ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ
ನನ್ನ ಮನೆಯಲ್ಲಿ ಇಟ್ಟಿದ್ದ ನೋಟಿನ ಕಂತೆಗಳನ್ನು ಪೊಲೀಸ್ ಸಿಬ್ಬಂದಿ ಮತ್ತು ಮಹಜರ್ ಸಾಕ್ಷಿದಾರರು ಎಣಿಸಿದರು. ೫೦ ಸಾವಿರ ರೂಪಾಯಿಯ ೬೦ ಕಟ್ಟುಗಳನ್ನು ಲೆಕ್ಕ ಹಾಕಿದಾಗ ಒಟ್ಟು ೩೦ ಲಕ್ಷ ರೂಪಾಯಿ ಆಯಿತು. ಆ ವಿವರವನ್ನು ಬರೆದು ಅಲ್ಲಿಯೇ ಪ್ರಿಂಟ್ ತೆಗೆದು ನನ್ನ ಸಹಿ ಪಡೆದರು. ವಶಪಡಿಸಿಕೊಂಡ ಹಣದೊಂದಿಗೆ ನನ್ನನ್ನು ಮತ್ತೆ ಅನ್ನಪೂರ್ಣೇಶ್ವರಿನಗರ ಸ್ಟೇಷನ್ಗೆ ಕರೆದುಕೊಂಡು ಹೋದರು. (ವಶಪಡಿಸಿಕೊಂಡ ೩೦ ಲಕ್ಷ ರೂ.ಗಳನ್ನು ನ್ಯಾಯಾಲಯದ ಖಜಾನೆ ಪೆಟ್ಟಿಗೆಯಲ್ಲಿ (Treasure Box) ಇಡಲಾಗಿದೆ)
ನಾವು ಹೇಳುವವರೆಗೆ ಡ್ರೆಸ್ ಚೇಂಜ್ ಮಾಡಬೇಡಿ: ಅಂದು ಮಧ್ಯರಾತ್ರಿ ಸುಮಾರು ಒಂದೂವರೆ ಗಂಟೆ ಅಷ್ಟೊತ್ತಿಗೆ ಸ್ಟೇಷನ್ನಲ್ಲೇ ಇದ್ದ ಎಸಿಪಿ ಚಂದನ್ ಅವರು ನನ್ನನ್ನು ಅವರ ಕೊಠಡಿಗೆ ಕರೆಸಿದರು. ನಂತರ ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ ಅವರು ನನ್ನನ್ನು ಅವರ ಕೊಠಡಿಗೆ ಕರೆದುಕೊಂಡು ಹೋದರು. ಅಲ್ಲಿ ಎಸಿಪಿ ಚಂದನ್ ಅವರು ನನ್ನನ್ನು ಉದ್ದೇಶಿಸಿ, ‘ನೀವು ಬೇಕಾದರೆ ಫ್ರೆಶ್ಅಪ್ ಆಗಿ, ಆದರೆ ಬಟ್ಟೆಯನ್ನು ನಾವು ಹೇಳು ವವರೆಗೆ ಚೇಂಜ್ ಮಾಡಬೇಡಿ’ ಎಂದು ಸೂಚನೆ ನೀಡಿದರು. ಅಲ್ಲದೆ ನಾನು ಮೊದಲು ಹಾಕಿಕೊಂಡಿದ್ದ ಬಟ್ಟೆಯನ್ನೇ ಧರಿಸಲು ಹೇಳಿದರು.
