Mysore
30
scattered clouds

Social Media

ಮಂಗಳವಾರ, 06 ಅಕ್ಟೋಬರ್ 2026
Light
Dark

ಅಸ್ತ್ರಗಳು, ಅಂಧಕಾರ, ಆತಂಕ

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  

ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು

ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ ತಲುಪಿದೆ ಎಂದರೆ ಮುಂದಿನ ವಿಧಾನಸಭಾ ಚುನಾವಣೆಯ ರಣಾಂಗಣ ಮೂರೂ ರಾಜಕೀಯ ಪಕ್ಷಗಳು ಪ್ರಯೋಗಿಸುವ ಅಸಗಳಿಂದ ಅಂಧಕಾರಕ್ಕೆ ಜರಲಿದೆ.

ಅಂದ ಹಾಗೆ ರಾಮಾಯಣ, ಮಹಾಭಾರತದಂತಹ ಪೌರಾಣಿಕ ಸೀರಿಯಲ್ಲುಗಳನ್ನು ನೋಡುವವರಿಗೆ ರಣಾಂಗಣದಲ್ಲಿ ಪ್ರಯೋಗವಾಗುವ ಅಸಗಳು ಯಾವ ರೀತಿಯ ಅಂಧಕಾರವನ್ನು, ಆತಂಕವನ್ನು ಸೃಷ್ಟಿಸುತ್ತದೆ ಎಂಬ ಕಲ್ಪನೆ ಇರುತ್ತದೆ. ಇಂತಹ ಕಲ್ಪನೆ ಬಹುತೇಕ ಎಲ್ಲರಲ್ಲೂ ಇರುತ್ತದಾದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯ ರಣಾಂಗಣ ರಾಜಕೀಯ ಪಕ್ಷಗಳು ಪರಸ್ಪರ ಪ್ರಯೋಗಿಸುವ ಅಸಗಳಿಂದ ಉಂಟಾಗುವ ಅಂಧಕಾರ, ಆತಂಕಗಳನ್ನು ಊಹಿಸಬಹುದು.

ಇದನ್ನು ಒಂದಷ್ಟು ವಿವರವಾಗಿ ನೋಡುವುದಾದರೆ ಇತ್ತೀಚಿನ ದಿನಗಳಲ್ಲಿ ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳು ಪ್ರಯೋಗಿಸುತ್ತಿರುವ ಅಸಗಳ ಕಡೆ ನೋಡಬೇಕು. ಈ ವಿಷಯದಲ್ಲಿ ಸದ್ಯಕ್ಕೆ ಭೀಕರ ಅಸದ ಪ್ರಯೋಗ ಮಾಡುತ್ತಿರುವವರು ಜಾ.ದಳ ಅಧ್ಯಕ್ಷ, ಕೇಂದ್ರದ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ. ಅವರು ಕಳೆದ ವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರೀಕರಿಸಿಕೊಂಡು ಹಲವು ಆರೋಪಗಳನ್ನು ಮಾಡಿದರು. ಮೂಲತಃ ನೈಸ್ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಅವರು ಪ್ರಸ್ತಾಪಿಸಿದರೂ, ನೈಸ್ ವ್ಯಾಪ್ತಿಯ ನೂರಾರು ಎಕರೆ ಭೂಮಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುಟುಂಬದ ತೆಕ್ಕೆಗೆ ಹೋಗಿದ್ದು ಹೇಗೆ? ಅಂತ ಹಲವು ದಾಖಲೆಗಳನ್ನು ಪ್ರದರ್ಶಿಸಿದರು.

