Mysore
30
scattered clouds

Social Media

ಮಂಗಳವಾರ, 06 ಅಕ್ಟೋಬರ್ 2026
Light
Dark

21 ದಿನಗಳ ದೀಪಾಲಂಕಾರಕ್ಕೆ 2,60,920 ಯೂನಿಟ್ ಬಳಕೆ

ಕೆ.ಬಿ.ರಮೇಶನಾಯಕ

೮೦ ಆಕರ್ಷಕ ದೀಪಾಲಂಕೃತ ಪ್ರತಿಕೃತಿಗಳ ನಿರ್ಮಾಣ; ೩,೫೦೦ ಡ್ರೋನ್‌ಗಳ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಸಿದ್ಧತೆ 

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ದೇಶ-ವಿದೇಶಗಳ ಲಕ್ಷಾಂತರ ಜನರನ್ನು ೨೧ ದಿನಗಳ ಕಾಲ ಅತ್ಯಾಕರ್ಷಕವಾಗಿ ಸೆಳೆಯುವ ವಿದ್ಯುತ್ ದೀಪಾಲಂಕಾರ ಮಾಡುವ ಕಾರ್ಯ ಭರದಿಂದ ಸಾಗಿದ್ದು, ಈ ಬಾರಿ ೨,೬೦,೯೨೦ ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ.

೨೧ ದಿನಗಳ ಕಾಲ ಪ್ರತಿದಿನ ಸಂಜೆ ೬ರಿಂದ ರಾತ್ರಿ ೧೧ ಗಂಟೆಯವರೆಗೆ ಮೈಸೂರು ನಗರ ಹಾಗೂ ಹೊರಗಿನ ಪ್ರದೇಶಗಳು ವಿದ್ಯುತ್ ದೀಪಾಲಂಕಾರ ಮಯವಾಗಿ ಮಾರ್ಪಡಲು ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಅ.೧೧ರಂದು ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ಸಿಗಲಿದ್ದು, ೨೧ರಂದು ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ದಸರಾ ಮುಗಿದರೂ ಹೊರ ಜಿಲ್ಲೆಗಳು, ರಾಜ್ಯಗಳಿಂದ ಪ್ರವಾಸಿಗರು ಬರುವ ಕಾರಣಕ್ಕಾಗಿ ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳಲು ೨೧ ದಿನಗಳ ಮಟ್ಟಿಗೆ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚುವರಿಯಾಗಿ ೩,೧೦೮ ಕಿಲೋ ವ್ಯಾಟ್ ವಿದ್ಯುತ್ ಭಾರವಾಗಲಿದ್ದು, ಅಂದಾಜು ೨,೬೦,೯೨೦ ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ. ಸೆಸ್ಕ್ ಅನುಷ್ಠಾನಗೊಳಿಸಿದ ಕೆಲ ಯೋಜನೆಗಳಿಂದ ದಸರಾ ಮಹೋತ್ಸವದ ವಿದ್ಯುತ್ ದೀಪಾಲಂಕಾರದಲ್ಲಿ ಮೊದಲ ಬಾರಿಗೆ ವಿದ್ಯುತ್ ಬಳಕೆ ಹಾಗೂ ವೆಚ್ಚದಲ್ಲಿ ದಾಖಲೆ ಪ್ರಮಾಣದ ಉಳಿತಾಯವಾಗಿತ್ತು. ಈ ಬಾರಿ ವಿಶೇಷವಾದ ಬಲ್ಬ್‌ಗಳನ್ನು ಅಳವಡಿಸುತ್ತಿರುವುದಲ್ಲದೆ, ವಿದ್ಯುತ್ ಉಳಿತಾಯ ಮಾಡಲು ಯಶಸ್ವಿಯಾದ ಯೋಜನೆಯನ್ನು ಮುಂದುವರಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಹಾಗೂ ದಸರಾ ದೀಪಾಲಂಕಾರ ಸಮಿತಿಯು ನಿರ್ಧರಿಸಿದೆ.

೧೨೩ ಅಲಂಕೃತ ವೃತ್ತಗಳು: ಕಳೆದ ವರ್ಷ ೧೧೦ ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ಬಾರಿ ೧೨೩ ವೃತ್ತಗಳನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ವಿಶೇಷವಾಗಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಾಮರಾಜ ವೃತ್ತ, ಚಾಮರಾಜೇಂದ್ರ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಫೌಂಟೆನ್ ವೃತ್ತ, ಮುಡಾ ವೃತ್ತ, ದಾಸಪ್ಪ, ರೈಲ್ವೆ ನಿಲ್ದಾಣ ಸಮೀಪವಿರುವ ಡಾ.ಬಾಬು ಜಗಜೀವನ್ ರಾಂ ವೃತ್ತ, ಅಗ್ರಹಾರ ವೃತ್ತ, ಎಲ್‌ಐಸಿ ವೃತ್ತ, ಆಯುರ್ವೇದ ಸರ್ಕಲ್, ಆರ್‌ಟಿಒ ಕಚೇರಿ ವೃತ್ತ, ಬಲ್ಲಾಳ್ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳನ್ನು ದೀಪಾಲಂಕೃತಗೊಳಿಸಲಾಗುತ್ತದೆ. ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವುದು, ಗೃಹಜ್ಯೋತಿ, ಯುವನಿಧಿ, ಪ್ರಜಾಸೇವೆ, ಶಕ್ತಿ, ಗೃಹಲಕ್ಷ್ಮೀ, ಭಾರತ್ ಜೋಡೋ ಸೇರಿದಂತೆ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಪ್ರತಿಕೃತಿ ಪ್ರದರ್ಶನ ಸೇರಿದಂತೆ ೮೦ ಆಕರ್ಷಕ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಪ್ರಮುಖ ರಸ್ತೆಗಳಲ್ಲಿ ಅಲಂಕೃತ ಸ್ವಾಗತ ಕಮಾನುಗಳು, ಸಯ್ಯಾಜಿರಾವ್ ರಸ್ತೆಯಲ್ಲಿ ಹಸಿರು ಚಪ್ಪರ, ಹೊರಗಿನ ನಾಲ್ಕು ರಿಂಗ್ ರಸ್ತೆಗಳ ಪ್ರಮುಖ ದ್ವಾರಗಳಲ್ಲಿ ವಿಶೇಷ ಅಲಂಕೃತ ಸ್ವಾಗತ ದ್ವಾರವನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ.

