ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ ಮೂಲೆಗಳಲ್ಲೂ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಡಾವಣೆಯನ್ನು ಮೈಸೂರಿನ ಕುಬೇರನ ಮೂಲೆ ಎಂದು ರಿಯಲ್ ಎಸ್ಟೇಟ್ನವರು ಬಿಂಬಿಸುತ್ತಾರೆ.
ಆದರೆ ಇಲ್ಲಿ ಕುಬೇರನ ಸಂಪತ್ತಿನ ಕೊಪ್ಪರಿಗೆಗಳು ಸಿಗದಿರಬಹುದು. ನಿಮಗಂತೂ ಕಸದ ಕೊಪ್ಪರಿಗೆಗಳ ರಾಶಿ ದಂಡಿಯಾಗಿ ಸಿಗುತ್ತವೆ ಮತ್ತು ದುರ್ನಾತವಂತೂ ಬೋನಸ್ ನಂತಾಗಿದೆ!
ಇದೇ ಬಡಾವಣೆಯಲ್ಲಿರುವ ಪತ್ರಕರ್ತರ ಬಡಾವಣೆಯ ಪರ್ವ ಫ್ರೆಂಡ್ಸ್ ಕ್ಲಬ್ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಆರ್.ಟಿ.ನಗರದ ಜೋಡಿರಸ್ತೆಯ ಸಂಧಿಸುವ ರಸ್ತೆಯಿದೆ .ಅದಕ್ಕೆ ಡಾಂಬರೀಕರಣವೂ ಆಗಿದೆ. ಅಭಿವೃದ್ಧಿ ಹೊಂದಿದ ಬಡಾವಣೆಯವರು ಈ ರಸ್ತೆಯನ್ನು ತಮ್ಮ ಕಸ ಸುರಿಯುವ ತಿಪ್ಪೆಯಾಗಿ ಮಾರ್ಪಡಿಸಿಕೊಂಡಿದ್ದಾರೆ. ಇಲ್ಲಿ ಕಸವನ್ನು ಮಾತ್ರವಲ್ಲದೆ,ಸತ್ತ ಪ್ರಾಣಿಗಳನ್ನು ಇ ತಂದು ಬಿಸಾಕಿ ಹೋಗುತ್ತಾರೆ . ಹೀಗಿದ್ದಾಗ ಬೀದಿ ನಾಯಿಗಳು ಇವೆ ಎಂದು ಹೇಳಬೇಕಾಗಿಲ್ಲ.
೨೦ರಿಂದ ೩೦ ನಾಯಿಗಳು ಈ ಜಾಗದಲ್ಲೇ ಠಳಾಯಿಸಿವೆ. ಬೆಳಗಿನ ನಡಿಗೆಗೆ ಹೋಗುವಾಗಲಂತೂ ಅವುಗಳ ನೋಟ, ನೀವೂ ಒಂದು ದಿನ ನಮ್ಮ ಆಹಾರ ಎಂದುಕೊಂಡಂತೆ ಭಯ ಹುಟ್ಟಿಸುತ್ತವೆ . ನಮ್ಮ ನೆರೆಯ ಲಿಂಗಾಂಬುದಿ ಪಾಳ್ಯ ಮೊದಲಾದ ಬಡಾವಣೆಗಳವರು ತಮ್ಮ ದನಗಳನ್ನು ನಮ್ಮ ಬಡಾವಣೆಗೆ ಗೋಮಾಳ ಅಂತ ತಿಳಿದು ಅಟ್ಟಿಬಿಡುತ್ತಾರೆ . ಇದರಿಂದಲೂ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಈ ಕ್ಷೇತ್ರದ ಶಾಸಕರು, ಬೋಗಾದಿ ಪಟ್ಟಣ ಪಂಚಾಯಿತಿಯವರು ಈ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ.
– ಮಹೇಶ್ ಹರವೆ, ನಿವೃತ್ತ ಪ್ರಾಚಾರ್ಯರು , ಮೈಸೂರು