ಅವರ ಪ್ರಕಾರ,ಇದು ಮೂರು ಲಕ್ಷ ಕೋಟಿ ರೂಪಾಯಿಗಳ ಹಗರಣ. ಗಮನಿಸಬೇಕಾದ ಸಂಗತಿ ಎಂದರೆ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಆರೋಪಕ್ಕೆ ಪ್ರತಿಯಾಗಿ ಸಮರ್ಥನೆಯ ಸಾಕ್ಷ್ಯಾಧಾರಗಳು ಬಿಡುಗಡೆಯಾಗಲಿಲ್ಲವಾದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದ ಪ್ರಮುಖ ಸಚಿವರಾದ ಎನ್.ಚಲುವರಾಯಸ್ವಾಮಿ, ಕೃಷ್ಣ ಭೈರೇಗೌಡರಂತಹವರು ಕೈಗೆ ಸಿಕ್ಕ ಗದೆಗಳನ್ನೆತ್ತಿಕೊಂಡು ಕುಮಾರ ಸ್ವಾಮಿ ಅವರ ವಿರುದ್ಧ ಪ್ರಯೋಗಿಸಿದರು. ಹೀಗೆ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಡುವಣ ಸಂಘರ್ಷ ತಾರಕಕ್ಕೆ ತಲುಪುತ್ತಿದ್ದಂತೆಯೇ ಕಳೆದ ಶುಕ್ರವಾರ ಸಿಡಿಯೊಂದು ಸಿಡಿಯಿತು.

ಹೀಗೆ ಸಿಡಿದ ಸಿಡಿಯ ಹಿಂದಿರುವವರು ಯಾರು? ಎಂಬುದು ಸ್ಪಷ್ಟವಾಗಿಲ್ಲವಾದರೂ, ಇಂತಹ ಹಲವು ಸಿಡಿಗಳು ಮುಂದಿನ ದಿನಗಳಲ್ಲಿ ಹೊರಬರಲಿವೆ ಎಂಬ ಮುನ್ಸೂಚನೆಯನ್ನಂತೂ ನೀಡಿದವು. ಅಂದ ಹಾಗೆ ಕರ್ನಾಟಕದ ರಾಜಕಾರಣದಲ್ಲಿ ಸಿಡಿ ಅಸಗಳ ಪ್ರಯೋಗವೇನೂ ಹೊಸದಲ್ಲ. ಆದರೆ ಅದು ಈವರೆಗೆ ಒಂದು ಹಂತದ ನಾಯಕರ ಮೇಲೆ ಪ್ರಯೋಗವಾಗಿ ಅವರ ತಲೆದಂಡಕ್ಕೆ ಕಾರಣವಾಗುತ್ತಿತ್ತು. ಆದರೆ ಕಳೆದ ವಾರ ಬಿಡುಗಡೆಯಾದ ಸಿಡಿಯ ಸ್ವರೂಪ ಹಾಗಿರಲಿಲ್ಲ. ಅದು ದೊಡ್ಡ ದೊಡ್ಡ ನಾಯಕರ ಮೇಲೆ ಪ್ರಯೋಗವಾಗುವ ಲಕ್ಷಣಗಳನ್ನು ತೋರಿಸಿತು.

ಇನ್ನು ಇದೇ ಕಾಲದಲ್ಲಿ ಮತ್ತೊಂದು ಸಂಗತಿ ರಾಜಕೀಯ ವಲಯಗಳಲ್ಲಿ ಹರಿದಾಡತೊಡಗಿತು. ಅದರ ಪ್ರಕಾರ, ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕದ ಹಲವು ಸಚಿವರು, ಮಾಜಿ ಸಚಿವರು ಮತ್ತು ನಾಯಕರು ದೇವನಹಳ್ಳಿ ಸಮೀಪ ದಂಡಿಯಾಗಿ ಭೂಮಿಯನ್ನು ಖರೀದಿಸಿದ್ದಾರೆ. ಇಂತಹ ಖರೀದಿಯ ಹಿಂದೆ ಅಕ್ರಮಗಳ ವಾಸನೆ ಅಡಗಿದೆ ಎಂಬುದು ಈ ಸುದ್ದಿಯ ಹಿಂದಿನ ಮುಖ್ಯ ಅಂಶ. ಅಂದ ಹಾಗೆ ಭೂಮಿ ಖರೀದಿಸುವುದು ತಪ್ಪಲ್ಲ. ಆದರೆ ಅದಕ್ಕಾಗಿ ಅಕ್ರಮಗಳನ್ನು ಎಸಗುವುದು ತಪ್ಪು.