ಮಧ್ಯಾಹ್ನ ೩ ಗಂಟೆಯಷ್ಟೊತ್ತಿಗೆ ಪಟ್ಟಣಗೆರೆ ಶೆಡ್ನತ್ತ ಆರೋಪಿಗಳ ರವಾನೆ: ೧೨.೦೬.೨೦೨೪ರ ಮಧ್ಯಾಹ್ನ ಸುಮಾರು ೩ರಿಂದ ೪ ಗಂಟೆ ಸುಮಾರಿಗೆ ನಮ್ಮನ್ನು(ದರ್ಶನ್, ಪವಿತ್ರಾ ಗೌಡ, ಪ್ರದೋಷ್, ರಾಘವೇಂದ್ರ, ನಾಗರಾಜ್, ಲಕ್ಷ್ಮಣ್, ವಿನಯ್, ಪವನ್, ನಂದೀಶ್ ಮತ್ತು ದೀಪಕ್) ಪೊಲೀಸ್ ವಾಹನದಲ್ಲಿ ಕರೆದುಕೊಂಡು ಪಟ್ಟಣಗೆರೆ ಶೆಡ್ನತ್ತ ಹೊರಟರು. ಎಫ್ಎಸ್ಎಲ್(FSL Team) ತಂಡದವರು ಇದ್ದ ವಾಹನವೂ ಕೂಡ ನಾವು ಕುಳಿತಿದ್ದ ವಾಹನವನ್ನು ಹಿಂಬಾಲಿಸಿಕೊಂಡು ಬಂತು.
ಅಲ್ಲೇ ಬಿದ್ದಿತ್ತು ಲಾಠಿ; ಸಿಕ್ಕಿತು ಮರದ ತುಂಡು, ನೈಲಾನ್ ಹಗ್ಗ:
ನಾವು ಇದ್ದ ಪೊಲೀಸ್ ವಾಹನ ಪಟ್ಟಣಗೆರೆ ಶೆಡ್ ತಲುಪುವ ಹೊತ್ತಿಗೆ ಅಲ್ಲಿಗೆ SOCO Team ಕೂಡ ಬಂದಿತ್ತು. ನಂತರ ಪಟ್ಟಣಗೆರೆ ಶೆಡ್ನ ಗೇಟ್ನಿಂದ ದಾರಿ ತೋರಿಸುತ್ತಾ ನಡೆದ ರಾಘವೇಂದ್ರ, ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಒಂದು ಲಾಠಿ ಬಿದ್ದಿತ್ತು. ಅದರಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು ಅಂತೆಯೇ ಇದ್ದವು. ಇನ್ನೊಂದೆಡೆ ಮರದ ರಿಪೀಸು ಬಿದ್ದಿತ್ತು. ಅದರ ಮೇಲೂ ಕೂಡ ರಕ್ತದ ಕಲೆಗಳು ಇದ್ದವು. ಅಲ್ಲೇ ಒಂದು ನೈಲಾನ್ ಹಗ್ಗ ಬಿದ್ದಿತ್ತು. (ರೇಣುಕಾಸ್ವಾಮಿಗೆ ಹೊಡೆದಿದ್ದ ಲಾಠಿ ಹಾಗೂ ಮರದ ರಿಪೀಸು ಅದಾಗಿದ್ದವು) ಪೊಲೀಸರು ಲಾಠಿ, ರಿಪೀಸ್ ಪಟ್ಟಿ ಹಾಗೂ ನೈಲಾನ್ ಹಗ್ಗ ಎಲ್ಲವನ್ನೂ ಸೀಜ್ ಮಾಡಿದರು. ಅಲ್ಲಿ ಮಣ್ಣಿನ ಸ್ಯಾಂಪಲ್ ತೆಗೆದುಕೊಂಡು ಒಂದು ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿಕೊಂಡರು. ಲಾರಿಯ ಬಂಪರ್ ಮೇಲಿದ್ದ ರಕ್ತದ ಕಲೆ ಅಳಿಸಿರಲಿಲ್ಲ ಈ ವೇಳೆ ಎಫ್ಎಸ್ಎಲ್ ತಂಡದವರು ಅಲ್ಲಿ ನಿಂತಿದ್ದ ಅಶೋಕ್ ಲೈಲ್ಯಾಂಡ್ ಲಾರಿಯ ಹಿಂಭಾಗದ ಬಂಪರ್ ಮೇಲೆ ಅಂಟಿಕೊಂಡಿದ್ದ ರಕ್ತದ ಕಲೆಗಳನ್ನು ಸಂಗ್ರಹಿಸಿದರು.
