ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ
ಅಂತೂ ನಾಲ್ಕು ಹುಡುಗರು ಸ್ಟೇಷನ್ ಒಳಗೆ ಹೋದರು ಎಂದರೆ ಮತ್ತೊಂದು ಸಂಕಟ ಶುರು
ಪಿಎಸ್ಐ ವಿನಯ್ ಅವರ ಮನೆಗೆ ಹೋಗಿ, ಎಲ್ಲ ವಿಚಾರ ತಿಳಿಸಿಬಿಡೋಣ ಅಂದುಕೊಂಡು, ದೀಪಕ್ ಬೈಕ್ ತೆಗೆದುಕೊಂಡು ಹೊರಡುವ ಸಮಯಕ್ಕೆ ಸರಿಯಾಗಿ ಲಕ್ಷ್ಮಣ್ ಸಿಕ್ಕಿ, ಎಲ್ಲಿ ಹೋಗುತ್ತಿದ್ದೀರಿ ಎಂದು ಕೇಳಿದರು. ನಾನು ಸ್ವಲ್ಪ ಕೆಲಸ ಇದೆ, ಇಲ್ಲೇ ಇರಿ ಬರುತ್ತೇನೆ ಎಂದೆ. ಆಗ ಲಕ್ಷ್ಮಣ್, ‘ನಾನು ಇಲ್ಲಿ, ಇವರೊಂದಿಗೆ ಇರುವುದಿಲ್ಲ, ನಿಮ್ಮೊಂದಿಗೆ ಬರುತ್ತೇನೆ’ ಎಂದು ಹೇಳಿ ನನ್ನ ಬೈಕನ್ನು ಹತ್ತಿಕೊಂಡರು. ಅವರನ್ನೂ ಕರೆದುಕೊಂಡು ಪಿಎಸ್ಐ ವಿನಯ್ ಅವರ ಮನೆಯ ಹತ್ತಿರ ಹೋಗಿ, ಬೈಕ್ ನಿಲ್ಲಿಸಿದೆ. ನಂತರ ಲಕ್ಷ್ಮಣ್ಗೆ ನೀವು ಇಲ್ಲೇ ಇರಿ, ನಾನು ಹೋಗಿ ಬರುತ್ತೇನೆ ಎಂದು ಹೇಳಿ, ಅವರನ್ನು ಅಲ್ಲಿಯೇ ನಿಲ್ಲಿಸಿ ಪಿಎಸ್ಐ ವಿನಯ್ ಅವರ ಮನೆಯತ್ತ ನಡೆದೆ.
ದಯವಿಟ್ಟು ಅವರಿಗೆ ಹೊಡೆಯಬೇಡಿ: ಅವರ ಮನೆ ೩-೪ ಮಹಡಿಯಲ್ಲಿ ಇದ್ದುದರಿಂದ ಲಿಫ್ಟ್ ಮೂಲಕ ಅವರ ಮನೆ ತಲುಪಿದಾಗ ಅವರು ಮನೆಯ ಮುಂದೆ ಇರುವ ಖಾಲಿ ಜಾಗದಲ್ಲಿ ವಾಕ್ ಮಾಡುತ್ತಿದ್ದರು. ಆಗ ಅವರಿಗೆ ನಾನು ನಿಮ್ಮೊಂದಿಗೆ ಸ್ವಲ್ಪ ಪರ್ಸನಲ್ ಆಗಿ ಮಾತನಾಡಬೇಕಿತ್ತು, ಅದಕ್ಕೆ ನಿಮ್ಮ ಮನೆಗೇ ಬಂದೆ ಎಂದು ಹೇಳಿದೆ. ಆಗ ಅವರು ಮನೆಯ ಬಾಲ್ಕನಿಯ ಕಡೆಗೆ ಬಂದು ನೋಡಿದಾಗ, ಕೆಳಗೆ ಲಕ್ಷ್ಮಣ್ ನಿಂತಿರುವುದನ್ನು ನೋಡಿದವರೇ ನನ್ನನ್ನು ಏನೂ ಕೇಳದೆ, ಲಕ್ಷ್ಮಣ್ ಮೇಲೆ ಬನ್ನಿ ಎಂದು ಅವರ ಹೆಸರಿಡಿದು ಕೂಗಿದರು. ಒಂದೆರಡು ನಿಮಿಷಗಳಲ್ಲಿ ಲಕ್ಷ್ಮಣ್ ಮೇಲೆ ಬಂದರು.