ಗಮನಿಸಬೇಕಾದ ಸಂಗತಿ ಎಂದರೆ ಒಂದು ಕಾಲದಲ್ಲಿ ಜನಸೇವೆ ಮಾಡುವುದಕ್ಕಾಗಿಯೇ ರಾಜಕಾರಣಕ್ಕೆ ಬರುವುದು ಒಂದು ಆದರ್ಶವಾಗಿತ್ತು. ಮೌಲ್ಯವಾಗಿತ್ತು. ಆದರೆ ಇವತ್ತು ಅದು ಆದರ್ಶವಲ್ಲ. ನಮ್ಮ ಶಕ್ತಿಯಿಂದ ನಾವು ಎಷ್ಟು ಮಾಡಿಕೊಂಡರೂ ತಪ್ಪೇನು?ಎಂದು ವಾದಿಸುವ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ. ಅದೇನೇ ಇರಲಿ, ಆದರೆ ಇಂತಹ ವಿಷಯಗಳೆಲ್ಲ ಸೇರಿ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಮಧ್ಯೆ ನಡೆಯುವ ಸಮರ ಹಿಂದಿನ ಎಲ್ಲ ಸಮರ ಚಾಕಚಕ್ಯತೆಗಳನ್ನೂ ಮೀರಿಸಲಿದೆ.

ಇಂತಹ ಸಾಧ್ಯತೆಗಳಿಗೆ ಪೂರಕವಾಗಿ ನಡೆಯುತ್ತಿರುವ ಮತ್ತೊಂದು ವಿಷಯವೆಂದರೆ ಪಾದಯಾತ್ರೆಯ ಪರಂಪರೆ. ಈ ಹಿಂದೆ ಸರ್ಕಾರ ನಡೆಸುವ ಪಕ್ಷಗಳ ವಿರುದ್ಧ ಪ್ರತಿಪಕ್ಷಗಳು ಪಾದಯಾತ್ರೆಯಂತಹ ಅಸ್ತ್ರವನ್ನು ಬಳಸುತ್ತಿದ್ದವು. ಆದರೆ ಈಗ ಪ್ರತಿಪಕ್ಷಗಳ ಜತೆ ಆಡಳಿತ ಪಕ್ಷವೂ ಪಾದಯಾತ್ರೆ ನಡೆಸುವ ಪರಂಪರೆ ಶುರುವಾಗಿದೆ. ಕಳೆದ ಕೆಲವೇ ದಿನಗಳಲ್ಲಿ ಬಿಜೆಪಿಯ ಬಳ್ಳಾರಿ ಪಾದಯಾತ್ರೆ, ಬಿಡದಿ ಟೌನ್‌ಶಿಪ್ ವಿರುದ್ಧ ಜಾ.ದಳ ಪಾದಯಾತ್ರೆ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಅಡಳಿತಾರೂಢ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆ ರಾಜ್ಯದ ಜನರ ಗಮನ ಸೆಳೆದಿದೆ. ಇವತ್ತು ಪ್ರತಿಪಕ್ಷಗಳು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಅರೋಪ ಹೊರಿಸಿ ಪಾದಯಾತ್ರೆ ಮಾಡುತ್ತಿದ್ದರೆ, ಕೇಂದ್ರ ಚುನಾವಣಾ ಆಯೋಗದ ಎಸ್ಐಆರ್ ನೀತಿ ಸೇರಿದಂತೆ ಹಲವು ವಿಷಯಗಳನ್ನು ಹಿಡಿದುಕೊಂಡು ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡುತ್ತಿದೆ. ಹೀಗೆ ಪ್ರತಿಪಕ್ಷಗಳ ಜತೆ ಆಡಳಿತಾರೂಢ ಪಕ್ಷವೂ ಪ್ರತಿಭಟನೆಯ ಮಾರ್ಗ ಹಿಡಿದಿದೆ ಎಂದರೆ ಮುಂದಿನ ರಾಜಕೀಯ ಸನ್ನಿವೇಶ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಲಿದೆ ಎಂದೇ ಅರ್ಥ.

