Mysore
28
light rain

Social Media

ಶುಕ್ರವಾರ, 16 ಅಕ್ಟೋಬರ್ 2026
Light
Dark

ಓದುಗರ ಪತ್ರ: ಜಾಲತಾಣದಲ್ಲಿ ಧೂಮಪಾನ, ಮದ್ಯಪಾನ ನಿಷೇಧಿಸಿ

ಇಂದಿನ ಡಿಜಿಟಲ್ ಯುಗದಲ್ಲಿ ಟಿವಿ ಮತ್ತು ಚಲನಚಿತ್ರಗಳಿಗಿಂತ ಸಾಮಾಜಿಕ ಜಾಲತಾಣಗಳು ಅತಿ ಹೆಚ್ಚು ಜನರನ್ನು, ವಿಶೇಷವಾಗಿ ಯುವ ಜನತೆ ಮತ್ತು ಮಕ್ಕಳನ್ನು ಆಕರ್ಷಿಸುತ್ತಿವೆ. ಸಿನಿಮಾಗಳಲ್ಲಿ ನಾಯಕರು ಸಿಗರೇಟ್ ಸೇದುವಾಗ ಅಥವಾ ಮದ್ಯಪಾನ ಮಾಡುವಾಗ ತೆರೆಯ ಕೆಳಭಾಗದಲ್ಲಿ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅಥವಾ ‘ಮದ್ಯಪಾನ ಅಪಾಯಕಾರಿ’ ಎಂಬ ಎಚ್ಚರಿಕೆಯ ಸಂದೇಶವನ್ನು ಕಡ್ಡಾಯವಾಗಿ ಪ್ರದರ್ಶಿಸಲಾಗುತ್ತದೆ. ಇದು ಕಾನೂನುಬದ್ಧ ನಿಯಮವೂ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಹಾಗೂ ಫೇಸ್‌ಬುಕ್ ವಿಡಿಯೋಗಳಲ್ಲಿ ಹಾಸ್ಯ ಮತ್ತು ಮನರಂಜನೆಯ ನೆಪದಲ್ಲಿ ಮದ್ಯಪಾನ ಮತ್ತು ಧೂಮಪಾನದ ದೃಶ್ಯಗಳನ್ನು ಮುಕ್ತವಾಗಿ, ಯಾವುದೇ ಮುಜುಗರ ಅಥವಾ ಎಚ್ಚರಿಕೆ ಇಲ್ಲದೆ ಬಿತ್ತರಿಸಲಾಗುತ್ತಿದೆ.

ಇಂತಹ ದೃಶ್ಯಗಳು ಸಮಾಜದ ಮೇಲೆ, ಅದರಲ್ಲೂ ಅಪ್ರಾಪ್ತ ವಯಸ್ಕರ ಮನಸ್ಸಿನ ಮೇಲೆ ಅತ್ಯಂತ ಆಳವಾದ ಮತ್ತು ಕೆಟ್ಟ ಪರಿಣಾಮ ಬೀರುತ್ತಿವೆ. ಇಂತಹ ವಿಡಿಯೋಗಳಲ್ಲಿ ವ್ಯಸನವನ್ನು ತಮಾಷೆಯ ವಿಷಯವಾಗಿ, ಕೆಲವೊಮ್ಮೆ ಜಾಣತನ ಅಥವಾ ‘ಟ್ರೆಂಡ್’ ಎಂಬಂತೆ ಬಿಂಬಿಸಲಾಗುತ್ತದೆ. ಹಾಸ್ಯದ ಲೇಪನ ಇರುವುದರಿಂದ ನೋಡುವವರ ಮನಸ್ಸಿನಲ್ಲಿ ಇವು ಸಹಜ ಮತ್ತು ನಿರುಪದ್ರವ ಎಂಬ ಭಾವನೆ ಮೂಡುತ್ತದೆ. ಚಲನಚಿತ್ರಗಳಿಗೆ ಸೆನ್ಸಾರ್ ಮಂಡಳಿಯ ಕಣ್ಗಾವಲಿದೆ. ಆದರೆ ಯಾರು ಬೇಕಾದರೂ ವಿಡಿಯೋಗಳನ್ನು ಮಾಡಿ ಜಾಲತಾಣಗಳಲ್ಲಿ ಹರಿಯಬಿಡಬಹುದು. ಹೀಗಾಗಿ ಹೆಚ್ಚು ಪ್ರಭಾವ ಬೀರುವ ಸಾಮಾಜಿಕ ಜಾಲತಾಣಗಳಿಗೆ ನಿಯಂತ್ರಣವೇ ಇಲ್ಲದಂತಾಗಿದೆ. ಸರ್ಕಾರ ಮತ್ತು ಜಾಲತಾಣ ಸಂಸ್ಥೆಗಳು ಇಂತಹ ವಿಡಿಯೋಗಳಿಗೂ ಧೂಮಪಾನ ಹಾಗೂ ಮದ್ಯಪಾನ ವಿರೋಧಿ ಎಚ್ಚರಿಕೆಗಳ ಪ್ರದರ್ಶನವನ್ನು ಕಡ್ಡಾಯಗೊಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಡುವವರೂ ಸ್ವಯಂಪ್ರೇರಣೆಯಿಂದ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಬಂಧಪಟ್ಟ ಸೈಬರ್ ಹಾಗೂ ಮಾಧ್ಯಮ ನಿಯಂತ್ರಣ ಪ್ರಾಧಿಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ 

Tags:
error: Content is protected !!