ದೇವಸ್ಥಾನಕ್ಕೆ ಬಂದು, ಪ್ರಸಾದ ತೆಗೆದುಕೊಳ್ಳದೆ ಹೋಗಲು ಆಗುತ್ತದೆಯೇ: ಆಗ ಪಿಎಸ್ಐ ವಿನಯ್ ಅವರು, ‘ಏನು ಹೇಳಬೇಕೋ ಹೇಳಿ’ ಎಂದು ನನ್ನನ್ನು ಕೇಳಿದರು. ಆಗ ನಾನು ಅವರಿಗೆ ನಡೆದಿರುವ ಕೃತ್ಯದ ಬಗ್ಗೆ ಏನೂ ಹೇಳಲಿಲ್ಲ. ಇಂದು ಒಂದು ಒಂದೂವರೆ ಗಂಟೆಯೊಳಗೆ ಅವರನ್ನು ಸರೆಂಡರ್ ಮಾಡಿಸಿಬಿಡುತ್ತೇವೆ ಎಂದು ಹೇಳಿ ಮಾತು ಮುಗಿಸಿದೆ. ಅಲ್ಲದೇ ಅವರಿಗೆ ದಯವಿಟ್ಟು ಹೊಡೆಯಬೇಡಿ ಎಂದು ರಿಕ್ವೆಸ್ಟ್ ಮಾಡಿದೆ. ಆಗ ಅವರು ನಗುತ್ತಾ, ‘ದೇವಸ್ಥಾನಕ್ಕೆ ಬಂದ ನಂತರ, ಪ್ರಸಾದವನ್ನು ತೆಗೆದುಕೊಳ್ಳದೆ ಹೋಗಲು ಆಗುತ್ತದೆಯೇ’ ಎಂದರು.
ಸರೆಂಡ್ ಆಗಲು ಮತ್ತೊಬ್ಬ ಸೇರ್ಪಡೆ: ನಂತರ ಅಲ್ಲಿಂದ ಹೊರಟ ನಾವು ಮತ್ತೆ ಗ್ಲೋಬಲ್ ಕಾಲೇಜ್ ರೀಚ್ ಆದೆವು. ನಂತರ ಬಳಿಯಲ್ಲೇ ಇದ್ದ ‘ಮೋನಿಷ್ ಕಾರ್ನರ್’ ಹೋಟೆಲ್ಗೆ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯ್ಕ ಅವರನ್ನು ಕರೆದುಕೊಂಡು ಹೋಗಿ ಊಟ ಮಾಡಿಕೊಳ್ಳಿ ಎಂದು ಹೇಳಿ ಊಟ ಆರ್ಡರ್ ಮಾಡಿದೆ.(ನಾನು, ನನ್ನ ಸ್ನೇಹಿತ ಕಾರ್ತಿಕ್, ಲಕ್ಷ್ಮಣ್, ನಾಗರಾಜ್ ಮತ್ತು ದೀಪಕ್ ಬೇರೆ ಇನ್ನೊಂದು ಕಡೆ ಊಟ ಮಾಡಿಕೊಂಡು, ನನ್ನ ಸ್ಕಾರ್ಪಿಯೋ ವಾಹನದಲ್ಲಿ ಮತ್ತೆ ಮೋನಿಷ್ ಕಾರ್ನರ್ ಹೋಟೆಲ್ ಹತ್ತಿರ ಬಂದಿದ್ದೆವು)
ಆ ಸಮಯದಲ್ಲಿ ಆ ಮೂವರೂ ಹುಡುಗರೊಂದಿಗೆ ಇನ್ನೊಬ್ಬ ಹುಡುಗ ಇದ್ದ. ಆತ ಯಾರೆಂದು ನನಗೆ ಗೊತ್ತಿರಲಿಲ್ಲ. ಆಗ ದೀಪಕ್ ಆಹುಡುಗನತ್ತ ಕೈತೋರಿಸಿ, ‘ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಅವರೊಂದಿಗೆ ಈತ ಕೂಡ ಸರೆಂಡರ್ ಆಗುತ್ತಾನೆ’ ಎಂದು ನನಗೆ ಹೇಳಿದರು. ಅಲ್ಲಿಯವರೆಗೂ ನನಗೆ ಆ ಹುಡುಗನ ಪರಿಚಯ ಇರಲಿಲ್ಲ. (ಪ್ರಕರಣದ ೧೬ನೇ ಆರೋಪಿಯಾದ ಕೇಶವ ಮೂರ್ತಿ) ಆದರೆ ಆತ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗ, ಆತನ ಹೆಸರು ಕೇಶವ ಎಂದು ಗೊತ್ತಾಗಿತ್ತು.
