ ಕನಸನ್ನು ಹೊತ್ತ ಮನಸ್ಸುಗಳನ್ನು ಹೊಂದಿದವರು. ಸರ್ಕಾರ ನಡೆಸುತ್ತಿರುವ ಪ್ರಧಾನಿ, ಸಚಿವರು ಮತ್ತು ಸಂಸತ್ ಸದಸ್ಯರ ಮಕ್ಕಳ ವಯಸ್ಸಿನ ಆದರ್ಶ ಭಾರತದ ಕನಸು ಕಂಡವರು. ಅವರೇನು ದೇಶದ್ರೋಹಿಗಳು ಮತ್ತು ಕ್ರಿಮಿನಲ್ ಹಿನ್ನೆಲೆ ಉಳ್ಳವರಲ್ಲ. ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಜನತಂತ್ರದ ಜೀವಾಳ.
ಈ ಯುವಜನರ ಪ್ರತಿಭಟನೆ ಮತ್ತು ಮೆರವಣಿಗೆಯಲ್ಲಿ ಪ್ರತಿಭಟನೆಯ ಕನಸುಗಳನ್ನು ಭಗ್ನಗೊಳಿಸಲು ಬಂದ ಪ್ರತಿಗಾಮಿ ಸಂಘಟನೆಯ ಗೂಂಡಾಗಳು ಸೇರಿಕೊಂಡು ಕಳೆದ ತಿಂಗಳ ಪ್ರತಿಭಟನೆ ಹಿಂಸಾಚಾರದಲ್ಲಿ ಕೊನೆಗೊಳ್ಳುವಂತೆಮಾಡಿದ್ದು ಸರ್ಕಾರಕ್ಕೆ ತಿಳಿದ ಸಂಗತಿ. ಇಂತಹ ಗೂಂಡಾಗಳು ಅನೇಕ ಕಡೆ ಖಾಕಿ ಸಮವಸ ಧರಿಸಿ ಚಳವಳಿಗಾರರನ್ನು ಅಟ್ಟಾಡಿಸಿ ಹೊಡೆದಿರುವುದರ ಹಿಂದೆ ಸರ್ಕಾರದ ಪರೋಕ್ಷ ಬೆಂಬಲವೂ ಇತ್ತೆನ್ನುವ ದೂರುಗಳು ವ್ಯಾಪಕವಾಗಿವೆ. ಇಂತಹ ಗೂಂಡಾಗಳು ನಡೆಸಿದ ದಬ್ಬಾಳಿಕೆ ಮತ್ತು ದೌರ್ಜನ್ಯದ ಫೋಟೋಗಳು ಕೆಲವು ಪತ್ರಿಕೆ ಮತ್ತು ಸಾಮಾಜಿಕ ಜಲತಾಣಗಳಲ್ಲಿ ಪ್ರದರ್ಶನಗೊಂಡರೂ ಸರ್ಕಾರ ಮಾತ್ರ ತನಗೇನೂ ಗೊತ್ತಿಲ್ಲದಂತೆ ನಡೆದುಕೊಂಡಿರುವುದು ನಿಜಕ್ಕೂ ಖಂಡನೀಯ.
ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಲು ಮುಂದಾಗಿರುವ ಕಾಕ್ರೋಚ್ ಜನತಾ ಪಕ್ಷ ಎನ್ನುವ ಯುವ ವೇದಿಕೆ ಹತ್ತಾರು ತಿಂಗಳು ಚಿಂತನ ಮಂಥನ ನಡೆಸಿ, ರೂಪುರೇಷೆ ತಯಾರಿಸಿ ಸ್ಥಾಪನೆಯಾದ ಸಂಘಟನೆಯಲ್ಲ. ಅದೊಂದು ಅಚಾನಕ್ಕಾಗಿ ಹುಟ್ಟಿಕೊಂಡ ಸಾಂದರ್ಭಿಕ ಕೂಸು. ಕೇವಲ ಮೊಬೈಲ್ ಮತ್ತು ಸಾಮಾಜಿಕ ಜಲತಾಣ ಮತ್ತು ಪತ್ರಿಕೆಗಳಿಗೆ ನೀಡಿದ ಹೇಳಿಕೆಯಿಂದಲೇ ದೆಹಲಿಯಲ್ಲಿ ಪೊಲೀಸ್ ಭದ್ರಕೋಟೆಯನ್ನು ಭೇದಿಸಿಕೊಂಡು ಸಾವಿರಾರು ಮತ್ತು ಲಕ್ಷಾಂತರ ಯುವಕರು ಪ್ರತಿಭಟನೆಗೆ ಸೇರುತ್ತಿದ್ದಾರೆ ಎಂದರೆ ಈ ವ್ಯವಸ್ಥೆ ವಿರುದ್ಧ ಅವರ ಆಕ್ರೋಶ ಎಷ್ಟಿರಬಹುದು ಎನ್ನುವುದನ್ನು ಸರ್ಕಾರ ತಿಳಿದುಕೊಳ್ಳುವುದು ಉತ್ತಮ. ತನಗಿರುವ ಪೊಲೀಸ್ ಮತ್ತು ಇತರೆ ಸಶಸ ಪಡೆಗಳ ಮೂಲಕ ಪ್ರತಿಭಟನೆಯ ದನಿಯನ್ನು ಅಡಗಿಸುವ ಪ್ರಯತ್ನ ಸದ್ಯಕ್ಕೆ ಯಶಸ್ಸು ಕೊಟ್ಟರೂ , ಯುವ ಜನರ ಚಳವಳಿಯನ್ನು ಚಿವುಟಿ ಹಾಕಿದಷ್ಟೂ ಪುಟಿದೇಳುವುದು ಸಹಜ. ಆದ್ದರಿಂದ ಯುವ ಮನಸ್ಸುಗಳನ್ನು ಗೌರವಿಸುವ ಅವರ ಮಾತಿಗೆ ಕಿವಿಗೊಡುವ ಜಣತನ ಸರ್ಕಾರಕ್ಕೆ ಬರಬೇಕಾಗಿರುವುದು ಅನಿವಾರ್ಯ.
ಜೆನ್ ಝೀಗಳ ಜತೆ ಹಲವು ಹಿರಿಯ ವಕೀಲರು, ವಿಚಾರವಂತರು ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ರೋಸಿ ಹೋಗಿರುವವರು ಮತ್ತು ಬದಲಾವಣೆ ಕಾಣಬಯಸುವವರು ಖುದ್ದು ಹೋರಾಟಕ್ಕಿಳಿದಿದ್ದರೆ ಮತ್ತೆ ಹಲವರು ನೈತಿಕವಾಗಿ ಬೆಂಬಲ ನೀಡಿದವರಿzರೆ, ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಮತ್ತು ಹೋರಾಟಗಾರ್ತಿ ನೇಹಾ ಬೋರಾ ಈ ಹೋರಾಟ ವ್ಯವಸ್ಥೆಯ ಬದಲಾವಣೆಗಾಗಿ ಎನ್ನುವ ಹೇಳಿಕೆ ನೀಡಿರುವುದು ಸಹಜವಾಗಿ ಕೇಂದ್ರ ಸರ್ಕಾರ ಮತ್ತಷ್ಟು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಯುವ ಶಕ್ತಿಯ ಹೋರಾಟವನ್ನು ತುಳಿಯುವ ಮತ್ತಷ್ಟು ಕ್ರಮಗಳನ್ನು ಕೈಗೊಂಡರೆ ಅಚ್ಚರಿಯೇನಿಲ್ಲ. ಆದರೆ ಸಿಜೆಪಿಯ ಸಂಸ್ಥಾಪಕ ಈ ಹೋರಾಟದ ಮುಂದಾಳು ಅಭಿಜೀತ್ ದಿಪ್ಕೆ , ಈ ಹೇಳಿಕೆಯನ್ನು ಒಪ್ಪಿಲ್ಲ. ತಮ್ಮ ಈಗಿನ ಹೋರಾಟ ಏನಿದ್ದರೂ ೧೩ ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಿರುವ ಮುಖ್ಯ ಚುನಾವಣಾ ಆಯುಕ್ತ eನೇಶ್ ಕುಮಾರ್ ವಿರುದ್ಧ ಮಾತ್ರ ಎಂದು ತಮ್ಮ ಹೋರಾಟದ ಗೊತ್ತುಗುರಿಯ ಇತಿಮಿತಿಯ ಬಗೆಗೆ ಸ್ಪಷ್ಟನೆ ನೀಡಿದ್ದಾರೆ.