ಅದೇ ಸ್ಥಳದಲ್ಲಿ ಎರಡು ಲಾಠಿಗಳು ಬಿದ್ದಿದ್ದವು. ಅದರಲ್ಲಿ ಒಂದು ಲಾಠಿ ಮುರಿದಿತ್ತು. ಮುರಿಯದ ಲಾಠಿಯ ಮೇಲೆ ರಕ್ತದ ಕಲೆಗಳು ಇದ್ದವು. ಮುರಿದ ಲಾಠಿಯ ಮೇಲೆ ರಕ್ತದ ಕಲೆಗಳು ಇದ್ದ ಬಗ್ಗೆ ಸರಿಯಾಗಿ ನೆನಪಿಲ್ಲ. ಅಲ್ಲಿ ಸುಮಾರು ೩-೪ ನೀರಿನ ಪ್ಲಾಸ್ಟಿಕ್ ಬಾಟಲ್ಗಳು ಬಿದ್ದಿದ್ದವು. ಅವುಗಳನ್ನೂ ಕೂಡ ಪೊಲೀಸರ ಸೀಜ್ ಮಾಡಿದರು. ವಾಟರ್ ಬಾಟಲ್ಗಳ ಪೈಕಿ ಒಂದು ಬಾಟಲ್ ಮೇಲೆ ವಿನಯ್ ಅವರ ಫೋಟೋ ಇರುವ ಲೇಬಲ್ ಇತ್ತು.
ರೇಣುಕಾಸ್ವಾಮಿ ಶವ ಇಟ್ಟಿದ್ದ ಜಾಗ ತೋರಿಸಿದ ರಾಘವೇಂದ್ರ: ನಂತರ ಪೊಲೀಸರು ರೇಣುಕಾಸ್ವಾಮಿಯ ಶವ ಇಟ್ಟಿದ್ದ ಜಾಗ ತೋರಿಸಿ ಎಂದು ನಂದೀಶ್ ಮತ್ತು ರಾಘವೇಂದ್ರ ಅವರಿಗೆ ಹೇಳಿದರು. ಆಗ ನಂದೀಶ್ ಹಾಗೂ ರಾಘವೇಂದ್ರ ಅವರೇ ಪೊಲೀಸರನ್ನು ಕರೆದುಕೊಂಡು ರೇಣುಕಾಸ್ವಾಮಿ ಶವ ಇಟ್ಟಿದ್ದ ಸ್ಥಳಕ್ಕೆ ಹೋದರು. ಅವರೊಂದಿಗೆ ಮಹಜರ್ ಸಾಕ್ಷಿದಾರರು ಮತ್ತು ಎಫ್ಎಸ್ಎಲ್ ಟೀಮ್ ಕೂಡ ಹೋದರು. ಸ್ಥಳದಲ್ಲಿ É SOCO Team ಕೂಡ ಇತ್ತು.