ಇಂತಹ ಸಂದರ್ಭವನ್ನು ಎದುರಿಸಬೇಕಾದವರು ರಾಜ್ಯದ ಮತದಾರರು. ಇವತ್ತಿನ ರಾಜಕೀಯ ಸಂದರ್ಭದಲ್ಲಿ ಸರಿ ಯಾವುದು? ತಪ್ಪು ಯಾವುದು? ಎಂಬುದನ್ನು ಗ್ರಹಿಸಿ ಮುಂದಡಿ ಇಡಬೇಕಾದವರು ಅವರು. ಆದರೆ ಇಂತಹ ಹಂಸಕ್ಷೀರ ನ್ಯಾಯದ ಕಲ್ಪನೆ ಇಲ್ಲದೆ ಹೋದರೆ ಜಾತಿ, ಧರ್ಮಗಳಂತಹ ವಿಷಯಗಳಿಗೆ ಅಂಟಿಕೊಂಡು ಒಬ್ಬರನ್ನು ಬೆಂಬಲಿಸುವ ಕೆಲಸ ಮಾಡಿದರೆ ಉತ್ತಮ ಸರ್ಕಾರಗಳು ಬರಲು ಸಾಧ್ಯವಿಲ್ಲ.

ಅಂದ ಹಾಗೆ ಇವತ್ತಿನ ಬಹುತೇಕ ನಾಯಕರಂತೆ ನಾವು ಎಷ್ಟು ಸಂಪಾದಿಸಿದರೂ ತಪ್ಪೇನು?ಅನ್ನುವ ಮನಃಸ್ಥಿತಿ ನಮ್ಮ ನಾಡಿನ ಹಿಂದಿನ ನಾಯಕರಲ್ಲಿ, ರಾಜಕಾರಣಿಗಳಲ್ಲಿ ಇದ್ದಿದ್ದರೆ ಇವತ್ತಿನ ಪೀಳಿಗೆಗೆ ಒಂದು ಸೂರು ಕಟ್ಟಿಕೊಳ್ಳುವಷ್ಟು ನೆಲವೂ ಸಿಗುತ್ತಿರಲಿಲ್ಲ. ಅವರು ಅವತ್ತು ನಿಸ್ವಾರ್ಥದಿಂದ ಜನಸೇವೆ ಮಾಡಿದ್ದಕ್ಕೆ, ನಮ್ಮ ಮುಂದಿನ ಪೀಳಿಗೆ ಚೆನ್ನಾಗಿರಬೇಕು ಎಂದು ಬಯಸಿದ ಕಾರಣಕ್ಕೆ ಇವತ್ತು ನಾವು ರೋಟಿ, ಕಪಡಾ ಔರ್ ಮಕಾನ್ ವಿಷಯದಲ್ಲಿ ಒಂದಷ್ಟು ನೆಮ್ಮದಿಯಾಗಿದ್ದೇವೆ. ಆದರೆ ಇಂದಿನ ಬಹುತೇಕ ನಾಯಕರ ಮನಃಸ್ಥಿತಿಯನ್ನು ಗಮನಿಸಿದರೆ ಮುಂದಿನ ಪೀಳಿಗೆಯ ಬದುಕು ಘೋರವಾಗಿರಲಿದೆ. ಇವತ್ತು ನಾಡಿನ ಮತದಾರರು ಈ ಅಂಶವನ್ನು ಗಮನಿಸಿ ಮತದಾನಕ್ಕೆ ಸಜಗಬೇಕು. ಇಲ್ಲದಿದ್ದರೆ ರಾಜಕೀಯ ಪಕ್ಷಗಳ ಖಾಡಾಖಾಡಿ ಕದನ ಅವರನ್ನು ಗೊಂದಲಕ್ಕೆ ತಳ್ಳಲಿದೆ.

” ಅಂದ ಹಾಗೆ ಇವತ್ತಿನ ಬಹುತೇಕ ನಾಯಕರಂತೆ, ನಾವು ಎಷ್ಟು ಸಂಪಾದಿಸಿದರೂ ತಪ್ಪೇನು? ಅನ್ನುವ ಮನಃಸ್ಥಿತಿ ನಮ್ಮ ನಾಡಿನ ಹಿಂದಿನ ನಾಯಕರಲ್ಲಿ, ರಾಜಕಾರಣಿಗಳಲ್ಲಿ ಇದ್ದಿದ್ದರೆ ಇವತ್ತಿನ ಪೀಳಿಗೆಗೆ ಒಂದು ಸೂರು ಕಟ್ಟಿಕೊಳ್ಳುವಷ್ಟು ನೆಲವೂ ಸಿಗುತ್ತಿರಲಿಲ್ಲ”

 

 

Tags:
error: Content is protected !!