ಕಳೆದ ಬಾರಿಗಿಂತ ೧೬ ಕಿ.ಮೀ ದೀಪಾಲಂಕಾರ ಹೆಚ್ಚಳ: 

ಪ್ರತಿವರ್ಷದಂತೆ ಈ ಬಾರಿಯೂ ೧೪೬ ಕಿಲೋ ಮೀಟರ್ ರಸ್ತೆಗಳನ್ನು ಅಲಂಕೃತಗೊಳ್ಳುವ ಕೆಲಸ ಮಾಡಲಾಗಿದ್ದು, ಕಳೆದ ಬಾರಿಗಿಂತ ೧೬ ಕಿ.ಮೀ. ಜಾಸ್ತಿಯಾಗಿದೆ. ಜಂಬೂ ಸವಾರಿ ಸಾಗುವ ಸಯ್ಯಾಜಿರಾವ್ ರಸ್ತೆ, ನಗರದ ರೈಲು ನಿಲ್ದಾಣದಿಂದ ಚಾಮುಂಡಿಬೆಟ್ಟದ ತಪ್ಪಲಿನಿಂದ ಮೆಟ್ಟಿಲುಗಳ ಮೂಲಕ ಸಾಗುವ ರಸ್ತೆ, ನಂಜನಗೂಡು ರಸ್ತೆ, ಹರ್ಷ ರಸ್ತೆ, ಅಶೋಕ ರಸ್ತೆ, ಮಹದೇಶ್ವರ ರಸ್ತೆ, ಹುಣಸೂರು ರಸ್ತೆ, ಇರ್ವಿನ್ ರಸ್ತೆ, ಜೆಎಲ್‌ಬಿ ರಸ್ತೆ, ಮೈಸೂರು-ಬೆಂಗಳೂರು ರಸ್ತೆ, ವಿನೋಬಾ ರಸ್ತೆ, ಧನ್ವಂತರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಕುಕ್ಕರಹಳ್ಳಿ ರಸ್ತೆ, ಪಡುವಾರಹಳ್ಳಿ ರಸ್ತೆ, ಒಂಟಿಕೊಪ್ಪಲು ರಸ್ತೆ, ಎಸ್‌ಪಿ ಕಚೇರಿ ರಸ್ತೆ, ರಾಮಾನುಜ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ದೀಪಾಲಂಕೃತಗೊಳ್ಳಲಿವೆ

ಸೊಬಗು ಮೂಡಿಸಲಿರುವ ಮರಗಳು:  ಆಕರ್ಷಕ ಪ್ರತಿಕೃತಿಗಳಲ್ಲದೆ ವಿದ್ಯುತ್ ಅಲಂಕಾರದ ಸೊಬಗು ಹೆಚ್ಚಿಸುವ ಸಲುವಾಗಿ ಪ್ರಮುಖ ರಸ್ತೆಗಳಲ್ಲಿರುವ ಸಾಲು ಮರಗಳಿಗೆ ಬಹು ವರ್ಣಗಳ ದೀಪಾಲಂಕರ ಮಾಡುವ ಯೋಜನೆ ಹೊಂದಲಾಗಿದೆ. ಚಾಮರಾಜ ಜೋಡಿ ರಸ್ತೆಯ ಮರಗಳು, ವಿವಿ ಮಾರ್ಗದಲ್ಲಿರುವ ಮರಗಳಲ್ಲಿ ಬಿದಿರಿನ ಬುಟ್ಟಿಗಳಿಗೆ ದೀಪಾಲಂಕಾರ ಮಾಡಿರುವುದು ಈ ವರ್ಷದ ವಿಶೇಷವಾಗಿದೆ.

” ಬನ್ನಿಮಂಟಪದ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ೩,೫೦೦ ಡ್ರೋನ್‌ಗಳನ್ನು ಬಳಸಿ ರಾಷ್ಟ್ರೀಯ ಪಕ್ಷಿ ನವಿಲು ಹಾಗೂ ಸಾಂಸ್ಕೃತಿಕ ರೂಪಕಗಳ ರಚನೆಯೊಂದಿಗೆ ಬೃಹತ್ ಗಿನ್ನಿಸ್ ವಿಶ್ವದಾಖಲೆ ಶೋ ಮಾಡಲು ತೀರ್ಮಾನಿಸಲಾಗಿದೆ. ದಸರಾ ದೀಪಾಲಂಕಾರಕ್ಕಾಗಿ ಅಂದಾಜು ೯.೫೦ ಕೋಟಿ ರೂ. ಅನುದಾನ ವೆಚ್ಚವಾಗುತ್ತಿದೆ. ಈ ಬಾರಿ ಪ್ರಮುಖ ವೃತ್ತಗಳ ದೀಪಾಲಂಕಾರಕ್ಕೆ ವಿಶೇಷ ಮೆರುಗು ತುಂಬಲಾಗಿದೆ.”

-ಎಂ.ಎಸ್.ಅರ್ಚನಾ, ವ್ಯವಸ್ಥಾಪಕ ನಿರ್ದೇಶಕರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ

 

 

Tags:
error: Content is protected !!