(ಪ್ರದೋಷ್ ಮೇಲೆ ನೀಡಿದ ಹೇಳಿಕೆ ಪ್ರಕಾರ ರೇಣುಕಾಸ್ವಾಮಿಗೆ ಹೊಡೆಯಲು ಬಳಿಸಿದ್ದು, ಮರದ ರಿಪೀಸ್ ಎಂದಾಗಿದೆ. ಆದರೆ ಅದು ಮರದ ರೆಂಬೆಯ ತುಂಡಾಗಿತ್ತು. ಕೋರ್ಟ್ ವಿಚಾರಣೆ ವೇಳೆ ಅದರಂತೆ ಓದಿಕೊಳ್ಳಲಾಯಿತು. )
ಕೃತ್ಯ ನಡೆದ ಸ್ಥಳದಲ್ಲಿ ಎಲ್ಲರನ್ನು ನಿಲ್ಲಿಸಿ ಫೋಟೋ ತೆಗೆಸಿ ಸಾಕ್ಷ್ಯ ದಾಖಲು: ಪಟ್ಟಣಗೆರೆ ಶೆಡ್ನ ಕೃತ್ಯ ನಡೆದ ಸ್ಥಳದಲ್ಲಿ ನಿಖಿಲ್ ನಾಯ್ಕ, ತಿಳಿ ನೀಲಿ ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿ, ಅವರ ಪಕ್ಕ ರಾಘವೇಂದ್ರ, ಅವರ ಪಕ್ಕ ನಾಗರಾಜ್ ಅವರನ್ನು ನಿಲ್ಲಿಸಿ, ಅವರ ಪಕ್ಕದಲ್ಲಿ ಇಬ್ಬರು ಮಹಜರ್ ಸಾಕ್ಷಿದಾರರು. ಅವರ ಪಕ್ಕ ಪೊಲೀಸ್ ಇನ್ ಸ್ಪೆಕ್ಟರ್ ಗಿರೀಶ್ ನಾಯ್ಕ ನಿಂತುಕೊಂಡು, ಅವರ ಪಕ್ಕದಲ್ಲಿ ಸಾಕ್ಷಿಗೆ ಕೋಲು ಹಿಡಿಸಿ ಪವನ್ ನಿಲ್ಲಿಸಿ ಫೊಟೋ ತೆಗೆಸಿದರು. ನಂತರ ಅದೇ ಪಟ್ಟಣಗೆರೆ ಶೆಡ್ನ ಅಶೋಕ್ ಲೈಲ್ಯಾಂಡ್ ಲಾರಿಯ ಹತ್ತಿರ ಕೃತ್ಯ ನಡೆದ ಸ್ಥಳದಲ್ಲಿ ನಾನು(ಪ್ರದೋಷ್) ಮತ್ತು ದರ್ಶನ್ ಅವರನ್ನು ನಿಲ್ಲಿಸಿ ಮತ್ತೊಂದು ಫೋಟೋ ತೆಗೆಸಿದರು.
ಹಲ್ಲೆ ನಡೆದ ಸ್ಥಳದಲ್ಲಿ ಪವನ್, ದರ್ಶನ್, ಕಾರ್ತಿಕ್ ಮತ್ತು ನನ್ನನ್ನು(ಪ್ರದೋಷ್) ನಿಲ್ಲಿಸಿ, ನಮ್ಮೊಂದಿಗೆ ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ ನಿಂತುಕೊಂಡು ಫೋಟೋ ತೆಗೆಸಿದರು. ಅದೇ ಪಟ್ಟಣಗೆರೆ ಶೆಡ್ನ ಕೃತ್ಯ ನಡೆದ ಸ್ಥಳದಲ್ಲಿ ನಿಖಿಲ್ ನಾಯ್ಕ, ವಿನಯ್, ದರ್ಶನ್ ಅವರನ್ನು ನಿಲ್ಲಿಸಿ, ಯಾರು ಯಾರು ಹಲ್ಲೆ ಮಾಡಿದವರು ಎಂಬುದನ್ನು ನಾನು(ಪ್ರದೋಷ್) ತೋರಿಸುತ್ತಿರುವಾಗ ಒಂದು ಫೋಟೋ ತೆಗೆಸಿದರು.
ಅದೇ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಗೆ ಹೊಡೆದ ಸ್ಥಳದಲ್ಲಿ ರೇಣುಕಾಸ್ವಾಮಿಗೆ ಹಲ್ಲೆ ಮಾಡಲು ಉಪಯೋಗಿಸಿದ ಲಾಠಿ ಇಟ್ಟು ಹಾಗೂ ದರ್ಶನ್ ಅವರನ್ನು ನಿಲ್ಲಿಸಿ ಸಾಕ್ಷಿಗೆ ಫೋಟೋ ತೆಗೆಸಿದರು.