ಸರೆಂಡರ್ ಆಗುತ್ತಾರೋ? ಇಲ್ಲವೋ?; ಕನ್ಫರ್ಮ್ ಮಾಡಿಕೊಳ್ಳಲು ಕಾರಿನಲ್ಲಿ ಫಾಲೋ: ಆನಂತರ ನನ್ನ ಸ್ಕಾರ್ಪಿಯೋ ಕಾರಿನಲ್ಲಿ ನಾನು, ದೀಪಕ್, ಲಕ್ಷ್ಮಣ್, ನಾಗರಾಜ್ ಮತ್ತು ನನ್ನ ಸ್ನೇಹಿತ ಕಾರ್ತಿಕ್ ಕುಳಿತುಕೊಂಡೆವು. ಮುಂದೆ ಒಂದು ಆಟೋದಲ್ಲಿ ಕಾರ್ತಿಕ್, ಕೇಶವ ಮೂರ್ತಿ, ನಿಖಿಲ್ ನಾಯ್ಕ ಮತ್ತು ರಾಘವೇಂದ್ರ ಕುಳಿತುಕೊಂಡರು. ಆಟೋ ಕಾಮಾಕ್ಷಿಪಾಳ್ಯ ಸ್ಟೇಷನ್ ಕಡೆ ಹೊರಟಿತು. ನಾನು ಆಟೋವನ್ನು ಫಾಲೋ ಮಾಡಿಕೊಂಡು ಹೋದೆ. ಈ ಮೊದಲು ಸರೆಂಡರ್ ಆಗುತ್ತೇನೆ ಎಂದು ಹೇಳಿದವರು, ನಂತರ ಉಲ್ಟಾ ಹೊಡೆದಿದ್ದರಿಂದ ಅವರು ಸರೆಂಡರ್ ಆಗುತ್ತಾರೋ? ಇಲ್ಲವೋ? ಎಂದು ಕನರ್ಮ್(ಖಚಿತಪಡಿಸಿಕೊಳ್ಳಲು) ಮಾಡಿಕೊಳ್ಳಲು ನನ್ನ ಕಾರಿನಲ್ಲಿ ಅವರನ್ನು ಫಾಲೋ ಮಾಡಿಕೊಂಡು ಹೋಗಿದ್ದೆ. ಆಟೋ ಕಾಮಾಕ್ಷಿಪಾಳ್ಯ ಸ್ಟೇಷನ್ ತಲುಪುತ್ತಿದ್ದಂತೆ ಆಟೋದಲ್ಲಿ ಇದ್ದ ಕಾರ್ತಿಕ್, ಕೇಶವ ಮೂರ್ತಿ, ನಿಖಿಲ್ ನಾಯ್ಕ ಮತ್ತು ರಾಘವೇಂದ್ರ ಅವರು ಸ್ಟೇಷನ್ ಒಳಗೆ ಹೋದರು.
