ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇಲ್ಲಿಯವರೆಗೂ ‘ನಿದ್ರೆ’ ಮಾಡುತ್ತಿದ್ದ ರಾಷ್ಟ್ರೀಯ ಔಷಧ ನಿಯಂತ್ರಣ ಮಂಡಳಿ ಈಗ ಎಚ್ಚೆತ್ತುಕೊಂಡ್ಡಿದ್ದು, ಇನ್ನು ಮುಂದೆ ಉತ್ಪಾದನಾ ವೆಚ್ಚ ಮತ್ತು ಮಾರಾಟದ ವೆಚ್ಚವನ್ನು ಔಷಧಿಗಳ ಮೇಲೆ ಕಡ್ಡಾಯವಾಗಿ ನಮೂದಿಸುವಂತೆ ಎಲ್ಲ ಔಷಧ ಕಂಪೆನಿಗಳಿಗೂ ಆದೇಶಿಸಿದೆ.
ಆತಂಕಕಾರಿ ಸಂಗತಿಯೆಂದರೆ ಕ್ಯಾನ್ಸರ್ಗೆ ಸಂಬಂಧಿಸಿದ ಔಷಧಿಗಳು ಶೇಕಡಾ ೭೦ ರಷ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ ಎಂದು ಹೇಳಲಾಗುತ್ತಿದೆ. ಇದೇ ರೀತಿ ಇನ್ನು ಮುಂದೆ ಗ್ರಾಹಕರು ತೆಗೆದುಕೊಳ್ಳುವ ಎಲ್ಲ ರೀತಿಯ ವಸ್ತುಗಳ ಉತ್ಪಾದನಾ ದರ ಮತ್ತು ಮಾರಾಟದ ದರವನ್ನು ಕಡ್ಡಾಯವಾಗಿ ನಮೂದಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಬೇಕು. ಕೆಲವು ವಸ್ತುಗಳ ಉತ್ಪಾದನಾ ದರಕ್ಕಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಗ್ರಾಹಕ ತೆಗೆದುಕೊಳ್ಳುತ್ತಿzನೆ. ಉದಾಹರಣೆಗೆ ಅರ್ಧ ಲೀಟರ್ ಖನಿಜಯುಕ್ತ ನೀರಿನ(ಮಿನರಲ್ ವಾಟರ್) ಉತ್ಪಾದನಾ ವೆಚ್ಚ ಸುಮಾರು ಒಂದು ರೂಪಾಯಿಗೂ ಕಡಿಮೆ ಇರುತ್ತದೆ. ಅದನ್ನು ಗ್ರಾಹಕ ೧೦ ರೂಪಾಯಿ ಕೊಟ್ಟು ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಅಂದರೆ ಸುಮಾರು ೯ ರೂಪಾಯಿಗಳು ಮಧ್ಯವರ್ತಿಗಳ ಪಾಲಾಗುತ್ತಿದೆ. ಇದರ ಬಗ್ಗೆ ಗ್ರಾಹಕರ ಹಕ್ಕು ಮಂಡಳಿ ಗಮನಹರಿಸಿ ಗ್ರಾಹಕರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು.
-ಬೂಕನಕೆರೆ ವಿಜೇಂದ್ರ, ಮೈಸೂರು