ವಾಪಸ್ ಸ್ಟೇಷನ್ಗೆ ಆರೋಪಿಗಳ ರವಾನೆ: ಇದಾದ ನಂತರ ನಾಗರಾಜ್ ಒಬ್ಬರನ್ನು ಹೊರತುಪಡಿಸಿ, ಉಳಿದ ನಮ್ಮನ್ನೆಲ್ಲ (ದರ್ಶನ್, ಪವಿತ್ರಾಗೌಡ, ಪ್ರದೋಷ್, ರಾಘವೇಂದ್ರ, ಲಕ್ಷ್ಮಣ್, ವಿನಯ್,ಪವನ್, ನಂದೀಶ್ ಮತ್ತು ದೀಪಕ್) ಪೊಲೀಸ್ ಸ್ಟೇಷನ್ಗೆ ವಾಪಸ್ ಕರೆದುಕೊಂಡು ಬಂದರು. ಪೊಲೀಸ್ ಸ್ಟೇಷನ್ಗೆ ವಾಪಸ್ ಬಂದ ನಂತರ ರಾತ್ರಿ ೭ರಿಂದ ೧೦ ಗಂಟೆ ಅಂತರದಲ್ಲಿ ಪೊಲೀಸರು ಮಹಜರ್ಗೆ ನನ್ನ ಹಾಗೂ ಉಳಿದವರ ಸಹಿಗಳನ್ನು ತೆಗೆದುಕೊಂಡರು.
* ಪಟ್ಟಣಗೆರೆ ಶೆಡ್ನಲ್ಲಿ ಮಹಜರ್; ಹಲ್ಲೆಗೆ ಬಳಸಿದ್ದ ವಸ್ತುಗಳು ಸೀಜ್
* ಕೃತ್ಯಕ್ಕೆ ಬಳಸಿದ್ದ ಲಾಠಿ, ಮರದ ತುಂಡು, ನೈಲಾನ್ ಹಗ್ಗ, ನೀರಿನ ಬಾಟಲ್ಗಳ ವಶ
* ರೇಣುಕಾಸ್ವಾಮಿಗೆ ಹೊಡೆದ ಸ್ಥಳದಲ್ಲಿ ದರ್ಶನ್ ಹಾಗೂ ಆಪ್ತರನ್ನು ನಿಲ್ಲಿಸಿ ಫೋಟೋ ತೆಗೆಸಿ ಸಾಕ್ಷ್ಯ ದಾಖಲು
* ಎಫ್ಎಸ್ಎಲ್ ತಂಡದಿಂದ ರಕ್ತದ ಕಲೆಗಳು, ಫಿಂಗರ್ ಪ್ರಿಂಟ್, ಹಲ್ಲೆ ನಡೆದ ಸ್ಥಳದ ಮಣ್ಣಿನ ಸ್ಯಾಂಪಲ್ ಸಂಗ್ರಹ
* ಆರೋಪಿ ನಂ.೧-ಪವಿತ್ರಾ ಗೌಡ: ದರ್ಶನ್ ಗೆಳತಿ ಹಾಗೂ ಎರಡನೇ ಪತ್ನಿ(ಪ್ರದೋಷ್ಗೆ ೮ ವರ್ಷಗಳ ಪರಿಚಯ)
* ಆರೋಪಿ ನಂ.೨-ದರ್ಶನ್: ಚಲನಚಿತ್ರ ನಾಯಕ ನಟ(ಪ್ರದೋಷ್ಗೆ ೨೩ ವರ್ಷಗಳ ಪರಿಚಯ)
* ಆರೋಪಿ ನಂ.೩-ಪವನ್: ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ(ಪ್ರದೋಷ್ಗೆ ೭ ವರ್ಷಗಳ ಪರಿಚಯ)
* ಆರೋಪಿ ನಂ.೪-ರಾಘವೇಂದ್ರ: ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ(ಪ್ರದೋಷ್ಗೆ ಮೊದಲಿನಿಂದಲೂ ಪರಿಚಯ)
* ಆರೋಪಿ ನಂ.೫-ನಂದೀಶ್: ದರ್ಶನ್ ಜೊತೆ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಶ್ರೀರಂಗಪಟ್ಟಣ ತಾಲ್ಲೂಕಿನ ಚಾಮಲಾಪುರದ ನಿವಾಸಿಯಾದ ಈತ ಪ್ರದೋಷ್ಗೆ ೫ ವರ್ಷಗಳ ಪರಿಚಯ