ಬೇಲ್ಗೆ ೫ ಲಕ್ಷ ರೂಪಾಯಿ ಫೀಸ್ ಆಗುತ್ತದೆ: ನಾನು ಬೆಳಿಗ್ಗೆ ಪಿಎಸ್ಐ ವಿನಯ್ ಅವರ ಮನೆಗೆ ಹೋಗಿದ್ದಾಗ, ನಿಮಗೆ ಗೊತ್ತಿರುವ ಯಾರಾದರೊಬ್ಬರುವಕೀಲರ ಮೊಬೈಲ್ ನಂಬರ್ ಇದ್ದರೆ ಕೊಡಿ ಎಂದು ಕೇಳಿದ್ದಾಗ ಅವರು ಒಬ್ಬ ವಕೀಲರ ನಂಬರ್ ಕೊಟ್ಟಿದ್ದರು. ಆ ನಾಲ್ಕು ಜನ ಸರೆಂಡರ್ ಆದ ನಂತರ, ಸದರಿ ವಕೀಲರಿಗೆ ನಾನು -ನ್ ಮಾಡಿ ಅಪಾಯಿಂಟ್ ಮೆಂಟ್ (appointment) ಕೇಳಿದೆ. ಅವರು ‘ಕಚೇರಿಯಲ್ಲೇ ಇದ್ದೇನೆ, ಈಗಲೇ ಬನ್ನಿ’ ಎಂದರು. ಅವರ ಕಚೇರಿ ಮಲ್ಲೇಶ್ವರಂನಲ್ಲಿತ್ತು. ಅಲ್ಲಿಗೆ ಹೋಗಿ ವಕೀಲರನ್ನು ಭೇಟಿ ಮಾಡಿದೆವು. ಅವರಿಗೆ ವಿಚಾರ ತಿಳಿಸಿ ಬೇಲ್ ಮಾಡಿಸುವ ಬಗ್ಗೆ ವಿಚಾರಿಸಿದಾಗ, ಅವರು, ‘೫ ಲಕ್ಷ ರೂಪಾಯಿ ಫೀಸ್ ಆಗುತ್ತದೆ. ನಾಳೆ ಬೆಳಿಗ್ಗೆ ಮುಂಗಡವಾಗಿ ೧ ಲಕ್ಷ ರೂಪಾಯಿಯನ್ನು ನನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ’ ಎಂದು ತಿಳಿಸಿದರು. ಆಗ ನಾವು ಸರಿ ಎಂದು ಹೇಳಿ ಅಲ್ಲಿಂದ ಹೊರಟೆವು.
ಪೊಲೀಸರು ವೈಟ್ ಕಲರ್ ಸ್ಕಾರ್ಪಿಯೋ, ರೆಡ್ ಕಲರ್ ಜೀಪ್ ಹುಡುಕಿಕೊಂಡು ಪಟ್ಟಣಗೆರೆ ಶೆಡ್ಗೆ ಬಂದಿದ್ದರು:
ನಂತರ ನಾನು ವಿನಯ್ಗೆ ಫೋನ್ ಮಾಡಿ, ಹುಡುಗರನ್ನು ಸರೆಂಡರ್ ಮಾಡಿಸಿದ್ದೇನೆ ಎಂದೆ. ಆಗ ಅವರು, ‘ಪೊಲೀಸರು ವೈಟ್ ಕಲರ್ ಸ್ಕಾರ್ಪಿಯೋ ಹಾಗೂ ನನ್ನ ರೆಡ್ ಕಲರ್ ಜೀಪನ್ನು ಹುಡುಕಿಕೊಂಡು ಪಟ್ಟಣಗೆರೆ ಶೆಡ್ವರೆಗೆ ಬಂದಿದ್ದರು’ ಎಂದು ತಿಳಿಸಿದರು. ಅಂದು ಸಂಜೆ ೫ರಿಂದ ೬ ಗಂಟೆ ಸುಮಾರಿಗೆ ಪಿಎಸ್ಐ ವಿನಯ್ ಅವರಿಂದ ನನಗೆ ಫೋನ್ ಕರೆ ಬಂತು. ರಿಸೀವ್ ಮಾಡುತ್ತಿದ್ದಂತೆ, ಪಿಎಸ್ಐ ವಿನಯ್ ಅವರು, ‘ಸರೆಂಡರ್ ಆದ ಹುಡುಗರು ಬೇರೆ ಕಥೆ ಹೇಳುತ್ತಿದ್ದಾರೆ, ಆದರೆ ನೀವು ಹೇಳಿದ ಸ್ಟೋರಿ ಬೇರೆ ಇದೆ’ ಎಂದು ಕೇಳಿದರು. ಆಗ ನಾನು ಅವರು ಏನು ಹೇಳಿದರು ಸರ್ ಎಂದು ಕೇಳಿದೆ. ಅದಕ್ಕೆ ಅವರು, ‘ದರ್ಶನ್, ಪವಿತ್ರಾ ಗೌಡ ಮತ್ತು ಪವನ್ ಅವರ ಹೆಸರು ಹೇಳುತ್ತಿದ್ದಾರೆ’ ಎಂದರು. ಆಗ ನಾನು, ಒಂದತ್ತು ನಿಮಿಷ ಟೈಮ್ ಕೊಡಿ ಸರ್ ವಾಪಸ್ ಕಾಲ್ ಮಾಡುತ್ತೇನೆ ಎಂದು ಹೇಳಿದೆ. ನಂತರ ತಕ್ಷಣ ನಾಗರಾಜ್ ಅವರಿಗೆ ಫೋನ್ ಮಾಡಿ ಪಿಎಸ್ಐ ವಿನಯ್ ಅವರು ಹೇಳಿದ ವಿಚಾರ ತಿಳಿಸಿದೆ.
ತತಕ್ಷಣ ಅವರು, ‘ಈ ವಿಷಯವನ್ನು ದರ್ಶನ್ ಅವರಿಗೆ ತಿಳಿಸಿಬಿಡೋಣ’ ಎಂದರು. ಆನಂತರ ನಾಗರಾಜ್ ಮತ್ತು ಲಕ್ಷ್ಮಣ್ಅವರು ನೈಸ್ ರೋಡ್ ಹತ್ತಿರ ಬಂದರು. ನಾನು ಕೂಡ ನನ್ನ ಕಾರನ್ನು ತೆಗೆದುಕೊಂಡು ನೈಸ್ ರೋಡ್ ಹತ್ತಿರ ಹೋದೆ. ಅಲ್ಲಿಂದ ಪಿಎಸ್ಐ ವಿನಯ್ ಅವರಿಗೆ ಫೋನ್ ಮಾಡಿ, ಸರ್ ನಿಮ್ಮ ಹತ್ತಿರ ಮಾತನಾಡಬೇಕು, ಸಿಗುತ್ತೀರಾ ಎಂದು ಕೇಳಿದೆ. ಅದಕ್ಕೆ ಅವರು, ‘ನಾನು ನಾಗರಭಾವಿ ಕಡೆಗೆ ಹೋಗುತ್ತಿದ್ದೇನೆ, ಸ್ವಲ್ಪ ಬ್ಯುಸಿ ಇದ್ದೇನೆ ಎಂದರು. ಆಗ ನಾನು ನೈಸ್ ರೋಡ್ ಜಂಕ್ಷನ್ ಹತ್ತಿರ ಇದ್ದೇವೆ. ೫ ನಿಮಿಷ ಸಿಗುತ್ತೀರಾ ಎಂದು ರಿಕ್ವೆಸ್ಟ್ ಮಾಡಿದೆ. ಈ ನಡುವೆ ನಾನು, ನಾಗ ರಾಜ್ ಮತ್ತು ಲಕ್ಷ್ಮಣ್ ನನ್ನ ಕಾರಿನಲ್ಲಿ ಕುಳಿತುಕೊಂಡು ಎಲ್ಲರನ್ನೂ ಪೊಲೀಸರ ಮುಂದೆ ಸರೆಂಡರ್ ಮಾಡಿಸಿ ಬಿಡೋಣ, ಇಲ್ಲದಿದ್ದರೆ ತೊಂದರೆಯಾಗುತ್ತದೆ ಎಂದು ಯೋಚಿಸುತ್ತಿದ್ದೆವು.



