ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿದೆ.
ಈ ತಾಲೀಮಿನಲ್ಲಿ 11 ಆನೆಗಳು ಹಾಗೂ 46 ಕುದುರೆಗಳು ಭಾಗವಹಿಸಿದ್ದವು. ಅಭಿಮನ್ಯು, ಧನಂಜಯ, ಪ್ರಶಾಂತ, ಸುಗ್ರೀವ, ಶ್ರೀರಾಮ, ಗೋಪಿ, ಮಹೇಂದ್ರ, ಲಕ್ಷ್ಮಿ, ಚೈತ್ರಾ, ರೂಪ ಹಾಗೂ ಕಾವೇರಿ ಆನೆಗಳು ಸಿಡಿಮದ್ದಿನ ತಾಲೀಮು ಎದುರಿಸಿದವು. ಅರಮನೆಯ ಪೂಜೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಶ್ರೀಕಂಠ ಮತ್ತು ಏಕಲವ್ಯ ಆನೆಗಳು ತಾಲೀಮಿಗೆ ಹಾಜರಾಗಿರಲಿಲ್ಲ.
ಮೈಸೂರು ನಗರ ಸಶಸ್ತ್ರ ಪೊಲೀಸರು ಏಳು ಫಿರಂಗಿ ಗಾಡಿಗಳ ಮೂಲಕ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಿದರು. ಭಾರೀ ಸಿಡಿಮದ್ದಿನ ಶಬ್ದಕ್ಕೂ ಆನೆಗಳು ಹಾಗೂ ಕುದುರೆಗಳು ಬೆದರದೆ ಶಾಂತವಾಗಿ ನಿಂತಿದ್ದವು.
ಜಂಬೂಸವಾರಿ ಸಂದರ್ಭದಲ್ಲಿ ಕುಶಾಲತೋಪಿನ ಶಬ್ದಕ್ಕೆ ಗಜಪಡೆ ಮತ್ತು ಅಶ್ವಪಡೆಯನ್ನು ಸಜ್ಜುಗೊಳಿಸುವ ಈ ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿದೆ.