* ಆರೋಪಿ ನಂ.೬-ಜಗದೀಶ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ
* ಆರೋಪಿ ನಂ.೭-ಅನುಕುಮಾರ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ
* ಆರೋಪಿ ನಂ.೮-ರವಿಶಂಕರ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ
& ಆರೋಪಿ ನಂ.೯-ಧನರಾಜ್: ಪ್ರದೋಷ್ಗೆ ೬ ವರ್ಷಗಳ ಪರಿಚಯ
* ಆರೋಪಿ ನಂ.೧೦-ವಿನಯ್: ಪಬ್ ಮಾಲೀಕ ಹಾಗೂ ದರ್ಶನ್ ಸ್ನೇಹಿತ(ಪ್ರದೋಷ್ಗೆ ೪ ವರ್ಷಗಳ ಪರಿಚಯ)
* ಆರೋಪಿ ನಂ.೧೧: ನಾಗರಾಜ್ -ಮೈಸೂರಿನಲ್ಲಿರುವ ದರ್ಶನ್ ಫಾರಂ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ದರ್ಶನ್ ಸ್ನೇಹಿತ(ಪ್ರದೋಷ್ಗೆ ೧೮ ವರ್ಷಗಳ ಪರಿಚಯ)
* ಆರೋಪಿ ನಂ.೧೨-ಲಕ್ಷ್ಮಣ್: ದರ್ಶನ್ ಕಾರು ಚಾಲಕ
* ಆರೋಪಿ ನಂ.೧೩-ದೀಪಕ್: ಲೋನ್ ಕಟ್ಟದೇ ಇರುವ ವಾಹನಗಳನ್ನು ಜಪ್ತಿ ಮಾಡುವ ಟೀಂನಲ್ಲಿ ಕೆಲಸ (೧೦ನೇ ಆರೋಪಿ ವಿನಯ್ ಮೂಲಕ ಪ್ರದೋಷ್ಗೆ ೪ ವರ್ಷಗಳ ಪರಿಚಯ)
* ಆರೋಪಿ ನಂ.೧೪: ಪ್ರದೋಷ್- ಐಟಿ ಕಂಪೆನಿ ಉದ್ಯೋಗಿ ಹಾಗೂ ದರ್ಶನ್ ಸ್ನೇಹಿತ (೨೦೦೩ರಿಂದ ಪರಿಚಯ)
* ಆರೋಪಿ ನಂ.೧೫: ಕಾರ್ತಿಕ್-ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸರೆಂಡರ್ ಮಾಡಿಸಲು ಕರೆತಂದಿದ್ದ ಹುಡುಗ
* ಆರೋಪಿ ನಂ.೧೬: ಕೇಶವಮೂರ್ತಿ- ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸರೆಂಡರ್ ಮಾಡಿಸಲು ಹೆಚ್ಚುವರಿಯಾಗಿ ಕರೆತಂದಿದ್ದ ಹುಡುಗ
* ಆರೋಪಿ ನಂ.೧೭: ನಿಖಿಲ್ ನಾಯ್ಕ-ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸರೆಂಡರ್ ಮಾಡಿಸಲು ಕರೆತಂದಿದ್ದ ಹುಡುಗ