ಇಂತಹ ಇತಿಮಿತಿಯನ್ನು ಆಡಳಿತ ನಡೆಸುತ್ತಿರುವ ಬಿಜೆಪಿಯು ಅರಿತುಕೊಂಡು ಮುನ್ನಡೆಯುವುದು ಉತ್ತಮ. ೨೦೨೪ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿಲ್ಲ. ಅದು ಪಡೆದ ಸಂಖ್ಯೆ ಕೇವಲ ೨೪೦. ಇನ್ನೂ ೩೨ ಮಂದಿ ಸದಸ್ಯರ ಕೊರತೆ ಈ ಪಕ್ಷಕ್ಕಿತ್ತು. ಈ ಚುನಾವಣೆಯಲ್ಲಿ ೩೮೦ ಸ್ಥಾನಗಳನ್ನು ಗಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಕನಸು ಕಂಡಿದ್ದರು. ಆದರೆ ಆದದ್ದೇ ಬೇರೆ. ಬಿಜೆಪಿಯ ನೇತೃತ್ವ ದಲ್ಲಿರುವ ಬಿಹಾರದ ಜನತಾದಳ (ಯು), ಆಂಧ್ರ ಪ್ರದೇಶದ ತೆಲುಗು ದೇಶಂ ಸೇರಿದಂತೆ ಹಲವು ಪಕ್ಷಗಳು ಹೆಗಲು ಕೊಟ್ಟಿರುವ ಕಾರಣ ಬಿಜೆಪಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಬಿಜೆಪಿಗೆ ದೇಶದ ಜನರು ಸ್ಪಷ್ಟ ಬಹುಮತ ನೀಡಿಲ್ಲದಿರುವ ಸತ್ಯವನ್ನು ಮನಗಾಣುವುದು ಅವಶ್ಯ. ಈ ಸತ್ಯವನ್ನು ಗಮನದಲ್ಲಿರಿಸಿಕೊಂಡು ಜನಚಳವಳಿಯ ಉದ್ದೇಶವನ್ನು ಗೌರವಿಸುವುದು, ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ದೊಡ್ಡತನವನ್ನು ಮೆರೆಯಬೇಕು. ಆ ವಿವೇಚನೆ ಮೋದಿ ನೇತೃತ್ವದ ಆಡಳಿತಕ್ಕೆ ಬರಲಿ.
” ಬಿಜೆಪಿ ನೇತೃತ್ವದಲ್ಲಿರುವ ಬಿಹಾರದ ಜನತಾದಳ (ಯು), ಆಂಧ್ರ ಪ್ರದೇಶದ ತೆಲುಗು ದೇಶಂ ಸೇರಿದಂತೆ ಹಲವು ಪಕ್ಷಗಳು ಹೆಗಲು ಕೊಟ್ಟಿರುವ ಕಾರಣ ಬಿಜೆಪಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಬಿಜೆಪಿಗೆ ದೇಶದ ಜನರು ಸ್ಪಷ್ಟ ಬಹುಮತ ನೀಡಿಲ್ಲದಿರುವ ಸತ್ಯವನ್ನು ಮನಗಾಣುವುದು ಅವಶ್ಯ.”





