ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದೇವಿಯ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಸರ್ಕಾರದ ಮೇಲಿರಲಿ ಎಂದು ಆಶಿಸಿದ್ದಾರೆ.
ಸ್ವಾಮೀಜಿಗಳ ಹೇಳಿಕೆ ತಿರುಚಿದವರಿಗೆ ತಿರುಗೇಟು!
ಸ್ವಾಮೀಜಿಗಳಿಗೂ ನನಗೂ ಇರುವ ಸಂಬಂಧ ಪ್ರಶ್ನಾತೀತ. ನಾನು ಯಾವತ್ತೂ ಸ್ವಾಮೀಜಿಗಳಿಗೆ ನನ್ನ ಸೇವೆ ಮಾಡಿ ಎಂದು ಹೇಳಿಲ್ಲ. ಬದಲಾಗಿ, ಈ ನಾಡಿನ ಸೇವೆ ಮಾಡಿ ಎಂದೇ ಹೇಳಿದ್ದೇನೆ. ಆದರೆ ಕೆಲವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಈ ವಿಚಾರಕ್ಕೆ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಡಿಕೆ ಶಿವಕುಮಾರ್ ಸಲಹೆ ನೀಡಿದ್ದಾರೆ.
ಒಗ್ಗಟ್ಟಿನ ಸಂದೇಶ ಸಾರುವ ದಸರಾ!
ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುತ್ತಿದ್ದೇವೆ ಎಂಬ ಸಂದೇಶ ಸಾರುವುದೇ ದಸರಾ. ಮೈಸೂರು ದಸರಾ ಕೇವಲ ಹಬ್ಬವಲ್ಲ, ಇದು ಬಣ್ಣಗಳ ಹಬ್ಬ. ಮೈಸೂರಿನ ಸಂಸ್ಕೃತಿ ಒಬ್ಬರಿಂದ ನಿರ್ಮಾಣವಾದದ್ದಲ್ಲ, ಎಲ್ಲರ ಕೊಡುಗೆಯಿಂದ ಬೆಳೆದಿದೆ ಎಂದು ಹೇಳಿದ್ದಾರೆ.
ಮೈಸೂರಿನ ಸಂಪತ್ತು ಅರಮನೆ ಮಾತ್ರವಲ್ಲ!
ಮೈಸೂರಿನ ಸಂಪತ್ತು ಅರಮನೆ ಮಾತ್ರವಲ್ಲ, ಅರಮನೆಯ ಮೇಲಿನ ಜನರ ನಂಬಿಕೆಯೂ ಮೈಸೂರಿನ ಸಂಪತ್ತು. ಯುದ್ಧ ಮತ್ತು ಹೋರಾಟಗಳಿಂದ ಬೆಳೆದ ನಗರಗಳನ್ನು ನಾವು ನೋಡಿದ್ದೇವೆ. ಆದರೆ ಮೈಸೂರು ಸಂಸ್ಕೃತಿಯಿಂದ ಬೆಳೆದ ನಗರ ಎಂದು ಡಿಕೆಶಿ ಬಣ್ಣಿಸಿದ್ದಾರೆ.
ಈ ಬಾರಿಯ ದಸರಾ ಮೆರವಣಿಗೆ ವಿಶೇಷ!
ಕಂಬಳಕ್ಕೆ ವಿರೋಧ ವ್ಯಕ್ತವಾದರೂ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದಸರಾದಲ್ಲಿ ಕಂಬಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೈಸೂರು ಇದೀಗ ಹೊಸ ಬ್ರ್ಯಾಂಡ್‌ನತ್ತ ಹೆಜ್ಜೆ ಇಡುತ್ತಿದೆ. ಈ ಬಾರಿಯ ದಸರಾ ಮೆರವಣಿಗೆ ವಿಶಿಷ್ಟವಾಗಿರಲಿದೆ. ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಕಂಗೊಳಿಸಲಿವೆ ಎಂದು ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.




